ADVERTISEMENT

ಬುದ್ಧಿಮಾಂದ್ಯರಿಗೆ ಬೆಳಕಾದ ಮಹಿಳೆ

ವಿಪತ್ತಿನಲ್ಲಿ ಸಿಲುಕಿದವರಿಗೆ ನೆರವಿನ ಹಸ್ತ ಚಾಚುವ ಅಪರೂಪದ ಸಾಧಕಿ ದಿವ್ಯಾ

ಕೆ.ಎಸ್.ಗಿರೀಶ್
Published 8 ಮಾರ್ಚ್ 2023, 4:01 IST
Last Updated 8 ಮಾರ್ಚ್ 2023, 4:01 IST
ದಿವ್ಯಾ ಮಂದಪ್ಪ
ದಿವ್ಯಾ ಮಂದಪ್ಪ   

ಮಡಿಕೇರಿ: ಸಾಮಾನ್ಯವಾಗಿ ಎಲ್ಲರೂ ಒಂದೊಂದು ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾರೆ. ಆದರೆ, ಇಲ್ಲೊಬ್ಬರು ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ವಿಪತ್ತಿನಲ್ಲಿ ಸಿಲುಕಿದವರಿಗೆ, ಬುದ್ಧಿಮಾಂದ್ಯರಿಗೆ, ವೃದ್ಧರಿಗೆ ಬೆಳಕಾಗಿದ್ದಾರೆ.

ಮೂಲತಃ ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಗ್ರಾಮದ ನಾಪಂಡ ಕುಶಾಲಪ್ಪ ಹಾಗೂ ತಾಯಿ ಮುತ್ತಕ್ಕಿ ಅವರ ಪುತ್ರಿಯಾದ ಬಾಳೆಯಡ ದಿವ್ಯಾ ಮಂದಪ್ಪ ಅವರು ಬುದ್ದಿಮಾಂದ್ಯ ವಿಷಯದಲ್ಲಿ ಬಿ.ಇಡಿ ಪದವಿ ಪಡೆದು ನಾಪೋಕ್ಲುವಿನಲ್ಲಿ ಪುನಶ್ಚೇತನ ಚಾರಿಟಬಲ್ ಟ್ರಸ್ಟ್‌ನ್ನು ಸ್ಥಾಪಿಸಿ 18 ವರ್ಷ ತುಂಬಿದ ಬುದ್ದಿಮಾಂದ್ಯರಿಗೆ ಶಿಕ್ಷಣ ನೀಡುತ್ತಿದ್ದಾರೆ.

ಈಗ ಬೊಪ್ಪಂಡ ಸೂರಜ್ ಗಣಪತಿ ಅವರೊಂದಿಗೆ ಸೇರಿ 12 ಬುದ್ದಿಮಾಂದ್ಯ ಮಕ್ಕಳಿಗೆ ಶಿಕ್ಷಣದ ಜತೆಗೆ ದೈನಂದಿನ ಕೌಶಲಗಳನ್ನು ಕಲಿಸಿ, ಅವರು ಸ್ವತಂತ್ರವಾಗಿ ಬದುಕುವುದಕ್ಕೆ ಬೇಕಾದ ತರಬೇತಿ ನೀಡುತ್ತಿದ್ದಾರೆ. ಇವರೊಂದಿಗೆ ಇಬ್ಬರು ಶಿಕ್ಷಕಿಯರು ಹಾಗೂ ಇಬ್ಬರು ಸಹಾಯಕರು ಇದ್ದಾರೆ. ಇದರ ಜತೆಗೆ, ಮಡಿಕೇರಿಯಲ್ಲಿ ‘ತಣಲ್’ ಎಂಬ ವೃದ್ಧಾಶ್ರಮದ ಕಾರ್ಯದರ್ಶಿಯಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ 35 ಮಂದಿ ಇದ್ದಾರೆ.

ADVERTISEMENT

ಒಂದೆಡೆ ಅಶಕ್ತರಿಗೆ ದಾರಿದೀಪದಂತಿರುವ ದಿವ್ಯಾ ಅವರು ಮತ್ತೊಂದೆಡೆ ಕೊಡಗಿಗೆ ವಿಪತ್ತು ಬಂದಾಗ ಅದರ ನಿರ್ವಹಣೆ
ಯಲ್ಲೂ ತೊಡಗಿಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಶೌರ್ಯ’ ತಂಡದಲ್ಲಿ ಇವರಿದ್ದಾರೆ. ನಾಪೋಕ್ಲುವಿನಲ್ಲಿ 20 ಯುವಕ, ಯುವತಿಯರ ತಂಡವನ್ನು ಕಟ್ಟಿ ಅದರ ಸಂಯೋಜಕಿ
ಯಾಗಿದ್ದಾರೆ. ಮಳೆ ಮೊದಲಾದ ವಿಪತ್ತು ಬಂದಾಗ ವಿಪತ್ತಿನಲ್ಲಿ ಸಿಲುಕಿದವರನ್ನು ರಕ್ಷಿಸಿದ್ದಾರೆ. ಶಾಲೆಗಳ ದುರಸ್ತಿ, ದೇಗುಲಗಳ ಸ್ವಚ್ಛತಾ ಕಾರ್ಯ, ಬಡ ಮಹಿಳೆಯರಿಗೆ ದಿನಸಿ ವಿತರಣೆ ಸೇರಿದಂತೆ ಅನೇಕ ಸೇವಾ‍ಪರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಈ ತಂಡ ಮಾಡಿದ ಕಾರ್ಯಗಳನ್ನು ಜನರು ಈಗಲೂ ನೆನೆಯುತ್ತಾರೆ.

ಇವುಗಳ ಜತೆಗೆ, ಆಗಿಂದಾಗ್ಗೆ ರಕ್ತದಾನ ಶಿಬಿರಗಳನ್ನೂ ಆಯೋಜನೆ ಮಾಡುತ್ತಿದ್ದಾರೆ. ನಾಪೋಕ್ಲುವಿನ ಕೊಡವ ಪೊಮ್ಮಕಡ ಪರಿಷತ್ತಿನ ನಿರ್ದೇಶಕಿಯಾಗಿ, ಕೊಡವ ಕೂಟಳಿಯ ಸಂಘಟನೆಯ ಖಜಾಂಚಿಯಾಗಿ, ಕೊಡವ ಮಕ್ಕಡ ಕೂಟದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸದ್ಯ, ಇವರು ಆಕಾಶವಾಣಿಯ ತಾತ್ಕಾಲಿಕ ಉದ್ಘೋಷಕಿಯಾಗಿಯೂ, ಮಡಿಕೇರಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಶೇಷ ಶಿಕ್ಷಕಿಯಾಗಿಯೂ ಕಾರ್ಯನಿರ್ವಹಿಸುವುದುರ ಜತೆಗೆ ಕೊಡಗಿನ ವಿವಿಧೆಡೆ ನಡೆಯುವ ಕಾರ್ಯಕ್ರಮಗಳ ನಿರೂಪಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಪತಿ ಶ್ಯಾಮ್ ಮಂದಪ್ಪ ಹಾಗೂ ಪುತ್ರ ಬಿಷನ್ ಬಿದ್ದಪ್ಪ ಅವರೊಂದಿಗೆ ವಿರಾಜಪೇಟೆಯ ತಾಲ್ಲೂಕಿನ ಮಾಯಮುಡಿಯಲ್ಲಿ ವಾಸವಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.