ADVERTISEMENT

PV Web Exclusive: ದೇಶದ ಅರಣ್ಯಕ್ಕೆ ಮುಳುವಾದ ವಿದೇಶಿ ಕಳೆ

ಕೆ.ಎಚ್.ಓಬಳೇಶ್
Published 17 ಡಿಸೆಂಬರ್ 2020, 10:13 IST
Last Updated 17 ಡಿಸೆಂಬರ್ 2020, 10:13 IST
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಆವರಿಸಿರುವ ಲಂಟಾನಾ ಕಮಾರಾ
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಆವರಿಸಿರುವ ಲಂಟಾನಾ ಕಮಾರಾ   

ನೀವು ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿ ಗೇಟ್ ದಾಟಿದರೆ ಬಂಡೀಪುರ ಪ್ರವೇಶಿಸುತ್ತೀರಿ. ಅಲ್ಲಿನ ನೀಲಗಿರಿ ಜೀವವೈವಿಧ್ಯ ತಾಣದ ಸೊಬಗು ಮನಸ್ಸಿಗೆ ಮುದ ನೀಡುತ್ತದೆ. ರಸ್ತೆಬದಿ ಮೇಯುತ್ತಿರುವ ಚುಕ್ಕಿಜಿಂಕೆಗಳು, ಕಾಡಾನೆಗಳು, ಕಾಟಿಗಳ ಹಿಂಡು ಕಂಡು ಚಕಿತಗೊಳ್ಳುತ್ತೀರಿ. ಸುತ್ತಲೂ ಆವರಿಸಿರುವ ಹಸಿರು ನೋಡುತ್ತಿದ್ದಂತೆಯೇ ಮನದಲ್ಲಿ ನಿರಾಳತೆ ಮೂಡುತ್ತದೆ. ಕೊಂಚ ಸಾವರಿಸಿಕೊಂಡು ಹಸಿರಿನತ್ತ ತದೇಕ ದೃಷ್ಟಿ ನೆಟ್ಟರೆ ನಿಗರ್ಸದ ಸಮತೋಲನವನ್ನು ಹಾಳುಗೆಡವುತ್ತಿರುವ ಲಂಟಾನಾ ಕಮಾರಾ ಕಣ್ಣಿಗೆ ಬೀಳುತ್ತದೆ. ಇದರ ಆಕ್ರಮಣಶೀಲತೆಗೆ ಬೆಚ್ಚಿಬೀಳುವುದು ನಿಶ್ಚಿತ.

ಅವ್ಯಾಹತ ಬೇಟೆಯ ಪರಿಣಾಮ ಕಾಡಿನ ಆಹಾರ ಸರಪಳಿಯ ಕೊಂಡಿ ತುಂಡರಿಸುತ್ತಿದೆ. ಮತ್ತೊಂದೆಡೆ ವಿದೇಶಿ ಕಳೆಸಸ್ಯಗಳು ಜೀವಪರಿಸರದ ಆಹಾರ ಸರಪಳಿಯನ್ನು ಕತ್ತರಿಸುತ್ತಿವೆ. ಭಾರತದಲ್ಲಿ ಕಾಡಿನ ಜೀವವೈವಿಧ್ಯಕ್ಕೆ ಲಂಟಾನಾ ಕಮಾರಾ ಮತ್ತು ಕರಿಕಡ್ಡಿ (ಯುಪಟೋರಿಯಾ) ಕಂಟಕವಾಗಿ ಪರಿಣಮಿಸಿವೆ. ಅದರಲ್ಲೂ ಲಂಟಾನಾ ಸೃಷ್ಟಿಸಿರುವ ಅವಾಂತರಕ್ಕೆ ಕೊನೆ ಎಂಬುದಿಲ್ಲ.

