ADVERTISEMENT

ಕಾರ್‌ ರೇಸ್‌ನಲ್ಲಿ ಬದುಕಿನ ಭಲೇ ಆಟ

ಪಂಚತಂತ್ರ

ಕೆ.ಎಚ್.ಓಬಳೇಶ್
Published 29 ಮಾರ್ಚ್ 2019, 12:04 IST
Last Updated 29 ಮಾರ್ಚ್ 2019, 12:04 IST
‘ಪಂಚತಂತ್ರ’ ಚಿತ್ರದಲ್ಲಿ ವಿಹಾನ್‌ ಮತ್ತು ಸೋನಲ್‌ ಮೊಂತೆರೊ
‘ಪಂಚತಂತ್ರ’ ಚಿತ್ರದಲ್ಲಿ ವಿಹಾನ್‌ ಮತ್ತು ಸೋನಲ್‌ ಮೊಂತೆರೊ   

ಚಿತ್ರ: ಪಂಚತಂತ್ರ

ನಿರ್ಮಾಪಕರು: ಹರಿಪ್ರಸಾದ್‌ ಜಯಣ್ಣ, ಹೇಮಂತ್‌ ಪರಾಡ್ಕರ್

ನಿರ್ದೇಶನ: ಯೋಗರಾಜ್‌ ಭಟ್‌

ADVERTISEMENT

ತಾರಾಗಣ: ವಿಹಾನ್‌, ಸೋನಲ್‌ ಮೊಂತೆರೊ, ಅಕ್ಷರ, ರಂಗಾಯಣ ರಘು, ಬಾಲರಜವಾಡಿ, ದೀಪಕ್

ಯುವಜನರ ಪ್ರೀತಿ, ಪ್ರೇಮ ಹಾಲಿವುಡ್‌ ಶೈಲಿಯದು. ಬಾಳಿನ ಮುಸ್ಸಂಜೆಯಲ್ಲಿರುವವರ ಜೀವನ ಪ್ರೀತಿ ಅಂಬಾಸಿಡರ್‌ ಕಾರ್‌ ಇದ್ದಂತೆ. ಇವರಿಬ್ಬರ ನಡುವೆ ಎಲ್ಲಾ ವಿಷಯಗಳಲ್ಲೂ ಜಿದ್ದಾಜಿದ್ದಿ. ಈ ಜನರೇಷನ್‌ ಗ್ಯಾಪ್ ಕಥೆಯನ್ನು ತೆಳುಹಾಸ್ಯದ ಮೂಲಕ ‘ಪಂಚತಂತ್ರ’ ಚಿತ್ರದಲ್ಲಿ ಹೇಳಿದ್ದಾರೆ ನಿರ್ದೇಶಕ ಯೋಗರಾಜ್‌ ಭಟ್‌.

ಪಂಚತಂತ್ರದ ಆಮೆ ಮತ್ತು ಮೊಲದ ಕಥೆಗೆ ಸಿನಿಮಾ ರೂಪ ನೀಡಿದ್ದಾರೆ. ಮುದುಕರು ಮತ್ತು ಯುವಕರ ರೋಮಾಂಚಕ ಜೀವನ ಕಥೆ ಇಲ್ಲಿದೆ. ಹೊಸಕಾಲದ ತಲ್ಲಣಗಳನ್ನು ಗುಪ್ತಗಾಮಿನಿಯಂತೆ ತೆರೆಯ ಮೇಲೆ ಹರಿಬಿಟ್ಟಿದ್ದಾರೆ. ಕಾರ್ ರೇಸ್‌ ಇವರಿಬ್ಬರ ನಡುವಿನ ಜಿದ್ದಾಜಿದ್ದಿಗೆ ಸಾಂಕೇತಿಕವಾಗಿದೆ. ಪರದೆ ಮೇಲೆ ಜೀವನದ ಸೋಲು– ಗೆಲುವನ್ನು ಮುಖಾಮುಖಿಯಾಗಿಸುತ್ತಾರೆ. ಕ್ಲೈಮ್ಯಾಕ್ಸ್‌ನ ಸಾವು ನೋವಿನ‍ಪಯಣದಲ್ಲಿ ಬದುಕಿನ ತತ್ವವನ್ನೂ ಬಿಚ್ಚಿಟ್ಟಿದ್ದಾರೆ. ಆದರೆ, ಜೀವನದ ಪಾಠ ಹೇಳುವ ಭಾವನಾತ್ಮಕ ದೃಶ್ಯಗಳು ನೋಡುಗರಿಗೆ ಆಪ್ತವಾಗಿ ಕಾಣಿಸುವುದಿಲ್ಲ.

