ADVERTISEMENT

ಲೂಟಿ ಮಾಡುವ ರಾಜಕಾರಣಿ ನಾನಲ್ಲ: ನಡಹಳ್ಳಿ

ಮಾರುತಿನಗರದಲ್ಲಿ ಸಿಸಿ ರಸ್ತೆಗೆ ಭೂಮಿ ಪೂಜೆ: ನಾಗರಿಕರಿಂದ ಅಭಿನಂದನಾ ಸಮಾರಂಭ 

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 16:04 IST
Last Updated 25 ಮಾರ್ಚ್ 2023, 16:04 IST
ಮುದ್ದೇಬಿಹಾಳ  ಪಟ್ಟಣದ ಮಾರುತಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮಾತನಾಡಿದರು
ಮುದ್ದೇಬಿಹಾಳ  ಪಟ್ಟಣದ ಮಾರುತಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಮಾತನಾಡಿದರು   

ವಿಜಯಪುರ: ಇಚ್ಛಾಶಕ್ತಿ ಇರುವ ರಾಜಕಾರಣಿ ನಾನಾಗಿದ್ದೇನೆ. ಜನರನ್ನು ಲೂಟಿ ಮಾಡುವ ರಾಜಕಾರಣಿ ನಾನಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರ ಬಡಾವಣೆಯ ಎಂಜಿಎಂಕೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮತ್ತು ನಾಗರಿಕರಿಂದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಂದಿನ 10 ವರ್ಷಗಳಲ್ಲಿ ಸಂಪೂರ್ಣ ಅಭಿವೃದ್ದಿ ಪಡಿಸಿ, ಎಲ್ಲ ರಂಗಗಳಲ್ಲಿ ಪ್ರಥಮ ಸ್ಥಾನಕ್ಕೆ ತರಲು ಯತ್ನಿಸಲಾಗುವುದು ಎಂದರು.

ADVERTISEMENT

ಚುನಾವಣೆ ಹತ್ತಿರವಾದಾಗ ನನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಾರೆ. ನನಗೆ ಹಣ ಗಳಿಸುವ ಅವಶ್ಯಕತೆ ಇಲ್ಲ. ಹಣ ಗಳಿಸುವ ವ್ಯಕ್ತಿ ದಾಸೋಹ ಮಾಡುವುದಿಲ್ಲ ಎಂದರು.

ಕ್ಷೇತ್ರದಲ್ಲಿ ಔದ್ಯೋಗಿಕ ಕ್ರಾಂತಿ ಆಗಬೇಕು. ಯುವಕ, ಯುವತಿಯರಿಗೆ ಉದ್ಯೋಗ ಸಿಕ್ಕು ಅವರ ಭವಿಷ್ಯ ರೂಪುಗೊಳ್ಳಬೇಕು ಎನ್ನುವ ಸಂಕಲ್ಪ ನನ್ನದು. ಮೊದಲ ಹಂತದಲ್ಲಿ ಮೂಲ ಸೌಕರ್ಯ ಬಲಪಡಿಸುವ ಕೆಲಸ ಮಾಡಿದ್ದೇನೆ. ಇವು ಬಲಗೊಂಡರೆ ಮಾತ್ರ ಉದ್ಯೋಗ ಸೃಷ್ಟಿ ಸಾಧ್ಯ ಎಂದು ಹೇಳಿದರು.

ಬೆಂಗಳೂರು ಸುತ್ತಮುತ್ತಲೇ ಏಕೆ ಕೈಗಾರಿಕೆ ಸ್ಥಾಪನೆ ಆಗುತ್ತವೆ. ಏಕೆ ನಮ್ಮೂರಿಗೆ ಬರುವುದಿಲ್ಲ ಎಂಬ ಚಿಂತನೆ ನಡೆಸಿದಾಗ ಮೊದಲು ಎದುರಾಗುವುದು ಮೂಲಸೌಕರ್ಯಗಳ ಲಭ್ಯತೆ. ಅದನ್ನು ನಾನೀಗ ಮಾಡಿದ್ದೇನೆ ಎಂದರು.

ಯುವ ಉದ್ಯಮಿ ಭರತ್ ಪಾಟೀಲ ನಡಹಳ್ಳಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶಕ್ಕೆ ವರವಾಗಿ ಸಿಕ್ಕಿದ್ದಾರೆ. ಅವರ ಕೊಡುಗೆ ದೇಶಕ್ಕೆ ಅಪಾರವಾಗಿದೆ. ಯುವಜನತೆ ಆರೋಪಿಸುವುದನ್ನು ಕೈಬಿಡಬೇಕು. ಕಡ್ಡಾಯವಾಗಿ ಮತದಾನ ಮಾಡಲು ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಸೌಲಭ್ಯಗಳಿಗಾಗಿ ಧ್ವನಿ ಎತ್ತಬೇಕು ಎಂದರು.

ಜಾತಿ, ಮತ, ಪಕ್ಷ, ಧರ್ಮ ಎಂದು ನೋಡದೆ ಕೆಲಸ ಮಾಡುವ ಶಾಸಕರಿಗೆ ವೋಟ್‌ ಹಾಕಿ ಮತ್ತೊಮ್ಮೆ ಅವರನ್ನು ಶಾಸಕರನ್ನಾಗಿ ಮಾಡಿ ಅವರ ಕನಸು ನನಸು ಮಾಡಿಸಲು ನೆರವಾಗಬೇಕು ಎಂದರು.

ಶರಣಮ್ಮ ತಾಯಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಮಾಜಿ ಸದಸ್ಯ ಬಸವರಾಜ ನಂದಿಕೇಶ್ವರಮಠ, ಪುರಸಭೆ ಸದಸ್ಯರಾದ ಸದಾಶಿವ ಮಾಗಿ, ಭಾರತಿ ಪಾಟೀಲ, ಪ್ರಮುಖರಾದ ಲಕ್ಷ್ಮಣ ಬಿಜ್ಜೂರ, ಶ್ರೀಶೈಲ ದೊಡಮನಿ ರೂಢಗಿ, ಎಸ್.ಎಂ.ಚಿಲ್ಲಾಳಶೆಟ್ಟರ್, ಶಿವಪ್ಪ ಚಿಮ್ಮಲಗಿ, ಹಣಮಂತ ಅಂಬಿಗೇರ, ಕಿತ್ತೂರ, ಬಡಾವಣೆಯ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.