ADVERTISEMENT

'ಮನರೂಪ'ದ ಗುಮ್ಮ ಕಾಣಿಸುವುದು ತುಸು ತಡ!

ವಿಜಯ್ ಜೋಷಿ
Published 3 ಡಿಸೆಂಬರ್ 2019, 12:47 IST
Last Updated 3 ಡಿಸೆಂಬರ್ 2019, 12:47 IST
‘ಮನರೂಪ’ ಸಿನಿಮಾದ ದೃಶ್ಯ
‘ಮನರೂಪ’ ಸಿನಿಮಾದ ದೃಶ್ಯ   

‘ಮನುಕುಲ ಸಂಪಾದಿಸಿದ ಅಷ್ಟೂ ಜ್ಞಾನವನ್ನು ಒಡಲಲ್ಲಿ ಇಟ್ಟುಕೊಂಡಿದೆ, ಅದು ಎಲ್ಲರಿಗೂ ಸಿಗುವಂತೆ ಮಾಡಿದೆ’ ಎನ್ನುವುದು ಇಂಟರ್ನೆಟ್‌ ಹೊಂದಿರುವ ಹೆಗ್ಗಳಿಕೆಯ ಒಂದು ಮುಖ. ‘ಖಾಸಗಿ ಮಾಹಿತಿ ಕದಿಯಲು ನೆರವಾಗುವುದು, ಮನುಷ್ಯನ ದೌರ್ಬಲ್ಯಗಳನ್ನೇ ಬಳಸಿಕೊಂಡು ಹಿಂಸೆಯನ್ನು ಪ್ರಚೋದಿಸುವ ಹೂರಣ ಕೂಡ ಎಲ್ಲರಿಗೂ ಸಿಗುವಂತೆ ಮಾಡಿದೆ’ ಎಂಬುದು ಅದರ ಇನ್ನೊಂದು ಮುಖ.

ಮನುಷ್ಯನಲ್ಲಿ ಸಹಜವಾಗಿಯೋ, ಅಸಹಜವಾಗಿಯೋ ಇರುವ ದೌರ್ಬಲ್ಯಗಳನ್ನು ಬಳಸಿ, ಆ ಮೂಲಕ ಹಿಂಸೆ ಸೃಷ್ಟಿಸುವ, ಹಿಂಸೆಯಲ್ಲಿ ತೊಡಗುವ ಪ್ರವೃತ್ತಿಯ ಕಥಾರೂಪ ‘ಮನರೂಪ’ ಸಿನಿಮಾ. ಕಿರಣ್ ಹೆಗಡೆ ಮೊದಲ ಬಾರಿಗೆ ನಿರ್ದೇಶಿಸಿರುವ ಈ ಸಿನಿಮಾ ಕಥೆ ಸಾಗುವುದು ಪಶ್ಚಿಮ ಘಟ್ಟ ಪ್ರದೇಶದ ದಟ್ಟ ಕಾಡಿನ ಮಡಿಲಿನಲ್ಲಿ.

ಐದು ಜನ ಸ್ನೇಹಿತರು ಪ್ರವಾಸದ ರೀತಿಯ ಸುತ್ತಾಟಕ್ಕೆ ಹೋಗುತ್ತಾರೆ. ತಾವು ಹೋಗುತ್ತಿರುವುದು ಎಲ್ಲಿಗೆ ಎಂಬುದು ಅವರಲ್ಲಿ ಒಬ್ಬನಿಗೆ ಮಾತ್ರ ಸ್ಪಷ್ಟವಾಗಿ ಗೊತ್ತಿರುತ್ತದೆ. ಪ್ರಯಾಣದ ನಡುವೆ ಮತ್ತಿಘಟ್ಟದ ಜಾತ್ರೆಯನ್ನು ಮುಗಿಸಿಕೊಂಡು, ಅವರು ಸೇರುವುದು ದಟ್ಟ ಅಡವಿಯನ್ನು. ತಮ್ಮೆಲ್ಲ ಚಲನವಲನಗಳನ್ನು ಬೇರೊಬ್ಬರು ಗಮನಿಸುತ್ತಿದ್ದಾರೆ ಎಂಬುದು ಅವರ ಅರಿವಿಗೆ ಬಂದಿರುವುದಿಲ್ಲ.

