ADVERTISEMENT

ಸಿನಿಮಾ ವಿಮರ್ಶೆ: ವೀಕ್ಷಕನ ತಾಳ್ಮೆ ಪರೀಕ್ಷಿಸುವ ‘ಗಡಿಯಾರ’

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 14:18 IST
Last Updated 27 ನವೆಂಬರ್ 2020, 14:18 IST
ಗಡಿಯಾರ ಚಿತ್ರದಲ್ಲಿ ಶೀತಲ್ ಶೆಟ್ಟಿ
ಗಡಿಯಾರ ಚಿತ್ರದಲ್ಲಿ ಶೀತಲ್ ಶೆಟ್ಟಿ   

ಭಗವದ್ಗೀತೆಯಲ್ಲಿ ಹೇಳಿರುವ ಬದುಕಿನ ಸಂದೇಶಗಳ ಮೂಸೆಯಲ್ಲಿ ನಿಧಿ ಕಳ್ಳತನದ ಎಳೆಯ ‘ಗಡಿಯಾರ’ ಸಿನಿಮಾವನ್ನು ತೆರೆಗೆ ತಂದಿದ್ದಾರೆ ನಿರ್ದೇಶಕ ಪ್ರಭೀಕ್ ಮೊಗವೀರ. ವೀಕ್ಷಕನನ್ನು ರಂಜಿಸುವ ಸಕಲಾಂಶಗಳೂ ಚಿತ್ರದಲ್ಲಿರಬೇಕು ಎಂಬ ಅವರ ಉದ್ದೇಶ ಒಳ್ಳೆಯದೆ. ಆದರೆ, ಆ ಪ್ರಯತ್ನದಲ್ಲಿ ಅವರು ಹೇಳಲು ಹೊರಟಿರುವ ಕಥೆಯು ಹಾದಿ ತಪ್ಪಿದೆ.

ಚಿತ್ರದ ಕಥೆ ಏನು ಎಂದು ತಲೆ ಕೆಡಿಸಿಕೊಳ್ಳುತ್ತಿರುವಾಗಲೇ ಚಿತ್ರದ ಮೊದಲಾರ್ಧದ ಅಂತ್ಯದಲ್ಲಿ ‘ಕಥೆ ಈಗ ಆರಂಭವಾಗುತ್ತದೆ’ ಎಂಬ ಇಂಗ್ಲಿಷ್ ಸಂದೇಶ ಕಾಣುತ್ತದೆ. ಚಿತ್ರ ಮುಕ್ಕಾಲು ಮುಗಿದರೂ ಕಾಣಿಸಿಕೊಳ್ಳುವ ಅದೇ ಸಂದೇಶ ವೀಕ್ಷಕನ ತಾಳ್ಮೆಗೆಡುವಂತೆ ಮಾಡುತ್ತದೆ. ಫ್ಲಾಷ್‌ಬ್ಯಾಕ್‌ನೊಳಗಿನ ಫ್ಲಾಷ್‌ಬ್ಯಾಕ್‌, ಕಥೆಗೆ ಸಂಬಂಧವೇ ಇಲ್ಲದ ದೃಶ್ಯಗಳು ಸಹನೆಗೆ ಸವಾಲೊಡ್ಡುತ್ತವೆ.

