ADVERTISEMENT

ಬ್ಯಾಂಕಿಂಗ್‌ ಪರೀಕ್ಷೆ ಎಂಜಿನಿಯರಿಂಗ್‌ ಪದವೀಧರರಿಗೆ ಹೇಗೆ ಸುಲಭ?

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 19:30 IST
Last Updated 21 ಜುಲೈ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಿಯುಸಿ ವಿಜ್ಞಾನ ಓದಿದ ವಿದ್ಯಾರ್ಥಿಗಳಲ್ಲಿ ಬಹುತೇಕ ಮಂದಿ ಎಂಜಿನಿಯರ್‌ ಆಗಲು ಬಯಸುವುದು ಸಹಜ. ಎಸ್ಸೆಸ್ಸೆಲ್ಸಿಯಲ್ಲಿರುವಾಗಲೇ ಇದಕ್ಕೆ ಪೂರ್ವಸಿದ್ಧತೆ ನಡೆಯುತ್ತಿರುತ್ತಿದೆ. ಅಂದರೆ ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ಅದರಲ್ಲೂ ಪಿಸಿಎಂ ತೆಗೆದುಕೊಳ್ಳಬೇಕು, ಸಿಇಟಿ ಅಥವಾ ಜೆಇಇಗೆ ಸಿದ್ಧತೆ ನಡೆಸಬೇಕು, ಅದಕ್ಕೆ ಸರಿಯಾಗಿ ಮನೆಪಾಠವೂ ಇರಬೇಕು, ಹಾಗೆಯೇ ಆನ್‌ಲೈನ್‌ ಸಹಾಯವನ್ನೂ ಪಡೆಯಬೇಕು... ಈ ರೀತಿ ಯೋಜನೆ ಹಾಕಿಕೊಳ್ಳುವುದು ಸಾಮಾನ್ಯ. ಆದರೆ ಎಂಜಿನಿಯರಿಂಗ್‌ ಮುಗಿಸಿದ ನಂತರ ಎಷ್ಟು ಮಂದಿಗೆ ಉತ್ತಮ ಉದ್ಯೋಗ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಕೊಂಚ ನಿರಾಸೆಯಾಗುತ್ತದೆ. ಎಂಜಿನಿಯರಿಂಗ್‌ನಲ್ಲೂ ಕೆಲವೊಂದು ವಿಭಾಗಗಳಿಗಷ್ಟೇ ಹೆಚ್ಚಿನ ಬೇಡಿಕೆಯಿದ್ದು, ಕೆಲವರು ಬೇರೆ ಕ್ಷೇತ್ರಗಳಲ್ಲಿ ಉದ್ಯೋಗ ಅರಸುವುದು ಅನಿವಾರ್ಯವಾಗುತ್ತದೆ.

ಈಗೀಗ ಎಂಜಿನಿಯರಿಂಗ್‌ ಪದವಿ ಪಡೆದವರಲ್ಲಿ ಹಲವರು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಮುಖ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಈ ಬಗ್ಗೆ ತಯಾರಿ ನಡೆಸುವವರ ಸಂಖ್ಯೆಯೂ ಜಾಸ್ತಿಯೇ ಇದೆ. ಇತ್ತೀಚೆಗೆ ಪ್ರಕಟವಾದ ಒಂದು ಸಮೀಕ್ಷೆಯ ವರದಿ ಪ್ರಕಾರ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ನೇಮಕಾತಿ ಪ್ರಕ್ರಿಯೆ ನಿರಂತರವಾಗಿರುವುದರಿಂದ ಇಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಎಂಜಿನಿಯರಿಂಗ್‌ ಪದವೀಧರರು ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಗಣಿತ ವಿಷಯವನ್ನು ಬಹುತೇಕ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಕಲಿತಿರುವುದರಿಂದ ಆ ವಿಷಯದಲ್ಲಿ ಅವರಿಗೆ ಅದೊಂದು ಧನಾತ್ಮಕ ಅಂಶ ಎನ್ನಬಹುದು.

