ADVERTISEMENT

ಸ್ವಪಕ್ಷಿಯರನ್ನೇ ಎತ್ತಿಕಟ್ಟುವ ಕುಮಾರಸ್ವಾಮಿ: ಶಾಸಕ ಎಸ್.ಆರ್.ಶ್ರೀನಿವಾಸ್ ಆರೋಪ

ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್‌.ಆರ್‌.ಶ್ರೀನಿವಾಸ್ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 8:14 IST
Last Updated 20 ಸೆಪ್ಟೆಂಬರ್ 2021, 8:14 IST
ಗುಬ್ಬಿ ತಾಲ್ಲೂಕಿನ ಅರೆಮಾರನಹಳ್ಳಿ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಸ್‌.ಆರ್‌. ಶ್ರೀನಿವಾಸ್. ಮುಖಂಡ ಚನ್ನಿಗರಾಮಯ್ಯ, ಗ್ರಾ.ಪಂ. ಉಪಾಧ್ಯಕ್ಷೆ ಜಯಮ್ಮ, ಅಧ್ಯಕ್ಷೆ ರೂಪಕಲಾ, ಸದಸ್ಯರಾದ ವೆಂಕಟೇಶ್, ಕೆಂಪಣ್ಣ, ಮುಖಂಡರಾದ ಶಿವಕುಮಾರ್, ಹೊದಲೂರು ವಿಜಯ್ ಕುಮಾರ್ ಇದ್ದರು
ಗುಬ್ಬಿ ತಾಲ್ಲೂಕಿನ ಅರೆಮಾರನಹಳ್ಳಿ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಸ್‌.ಆರ್‌. ಶ್ರೀನಿವಾಸ್. ಮುಖಂಡ ಚನ್ನಿಗರಾಮಯ್ಯ, ಗ್ರಾ.ಪಂ. ಉಪಾಧ್ಯಕ್ಷೆ ಜಯಮ್ಮ, ಅಧ್ಯಕ್ಷೆ ರೂಪಕಲಾ, ಸದಸ್ಯರಾದ ವೆಂಕಟೇಶ್, ಕೆಂಪಣ್ಣ, ಮುಖಂಡರಾದ ಶಿವಕುಮಾರ್, ಹೊದಲೂರು ವಿಜಯ್ ಕುಮಾರ್ ಇದ್ದರು   

ಗುಬ್ಬಿ:ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ನಾಯಕರ ವಿರುದ್ಧ ಸ್ವಪಕ್ಷೀಯರನ್ನೇ ಎತ್ತಿ ಕಟ್ಟುತ್ತಾರೆ ಎಂದು ಗುಬ್ಬಿ ಜೆಡಿಎಸ್‌ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಟೀಕಿಸಿದ್ದಾರೆ.

ಸ್ವಪಕ್ಷೀಯರನ್ನೇ ಎತ್ತಿಕಟ್ಟುವ ಕೆಲಸವನ್ನು ಕುಮಾರಸ್ವಾಮಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ವಿಧಾನಾಸಭಾ ಕ್ಷೇತ್ರದಲ್ಲೂ ಇಬ್ಬರೂ ಅಭ್ಯರ್ಥಿಗಳನ್ನು ಗುರುತಿಸುವ ಜೊತೆಗೆ ಶಾಸಕರ ವಿರುದ್ಧ ಪ್ರತಿಸ್ಪರ್ಧಿ ಹುಟ್ಟು ಹಾಕುವ ಕಲೆ ರೂಢಿಸಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.

’ಕುಮಾರಸ್ವಾಮಿ ಅವರ ಮೇಲೆ ಬೇಸರವಿಲ್ಲ. ಅವರೇ ನನ್ನ ಮೇಲೆ ಕೋಪಿಸಿಕೊಂಡು, ನನ್ನ ವಿರುದ್ಧ ಸ್ವಪಕ್ಷಿಯರನ್ನೇ ಎತ್ತಿಕಟ್ಟುತ್ತಾ, ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನು ಹುಡುಕುವ ಪ್ರಯತ್ನ ಮಾಡುತ್ತಿರಬಹುದು’ ಎಂದರು.

ADVERTISEMENT

ಕಡಬ ಹೋಬಳಿ ಅರೆಮಾರನಹಳ್ಳಿ ಗ್ರಾಮದಲ್ಲಿ ಭಾನುವಾರ ₹50 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರು ಬಡವರ ಪರ ಕಾಳಜಿ ಹೊಂದಿದ್ದು, ಸದಾ ರೈತಪರ ಚಿಂತನೆ ಮಾಡುತ್ತಾರೆ. ಅವರ ಚೈತನ್ಯಕ್ಕೆ ಇನ್ನೂ ಇಪ್ಪತ್ತು ವರ್ಷ ಸಿಕ್ಕರೂ ಪಕ್ಷ ಸಂಘಟನೆಯನ್ನು ಬಲಿಷ್ಠ ಮಾಡಬಲ್ಲರು ಎಂದು ಶ್ರೀನಿವಾಸ್ ಹೇಳಿದರು.

ಮಠದಹಳ್ಳ ಕೆರೆಗೆ ಹೇಮೆ ಹರಿಸುವ ಯೋಜನೆಗೆ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಧರ್ಭದಲ್ಲಿ ಕುಮಾರಸ್ವಾಮಿಯೊಂದಿಗೆ ಚರ್ಚಿಸಿ ₹25.65 ಕೋಟಿ ವೆಚ್ಚದ ಟೆಂಡರ್ ಮುಗಿಸಿ ಕಾಮಗಾರಿ ಆರಂಭಿಸಬೇಕಿತ್ತು. ಆದರೆ ಬದಲಾದ ಸರ್ಕಾರದಿಂದ ಕೆಲಸ ವಿಳಂಬವಾಯಿತು. ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಈ ಮಠದಹಳ್ಳ ಕೆರೆಯ ಯೋಜನೆಯನ್ನು ಎತ್ತಿನಹೊಳೆ ಯೋಜನೆಗೆ ಒಳಪಡಿಸುವ ಬಗ್ಗೆ ಚರ್ಚಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.