ADVERTISEMENT

ಬಹು ಆಯ್ಕೆ ಪ್ರಶ್ನೆ: ಉತ್ತರ ಗುರುತಿಸುವುದು ಹೇಗೆ?

ಅದ್ವಿತ್‌ ಆರ್‌.ಕೊಪ್ಪಳ
Published 15 ಸೆಪ್ಟೆಂಬರ್ 2021, 19:30 IST
Last Updated 15 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಯಾವುದೇ ಪರೀಕ್ಷೆಯಿರಲಿ, ನೀವು ಎಷ್ಟೇ ಕಠಿಣ ತಯಾರಿ ನಡೆಸಿದರೂ ಪರೀಕ್ಷೆಯಲ್ಲಿ ನೀವು ಹೇಗೆ ಬರೆಯುತ್ತೀರಿ ಎನ್ನುವುದರ ಮೇಲೆ ನಿಮ್ಮ ಫಲಿತಾಂಶ ನಿರ್ಣಯವಾಗುತ್ತದೆ. ಪರೀಕ್ಷೆಯಲ್ಲಿ ಎದುರಾಗಬಹುದಾದ ಎಲ್ಲಾ ಸಮಸ್ಯೆಗಳನ್ನು ಊಹಿಸಲೂ ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ತರಹದ ಪರಿಸ್ಥಿತಿಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಹು ಆಯ್ಕೆ ಪ್ರಶ್ನೆ (ಎಂಸಿಕ್ಯೂ) ಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸುವಾಗ ಕೆಲವು ಉಪಾಯಗಳನ್ನು ರೂಢಿ ಮಾಡಿಕೊಳ್ಳಬೇಕು. ಜೊತೆಗೆ ಸಾಮಾನ್ಯ ಜ್ಞಾನವನ್ನು ಬಳಸಿ ಉತ್ತರ ಬರೆಯಬೇಕಾಗುತ್ತದೆ. ಅಂದರೆ ಸಂಬಂಧಪಟ್ಟ ವಿಷಯಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದರೂ ಕೂಡ ಈ ಕ್ರಮಗಳನ್ನು ಬಳಸಿದರೆ ಉತ್ತರಿಸುವುದು ಸುಲಭ.

ಮೊದಲು ನೀವು ಅನುಸರಿಸುವ ಮುಖ್ಯವಾದ ಪದ್ಧತಿಯೆಂದರೆ ತಪ್ಪು ಉತ್ತರಗಳನ್ನು ಗುರುತಿಸುವುದು. ಇದರಿಂದ ಆಯ್ಕೆಗಳಲ್ಲಿರುವ ಉತ್ತರಗಳನ್ನು ಎರಡು ಅಥವಾ ಮೂರಕ್ಕೆ ಇಳಿಸಬಹುದು. ಉದಾಹರಣೆಗೆ ಒಂದು ಆಯ್ಕೆ ‘ಎಲ್ಲವೂ ಸರಿ’ ಅಂತಿದ್ದರೆ ನಿಮಗೆ ತಪ್ಪು ಉತ್ತರಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಅನುಭವಿಗಳ ಪ್ರಕಾರ ‘ಎಲ್ಲವೂ ಸರಿ’ ಎನ್ನುವ ಉತ್ತರ ಹೆಚ್ಚಾಗಿ ಸರಿಯಾದ ಆಯ್ಕೆ ಆಗಿರುವುದಿಲ್ಲ.

ಈ ಆಯ್ಕೆಗಳಲ್ಲಿ ಗೊಂದಲವಿದ್ದರೆ ನಿಮಗೆ ಯಾವುದು ತಪ್ಪು ಎನಿಸುತ್ತದೆಯೋ ಅದನ್ನು ಬಿಟ್ಟುಬಿಡಿ. ಮುಂದಿನ ಉತ್ತರಕ್ಕೆ ಹೋಗಿ ಪರಿಶೀಲಿಸಿ. ಇದರಿಂದ ಸಮಯ ವ್ಯರ್ಥವಾಗುವುದನ್ನೂ ತಡೆಯಬಹುದು.

