ADVERTISEMENT

ಕೂಲಿ ಮಾಡಿ ಕಲಿತು ಪಿಯುಸಿಯಲ್ಲಿ ಸಾಧಿಸಿದ ದೀಪಕ್‌

ಹಣಕಾಸಿನ ಸಮಸ್ಯೆಯ ಮಧ್ಯೆ ಸಾಧನೆ ಮಾಡಿದ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 2:19 IST
Last Updated 18 ಜುಲೈ 2020, 2:19 IST
ಹೆತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ಕೆ.ಕೆ.ದೀಪಕ ತಾಯಿ ಲೀಲಾವತಿ ಜತೆ
ಹೆತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ಕೆ.ಕೆ.ದೀಪಕ ತಾಯಿ ಲೀಲಾವತಿ ಜತೆ   

ಹೆತ್ತೂರು: ಒಂದೆಡೆ ತಾಯಿಯ ಅನಾರೋಗ್ಯ. ಮತ್ತೊಂದೆಡೆ ಬಡತನ. ಈ ಮಧ್ಯೆ ವಿದ್ಯಾಭ್ಯಾಸ ಮಾಡಬೇಕು ಎಂಬ ಛಲ... ಕೊನೆಗೆ ಸಾಧಿಸಿದ ಸಂತೃಪ್ತಿ...

ರಜಾ ದಿನಗಳಲ್ಲಿ ಕೂಲಿ ಕೆಲಸದಿಂದ ಸಂಪಾದಿಸಿದ ಹಣವನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಿ ಈಗ ಸಾಧನೆಯ ಮೆಟ್ಟಿಲೇರಿದ ಗ್ರಾಮೀಣ ವಿದ್ಯಾ ರ್ಥಿಯ ಸಾಹಸಗಾಥೆಯಿದು. ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಗಳಿಸಿ, ಬಡತನ ಎಂಬುದು ಓದಿಗೆ ಅಡ್ಡಿಯಾಗದು ಎಂದು ಹೆತ್ತೂರು ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ಕೆ.ಕೆ.ದೀಪಕ್‌ ಸಾಬೀತು ಮಾಡಿ ತೋರಿಸಿದ್ದಾನೆ.

ಕೊಣಬನಹಳ್ಳಿ ಗ್ರಾಮದ ಕೆ.ಕೆ.ದೀಪಕ್ ಪ್ರತಿದಿನ 3 ಕಿ.ಮೀ. ನಡೆದುಕೊಂಡು ಕಾಲೇಜಿಗೆ ತೆರಳುತ್ತಿದ್ದ. ಎಲ್ಲ ಸಮಸ್ಯೆಗಳ ಮಧ್ಯೆಯೂ ಈ ಬಾರಿಯ ಪರೀಕ್ಷೆಯಲ್ಲಿ 600ಕ್ಕೆ 565 (ಶೇ 94.16), ಅರ್ಥಶಾಸ್ತ್ರ ವಿಭಾಗದಲ್ಲಿ 99 ಅಂಕ ಪಡೆದು ಇತರರಿಗೆ ಮಾದರಿಯಾಗಿದ್ದಾನೆ.

ADVERTISEMENT

ಕನ್ನಡದಲ್ಲಿ 96 ,ಇಂಗ್ಲಿಷ್ 87, ಇತಿಹಾಸ 97, ಅರ್ಥಶಾಸ್ತ್ರ 99, ವ್ಯವಾಹಾರ ಅಧ್ಯಯನ 92, ಲೆಕ್ಕಶಾಸ್ತ್ರದಲ್ಲಿ 94 ಅಂಕ ಗಳಿಸಿರುವ ದೀಪಕ್‌, ಪ್ರತಿದಿನ ಬೆಳಿಗ್ಗೆ, ಸಂಜೆ 6 ಗಂಟೆ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನ ಎಲ್ಲ ಉಪನ್ಯಾಸಕರು ಚೆನ್ನಾಗಿ ಬೋಧಿಸುತ್ತಿದ್ದರು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ನಮಗೆ ಇಂಗ್ಲಿಷ್ ಉಪನ್ಯಾಸಕಿ ಪ್ರತಿನಿತ್ಯ ಕಾಲೇಜು ಅವಧಿ ಮುಗಿಸಿದ ನಂತರವೂ ವಿಶೇಷ ತರಗತಿಗಳನ್ನು ತೆಗೆದುಕೊಂಡಿದ್ದರು. ಇದರಿಂದ ಇಂಗ್ಲಿಷ್‌ ವಿಷಯದಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು ಎಂಬುದು ದೀಪಕ್‌ ಸಂತಸ ಹಂಚಿಕೊಂಡ.

ನಾವು ಚಿಕ್ಕವರಿದ್ದಾಗಲೇ ತಂದೆ ಮೃತಪಟ್ಟರು. ಅನಾರೋಗ್ಯ ಪೀಡಿತರಾದ ತಾಯಿ ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಇಬ್ಬರು ಸಹೋದರರೂ ವ್ಯಾಸಂಗ ಮಾಡುತ್ತಿದ್ದಾರೆ. ತಾಯಿಗೆ ಹಣ ಒದಗಿಸಲು ಕಷ್ಟವಾಗುತ್ತಿತ್ತು. ಹಾಗಾಗಿ ರಜಾ ದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಉಳಿದ ಅವಧಿಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಮುಂದೆ ಬಿ.ಕಾಂ. ಮಾಡಿ ಬ್ಯಾಂಕಿಂಗ್ ಕ್ಷೇತ್ರ
ದಲ್ಲಿ ಉದ್ಯೋಗ ಪಡೆಯಬೇಕೆಂಬ ಆಸೆ ಇದೆ. ವ್ಯಾಸಂಗ ಮುಂದು
ವರಿಸಲು ಹಣಕಾಸಿನ ಸಮಸ್ಯೆಯೂ ಇದೆ. ಜತೆಗೆ ವಯಸ್ಸಾದ ತಾಯಿಯ ಆರೈಕೆಯನ್ನೂ ಮಾಡಬೇಕಿದೆ ಎಂದು ಅವರು ಅಳಲು ತೋಡಿಕೊಂಡ.

‘ನಾನು ಶಾಲೆಗೆ ಹೋಗಿಲ್ಲ. ಮಗ ಸಾಧನೆ ಮಾಡಿರುವುದು ಖುಷಿ ನೀಡಿದೆ. ಅನಾರೋಗ್ಯದಿಂದ ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ನಮಗೆ ಹಣಕಾಸಿನ ಸಮಸ್ಯೆಯೂ ಇದೆ’ ಎನ್ನುವಾಗ ದೀಪಕ್ ಅವರ ತಾಯಿ ಲೀಲಾವತಿ ಅವರ ಕಣ್ಣುಗಳು ತುಂಬಿಬಂದವು.

ಗುರು-ಶಿಷ್ಯರ ಪರಂಪರೆಯನ್ನು ಪಾಲಿಸುವ ದೀಪಕ್‌ಗೆ ಶಿಕ್ಷಣ ಮುಂದುವರಿಸಲು ಸಮಾಜದ ನೆರವಿನ ಅಗತ್ಯವಿದೆ ಎನ್ನುತ್ತಾರೆ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಗಂಗಾಧರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.