ಲಂಟಾನಾ ವರ್ಭಿನೇಶಿಯ ಕುಟುಂಬಕ್ಕೆ ಸೇರಿದ ಪೊದೆ ಸಸ್ಯ. ಅತಿಕ್ರಮಣಕಾರಿ ಗುಣ ಇರುವ ಇದರ ಮೂಲ ಮೆಕ್ಸಿಕನ್‌ ಮರುಭೂಮಿ. ಅಲ್ಲಿನ ಮರುಭೂಮಿಯಲ್ಲಿ ಕಂಡುಬರುವ ಕಳೆ ಸಸ್ಯ ಇದು. ಪರಿಸರ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟ(ಐಯುಸಿಎನ್) ಗುರುತಿಸಿರುವ ವಿಶ್ವದ ಹತ್ತು ಅತ್ಯಂತ ಆಕ್ರಮಣಕಾರಿ ಕಳೆಸಸ್ಯಗಳ ಪೈಕಿ ಇದು ಕೂಡ ಒಂದಾಗಿದೆ.

ADVERTISEMENT

18ನೇ ಶತಮಾನವು ವಿಶ್ವದ ಚರಿತ್ರೆಯಲ್ಲಿ ವಸಾಹತು ವಿಸ್ತರಣೆಯ ಯುಗವೆಂದೇ ಪರಿಗಣಿತವಾಗಿದೆ. ಯುರೋಪಿಯನ್ನರು ವಿಶ್ವದಾದ್ಯಂತ ವಸಾಹತು ವಿಸ್ತರಣೆಗೆ ಮುಂದಾಗಿದ್ದು ಆಗಲೇ. ವರ್ಣಮಯ ಹೂಗಳನ್ನು ಹೊಂದಿದ್ದ ಲಂಟಾನಾದ ಸೆಳೆತಕ್ಕೆ ಅವರು ಸಿಲುಕಿದರು. ಅವರ ಮನೆಯ ಕೈತೋಟ, ಉದ್ಯಾನಗಳಲ್ಲಿ ಅಲಂಕಾರಿಕ ಸಸ್ಯವಾಗಿ ಇದು ಬೇರೂರಿತು. ಪ್ರಪಂಚದ ವಿವಿಧೆಡೆ ಯುರೋಪಿಯನ್ನರು ವಸಾಹತು ಸ್ಥಾಪಿಸಿದರು. ಈ ಕಳೆಸಸ್ಯ ಅಲಂಕಾರಿಕ ಸಸ್ಯವಾಗಿ ಅವರನ್ನೂ ಹಿಂಬಾಲಿಸಿತು. ಯುರೋಪಿಯನ್ನರು ಕಾಲಿಟ್ಟ ಸ್ಥಳಗಳಲ್ಲಿ ಜೀವಸಂಕುಲ ತಲ್ಲಣಗೊಂಡಿರುವುದು ಚರಿತ್ರೆಯ ದಾಖಲೆಗಳು ಸಾರುತ್ತವೆ. ಅಂತಹ ತಲ್ಲಣವನ್ನು ಈಗ ಲಂಟಾನಾ ಜೀವಜಾಲದಲ್ಲಿ ಸೃಷ್ಟಿಸುತ್ತಿದೆ.

ಭಾರತಕ್ಕೆ ಲಂಟಾನಾ ಪ್ರವೇಶಿಸಿದ್ದು 1807ರಲ್ಲಿ. ಬ್ರಿಟಿಷ್‌ ಮಹಿಳೆಯ ಮೂಲಕ ಭಾರತಕ್ಕೆ ಅಲಂಕಾರಿಕ ಸಸ್ಯವಾಗಿ ಪ್ರವೇಶ ಪಡೆಯಿತು. ಕೋಲ್ಕತ್ತದ ಬೊಟಾನಿಕಲ್‌ ಗಾರ್ಡನ್‌ನಲ್ಲಿ ಮೊದಲ ಬಾರಿಗೆ ಇದನ್ನು ನೆಡಲಾಯಿತು ಎಂಬ ಬಗ್ಗೆ ದಾಖಲೆಗಳಿವೆ. ಮುಂದಿನ ಕೆಲವೇ ವರ್ಷಗಳಲ್ಲಿ ಕೈತೋಟ, ಉದ್ಯಾನಗಳಿಂದ ದಿಢೀರನೇ ಕಣ್ಮರೆಯಾದ ಇದು ಕಾಡಿನಲ್ಲಿ ಭದ್ರವಾಗಿ ನೆಲೆಯೂರಿತು. ಪ್ರಸ್ತುತ ದೇಶದ ಹುಲಿ ಸಂರಕ್ಷಿತ ಪ್ರದೇಶದ ಶೇಕಡ 40ರಷ್ಟು ಪ್ರದೇಶದಲ್ಲಿ ತನ್ನ ಕಬಂಧಬಾಹುವನ್ನು ವಿಸ್ತರಿಸಿಕೊಂಡಿದೆ.

