ADVERTISEMENT

ರಂಗಕರ್ಮಿ ತೋ.ನಂ. ನಂಜುಂಡಸ್ವಾಮಿ ನಿಧನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 9:11 IST
Last Updated 15 ಸೆಪ್ಟೆಂಬರ್ 2020, 9:11 IST
ರಂಗಕರ್ಮಿ ತೋ.ನಂ. ನಂಜುಂಡಸ್ವಾಮಿ
ರಂಗಕರ್ಮಿ ತೋ.ನಂ. ನಂಜುಂಡಸ್ವಾಮಿ    

ಬೆಂಗಳೂರು: ಹೃದಯ ಹಾಗೂ ಯಕೃತ್ತು ಸಮಸ್ಯೆಯಿಂದ ಬಳಲುತ್ತಿದ್ದ ರಂಗಕರ್ಮಿ ತೋ.ನಂ. ನಂಜುಂಡಸ್ವಾಮಿ (71) ಅವರು ಮಂಗಳವಾರ ನಿಧನರಾಗಿದ್ದಾರೆ.

ಎರಡು ತಿಂಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಅವರು ಒಳಪಟ್ಟಿದ್ದರು. ಹೃದಯ ಹಾಗೂ ಯಕೃತ್ತು ಸಮಸ್ಯೆ ಗಂಭೀರ ಸ್ವರೂಪ ಪಡೆದ ಕಾರಣ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ 10 ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆಸ್ಪತ್ರೆಯಲ್ಲಿಯೇ ಬೆಳಿಗ್ಗೆ 7.50ಕ್ಕೆ ಮೃತಪಟ್ಟಿದ್ದು, ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮರಿಯಪ್ಪನ ಪಾಳ್ಯದಲ್ಲಿರುವ ಅವರ ನಿವಾಸದಲ್ಲಿ ಸಂಜೆ 4 ಗಂಟೆಯವರೆಗೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಂಡೇಮಠ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ.

ರಂಗಚೇತನ ಸಾಂಸ್ಕೃತಿಕ ತಂಡದ ಮೂಲಕ ನಂಜುಂಡಸ್ವಾಮಿ ಅವರು ರಂಗಭೂಮಿಯ ವಿವಿಧ ವಲಯಗಳಲ್ಲಿ ಕ್ರಿಯಾಶೀಲರಾಗಿದ್ದರು. ನಾಟಕ ರಚನೆ, ನಿರ್ದೇಶನ, ರಂಗ ಸಂಘಟನೆಗಳಲ್ಲಿ ತೊಡಗಿಕೊಳ್ಳುವ ಜತೆಗೆ ಗ್ರಾಮೀಣ ರಂಗಭೂಮಿಯ ಬೆಳವಣಿಗೆಗೆ ಕೊಡುಗೆ ನೀಡಿದ್ದರು. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಬೆಂಗಳೂರು ರಂಗ ಕಲಾವಿದರ ವಿವಿಧೋದ್ದೇಶ ಸಹಕಾರ ಸಂಘದ ಸ್ಥಾಪಕರು ಕೂಡ ಆಗಿದ್ದರು. ವೈದ್ಯಕೀಯ ನೆರವು ಸಂಬಂಧ ರಂಗಭೂಮಿಯ ನೂರಾರು ಕಲಾವಿದರಿಗೆ ಅವರು ಸಹಾಯ ಮಾಡಿದ್ದರು ಎಂದು ರಂಗಭೂಮಿಯ ಗಣ್ಯರು ಸ್ಮರಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.