ADVERTISEMENT

ಯುಗಾದಿ: ಬೆಲೆ ಏರಿದರೂ ಖರೀದಿ ಭರಾಟೆ

ಮಾವು–ಬೇವಿನ ಸೊಪ್ಪು, ಹೂವು–ಹಣ್ಣು ಖರೀದಿಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 6:02 IST
Last Updated 22 ಮಾರ್ಚ್ 2023, 6:02 IST
ಯುಗಾದಿ ಹಬ್ಬದ ಅಂಗವಾಗಿ ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ಹೂವು ಖರೀದಿಯಲ್ಲಿ ತೊಡಗಿರುವ ಜನ– ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ಯುಗಾದಿ ಹಬ್ಬದ ಅಂಗವಾಗಿ ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ಹೂವು ಖರೀದಿಯಲ್ಲಿ ತೊಡಗಿರುವ ಜನ– ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್   

ದಾವಣಗೆರೆ: ಬುಧವಾರದ ಯುಗಾದಿ ಹಬ್ಬವನ್ನು ಸಂಭ್ರದಿಂದ ಆಚರಿಸಲು ಜಿಲ್ಲೆಯ ಜನರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮಂಗಳವಾರ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು.

ಹಬ್ಬದ ಮುನ್ನಾ ದಿನವಾದ ಮಂಗಳವಾರ ಅಮಾವಾಸ್ಯೆ ಪೂಜೆ ನೆರವೇರಿಸಿದರು. ಕೆಲವರು ವಾಹನಗಳಿಗೆ ಪೂಜೆ ಸಲ್ಲಿಸಿದರು. ಹಬ್ಬ ಹಾಗೂ ಅಮಾವಾಸ್ಯೆ ಮುನ್ನಾ ದಿನಗಳು ಜನರು ಖರೀದಿಯಲ್ಲಿ ತೊಡಗಿದ್ದರು.

ಹಬ್ಬದ ದಿವಸ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು, ಬೇವು ಬೆಲ್ಲ ತಿಂದು ಮನೆ ಮಂದಿಯೆಲ್ಲ
ಹೊಸ ಸಂವತ್ಸರದ ಸ್ವಾಗತಕ್ಕೆ ಅಣಿಯಾಗಿದ್ದಾರೆ.

ADVERTISEMENT

ನಗರದ ಚಾಮರಾಜಪೇಟೆ, ಗಡಿಯಾರದ ಕಂಬದ ಮಾರುಕಟ್ಟೆ, ಪ್ರವಾಸಿ ಮಂದಿರ ರಸ್ತೆ, ಶಾಮನೂರು ರಸ್ತೆ ಮುಂತಾದ ಕಡೆಗಳಲ್ಲಿ ವ್ಯಾಪಾರಿಗಳು ಮಾವು–ಬೇವಿನ ಎಲೆಗಳು, ಲೋಳೆಸರ, ದವನ, ಬಿಲ್ವಪತ್ರೆಗಳನ್ನು ಮಾರಾಟ ಮಾಡಿದರು. ಮಾವು ಹಾಗೂ ಬೇವಿನ ಎಲೆಗಳು ಒಂದು ಸಣ್ಣ ಕಂತೆಗೆ ₹10ರಿಂದ ₹20 ಹಾಗೂ ಲೋಳೆ ಸರ 1ಕ್ಕೆ ₹10 ರಂತೆ ಮಾರಾಟವಾದವು.

ಹೊಸ ವರ್ಷಕ್ಕೆ ಹೊಸ ಉಡುದಾರವನ್ನು ಹಾಕಿಕೊಳ್ಳುವುದು ವಾಡಿಕೆ. ಹೀಗಾಗಿ ಉಡುದಾರ ಖರೀದಿಯೂ ಭರದಿಂದ ಸಾಗಿತ್ತು. ಒಂದು ಉಡುದಾರವನ್ನು ₹2ರಿಂದ ₹ 5ಕ್ಕೆ ಮಾರಾಟ ಮಾಡಲಾಗುತ್ತಿತ್ತು.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ಬೇಳೆ, ಬೆಲ್ಲ, ಸಕ್ಕರೆ, ಅಡುಗೆ ಎಣ್ಣೆ, ಶ್ಯಾವಿಗೆ ಸೇರಿ
ಎಲ್ಲಾ ಪದಾರ್ಥಗಳೂ ದುಬಾರಿಯಾಗಿದ್ದವು.

‘ಅಮಾವಾಸ್ಯೆ ಪೂಜೆ ಇದ್ದುದರಿಂದ ಕೆಲವರು ಸೋಮವಾರವೇ ಹೂವು, ಹಣ್ಣುಗಳನ್ನು ಖರೀದಿಸಿದರು. ಮಾಮೂಲಿ ದಿನಗಳಿಗಿಂತ ಹೆಚ್ಚಿನ ಬೆಲೆ ಇದೆ’ ಎನ್ನುತ್ತಾರೆ ಹೂವಿನ ವ್ಯಾಪಾರಿ ಮನೋಜ್.

ಬಟ್ಟೆ ಅಂಗಡಿಗಳಲ್ಲಿ ಜನಜಂಗುಳಿ: ಹಬ್ಬಕ್ಕೆ ಹೊಸ ಬಟ್ಟೆಗಳನ್ನೂ ಖರೀದಿಸಲು ಜನ ಮುಂದಾಗಿದ್ದರಿಂದ ನಗರದ ಜವಳಿ ಅಂಗಡಿಗಳಲ್ಲೂ ಜನದಟ್ಟಣೆ ಕಂಡುಬಂದಿತು.

‘ಹಬ್ಬದ ದಿವಸ ಬೇವು–ಬೆಲ್ಲ, ಪ್ರಸಾದವಿಟ್ಟು ಹಿರಿಯರ ಪೂಜೆ ಮಾಡುತ್ತೇವೆ. ಜೀವನದಲ್ಲಿ ಬೇವು–ಬೆಲ್ಲ (ಕಷ್ಟ–ಸುಖ) ಎರಡೂ ಇರುತ್ತದೆ. ಅದನ್ನು ನಿಭಾಯಿಸುವ ಶಕ್ತಿ ಕೊಡಲು ಬೇಡಿಕೊಳ್ಳುತ್ತೇವೆ. ದವನ, ಲೋಳೆ ಸರಗಳು ಬೆಳವಣಿಗೆಯ ಶುಭ ಸೂಚನೆ’ ಎಂದು ಗೃಹಿಣಿ ಸೌಮ್ಯ ಸತೀಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.