ADVERTISEMENT

ಈಜುಕೊಳ ಶೀಘ್ರವೇ ಪ್ರಾರಂಭಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 15:25 IST
Last Updated 21 ಸೆಪ್ಟೆಂಬರ್ 2021, 15:25 IST
ವಿಜಯಪುರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾತನಾಡಿದರು
ವಿಜಯಪುರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾತನಾಡಿದರು   

ವಿಜಯಪುರ: ನಗರದ ಕನಕದಾಸ ಬಡಾವಣೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಒಳಾಂಗಣ ಈಜುಕೊಳವನ್ನು ಸಾರ್ವಜನಿಕರಿಗೆ ಹಾಗೂ ಕ್ರೀಡಾಪಟುಗಳ ಬಳಕೆಗೆ ಅನುಕೂಲ ಮಾಡಿಕೊಡಿ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, ಈಜುಕೊಳ, ವಾಕಿಂಗ್ ಟ್ರ್ಯಾಕ್, ಹೊರಾಂಗಣ ಜಿಮ್ ಅಳವಡಿಕೆ ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಾಣದ ಹಾಗೂ ಸೈಕ್ಲಿಂಗ್ ವೆಲೊಡ್ರೋಮ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಈಜುಕೊಳ ನಿರ್ವಹಣೆಗೆ ಅವಶ್ಯವಿರುವ ಸಿಬ್ಬಂದಿ ಹಾಗೂ ತರಬೇತುದಾರರನ್ನು ಆಯ್ಕೆ ಮಾಡಿ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಭೂತನಾಳ ಕೆರೆ ಹತ್ತಿರ ನಿರ್ಮಾಣದ ಹಂತದಲ್ಲಿರುವ ಸೈಕ್ಲಿಂಗ್ ವೆಲೊಡ್ರೋಮ್ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾ ಕ್ರೀಡಾಂಗಣ ಸಂಕೀರ್ಣದ ಆವರಣದಲ್ಲಿರುವ ಮಳಿಗೆಗಳ ಬಾಡಿಗೆಯನ್ನು ನೀಡದವರ ವಿರುದ್ಧ ನೋಟಿಸ್‌ ನೀಡುವಂತೆ ಸೂಚಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿರುವ ಮಲ್ಟಿ ಜಿಮ್ ಹಾಲ್ ಮತ್ತು ಅಥ್ಲೆಟಿಕ್ ಮೈದಾನಕ್ಕೆ ಮಾಸಿಕ ಶುಲ್ಕವನ್ನು ನಿಗದಿಪಡಿಸಲಾಯಿತು.

ಕ್ರೀಡಾಂಗಣದ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲ ಮಾಡಲಾಗುವುದು ಎಂದು ಅವರು ತಿಳಿಸಿದರು.

‌ಮಹಾನಗರಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ. ಲೋಣಿ, ಕಾರ್ಯನಿರ್ವಾಹಕ ಎಂಜಿನಿಯರ್‌ ಹಿರೇಗೌಡರ್, ರಾಜು ಬಿರಾದಾರ್, ಭೀಮಸೇನ್ ಕೊಕ್ಕರೆ, ಬಸವರಾಜ್ ಗೊಳಸಂಗಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.