ADVERTISEMENT

ಉತ್ತರಗಳಲ್ಲಿ ‘ಈ ಎಲ್ಲವೂ ಸರಿ’ ಅಥವಾ ‘ಇದ್ಯಾವುದೂ ಅಲ್ಲ’ ಎಂದಿದ್ದರೆ ನೀವು ಸರಿಯಾದ ಉತ್ತರವನ್ನು ಗುರುತಿಸುವುದು ಸುಲಭ. ಸಾಮಾನ್ಯವಾಗಿ ಪ್ರಶ್ನೆಗೆ ಇಂತಹ ಉತ್ತರಗಳಿರುವುದು ಅಪರೂಪ. ಆದರೆ ಎಲ್ಲೋ ಕೆಲವೊಮ್ಮೆ ಇದೇ ಆಯ್ಕೆಗಳನ್ನು ಪ್ರಶ್ನೆಪತ್ರಿಕೆಯಲ್ಲಿ ನೀಡಬಹುದು. ಹೀಗಿರುವಾಗ ನೀವು ಪ್ರಶ್ನೆಯನ್ನು ಸರಿಯಾಗಿ ಓದಿಕೊಂಡು ಎಲ್ಲಾ ಆಯ್ಕೆಗಳನ್ನು ಗಮನವಿಟ್ಟು ನೋಡಿ. ಅವು ಪ್ರಶ್ನೆಗಳಿಗೆ ಸಂಬಂಧಿಸಿವೆಯೇ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ಜಾಣ್ಮೆಯಿಂದಲೇ ಹುಡುಕಿಕೊಳ್ಳಬೇಕಾಗುತ್ತದೆ.

ಉತ್ತರವು ಸಂಖ್ಯೆಯ ಆಧಾರದ ಮೇಲಿದ್ದರೆ ತೀರಾ ವ್ಯತ್ಯಾಸ ಇರುವ ಉತ್ತರವನ್ನು ಆಯ್ಕೆ ಮಾಡಬೇಡಿ. ಅಂದರೆ ಸಣ್ಣ ಸಂಖ್ಯೆಗಳ ಜೊತೆ, ಒಂದೇ ಒಂದು ದೊಡ್ಡ ಸಂಖ್ಯೆಯನ್ನು ಕೊಟ್ಟರೆ ಅದು ಸರಿಯುತ್ತರವಲ್ಲ ಎಂದು ಮೊದಲೇ ನಿರ್ಧರಿಸಿ. ಇದು ಹೆಚ್ಚಿನ ಸ್ಪರ್ಧಾರ್ಥಿಗಳಲ್ಲಿ ಗೊಂದಲ ಸೃಷ್ಟಿಸುತ್ತದೆ. ಸರಿಯುತ್ತರ ಗೊತ್ತಿದ್ದರೂ ತಪ್ಪು ಉತ್ತರವನ್ನು ಗುರುತಿಸಿ ಅಂಕ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ನೀವು ಎಷ್ಟೇ ಅಭ್ಯಾಸ ಮಾಡಿದ್ದರೂ ಇಲ್ಲಿ ನಿಮ್ಮ ಜಾಣ್ಮೆಯನ್ನು ಬಳಸಿ ಉತ್ತರ ಗುರುತಿಸಬೇಕಾಗುತ್ತದೆ.

ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಪ್ರಶ್ನೆಗಳಿದ್ದಾಗ ಖಚಿತವಾದ ಉತ್ತರ ಗೊತ್ತಿರಬೇಕಾಗುತ್ತದೆ. ಯಾವುದೇ ತರಹದ ಊಹೆಯನ್ನು ಮಾಡದೆ ಉತ್ತರ ಗುರುತಿಸುವುದನ್ನು ಅಭ್ಯಾಸದ ಮೂಲಕವೇ ಪಕ್ಕಾ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.