ADVERTISEMENT

ನಾಪೋಕ್ಲು ಹೋಬಳಿ: ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತ

ಮಳೆ- ಗಾಳಿಯಿಂದ ನೆಲಕ್ಕುರುಳಿದ ವಿದ್ಯುತ್‌ ಕಂಬಗಳು

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 5:38 IST
Last Updated 17 ಜುಲೈ 2021, 5:38 IST
ನಾಪೋಕ್ಲು ಸಮೀಪದ ಕೋಕೇರಿ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ (ಎಡ ಚಿತ್ರ). ನರಿಯಂದಡ ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಸಂಪರ್ಕ ಕಡಿತಗೊಂಡಿದೆ
ನಾಪೋಕ್ಲು ಸಮೀಪದ ಕೋಕೇರಿ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ (ಎಡ ಚಿತ್ರ). ನರಿಯಂದಡ ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಸಂಪರ್ಕ ಕಡಿತಗೊಂಡಿದೆ   

ನಾಪೋಕ್ಲು: ಶುಕ್ರವಾರ ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಮುಖಗೊಂಡಿದೆ. ಆದರೆ, ಮಳೆ-ಗಾಳಿಯಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮೀಣ ಜನರು ಸಂಕಷ್ಟ ಎದುರಿಸುವಂತಾಗಿದೆ.

‘ಕೊರೊನಾ ಸಂಕಷ್ಟದಿಂದಾಗಿ ಹಲವರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದು, ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಬಲ್ಲಮಾವಟಿ, ಎಮ್ಮೆಮಾಡು, ಕೊಣಂಜಗೇರಿ ಹಾಗೂ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳು ಕತ್ತಲಲ್ಲಿ ಮುಳುಗಿವೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

‘ಸೆಸ್ಕ್ ನಿರ್ಲಕ್ಷ್ಯದಿಂದ ಕಳೆದ ತಿಂಗಳಿನಿಂದ ನರಿಯಂದಡ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ, ಚೆಯ್ಯಂಡಾಣೆ, ನರಿಯಂದಡ, ಕೊಕೇರಿ, ಚೇಲಾವರ ಗ್ರಾಮಗಳು ಕಗ್ಗತ್ತಲೆಯಲ್ಲಿ ಮುಳುಗಿವೆ. ‘ಬೆಳಿಗ್ಗೆಯಿಂದ ಸಂಜೆ ತನಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ದುರಸ್ತಿ ಕಾಮಗಾರಿ’ ನಡೆಯುತ್ತಿದೆ ಎಂದು ಸಿಬ್ಬಂದಿ ಉತ್ತರಿಸುತ್ತಾರೆ. ಸಂಜೆಯ ವೇಳೆ ‘ಸಂಪರ್ಕ ಟ್ರಿಪ್ ಆಗುತ್ತಿದೆ, ಚಾರ್ಜ್ ನಿಲ್ಲುತ್ತಿಲ್ಲ’ ಎನ್ನುವ ಉತ್ತರವನ್ನು ನೀಡುತ್ತಿದ್ದಾರೆ. ಆನ್‌ಲೈನ್ ತರಗತಿಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಮನೆಯಿಂದ ಕೆಲಸ ಮಾಡುತ್ತಿರುವ ಹಲವು ಉದ್ಯೋಗಿಗಳಿಗೆ ಸಮಸ್ಯೆ ಉಂಟಾಗಿದೆ’ ಎಂದು ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪವನ್ ತೊಟಂಬೈಲ್ ಆರೋಪಿಸುತ್ತಾರೆ.

ADVERTISEMENT

‘ಇದೇ ಪರಿಸ್ಥಿತಿ ಮುಂದುವರಿದಲ್ಲಿ ಸಂಬಂಧಪಟ್ಟ ಗ್ರಾಮದ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಸಲು ಸನ್ನದ್ಧರಾಗಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

‘ಬಲ್ಲಮಾವಟಿ ಹಾಗೂ ಎಮ್ಮೆಮಾಡು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಇದೆ. ನೆಲಜಿ, ಎಮ್ಮೆಮಾಡು, ದೊಡ್ಡಪುಲಿಕೋಟು ಹಾಗೂ ಪೇರೂರು ಗ್ರಾಮಗಳಲ್ಲಿ ಗಾಳಿ-ಮಳೆಯಿಂದ ವಿದ್ಯುತ್ ಕಡಿತಗೊಂಡಿದ್ದು, ಲೈನ್ ಇನ್ನೂ ದುರಸ್ತಿಯಾಗಿಲ್ಲ. ಪ್ರತಿವರ್ಷ ಮಳೆಗಾಲದಲ್ಲಿ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ’ ಎಂದು ಪೇರೂರಿನ ಗ್ರಾಮಸ್ಥ ಕುಮಾರ್ ಸೋಮಣ್ಣ ದೂರಿದರು.

‘ಬೇಸಿಗೆಯ ಕಾಲದಲ್ಲಿ ಲೈನ್‌ಮನ್‌ಗಳು ಸರಿಯಾಗಿ ಕೆಲಸ ಮಾಡದೇ ಇದ್ದದ್ದು ಇಷ್ಟಕ್ಕೆಲ್ಲ ಕಾರಣವಾಗಿದೆಯೇ ಹೊರತು ಬೇರೇನೂ ಅಲ್ಲ. ಗ್ರಾಮಗಳಲ್ಲಿ ಮೇಲ್ನೋಟಕ್ಕೆ ಸಂಪರ್ಕ ಕಡಿತಗೊಂಡ ಸ್ಥಳ ವೀಕ್ಷಿಸಿ ಲೈನ್‌ಮನ್‌ಗಳು ತೆರಳುತ್ತಾರೆ. ದುರಸ್ತಿಪಡಿಸಲು ಕ್ರಮ ಕೈಗೊಳ್ಳುವುದಿಲ್ಲ’ ಎಂದು ಅವರು ಆರೋಪಿಸಿದರು.

‘ಮಳೆ-ಗಾಳಿಯಿಂದ ಮರದ ರೆಂಬೆಗಳು ವಿದ್ಯುತ್ ತಂತಿಯ ಮೇಲೆ ಮುರಿದು ಬೀಳುತ್ತಿದ್ದು, ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮೀಪಿಸುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ’ ಎಂದು ಪೋಷಕರು ಕಳವಳ
ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.