ಸ್ಥಳೀಯ ಹವಾಗುಣಕ್ಕೆ ಹೊಂದಿಕೊಂಡು ಬೆಳೆಯುವ ವಿಶಿಷ್ಟ ಗುಣ ಇದಕ್ಕಿದೆ. ಕಡಿಮೆ ತೇವಾಂಶ ಹಾಗೂ ಅಧಿಕ ಉಷ್ಣಾಂಶವಿರುವ ಪ್ರದೇಶದಲ್ಲೂ ಇದು ಬೆಳೆಯಬಲ್ಲದು. ಉತ್ತರ ಭಾರತದ ಶಿವಾಲಿಕ್‌ ಪರ್ವತ ಶ್ರೇಣಿ, ಸೆಂಟ್ರಲ್‌ ಇಂಡಿಯಾ ಹಾಗೂ ಪಶ್ಚಿಮಘಟ್ಟದ ಕಾಡುಗಳು ಲಂಟಾನಾ ಹಾವಳಿಗೆ ತನ್ನ ಸ್ವರೂಪ ಕಳೆದುಕೊಂಡಿವೆ ಎನ್ನುತ್ತದೆ ಇತ್ತೀಚೆಗೆ ಅಧ್ಯಯನ ನಡೆಸಿರುವ ಗ್ಲೋಬಲ್ ಇಕಾಲಜಿ ಮತ್ತು ಕನ್ಸರ್ವೇಷನ್‌ ವರದಿ.

ಜೀವಜಾಲದಲ್ಲಿ ಹುಲ್ಲಿನ ಪಾತ್ರ ಮಹತ್ವವಾದುದು. ಕಾಡಿನ ಗಿರಿಕಂದರ, ಇಳಿಜಾರು ಪ್ರದೇಶದಲ್ಲಿ ಬೆಳೆಯುವ ಹುಲ್ಲು ಅಲ್ಲಿನ ಪರಿಸರ ಸಂರಕ್ಷಣೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಧಾರಾಕಾರವಾಗಿ ಮಳೆ ಸುರಿದಾಗ ಮಣ್ಣು ಕುಸಿಯದಂತೆ ಮಣ್ಣಿನ ಬೇರುಗಳು ಹಿಡಿದಿಟ್ಟುಕೊಳ್ಳುತ್ತವೆ. ನೀರಿನ ಸಂರಕ್ಷಣೆಯಲ್ಲೂ ಹುಲ್ಲಿನದು ಪ್ರಧಾನ ಪಾತ್ರ. ಅಂದಹಾಗೆ ಹುಲ್ಲು ಬಹುತೇಕ ಪ್ರಾಣಿಗಳ ಆಹಾರದ ಮೂಲವೂ ಹೌದು. ಕಾಡಾನೆಗಳಿಗೆ ಹುಲ್ಲು, ಬಿದಿರೇ ಪ್ರಧಾನ ಆಹಾರ. ಆನೆಗೆ ದಿನವೊಂದಕ್ಕೆ 100ರಿಂದ 150 ಕೆಜಿಯಷ್ಟು ಆಹಾರ ಬೇಕು. ಆದರೆ, ಲಂಟಾನಾದ ಸಸ್ಯಕ್ಷಾರ ಗುಣದಿಂದ ಕಾಡಿನಲ್ಲಿ ಬಿದಿರು, ಹುಲ್ಲಿನ ಬೆಳವಣಿಗೆ ಕುಂಠಿತಗೊಂಡಿದೆ.

