ADVERTISEMENT

371 (ಜೆ) ಮೀಸಲಾತಿಯಡಿ ನೇಮಕಾತಿ ನನೆಗುದಿಗೆ

ಕರ್ನಾಟಕ ವಿ.ವಿಯಿಂದ 2017ರಲ್ಲಿ 20 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ

ಮನೋಜ ಕುಮಾರ್ ಗುದ್ದಿ
Published 22 ಸೆಪ್ಟೆಂಬರ್ 2021, 5:08 IST
Last Updated 22 ಸೆಪ್ಟೆಂಬರ್ 2021, 5:08 IST
ಪ್ರೊ.ಕೆ.ಬಿ. ಗುಡಸಿ
ಪ್ರೊ.ಕೆ.ಬಿ. ಗುಡಸಿ   

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದವರಿಗೆ ನೀಡಲಾದ 371 (ಜೆ) ಮೀಸಲಾತಿಯಡಿ 20 ಬೋಧಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು 2017ರಲ್ಲಿ ಅಧಿಸೂಚನೆ ಹೊರಡಿಸಿದ್ದರೂ ಕುಲಪತಿ ನೇಮಕ ತಡವಾಗಿದ್ದರಿಂದ ಇನ್ನೂ ಪೂರ್ಣಗೊಂಡಿಲ್ಲ. ನಾಲ್ಕು ವರ್ಷಗಳಿಂದ ಹುದ್ದೆಗಳಿಗೆ ಅರ್ಜಿ ಹಾಕಿ ಕಾಯುತ್ತಿರುವ 80ಕ್ಕೂ ಅಧಿಕ ಆಕಾಂಕ್ಷಿಗಳು ಯಾವಾಗ ಪ್ರಕ್ರಿಯೆ ಶುರುವಾಗುತ್ತದೋ ಎಂದು ಕಾಯುತ್ತಿದ್ದಾರೆ.

2017ರ ಅಕ್ಟೋಬರ್ 10ರಂದು ಕರ್ನಾಟಕ ವಿಶ್ವವಿದ್ಯಾಲಯವು ರಸಾಯನವಿಜ್ಞಾನ ಹಾಗೂ ಕಂಪ್ಯೂಟರ್‌ ಸೈನ್ಸ್‌ನ ತಲಾ ಒಂದೊಂದು ಪ್ರಾಧ್ಯಾಪಕ ಹುದ್ದೆ, ಇತಿಹಾಸ ಮತ್ತು ಶಾಸನಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನವಿಜ್ಞಾನ, ಶಿಕ್ಷಣ, ಭೂಗರ್ಭವಿಜ್ಞಾನ, ಸೂಕ್ಷ್ಮಜೀವಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಸಂಗೀತ, ಭೌತವಿಜ್ಞಾನ, ಯೋಗ ಅಧ್ಯಯನದ ತಲಾ ಒಬ್ಬರು ಸಹ ಪ್ರಾಧ್ಯಾಪಕರ ಹುದ್ದೆ ಹಾಗೂ ರಸಾಯನ ವಿಜ್ಞಾನ, ವಾಣಿಜ್ಯ, ಅಪರಾಧವಿಜ್ಞಾನ ಮತ್ತು ಫೋರೆನ್ಸಿಕ್ ವಿಜ್ಞಾನ, ಇಂಗ್ಲಿಷ್, ಇತಿಹಾಸ, ಕಾನೂನು, ಸಂಸ್ಕೃತ ಮತ್ತು ಪ್ರಾಣಿಶಾಸ್ತ್ರ ವಿಭಾಗದ ತಲಾ ಒಬ್ಬರು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು.

