ADVERTISEMENT

ಬೀದರ್‌: ಬಡತನ ಮೆಟ್ಟಿನಿಂತು ಸಾಧನೆಗೈದ ಬಾಲಗಣೇಶ

ಬಸವರಾಜ ಎಸ್.ಪ್ರಭಾ
Published 22 ಸೆಪ್ಟೆಂಬರ್ 2021, 3:58 IST
Last Updated 22 ಸೆಪ್ಟೆಂಬರ್ 2021, 3:58 IST
ಬಡತನ ಮೆಟ್ಟಿನಿಂತು ಸಾಧನೆಗೈದ ಬಾಲಗಣೇಶನಿಗೆ ಅಪ್ಪ, ಅಮ್ಮ ಸಿಹಿ ತಿನ್ನಿಸಿದರು
ಬಡತನ ಮೆಟ್ಟಿನಿಂತು ಸಾಧನೆಗೈದ ಬಾಲಗಣೇಶನಿಗೆ ಅಪ್ಪ, ಅಮ್ಮ ಸಿಹಿ ತಿನ್ನಿಸಿದರು   

ಭಾಲ್ಕಿ: ಸಾಧನೆಯ ಹಸಿವು ಇದ್ದವರು ಎಂತಹುದೇ ಪರಿಸ್ಥಿತಿಯಲ್ಲೂ ಉನ್ನತ ಸಾಧನೆಗೈಯುತ್ತಾರೆ ಎನ್ನುವುದಕ್ಕೆ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಬಾಲಗಣೇಶನ ಸಾಧನೆಯೇ ಸಾಕ್ಷಿ.

ಭಾಲ್ಕಿ ಪಟ್ಟಣದ ಕೆ.ಎಚ್‌.ಬಿ. ಕಾಲೊನಿ ನಿವಾಸಿಯಾಗಿರುವ ವಿದ್ಯಾರ್ಥಿ ಬಾಲಗಣೇಶ ಸಿಇಟಿಯ ಪಶು ವೈದ್ಯಕೀಯ ವಿಭಾಗದಲ್ಲಿ 98 ನೇ ಶ್ರೇಯಾಂಕ ಪಡೆದು ಇತರ ವಿದ್ಯಾರ್ಥಿಗಳಿಗೆ ಮಾದರಿ ಆಗಿದ್ದಾರೆ. ಇವರ ಪೋಷಕರು ರೈತರು. ತಂದೆ ಶಿವಾಜಿರಾವ್‌ ತಪಸ್ಯಾಳೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೃಷಿ ಸೇರಿದಂತೆ ಯಾವುದೇ ಕೂಲಿ ಕೆಲಸವನ್ನೂ ಮಾಡಲು ಹಿಂಜರಿಯುವುದಿಲ್ಲ. ತಮಗಿರುವ ಒಂದೇ ಕೋಣೆಯಲ್ಲಿ ಮೂವರು ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ.

’ನಮ್ಮದು ಸಾಮಾನ್ಯ ಬಡ ಕುಟುಂಬ. ನಮ್ಮ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸಲು ತುಂಬ ಪರಿಶ್ರಮ ಪಡುತ್ತಿದ್ದಾರೆ. ಇರುವ ಒಂದೇ ಕೋಣೆ, ಅಡುಗೆ ಮನೆಯಲ್ಲಿಯೇ ನಾನು ನನ್ನ ಇಬ್ಬರು ಅಣ್ಣಂದಿರು ಶಿಕ್ಷಣ ಪಡೆಯುತ್ತಿದ್ದೇವೆ. ಪೋಷಕರು ಪಡುತ್ತಿರುವ ಕಷ್ಟ, ಶ್ರಮ ನನಗೆ ಇನ್ನಷ್ಟು ಚೆನ್ನಾಗಿ ಓದಲು ಪ್ರೇರಣೆ ನೀಡುತ್ತಿದೆ. ಉತ್ತಮವಾಗಿ ಓದಿ ಜೀವನದಲ್ಲಿ ಮಹತ್ತರ ಸಾಧನೆಗೈದು ಪೋಷಕರಿಗೆ ನೆಮ್ಮದಿಯ ಜೀವನ ಕಲ್ಪಿಸಬೇಕು. ಸಮಾಜದಲ್ಲಿರುವ ನನ್ನಂತಹ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಬೇಕು ಎಂಬ ಮಹದಾಸೆ ನನಗೆ ಇದೆ‘ ಎಂದು ಸಾಧಕ ವಿದ್ಯಾರ್ಥಿ ಬಾಲ ಗಣೇಶ ಹೇಳುತ್ತಾರೆ.

ADVERTISEMENT

’ಲಾಕ್‌ಡೌನ್‌ ಸಮಯದಲ್ಲೂ ಗುರುಕುಲ ಕಾಲೇಜಿನ ಉಪನ್ಯಾಸಕರು ನನ್ನ ಮನೆಗೆ ಭೇಡಿ ನೀಡಿ, ನನ್ನ ಎಲ್ಲ ಶೈಕ್ಷಣಿಕ ಸಂದೇಹಗಳನ್ನು ಪರಿಹರಿಸಿ. ಹೆಚ್ಚೆಚ್ಚು ಓದಲು ಪ್ರೋತ್ಸಾಹಿಸಿದ್ದಾರೆ. ಗುರುಕುಲ ಕಾಲೇಜಿನಲ್ಲಿ ದೊರೆತ ಗುಣಾತ್ಮಕ ಶಿಕ್ಷಣ ನನ್ನ ಸಾಧನೆಗೆ ತುಂಬಾ ಸಹಕಾರಿ ಆಗಿದೆ. ಲಾಕ್‌ಡೌನ್‌ ಸಮಯದಲ್ಲಿ ದೊರೆತ ಹೆಚ್ಚಿನ ಸಮಯದಿಂದಾಗಿ ಪ್ರತಿ ಪಾಠವನ್ನು ಚೆನ್ನಾಗಿ ಮನನ ಮಾಡಿಕೊಳ್ಳಲು ಸಾಧ್ಯವಾಗಿತ್ತು‘ ಎಂದೂ ಹೇಳುತ್ತಾರೆ.

’ಬಾಲಗಣೇಶ ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದಾನೆ. ’ನೀಟ್‌‘ ಪರೀಕ್ಷೆಯಲ್ಲೂ ಕನಿಷ್ಠ 640 ಅಂಕ ಪಡೆಯುವ ನಿರೀಕ್ಷೆ ಇದೆ‘ ಎಂದು ಪ್ರಾಚಾರ್ಯ ಬಸವರಾಜ್‌ ಮೊಳಕೀರೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.