ಲಂಟಾನಾ ತನ್ನ ಪ್ರಭುತ್ವ ವಿಸ್ತರಿಸಲು ಟಾನಿಸ್‌ ಮತ್ತು ಫಿನಾಲಿಕ್‌ ಎಂಬ ರಾಸಾಯನಿಕ ಸ್ರವಿಸುತ್ತದೆ. ಸ್ಥಳೀಯ ಸಸ್ಯಗಳಿಗೆ ಈ ವಿದೇಶಿ ವೈರಿಯೊಂದಿಗೆ ಸ್ಪರ್ಧಿಸುವುದಿರಲಿ, ಕಾದಾಟ ನಡೆಸಲೂ ತಿಳಿದಿಲ್ಲ. ಅವುಗಳು ನಿತ್ರಾಣಗೊಂಡು ತಮ್ಮ ಅಸ್ತಿತ್ವವನ್ನು ಲಂಟಾನಾ ಕಳೆಗೆ ಬಿಟ್ಟುಕೊಡುತ್ತಿವೆ. ಇದು ಲಕ್ಷಾಂತರ ವರ್ಷಗಳಿಂದ ವಿಕಸಿಸಿ ನೆಲೆ ಕಂಡುಕೊಂಡಿರುವ ಸಸ್ಯಕೋಟಿಗಳನ್ನಷ್ಟೇ ಅಲುಗಾಡಿಸಿಲ್ಲ; ಸಸ್ಯಗಳನ್ನು ನಂಬಿ ಬದುಕಿರುವ ಜೀವಿಗಳ ಬದುಕಿಗೂ ಕಂಟಕವಾಗಿದೆ.

ಇದು ಆನೆಯಂತಹ ದೈತ್ಯಪ್ರಾಣಿಯ ಆಹಾರದ ಏರುಪೇರಿಗೆ ಮುನ್ನುಡಿ ಬರೆದಿದೆ. ಕಾಡಿನಲ್ಲಿ ಆಹಾರದ ಅಭಾವದಿಂದಾಗಿ ಆನೆಗಳ ಹಿಂಡು ನಾಡಿಗೆ ಲಗ್ಗೆ ಇಡುತ್ತಿವೆ. ಇದು ಮಾನವ ಮತ್ತು ಕಾಡಾನೆಗಳ ಸಂಘರ್ಷಕ್ಕೆ ಕಾರಣವಾಗಿದೆ. ಆನೆಯ ಸಾವಿನೊಂದಿಗೆ ಈ ಸಂಘರ್ಷ ಪರ್ಯಾವಸಾನಗೊಳ್ಳುತ್ತಿರುವುದು ವಿಪರ್ಯಾಸ. ಲಂಟಾನಾ ಪರಿಣಾಮ ಇಷ್ಟಕ್ಕೆ ಸೀಮಿತಗೊಂಡಿಲ್ಲ. ವಿವಿಧ ಬಳ್ಳಿಗಳು, ಗಿಡಮೂಲಿಕೆಗಳು, ಹುಲ್ಲು ಅವಲಂಬಿಸಿ ಜೀವಿಸುವ ಮೊಲ, ಜಿಂಕೆ, ಕಡವೆ, ಕರಡಿಗಳ ಆಹಾರದ ಮೂಲಕ್ಕೆ ‍ಪೆಟ್ಟು ಬೀಳುತ್ತಿದೆ. ಲಂಟಾನಾದ ಹಾವಳಿಯಿಂದ ಮೊಲ, ಜಿಂಕೆ, ಕಡವೆ ತಿಂದು ಬದುಕುವ ಮಾಂಸಾಹಾರಿ ಪ್ರಾಣಿಗಳ ಬದುಕಿನ ಮೇಲೂ ಗಂಭೀರ ಪರಿಣಾಮ ಬೀರಿದೆ.

ವರದಿ ಹೇಳುವುದೇನು?

ಭಾರತದ 3 ಲಕ್ಷ ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶದಲ್ಲಿ ಲಂಟಾನಾ ಹಾವಳಿಯಿದೆ. ಈ ಪೈಕಿ 1.54 ಲಕ್ಷ ಚದರ ಕಿ.ಮೀ. ವಿಸ್ತೀರ್ಣದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದರ ಹಾವಳಿ ಮಿತಿಮೀರಿದೆ. ಹುಲಿ ಸಂರಕ್ಷಿತ ಪ್ರದೇಶಗಳಿರುವ ದೇಶದ 18 ರಾಜ್ಯಗಳಲ್ಲಿ ನಡೆಸಿದ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದೆ.