ವಿಳಂಬವೇಕೆ?: 2017ರಲ್ಲಿ ಅಧಿಸೂಚನೆ ಹೊರಡಿಸಿದ ಬಳಿಕ ಬೋಧಕ ಹುದ್ದೆಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಲಿಖಿತ ಪರೀಕ್ಷೆ ನಡೆದು, ಸಂದರ್ಶನ ಮಾಡುವುದಷ್ಟೇ ಬಾಕಿ ಇತ್ತು. ಅಷ್ಟರಲ್ಲಿ ಕುಲಪತಿಯಾಗಿದ್ದ ಪ್ರೊ. ಪ್ರಮೋದ ಗಾಯಿ ಅವರು ಸೇವಾವಧಿ ಮುಗಿಯುತ್ತಾ ಬಂದಿತ್ತು. ಆದ್ದರಿಂದ ನೇಮಕ ಪ್ರಕ್ರಿಯೆಗೆ ತಡೆ ಹಿಡಿಯಲಾಯಿತು. ಅದಾದ ಬಳಿಕ ಕರ್ನಾಟಕ ವಿ.ವಿ.ಗೆ ಪೂರ್ಣ ಪ್ರಮಾಣದ ಕುಲಪತಿ ನೇಮಕ ಎರಡು ವರ್ಷ ವಿಳಂಬವಾಯಿತು.ನಂತರ ಬಳಿಕ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ಮತ್ತೆ ನೇಮಕಾತಿ ನನೆಗುದಿಗೆ ಬಿತ್ತು ಎನ್ನುತ್ತಾರೆ ಅರ್ಜಿ ಸಲ್ಲಿಸಿ ಸಂದರ್ಶನಕ್ಕಾಗಿ ಕಾಯುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಯೊಬ್ಬರು.

ADVERTISEMENT

ಇನ್ನೂ ದೊರೆಯದ ಅನುಮತಿ: 20 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭಿಸಬೇಕು ಎಂದು ಪ್ರಸ್ತುತ ಕುಲಪತಿಯಾಗಿರುವ ಪ್ರೊ. ಕೆ.ಬಿ. ಗುಡಸಿ ಅವರು ಉನ್ನತ ಶಿಕ್ಷಣ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಇನ್ನೂ ಅನುಮತಿ ಸಿಕ್ಕಿಲ್ಲ. ಆದರೆ, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 371 (ಜೆ) ಮೀಸಲಾತಿಯಡಿ ನೇಮಕ ಮಾಡಿಕೊಳ್ಳಲು ಇತ್ತೀಚೆಗಷ್ಟೇ ಇಲಾಖೆ ಅನುಮತಿ ನೀಡಿದೆ ಎಂದು ಮೂಲಗಳು
ತಿಳಿಸಿವೆ.

ಮರು ಅಧಿಸೂಚನೆಗೆ ವಿರೋಧ: ನೇಮಕಾತಿ ಪ್ರಕ್ರಿಯೆ ಆರಂಭವಾದರೂ ಇನ್ನೂ ಮುಕ್ತಾಯಗೊಳಿಸದಿರುವುದು ಒಂದೆಡೆಯಾದರೆ, ಹೊಸದಾಗಿ ಪ್ರಕ್ರಿಯೆ ನಡೆಸಲು ಮರು ಅಧಿಸೂಚನೆ ನಡೆಸುವ ಚಿಂತನೆ ಇದೆ ಎನ್ನಲಾಗಿದೆ. ಇದಕ್ಕೆ ಅಭ್ಯರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮರು ಅಧಿಸೂಚನೆ ನಡೆಸಿದರೆ ಮತ್ತಷ್ಟು ಜನರು ಅರ್ಜಿ ಸಲ್ಲಿಸುತ್ತಾರೆ. ಹೀಗಾಗಿ, ನಮಗೆ ನೇಮಕಾತಿ ಅವಕಾಶಗಳು ಕ್ಷೀಣಿಸುತ್ತವೆ ಎನ್ನುತ್ತಾರೆ ಅವರು.

ದಾವಣಗೆರೆ ವಿ.ವಿ., ಕೃಷ್ಣದೇವರಾಯ ವಿ.ವಿ. ನೇಮಕ ಪೂರ್ಣ

ಏಕಕಾಲಕ್ಕೆ ಕರ್ನಾಟಕ ವಿ.ವಿ., ದಾವಣಗೆರೆ ವಿ.ವಿ. ಹಾಗೂ ಬಳ್ಳಾರಿಯ ಕೃಷ್ಣದೇವರಾಯ ವಿ.ವಿ.ಗೆ 371 (ಜೆ) ಮೀಸಲಾತಿಯಡಿ ಕಲ್ಯಾಣ ಕರ್ನಾಟಕ ಭಾಗದವರಿಗೆ ಮೀಸಲಾದ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು.

ಕರ್ನಾಟಕ ವಿ.ವಿ. ಹೊರತುಪಡಿಸಿ ಉಳಿದ ಎರಡು ವಿಶ್ವವಿದ್ಯಾಲಯಗಳಿಗೆ ಪೂರ್ಣ ಪ್ರಮಾಣದ ಕುಲಪತಿ ಇದ್ದುದರಿಂದ ನೇಮಕ ಪ್ರಕ್ರಿಯೆ ಯಾವ ಅಡೆತಡೆಯಿಲ್ಲದೇ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.