ಭಟ್ಟರ ಹಿಂದಿನ ಚಿತ್ರಗಳಂತೆ ಇಲ್ಲಿಯೂ ಡೈಲಾಗ್‌ಗಳದ್ದೇ ಸುರಿಮಳೆ. ನಾಯಕನ ಬಾಯಲ್ಲಿ ಪಟಪಟನೆ ಉದುರುವ ಮಾತುಗಳು ಕೆಲವೊಮ್ಮೆ ನಗೆಬುಗ್ಗೆ ಹುಟ್ಟಿಸಿದರೆ, ಕೆಲವೆಡೆ ಸಪ್ಪೆಯಾಗುತ್ತವೆ. ಆತನ ಸ್ನೇಹಿತರ ಬಾಯಿಗೂ ನಿರ್ದೇಶಕರು ಸಾಕಷ್ಟು ಕೆಲಸ ಕೊಟ್ಟಿದ್ದಾರೆ. ಸಿನಿಮಾದ ಕೆಲವೆಡೆ ಭಟ್ಟರ ಅಡುಗೆ ಮನೆಯ ಹಳೆಯ ರುಚಿಗೆ ಪ್ರೇಕ್ಷಕರು ಮುಖ ಸಿಂಡರಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಕಥೆಯಲ್ಲಿ ಪ್ರಮುಖ ಪಾತ್ರವಹಿಸುವುದು ಗ್ಯಾರೇಜ್‌ ಮತ್ತು ಕಾಂಪ್ಲೆಕ್ಸ್. ಆ ವಿವಾದಿತ ಜಾಗದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುತ್ತದೆ. ಬಾಂಡ್‌ ಗ್ಯಾರೇಜ್‌ನ ಉಸ್ತುವಾರಿ ಕಾರ್ತಿಕ್‌ನದು. ರಂಗಪ್ಪ ಅಲ್ಲಿನ ಕಾಂಪ್ಲೆಕ್ಸ್‌ನ ಒಡೆಯ. ಈ ಇಬ್ಬರ ನಡುವೆ‍ಪ್ರತಿದಿನ ಜಾಗಕ್ಕಾಗಿ ತಿಕ್ಕಾಟ. ರಂಗಪ್ಪನ ಪುತ್ರಿ ಸಾಹಿತ್ಯಾಳ ಮೇಲೆ ಕಾರ್ತಿಕ್‌ಗೆ ಪ್ರೀತಿ ಮೂಡುತ್ತದೆ. ಇಬ್ಬರೂ ಕದ್ದುಮುಚ್ಚಿ ಪ್ರೇಮದಾಟ ನಡೆಸುತ್ತಾರೆ. ಬಹಿರಂಗವಾಗಿ ಸಿಕ್ಕಿಕೊಂಡಾಗ ರಾದ್ಧಾಂತವಾಗುತ್ತದೆ. ಕೊನೆಗೆ, ವಿವಾದಿತ ಸ್ಥಳ ಪಡೆಯಲು ಕಾರ್‌ ರೇಸ್‌ ನಡೆಯುತ್ತದೆ. ಸ್ಪರ್ಧೆಯಲ್ಲಿ ಗೆಲುವು ಯಾರಿಗೆ ದಕ್ಕುತ್ತದೆ ಎನ್ನುವುದೇ ಚಿತ್ರದ ತಿರುಳು.

ಭಟ್ಟರು ಜೀವನ ಸಂದೇಶ ಹೇಳಲು ಆಯ್ದುಕೊಂಡಿರುವ ದಾರಿಯಲ್ಲಿ ಕಾರುಗಳು ಸಾಕಷ್ಟು ದೂಳೆಬ್ಬಿಸುತ್ತವೆ. ಅರ್ಧತಾಸಿಗೂ ಹೆಚ್ಚುಕಾಲ ಕಾರ್‌ ರೇಸ್‌ ನಡೆಯುತ್ತದೆ. ಇದು ನೋಡುಗರ ತಾಳ್ಮೆಗೂ ಸವಾಲೊಡ್ಡುತ್ತದೆ. ಯುವಜನರ ಪ್ರೀತಿ, ಪ್ರೇಮದ ಬಗ್ಗೆ ಹೇಳಲು ನಿರ್ದೇಶಕರು ಶೃಂಗಾರದ ದೃಶ್ಯಗಳನ್ನೂ ಬಳಸಿದ್ದಾರೆ.

ನಾಯಕಿ ಸೋನಲ್‌ ಮೊಂತೆರೊ ಕೆಲವು ದೃಶ್ಯಗಳಲ್ಲಿ ಮೈಚಳಿಬಿಟ್ಟು ನಟಿಸಿದ್ದಾರೆ. ಕಾಂಪ್ಲೆಕ್ಸ್‌ ರಂಗಣ್ಣನ ಪಾತ್ರಧಾರಿಯಾಗಿ ರಂಗಾಯಣ ರಘು ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತಾರೆ. ವಿಹಾನ್,ಅಕ್ಷರ, ಬಾಲರಜವಾಡಿ, ದೀಪಕ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಾರ್‌ ರೇಸ್‌ ಸುಜ್ಞಾನ್‌ ಅವರ ಕ್ಯಾಮೆರಾದಲ್ಲಿ ಸೊಗಸಾಗಿ ಸೆರೆಸಿಕ್ಕಿದೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆಯ ಎರಡು ಹಾಡು ಕೇಳಲು ಹಿತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.