25 ಚದರ ಕಿ.ಮೀ.ಗೆ ಒಂದು ಪ್ಲಾಟ್‌ನಂತೆ ವಿಂಗಡಿಸಿ ಒಟ್ಟು 1,17,104 ಪ್ಲಾಟ್‌ಗಳಲ್ಲಿ ಸ್ಥಳೀಯ ಹಾಗೂ ವಿದೇಶಿ ಕಳೆಸಸ್ಯಗಳ ಬಗ್ಗೆ ಆಯಾ ರಾಜ್ಯದ ಅರಣ್ಯ ವೀಕ್ಷಕರು ಮತ್ತು ವನ್ಯಜೀವಿ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದೆ.

ಕಾಡಿನಲ್ಲಿ ಮನುಷ್ಯನ ಅತಿಕ್ರಮ ಪ್ರವೇಶ ಲಂಟಾನಾ ವೇಗವಾಗಿ ಬೆಳೆಯಲು ಕಾರಣವಾಗಿದೆ ಎನ್ನುತ್ತದೆ ಗ್ಲೋಬಲ್ ಇಕಾಲಜಿ ಮತ್ತು ಕನ್ಸರ್ವೇಷನ್‌ ವರದಿ. ರಸ್ತೆ ವಿಸ್ತರಣೆ, ಗಣಿಗಾರಿಕೆ, ಜಲಾಶಯ ನಿರ್ಮಾಣಕ್ಕಾಗಿ ಅರಣ್ಯವನ್ನು ನಾಶಪಡಿಸುವುದು ಲಂಟಾನಾ ಬೆಳವಣಿಗೆಗೆ ದಾರಿ ಮಾಡಿಕೊಟ್ಟಂತೆ. ಒಡಿಶಾದ ಸಿಮ್ಲಿಪಾಲ್‌, ಸಟ್ಕೋಸಿಯಾ ಅರಣ್ಯ, ಛತ್ತೀಸಗಡದ ಹಸ್ಡಿಯೊ ಅರಾಂಡ್ ಅರಣ್ಯ, ಜಾರ್ಖಂಡ್‌ನ ಪಲಮೌ ಅರಣ್ಯ, ಮಹಾರಾಷ್ಟ್ರದ ತಡೋಬ–ಅಂಧೇರಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಲಂಟಾನಾ ಹಾವಳಿ ಉಲ್ಬಣಕ್ಕೆ ಮಾನವನ ಹಸ್ತಕ್ಷೇಪವೇ ಕಾರಣ ಎಂದು ವರದಿ ಉಲ್ಲೇಖಿಸಿದೆ.

ನಿರ್ವಹಣೆ ನಿಜಕ್ಕೂ ಸವಾಲು

ಲಂಟಾನಾ ವನ್ಯಜೀವಿಗಳ ಬದುಕಿಗೆ ಮಾರಕ. ಇದರ ಎಲೆಗಳನ್ನು ತಿನ್ನುವ ಪ್ರಾಣಿಗಳ ಮೂತಿಗಳು ಅಲರ್ಜಿಗೆ ತುತ್ತಾಗುತ್ತವೆ. ಅತಿಯಾಗಿ ತಿಂದರೆ ಅತಿಸಾರ ಉಂಟಾಗಿ ಲಿವರ್‌ಗೆ ಹಾನಿಯಾಗುವ ಸಾಧ್ಯತೆಯಿದೆ. ಇದು ಪ್ರಾಣಿಯ ಜೀವಕ್ಕೂ ಅಪಾಯ ತಂದೊಡ್ಡಲಿದೆ ಎನ್ನುತ್ತಾರೆ ಜೀವವಿಜ್ಞಾನಿಗಳು.