ಅರಸರ ಕಾಲದಲ್ಲಿ ವಿವಿಧೆಡೆ ಬಚ್ಚಿಟ್ಟಿದ್ದ ನಿಧಿಯನ್ನು ಸಂಚು ರೂಪಿಸಿ ಕಳ್ಳತನ ಮಾಡುವ ಪ್ರಾಧ್ಯಾಪಕ(ಶರತ್ ಲೋಹಿತಾಶ್ವ). ಪ್ರಕರಣವನ್ನು ಬೆನ್ನತ್ತುವ ಪೊಲೀಸ್ ಅಧಿಕಾರಿ (ರಾಜ್‍ದೀಪಕ್ ಶೆಟ್ಟಿ). ಸಂಚಿನ ಅರಿವಿಲ್ಲದೆ ಪೊಲೀಸ್‌ ಅತಿಥಿಗಳಾಗುವ ವಿದ್ಯಾರ್ಥಿಗಳು. ಕಸ್ಟಡಿಯಲ್ಲಿರುವ ವಿದ್ಯಾರ್ಥಿಗಳನ್ನು ಪತ್ರಕರ್ತೆ (ಶೀತಲ್‌ ಶೆಟ್ಟಿ) ಸಂದರ್ಶಿಸಿ ನೀಡುವ ವರದಿಯಿಂದ ಪ್ರಾಧ್ಯಾಪಕನನ್ನು ಪೊಲೀಸ್ ಅಧಿಕಾರಿ ಬಂಧಿಸುತ್ತಾನೆ. ಆದರೆ, ಆ ವರದಿಯ ತಿರುಳನ್ನು ಮಾತ್ರ ನಿರ್ದೇಶಕರು ಬಿಟ್ಟು ಕೊಟ್ಟಿಲ್ಲ.

ADVERTISEMENT

ಕಥೆಯ ಎಳೆಗೆ ತಕ್ಕಂತೆ ಕುತೂಹಲ ಕೆರಳಿಸುವಂತೆ ಚಿತ್ರಕಥೆಯನ್ನು ಹೆಣೆಯುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ. ಹಾಗಾಗಿಯೇ, ವೀಕ್ಷಕನಲ್ಲಿ ದೃಶ್ಯದಿಂದ ದೃಶ್ಯಕ್ಕೆ ಅಸಹನೀಯ ಪ್ರಶ್ನೆಗಳು ಮೂಡುತ್ತಲೇ ಹೋಗುತ್ತವೆ. ಒಂದೂಮುಕ್ಕಾಲು ತಾಸು ಮನರಂಜನೆ ಬಯಸುವವರಿಗೆ ಸಿನಿಮಾ ಬೋರ್‌ ಹೊಡೆಸುತ್ತದೆ. ಚಿತ್ರದ ಮುಖ್ಯ ಪಾತ್ರಧಾರಿಗಳು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹೊಸ ಮುಖಗಳಲ್ಲಿ ಅಭಿನಯದ ಭಾವ ಇನ್ನೂ ಹೊಮ್ಮಬೇಕು.

ಚಿತ್ರದ ಆರಂಭದಿಂದ ಅಂತ್ಯದವರೆಗೆ ತೆರೆ ಮೇಲೆ ಬರುವ ಇಂಗ್ಲಿಷ್‌ ಸಂದೇಶಗಳನ್ನು ಕನ್ನಡದಲ್ಲೇ ತೋರಿಸುವ ಅವಕಾಶವಿದ್ದರೂ, ನಿರ್ದೇಶಕರು ಮಾತ್ರ ಇಂಗ್ಲಿಷ್‌ ಪ್ರೇಮವನ್ನೇ ತೋರಿದ್ದಾರೆ. ರಾಘವ್ ಸುಭಾಷ್ ಅವರ ಸಂಗೀತ ನಿರ್ದೇಶನದಲ್ಲಿ ಮೂರು ಹಾಡುಗಳು ಕೇಳುವಂತಿವೆಯಾದರೂ, ಹಿನ್ನೆಲೆ ಸಂಗೀತ ಹಲವೆಡೆ ಕರ್ಕಶವೆನಿಸುತ್ತದೆ. ಕ್ಯಾಮೆರಾ ಚಲನೆಯಲ್ಲಿ ಶ್ಯಾಮ್ ಸಿಂಧನೂರು ಮತ್ತಷ್ಟು ಪಳಗಬೇಕು.ದೃಶ್ಯಗಳ ಜೋಡಣೆಯಲ್ಲಿ ಸಂಕಲನಕಾರ ಎನ್‌.ಎಂ. ವಿಶ್ವಾಸ್ ಅಸಹಾಯಕತೆ ಎದ್ದು ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.