ADVERTISEMENT

ಕಾಲುಬಾಯಿ ಜ್ವರ: ಜಾನುವಾರುಗಳ ನರಳಾಟ

ಹೈನುಗಾರಿಕೆ ನಂಬಿ ಹೈರಾಣಾದ ರೈತರು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 15:00 IST
Last Updated 21 ಸೆಪ್ಟೆಂಬರ್ 2021, 15:00 IST
ಅರಕಲಗೂಡು ತಾಲ್ಲೂಕು ಪಾರಸನಹಳ್ಳಿ ಗ್ರಾಮದಲ್ಲಿ ಕಾಲು ಬಾಯಿ ರೋಗಕ್ಕೆ ತುತ್ತಾಗಿರುವ ಜಾನುವಾರನ್ನು ಪೊಟ್ಯಾಟೊ ಕ್ಲಬ್ ಅಧ್ಯಕ್ಷ ಎಚ್.ಯೋಗಾರಮೇಶ್ ವೀಕ್ಷಿಸಿದರು
ಅರಕಲಗೂಡು ತಾಲ್ಲೂಕು ಪಾರಸನಹಳ್ಳಿ ಗ್ರಾಮದಲ್ಲಿ ಕಾಲು ಬಾಯಿ ರೋಗಕ್ಕೆ ತುತ್ತಾಗಿರುವ ಜಾನುವಾರನ್ನು ಪೊಟ್ಯಾಟೊ ಕ್ಲಬ್ ಅಧ್ಯಕ್ಷ ಎಚ್.ಯೋಗಾರಮೇಶ್ ವೀಕ್ಷಿಸಿದರು   

ಅರಕಲಗೂಡು: ತಾಲ್ಲೂಕಿನಲ್ಲಿ ಕಾಲು ಬಾಯಿ ಜ್ವರ ಉಲ್ಬಣಗೊಂಡಿದ್ದು ಜಾನುವಾರುಗಳು ಮೂಕವೇದನೆ ಅನುಭವಿಸುತ್ತಿವೆ.ಹಲವು ದಿನಗಳಿದ ಮೇವು ತಿನ್ನಲಾಗದೆ ನರಳುತ್ತಿವೆ.

ಹಾಲು ಕೊಡುತ್ತಿದ್ದ ಗೋವುಗಳಿಗೂ ವಿಚಿತ್ರ ಜ್ವರ ತಗುಲಿರುವುದರಿಂದ ಮೊದಲೇ ನಷ್ಟದಿಂದ ಹೈರಾಣಾಗಿರುವ ಅನ್ನದಾತ, ಈಗ ಕಣ್ಣೀರಿಡುವಂತಾಗಿದೆ. ಸೂಕ್ತ ಚಿಕಿತ್ಸೆ, ಸಕಾಲಕ್ಕೆ ಲಸಿಕೆ ಸಿಗದೆ ಲಕ್ಷ ಲಕ್ಷ ಬೆಲೆ ಬಾಳುವ, ಎಲ್ಲಕ್ಕಿಂತ ಮುಖ್ಯವಾಗಿ ಹಳ್ಳಿಜನರ ಜೀವನಾಧಾರವಾಗಿದ್ದ ರಾಸುಗಳು ಬಲಿಯಾಗುತ್ತಿರುವುದು ದೊಡ್ಡ ಚಿಂತಗೆ ಕಾರಣವಾಗಿದೆ.

ತಾಲ್ಲೂಕಿನ ಪಾರಸನಹಳ್ಳಿ, ಇಬ್ಬಡಿ, ವಡ್ಡರಹಳ್ಳಿ, ಕೋಟೆ ಕರ್ಪೂರವಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಜಾನುವಾರು ಕಾಲುಬಾಯಿ ರೋಗಕ್ಕೆ ತುತ್ತಾಗಿ ನರಳಾಡುತ್ತಿವೆ. ಕಾಯಿಲೆಗೆ ತುತ್ತಾದ ರಾಸುಗಳ ಕಾಲು ಕೊಳೆಯುತ್ತಿದೆ. ಉಷ್ಣಾಂಶ ಅತಿಯಾಗಿ ಬಾಯಿ ಕೊಳೆತು ಬೀಳುತ್ತಿದೆ. ಮೇವು ತಿನ್ನುವುದಿರಲಿ, ನೀರನ್ನೂ ಕುಡಿಯಲಾಗದ ಸಂಕಟದಿಂದ ನಿತ್ರಾಣಗೊಂಡಿವೆ. ಇನ್ನು ನಡೆಯಲಾಗದ ಸ್ಥಿತಿಗೆ ತಲುಪಿರುವ ನೂರಾರು ಜಾನುವಾರು ಕೊಟ್ಟಿಗೆಯಲ್ಲೇ ಬಂಧಿಯಾಗಿ ಮೂಕ ವೇದನೆ ಅನುಭವಿಸುತ್ತಿವೆ.

ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ಅವಲಂಬಿಸಿರುವ ಹಲವು ಗ್ರಾಮಗಳ ರೈತರು, ₹70–80 ಸಾವಿರದಿಂದ ₹1 ಲಕ್ಷದವರೆಗೂ ಹಣ ನೀಡಿ ಹಸುಗಳನ್ನು ಖರೀದಿ ಮಾಡಿದ್ದರು. ಇವುಗಳಿಂದ ದಿನವಹಿ ಸಿಗುತ್ತಿದ್ದ10 ರಿಂದ 15 ಲೀಟರ್ ಹಾಲು ಮಾರಿ ಜೀವನ ಮಾಡುತ್ತಿದ್ದರು. ಆದರೀಗ ಹಾಲು ಕೊಡುವ ಹಸುಗಳೇ ರೋಗಕ್ಕೆ ತುತ್ತಾಗಿರುವುದರಿಂದ ಇವುಗಳನ್ನೂ ನಂಬಿದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.

ADVERTISEMENT

‘ಪರಸನಹಳ್ಳಿ ಗ್ರಾಮವೊಂದರಲ್ಲೇ ಈವರೆಗೆ 15 ಕರು ಮೃತಪಟ್ಟು 100ಕ್ಕೂ ಹೆಚ್ಚು ಜಾನುವಾರು ಕಾಯಿಲೆಯಿಂದ ನರಳುತ್ತಿವೆ. ತುರ್ತು ಚಿಕಿತ್ಸೆ ನೀಡಲು ವೈದ್ಯರು ಸರಿಯಾಗಿ ಬರುತ್ತಿಲ್ಲ. ಕೇಂದ್ರ ಸರ್ಕಾರದಿಂದ ಪ್ರತಿ ಆರು ತಿಂಗಳಿಗೊಮ್ಮೆ ಜಾನುವಾರುಗಳಿಗೆ ಲಸಿಕೆ ಹಾಕಬೇಕು. ಆದರೆ ಕೋವಿಡ್ ಕಾರಣ ನೀಡಿ ಕಳೆದ 2 ವರ್ಷಗಳಿಂದ ಹಸುಗಳಿಗೆ ಕಾಲುಬಾಯಿ ರೋಗದ ವ್ಯಾಕ್ಸಿನ್ ನೀಡಿಲ್ಲ’ಎಂದುಪೊಟ್ಯಾಟೋ ಕ್ಲಬ್ ಅಧ್ಯಕ್ಷ ಯೋಗಾ ರಮೇಶ್ಆರೋಪಿಸಿದರು.

‘ ಒಂದು ತಿಂಗಳಿನಿಂದಲೂ ಜಾನುವಾರುಗಳು ರೋಗಕ್ಕೆ ತುತ್ತಾಗಿ ನರಳುತ್ತಿವೆ. ಸರ್ಕಾರಿ ಪಶು ಆಸ್ಪತ್ರೆಗಳಲ್ಲಿ ಯಾವುದೇ ಔಷಧಗಳು ದೊರಕುತ್ತಿಲ್ಲ. ಸರ್ಕಾರ ಸಾಮೂಹಿಕ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದರು.

‘ತಾಲ್ಲೂಕಿನ 9 ಗ್ರಾಮಗಳಲ್ಲಿ ಕಾಲು ಬಾಯಿ ಜ್ವರ ಕಾಣಿಸಿಕೊಂಡಿದೆ. ಅಕ್ಟೋಬರ್ ನಲ್ಲಿ ಸಾಮೂಹಿಕ ಲಸಿಕೆ ಹಾಕಲಾಗಿತ್ತು. ಈ ವರ್ಷ ಏಪ್ರಿಲ್ ತಿಂಗಳಲ್ಲಿ ಲಸಿಕೆ ನೀಡಬೇಕಿತ್ತು. ಲಸಿಕೆ ಸರಬರಾಜಾಗದ ಕಾರಣ ಹಾಕಲಾಗಿಲ್ಲ. ಹೀಗಾಗಿ ರೋಗ ಹಬ್ಬಲು ಕಾರಣವಾಗಿದೆ.ತಾಲ್ಲೂಕಿಗೆ 5 ಸಾವಿರ ಡೋಸ್ ಲಸಿಕೆ ಬಂದಿದ್ದು, ರೋಗ ಹೆಚ್ಚಾಗಿರುವ ಕಡೆಗಳಲ್ಲಿ ನೀಡಲಾಗುತ್ತಿದೆ. 25 ಪಶು ಆಸ್ಪತ್ರೆಗಳು ಇದ್ದು ಕೇವಲ 5 ಮಂದಿ ವೈದ್ಯರು ಮಾತ್ರ ಇದ್ದಾರೆ. ಜಿಲ್ಲಾ ಪಶು ವೈದ್ಯಕೀಯ ಪಾಲಿಕ್ಲಿನಿಕ್ ಇದ್ದರೂ ಒಬ್ಬರೂ ಸಿಬ್ಬಂದಿ ಇಲ್ಲ. ತಾಲ್ಲೂಕಿನಲ್ಲಿ ಈ ವರೆಗೆ ಜಾನುವಾರು ಸಾವಿನ ಪ್ರಕರಣ ವರದಿಯಾಗಿಲ್ಲ’ ಎಂದುಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ದಿಲೀಪ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.