ADVERTISEMENT

ಮಡಿಕೇರಿ: ಗಾಂಧಿ ಮೈದಾನಕ್ಕಾಗಿ ‘ಹೋರಾಟ’

ಆಮ್ ಆದ್ಮಿ ಪಾರ್ಟಿ ಎಚ್ಚರಿಕೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 12:27 IST
Last Updated 8 ಸೆಪ್ಟೆಂಬರ್ 2021, 12:27 IST
ಮಡಿಕೇರಿಯ ಗಾಂಧಿ ಮೈದಾನವನ್ನು ಸ್ವಚ್ಛಗೊಳಿಸಬೇಕು ಎಂದು ಕೋರಿ, ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು
ಮಡಿಕೇರಿಯ ಗಾಂಧಿ ಮೈದಾನವನ್ನು ಸ್ವಚ್ಛಗೊಳಿಸಬೇಕು ಎಂದು ಕೋರಿ, ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು   

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನವು ಅವ್ಯವಸ್ಥೆಯ ಆಗರವಾಗಿದ್ದು, ಜಿಲ್ಲಾಡಳಿತವು ತಕ್ಷಣ ಮೈದಾನವನ್ನು ಸುಸ್ಥಿತಿಯಲ್ಲಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಆಮ್ ಆದ್ಮಿ ಪಕ್ಷದ ಕೊಡಗು ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕ್ರೀಡಾಪಟುಗಳು, ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಮತ್ತು ಸಭೆ, ಸಮಾರಂಭಗಳನ್ನು ನಡೆಸಲು ಯೋಗ್ಯವಾಗಿದ್ದ ಗಾಂಧಿ ಮೈದಾನ ಈಗ ಅವ್ಯವಸ್ಥೆಯಿಂದ ಕೂಡಿದೆ. ಮಣ್ಣಿನ ರಾಶಿ ಹಾಕಲಾಗಿದೆ. ಅದನ್ನು ತೆರವುಗೊಳಿಸಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಜಿಲ್ಲಾಡಳಿತವು ಅ.2ರಂದು ಗಾಂಧಿ ಜಯಂತಿಯನ್ನು ಗಾಂಧಿ ಮೈದಾನಲ್ಲೇ ಆಚರಿಸಬೇಕು ಎಂದು ಆಗ್ರಹಿಸಿದರು.

ಸ್ವಚ್ಛತೆ ಮಾಡದಿದ್ದರೆ ಕ್ರೀಡಾಭಿಮಾನಿಗಳು ಮತ್ತು ನಾಗರಿಕರ ಸಹಕಾರದೊಂದಿಗೆ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಆಪ್‌ನ ಕೊಡಗು ಜಿಲ್ಲಾ ಉಸ್ತುವಾರಿ ಕೋಳಿಬೈಲು ಚಿಣ್ಣಪ್ಪ ವೆಂಕಟೇಶ್ ಹಾಗೂ ಜಿಲ್ಲಾ ಸಂಚಾಲಕ ಎಚ್.ಬಿ.ಪ್ರಥ್ವಿ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಕಳೆದ ಅನೇಕ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳು ಆಟವಾಡಿದ ಮೈದಾನ ಈಗ ಮಣ್ಣಿನ ರಾಶಿ ಹಾಕುವ ಪ್ರದೇಶವಾಗಿ ಮಾರ್ಪಟ್ಟಿರುವುದು ದುರಂತ. ಇದೇ ಮೈದಾನದಲ್ಲಿ ಗಾಂಧಿ ಮಂಟಪ ಮತ್ತು ರಂಗ ಮಂದಿರವೂ ಇದ್ದು, ಯಾವುದಕ್ಕೂ ಗೌರವವಿಲ್ಲದಾಗಿದೆ. ನಗರದಲ್ಲಿ ಮೈದಾನದ ಕೊರತೆ ಕಾಡುತ್ತಿದ್ದು ಇದರ ನಡುವೆಯೇ ಇರುವ ಮೈದಾನವನ್ನು ಕೂಡ ಹಾಳುಗೆಡವಲಾಗುತ್ತಿದೆ. ಗಾಂಧಿ ಮಂಟಪದ ಬಳಿ ಅವೈಜ್ಞಾನಿಕ ರೂಪದಲ್ಲಿ ಬೇಲಿ ನಿರ್ಮಿಸಿ, ಮೈದಾನದ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ. ಅಲ್ಲದೇ ಈ ಬೇಲಿ ಹಾಕುವ ಮಂಟಪದ ಅಂದಕ್ಕೆ ಧಕ್ಕೆ ತರಲಾಗಿದೆ ಎಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರ ಉಪಯೋಗಕ್ಕೆಂದು ಮೀಸಲಾಗಿರುವ ಆಟದ ಮೈದಾನದಲ್ಲಿ ಮಣ್ಣಿನ ರಾಶಿ ಹಾಕಿ, ಕಾನೂನನ್ನು ಉಲ್ಲಂಘಿಸಲಾಗಿದೆ. ಮಣ್ಣನ್ನು ತೆರವುಗೊಳಿಸಿ ಈ ಮೊದಲಿನಂತೆ ಮೈದಾನವನ್ನು ಸುಸಜ್ಜಿಗೊಳಿಸಬೇಕು ಎಂದು ಚಿಣ್ಣಪ್ಪ ವೆಂಕಟೇಶ್ ಒತ್ತಾಯಿಸಿದರು.

ತಾಲ್ಲೂಕು ಉಸ್ತುವಾರಿ ಎಚ್.ಜಿ.ಬಾಲಸುಬ್ರಮಣ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.