ADVERTISEMENT

ಕ್ಯಾಬ್ ಚಾಲಕನ ಮೇಲೆ ಹಲ್ಲೆ; ಉಗಾಂಡಾ ಪ್ರಜೆ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 19:57 IST
Last Updated 19 ಸೆಪ್ಟೆಂಬರ್ 2021, 19:57 IST

ಬೆಂಗಳೂರು: ರಾಜಾಜಿನಗರದ ಹೋಟೆಲೊಂದರಲ್ಲಿ ಕ್ಯಾಬ್ ಚಾಲಕರೊಬ್ಬರ ಮೇಲೆ ಉಗಾಂಡಾ ‌ಪ್ರಜೆಗಳು‌ ಹಲ್ಲೆ ಮಾಡಿದ್ದು, ಈ ಸಂಬಂಧ ಲುಬೆಗಾ ರೇಮೆಂಡ್ ಎಂಬಾತನನ್ನು ಸುಬ್ರಹ್ಮಣ್ಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಕಾಲೇಜೊಂದರ ಕಾರ್ಯಕ್ರಮಕ್ಕೆ ಉಗಾಂಡಾ ಪ್ರಜೆಗಳು ಬಂದಿದ್ದರು. ವಾಪಸು ತಮ್ಮ ವಾಸಸ್ಥಳಕ್ಕೆ ಹೋಗುವುದಕ್ಕಾಗಿ ಕ್ಯಾಬ್ ಕಾಯ್ದಿರಿಸಿದ್ದರು. ಸ್ಥಳಕ್ಕೆ ಕ್ಯಾಬ್ ಸಮೇತ ಬಂದಿದ್ದ ಸಾಗರ್, ನಾಲ್ವರನ್ನು ಹತ್ತಿಸಿಕೊಂಡು ಹೊರಡಲು ಸಿದ್ಧವಾಗಿದ್ದರು. ಮತ್ತೊಬ್ಬ ಕಾರಿನೊಳಗೆ ಹತ್ತಲು ಯತ್ನಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಐವರನ್ನು ಕರೆದುಕೊಂಡು ಹೋಗಲು ನಿರಾಕರಿಸಿದ್ದ ಸಾಗರ್, ‘ಸಂಚಾರ ನಿಯಮ ಉಲ್ಲಂಘನೆಯಾಗುತ್ತದೆ. ಪೊಲೀಸರು ಪ್ರಕರಣ ದಾಖಲಿಸುತ್ತಾರೆ’ ಎಂದಿದ್ದ. ಅಷ್ಟಕ್ಕೆ ಜಗಳ ತೆಗೆದ ಪ್ರಜೆಗಳು, ಚಾಲಕನ ಮೇಲೆ ಹಲ್ಲೆ ಮಾಡಿದ್ದರು. ಸ್ಥಳದಲ್ಲಿ ಮತ್ತಷ್ಟು ಪ್ರಜೆಗಳು ಸೇರಿ ಗಲಾಟೆ ಮಾಡಿದರು.’

ADVERTISEMENT

‘ಸಾಗರ್ ರಕ್ಷಣೆಗೆ ಹೋದ ಸ್ಥಳೀಯ ಕ್ಯಾಬ್ ಚಾಲಕರ ಜೊತೆಯೂ ಪ್ರಜೆಗಳು ಗಲಾಟೆ ಮಾಡಿದರು. ಸ್ಥಳಕ್ಕೆ ಹೋದ ಗಸ್ತು ಸಿಬ್ಬಂದಿ, ಪರಿಸ್ಥಿತಿ ತಿಳಿಗೊಳಿಸಿದರು. ಚಾಲಕನ ಮೇಲೆ ಹಲ್ಲೆ ಮಾಡಿದ್ದ ಎನ್ನಲಾದ ಲುಬೆಗಾ ರೇಮಂಡ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಯುವತಿಯರಿಂದ ಮುಚ್ಚಳಿಕೆ: ‘ಗಲಾಟೆ ವೇಳೆ ಅಂಗಾಂಗಗಳನ್ನು ತೋರಿಸಿ ಕೆಟ್ಟದಾಗಿ ನಡೆದುಕೊಂಡಿದ್ದ ಉಗಾಂಡಾದ ಯುವತಿಯರನ್ನೂ ಠಾಣೆಗೆ ಕರೆಸಲಾಗಿತ್ತು. ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಲಾಗಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.