ADVERTISEMENT

ಸಂತ್ರಸ್ತ ಬಾಲಕಿಯನ್ನು ಠಾಣೆಗೆ ಕಳಿಸಿ ನಿಯಮ ಗಾಳಿಗೆ ತೂರಿದ ಅಧಿಕಾರಿಗಳು

ಪೊಲೀಸ್‌ ಸಿಬ್ಬಂದಿ ಕೊರತೆ ನೆಪ; ಮಕ್ಕಳ ಕಲ್ಯಾಣ ಸಮಿತಿ ನಿರ್ಲಕ್ಷ್ಯ

ಕೆ.ನರಸಿಂಹ ಮೂರ್ತಿ
Published 6 ಸೆಪ್ಟೆಂಬರ್ 2021, 22:23 IST
Last Updated 6 ಸೆಪ್ಟೆಂಬರ್ 2021, 22:23 IST

ಮೈಸೂರು: ಗರ್ಭ ಧರಿಸಿದ್ದ 14 ವರ್ಷ ವಯಸ್ಸಿನ ಮಗಳೊಂದಿಗೆ ದೂರು ನೀಡಲು ಬಂದಿದ್ದ ಪೋಷಕರನ್ನು ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸ್‌ ಠಾಣೆಗೆ ಕಳಿಸಿ ದೂರು ದಾಖಲಿಸುವಂತೆ ಸೂಚಿಸಿದೆ. ಸಂತ್ರಸ್ತೆ ಬಾಲಕಿಯನ್ನು ಠಾಣೆಗೆ ಕಳಿಸುವಂತಿಲ್ಲ ಎಂಬ ಪೋಕ್ಸೊ ಕಾಯ್ದೆಯ ನಿಯಮವನ್ನು ಗಾಳಿಗೆ ತೂರಿದೆ.

ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಸಮಿತಿಯು ಬಾಲಕಿಯನ್ನು ಠಾಣೆಯಿಂದ ವಾಪಸು ಕರೆಸಿಕೊಂಡಿದೆ.

ಬಾಲಕಿ ಸದ್ಯ ಆರು ತಿಂಗಳ ಗರ್ಭಿಣಿ. ಆಕೆಯನ್ನು ತಾಯಿ ಹಾಗೂ ಮೈಸೂರಿನಲ್ಲಿದ್ದ ಆಕೆಯ ಸಂಬಂಧಿಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕರೆ ತಂದಿದ್ದರು. ನಂತರ ಆಪ್ತಸಮಾಲೋಚನೆ ನಡೆಸಿದ ಸಮಿತಿ ಸದಸ್ಯರು, ಪತ್ರವೊಂದನ್ನು ಕೊಟ್ಟು, ಗ್ರಾಮಾಂತರ ಠಾಣೆಗೆ ಹೋಗಿ ದೂರು ದಾಖಲಿಸಿ, ಎಫ್‌ಐಆರ್‌ ಪ್ರತಿ ತರಲು ಸೂಚಿಸಿದ್ದರು. ಅವರ ಸೂಚನೆ ಮೇರೆಗೆ ಠಾಣೆಗೆ ತೆರಳಿದಾಗ ಪೊಲೀಸರು, ತಾಯಿಯೊಂದಿಗೆ ತೆರಳಿದ್ದ ಸಂಬಂಧಿಕರ ಮಾಹಿತಿಯನ್ನೂ ಸಂಗ್ರಹಿಸಲು ಆರಂಭಿಸಿದಾಗ ಅವರು ಆಕ್ಷೇಪಿಸಿ, ನಗರದ ಒಡನಾಡಿ ಸಂಸ್ಥೆಯ ನಿರ್ದೇಶಕ ಕೆ.ವಿ.ಸ್ಟ್ಯಾನ್ಲಿ ಅವರ ಗಮನಕ್ಕೆ ತಂದರು. ಅವರು ಕೂಡಲೇ ಆಯೋಗದ ಸದಸ್ಯ ಎಂ.ಎಲ್‌.ಪರಶುರಾಮ್ ಅವರಿಗೆ ಮಾಹಿತಿ ನೀಡಿದ್ದರು.‌

ADVERTISEMENT

ಘಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಮಿತಿ ಸದಸ್ಯೆ ಅನ್ನಪೂರ್ಣ ಗಾಣಿಗೇರ, ‘ಶ್ರಾವಣ ಮಾಸದ ಕೊನೆಯ ದಿನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುವುದರಿಂದ ಪೊಲೀಸ್‌ ಸಿಬ್ಬಂದಿ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದರು. ಪೋಷಕರೊಂದಿಗೆ ಸಂತ್ರಸ್ತೆಯನ್ನು ಠಾಣೆಗೆ ಕಳಿಸಿಕೊಡಿ ಎಂದು ಪೊಲೀಸರು ತಿಳಿಸಿದ್ದರಿಂದ ಅಲ್ಲಿಗೆ ಕಳಿಸಲಾಯಿತು. ಪೋಷಕರೊಂದಿಗೆ ಬಾಲಕಿಯನ್ನು ಠಾಣೆಗೆ ಕಳಿಸಲು ಅವಕಾಶವಿದೆ. ಸಮಿತಿಯಲ್ಲೂ ಸಿಬ್ಬಂದಿ ಲಭ್ಯರಿರಲಿಲ್ಲ’ ಎಂದು ಹೇಳಿದರು.

‘ಬೆಳಿಗ್ಗೆ 10.30ರ ವೇಳೆಗೆ ನಾವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡಲು ಹೋಗಿದ್ದೆವು. ನಮ್ಮೊಂದಿಗೆ ಮಾತನಾಡಿದ ಅಧಿಕಾರಿಯು ಪತ್ರವೊಂದನ್ನು ಕೊಟ್ಟು ಠಾಣೆಗೆ ಹೋಗಿ ನೀಡುವಂತೆ ತಿಳಿಸಿದರು. ಠಾಣೆಯಲ್ಲಿರುವಾಗ ಕರೆ ಮಾಡಿದ ಅವರು ಕೂಡಲೇ ಬಾಲಕಿಯನ್ನು ವಾಪಸು ಕಳಿಸುವಂತೆ ಹೇಳಿದರು. ಮತ್ತೊಬ್ಬ ಸಂಬಂಧಿಯೊಂದಿಗೆ ಆಕೆಯನ್ನು ಆಟೊರಿಕ್ಷಾದಲ್ಲಿ ವಾಪಸು ಕಳಿಸಿದೆ’ ಎಂದು ಬಾಲಕಿಯ ಸಂಬಂಧಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.