ADVERTISEMENT

ಚಿತ್ರದ ಕೇಂದ್ರಬಿಂದು ಆಗಿರುವ ಐದೂ ಜನ (ಗೌರವ್, ಪೂರ್ಣಾ, ಉಜ್ವಲಾ, ಶರ್ವಣ್ ಮತ್ತು ಶಶಾಂಕ್) ಮಿಲೆನಿಯಲ್‌ಗಳನ್ನು ಹೋಲುತ್ತಾರೆ. ಭಗ್ನ ಪ್ರೀತಿ, ಪ್ರೀತಿ ಇಲ್ಲದ ವಿವಾಹ ಬಂಧನ, ವೃತ್ತಿ ಬದುಕು, ಹೊಸದೇನನ್ನೋ ಮಾಡಬೇಕು ಎಂಬ ಉತ್ಸಾಹ, ಒಂದಿಷ್ಟು ಹಾಸ್ಯ ಅವರ ಮಾತುಕತೆಗಳಲ್ಲಿ ಆಗಾಗ ಇಣುಕುತ್ತಿರುತ್ತದೆ. ಆರಂಭದಲ್ಲಿ ನೀರಸವಾಗಿ ಸಾಗುವ ಕಥೆಯ ಬಂಡಿ, ಐವರಲ್ಲಿ ಇಬ್ಬರು ಗುಂಪಿನಿಂದ ಬೇರೆ ಆದ ನಂತರ ಒಂಚೂರು ಥ್ರಿಲ್ಲರ್ ಹಳಿಗೆ ಹೊರಳಿಕೊಳ್ಳುತ್ತದೆ.

ಕನ್ನಡದ ಮಟ್ಟಿಗೆ ತುಸು ಅಪರೂಪದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು, ಸುಂದರ ದೃಶ್ಯಗಳ ನೇಯ್ಗೆಯ ಕಥೆ ಸಿದ್ಧಪಡಿಸಿರುವುದು ನಿರ್ದೇಶಕರ ಹೆಚ್ಚುಗಾರಿಗೆ. ಅಷ್ಟೇ ಅಲ್ಲ, ಘಟ್ಟ ಪ್ರದೇಶಗಳ ಕಾಡು, ಹಸಿರನ್ನು ಚಿತ್ರಿಸಿರುವ ಪರಿ (ಛಾಯಾಗ್ರಹಣ: ಗೋವಿಂದರಾಜ್) ಕೂಡ ಈ ಚಿತ್ರದ ಪ್ಲಸ್ ಪಾಯಿಂಟ್. ಆದರೆ ಆರಂಭದ ಹಂತದಲ್ಲಿನ ನಿರೂಪಣೆ ನೀರಸ.

ಚಿತ್ರದ ಪಾತ್ರಗಳು ಅತಿಮಾನುಷವಾಗಿ ವರ್ತಿಸುವುದಿಲ್ಲ, ಕಥೆ ಅವಾಸ್ತವಿಕ ಅಲ್ಲ. ಕುಟುಂಬದ ಸದಸ್ಯರೆಲ್ಲ ಕುಳಿತು ವೀಕ್ಷಿಸಲು ಮುಜುಗರಪಡಬೇಕಿಲ್ಲ. ಆದರೆ, ಕಥೆಯೊಳಗೆ ಪ್ರವೇಶ ಪಡೆದುಕೊಳ್ಳಲು ವೀಕ್ಷಕ ಸರಿಸುಮಾರು ಮಧ್ಯಂತರದವರೆಗೆ ತಾಳ್ಮೆಯಿಂದ ಕಾಯಬೇಕು!

‘ಒಳಿತು’ – ‘ಕೆಡುಕು’ ನಡುವಿನ ಸಂಘರ್ಷ ಈ ಚಿತ್ರದಲ್ಲೂ ಇದೆ. ಕೊನೆಯಲ್ಲಿ, ಒಳಿತಿಗೇ ಗೆಲುವಾಗುತ್ತದೆ. ಕೆಡುಕನ್ನು ಪ್ರತಿನಿಧಿಸುವ ಗುಂಪಿನ ಸದಸ್ಯರಿಗೆ ಮುಖವಾಡ ತೊಡಿಸಲಾಗಿದೆ. ಆ ಮೂಲಕ, ಡಿಜಿಟಲ್‌ ಜಗತ್ತಿನ ಕಪ್ಪು ಕೋಣೆಯಲ್ಲಿ ಕಾಣಿಸುವ ಮುಖಗಳೆಲ್ಲ ನಿಜ ಮುಖಗಳಲ್ಲ, ಅವು ಮುಖವಾಡಗಳು ಎಂಬುದನ್ನು ಕಿರಣ್ ಸೂಚ್ಯವಾಗಿ ಹೇಳಲು ಯತ್ನಿಸಿದಂತೆ ಇದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.