ಲಂಟಾನಾ ನಿರ್ಮೂಲನೆಗೆ ಆಯಾ ರಾಜ್ಯದ ಅರಣ್ಯ ಇಲಾಖೆ ಮತ್ತು ಕೇಂದ್ರ ಪರಿಸರ ಇಲಾಖೆಯೂ ಮುಂದಾಗಿದೆ. ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿವೆ. ಆದರೆ, ನಿರ್ಮೂಲನೆಗೆ ಮಾರ್ಗೋಪಾಯ ಸಿಗುತ್ತಿಲ್ಲ. ಬೇಸಿಗೆ ವೇಳೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇದರ ನಿರ್ಮೂಲನೆ ಕಾರ್ಯ ನಡೆಯುತ್ತದೆ. ಬೇರುಸಹಿತ ಕಿತ್ತು ಹಾಕುವ ಕೆಲಸ ನಡೆಯುತ್ತಿದೆ. ಆದರೆ, ಮಣ್ಣಿನೊಳಗೆ ಹುದುಗಿರುವ ಬೀಜಗಳ ನಿರ್ಮೂಲ‌ನೆ ಕಷ್ಟಸಾಧ್ಯವಾಗಿದೆ.

ಹಣ್ಣು ಭಕ್ಷಿಸುವ ಪಕ್ಷಿಗಳನ್ನು ಲಂಟಾನಾ ಬಹುಬೇಗ ಆಕರ್ಷಿಸುತ್ತದೆ. ಅದರಲ್ಲೂ ಬುಲ್‌ಬುಲ್‌ನಂತಹ ಹಕ್ಕಿಗಳು ಇವುಗಳ ಹಣ್ಣು ತಿನ್ನುತ್ತವೆ. ಬಳಿಕ ಎಲ್ಲೆಂದರೆ ಬೀಜ ಪ್ರಸರಣ ಮಾಡುವುದರಿಂದ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬೆಂಕಿ ಹಚ್ಚಿ ಲಂಟಾನಾ ನಿರ್ಮೂಲನೆ ಮಾಡಬಹುದು ಎಂಬ ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ, ಕಾಡಿನಲ್ಲಿ ವಿಸ್ತಾರವಾಗಿ ಬೆಳೆದಿರುವ ಇದನ್ನು ಬೆಂಕಿ ಹಚ್ಚಿ ನಿರ್ಮೂಲನೆ ಮಾಡುವುದು ಅಷ್ಟು ಸುಲಭವಲ್ಲ. ಬೇಸಿಗೆ ವೇಳೆ ಎಲೆಗಳು ಉದುರಿ ಲಂಟಾನಾ ಪೊದೆಗಳು ಒಣಗಿ ನಿಂತಿರುತ್ತವೆ. ಈ ಪೊದೆಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ನಿಯಂತ್ರಿಸುವುದು ಕಷ್ಟಕರ. ಈ ಬೆಂಕಿ ನೆಲದಲ್ಲಿ ಮಲಗಿರುವ ಮಣ್ಣನ್ನು ನಿರ್ಜೀವಗೊಳಿಸಿಬಿಡುತ್ತದೆ. ಮಣ್ಣು ಮತ್ತೆ ಉಸಿರಾಡಲು Biogeo chemistry ಕೆಲಸ ಮಾಡಬೇಕು. ಆ ನಂತರವಷ್ಟೇ ಸೂಕ್ಷ್ಮಾಣುಗಳು ಜೀವ ಪಡೆದುಕೊಳ್ಳಲು ಸಾಧ್ಯ. ಅಂದರೆ ಮಣ್ಣು ಮಣ್ಣಿನ ರಚನೆಗೆ ಮರಳುತ್ತದೆ. ಆಗಷ್ಟೇ ನೆಲಕ್ಕುದುರುವ ಬೀಜಗಳನ್ನು ಓಲೈಸಿ ಪೋಷಿಸಲು ಮಣ್ಣಿಗೆ ಸಾಧ್ಯ. ಲಂಟಾನಾ ನೈಸರ್ಗಿಕ ರಚನೆಯನ್ನೇ ಬುಡಮೇಲು ಮಾಡುತ್ತಿರುವುದು ದಿಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.