ಬ್ಯಾಂಕ್‌ನಲ್ಲಿ ಉದ್ಯೋಗ ಸಿಕ್ಕರೆ ಅದೊಂದು ಸುರಕ್ಷಿತ ಹಾಗೂ ಕಾಯಂ ಉದ್ಯೋಗ ಎಂದೇ ಪರಗಣಿಸಲಾಗಿದ್ದು, ಎಂಜಿನಿಯರಿಂಗ್‌ ಪದವೀಧರರು ಇದರತ್ತ ಆಕರ್ಷಿತರಾಗಲು ಇನ್ನೊಂದು ಕಾರಣ. ಹೀಗಾಗಿ ಇವರು ಮಾತ್ರವಲ್ಲ, ವಿವಿಧ ವೃತ್ತಿಪರ ವಿಷಯಗಳಲ್ಲಿ ಪದವಿ ಪಡೆದವರು ಕೂಡ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲಿಡುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪೈಪೋಟಿ ಜಾಸ್ತಿಯಾಗಲು ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಸಾಮಾನ್ಯವಾಗಿ ಎಂಜಿನಿಯರಿಂಗ್‌ನ ಎಲ್ಲಾ ವಿಭಾಗಗಳಲ್ಲಿ ಪದವಿ ಪಡೆದವರು ಈ ಬ್ಯಾಂಕ್‌ ಪರೀಕ್ಷೆಗೆ ಕೂರಲು ಅರ್ಹರು. ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಶನ್‌, ಕಂಪ್ಯೂಟರ್‌ ವಿಜ್ಞಾನ, ಮಾಹಿತಿ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದವರು ಕೆಲವು ಬ್ಯಾಂಕ್‌ಗಳಲ್ಲಿರುವ ಐಟಿ ಅಧಿಕಾರಿ ವಿಶೇಷ ಹುದ್ದೆಗೆ ಕೂಡ ಅರ್ಹರು.

ಎಂಜಿನಿಯರಿಂಗ್ ಓದುತ್ತಿರುವಾಗಲೇ ಬ್ಯಾಂಕ್‌ ಪರೀಕ್ಷೆಗಳ ಬಗ್ಗೆ ಅರಿತುಕೊಂಡು ಆ ನಿಟ್ಟಿನಲ್ಲಿ ತಯಾರಿ ನಡೆಸುವುದು ಸೂಕ್ತ. ಸ್ಪರ್ಧಾತ್ಮಕ ಪರೀಕ್ಷೆಯ ಕುರಿತು ವಿವರ, ಯಾವಾಗ ಪರೀಕ್ಷೆಗೆ ಪ್ರಕಟಣೆ ಹೊರಡಿಸುತ್ತಾರೆ, ಹೇಗೆ ಅಭ್ಯಾಸ ಮಾಡಬೇಕು ಎಂಬ ವಿವರಗಳನ್ನೆಲ್ಲ ಕಲೆ ಹಾಕಬೇಕಾಗುತ್ತದೆ. ಪದವಿ ಪಡೆದ ನಂತರ ಇದಕ್ಕಾಗಿ ಸೂಕ್ತ ವೇಳಾಪಟ್ಟಿಯನ್ನೂ ಇಟ್ಟುಕೊಂಡು ಅಭ್ಯಾಸ ಶುರು ಮಾಡಬೇಕು.

ಆಗಲೇ ಹೇಳಿದಂತೆ ಸಾಮಾನ್ಯವಾಗಿ ಎಂಜಿನಿಯರಿಂಗ್‌ ಪದವೀಧರರಿಗೆ ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭ. ಅಂದರೆ ನ್ಯೂಮರಿಕಲ್‌ ವಿಷಯವನ್ನು ಹೆಚ್ಚಿನ ಶ್ರಮವಿಲ್ಲದೇ ಉತ್ತಮ ಅಂಕಗಳೊಂದಿಗೆ ಪಾಸ್‌ ಮಾಡಬಹುದು. ಹಾಗಂತ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಪದವಿಯಲ್ಲಿ ಕಲಿತ ಜ್ಞಾನವನ್ನು ಇಲ್ಲಿ ಒರೆಗೆ ಹಚ್ಚಬೇಕಾಗುತ್ತದೆ. ಎಂಜಿನಿಯರಿಂಗ್‌ ಓದಿರುವವರು ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಕ್ಕೂ ಹೆಚ್ಚು ಒತ್ತು ಕೊಡಬೇಕು. ಇದಕ್ಕಾಗಿ ವೃತ್ತಪತ್ರಿಕೆ, ನಿಯತಕಾಲಿಕೆಗಳನ್ನು ಓದುವುದರ ಜೊತೆಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಟಿಪ್ಪಣಿ ಮಾಡಿಕೊಳ್ಳಬೇಕು. ಹಾಗೆಯೇ ಇಂಗ್ಲಿಷ್‌ ದಿನಪತ್ರಿಕೆಗಳ ಓದಿನಿಂದ ಇಂಗ್ಲಿಷ್‌ ಭಾಷೆಯನ್ನು ಸುಧಾರಿಸಿಕೊಂಡರೆ ಪರೀಕ್ಷೆಗೆ ಹೆಚ್ಚು ಸಹಾಯಕ.

ಇನ್ನುಳಿದಂತೆ ರೀಸನಿಂಗ್‌ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳುವುದರ ಜೊತೆಗೆ ಬ್ಯಾಂಕಿಂಗ್‌ ಮತ್ತು ಆರ್ಥಿಕತೆ ಕುರಿತು ಜ್ಞಾನವನ್ನು ಹೆಚ್ಚು ಓದುವುದರ ಮೂಲಕ ಗಳಿಸಿಕೊಳ್ಳಬಹುದು. ಇದು ಸಂದರ್ಶನ ಎದುರಿಸುವಾಗ ನೆರವಿಗೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.