ADVERTISEMENT

ಕುಣಿಗಲ್| ಶ್ರೀಗಂಧ ಅರಣ್ಯದ ಸಂರಕ್ಷಣೆಯೇ ಸವಾಲು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 3:47 IST
Last Updated 30 ಆಗಸ್ಟ್ 2021, 3:47 IST
ಕುಣಿಗಲ್ ತಾಲ್ಲೂಕಿನ ಕಂಪ್ಲಪುರ ಶ್ರೀಗಂಧ ಮೀಸಲು ಅರಣ್ಯ ಪ್ರದೇಶ
ಕುಣಿಗಲ್ ತಾಲ್ಲೂಕಿನ ಕಂಪ್ಲಪುರ ಶ್ರೀಗಂಧ ಮೀಸಲು ಅರಣ್ಯ ಪ್ರದೇಶ   

ಕುಣಿಗಲ್: ತಾಲ್ಲೂಕಿನಲ್ಲಿ ಶ್ರೀಗಂಧ ಬೆಳೆಯುವುದು ಹೆಚ್ಚಾಗುತ್ತಿದ್ದಂತೆ ಮರಗಳ ಕಳವಿನ ಘಟನೆಗಳು ಹೆಚ್ಚಾಗುತ್ತಿವೆ. ಹಾಗಾಗಿ, ಶ್ರೀಗಂಧ ಮೀಸಲು ಅರಣ್ಯ ಪ್ರದೇಶದ ಸಂರಕ್ಷಣೆಗೆ ವ್ಯವಸ್ಥಿತ ಕಾರ್ಯಕ್ರಮ ರೂಪಿಸಲು ಮುಂದಾಗಬೇಕು ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನಾಗರಿಕರು ಮನವಿ ಮಾಡಿದ್ದಾರೆ.

ತಾಲ್ಲೂಕಿನಲ್ಲಿ ಬ್ರಿಟಿಷರ ಕಾಲದಲ್ಲಿಯೇ ಅಂದರೆ 1887ರಲ್ಲಿ ಹುಲಿಯೂರುದುರ್ಗ ಹೋಬಳಿಯ (ಅಂದು ತಾಲ್ಲೂಕು ಕೇಂದ್ರವಾಗಿತ್ತು) ಕಂಪ್ಲಪುರ ಅರಣ್ಯ ಪ್ರದೇಶದ 1,500 ಎಕರೆಯನ್ನು ಶ್ರೀಗಂಧ ಮೀಸಲು ಅರಣ್ಯ ಪ್ರದೇಶವೆಂದು ಗುರುತಿಸಲಾಗಿತ್ತು. ಲಕ್ಷಾಂತರ ಶ್ರೀಗಂಧದ ಗಿಡಗಳನ್ನು ಬೆಳೆಸಿ ದೇಶಕ್ಕೆ ಸ್ವಾತಂತ್ರ್ಯ ಬರುವ ವರೆಗೂ ಸರ್ಕಾರ ಮರಗಳನ್ನು ಕಡಿದು ಮಾರಾಟ ಮಾಡಿ ಬೊಕ್ಕಸಕ್ಕೆ ಹಣ ಜಮಾ ಮಾಡುವ ಪದ್ಧತಿ ಜಾರಿಯಲ್ಲಿತ್ತು.

ಸ್ವಾತಂತ್ರ್ಯ ಬಂದ ನಂತರ ಶ್ರೀಗಂಧವನ್ನು ಕಡಿದು ಮಾರಾಟ ಮಾಡುವ ಪ್ರವೃತ್ತಿಗೆ ತಿಲಾಂಜಲಿ ನೀಡಲಾಯಿತು. ಮರಗಳನ್ನು ಮತ್ತಷ್ಟು ಬೆಳೆಸಿ ಇಡೀ ಪ್ರದೇಶವನ್ನು ಸಂರಕ್ಷಿಸಲು ನಿರ್ಧರಿಸಲಾಯಿತು. ಇದರ ಪರಿಣಾಮ ಇದುವರೆಗೂ ಶ್ರೀಗಂಧದ ಗಿಡಗಳನ್ನು ಬೆಳೆಸಲು ಇಲಾಖೆ ಗಮನ ಹರಿಸಿದೆ. ಇದರ ಜತೆಯಲ್ಲಿ ತಾಲ್ಲೂಕಿನ ಇಪ್ಪಾಡಿ, ಹುಲಿಯೂರುದುರ್ಗ, ಹಂದಲಕುಪ್ಪೆ ಸೇರಿದಂತೆ ಸಾಮಾಜಿಕ ಅರಣ್ಯ ಪ್ರದೇಶದ ಜಮೀನು, ಸ್ಟಡ್ ಫಾರಂ, ಸರ್ಕಾರಿ ಪ್ರಥಮದರ್ಜೆ ಕಾಲೇಜು ಆವರಣದಲ್ಲೂ ಶ್ರೀಗಂಧದ ಮರಗಳು ಬೆಳೆದು ನಿಂತಿವೆ.

ADVERTISEMENT

ಮರಗಳನ್ನು ಹೆಚ್ಚು ಬೆಳೆಸಿದಂತೆತಾಲ್ಲೂಕಿನಲ್ಲಿ ಶ್ರೀಗಂಧದ ಕಳ್ಳರ ಕಾಟವೂ ಹೆಚ್ಚಾಗುತ್ತಿದೆ. ಇತ್ತೀಚೆಗೆ ಮರಗಳನ್ನು ಕದಿಯಲು ಬಂದ ಕಳ್ಳರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಕಳ್ಳನೊಬ್ಬ ಮೃತಪಟ್ಟಿದ್ದ. ಸ್ಟಡ್ ಫಾರಂನಲ್ಲೂ ಶ್ರೀಗಂಧ ಮರಗಳ ಕಳವಿನ ಪ್ರಸಂಗಗಳು ನಿರಂತರವಾಗಿ ನಡೆಯುತ್ತಿದ್ದು, ಒಮ್ಮೆ ಕಳ್ಳನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಲಾಗಿದೆ.

ಇನ್ನೂ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ಬೆಳೆದು ನಿಂತಿದ್ದ ಮರಗಳ ಸಂಖ್ಯೆ ಕಳ್ಳರ ಕರಾಮತ್ತಿನಿಂದ ಕಡಿಮೆಯಾಗಿದೆ. ಅಂಚೆ ಕಚೇರಿ, ದುರ್ಗದ ಪೊಲೀಸ್ ಠಾಣೆ ಮತ್ತು ಅರಣ್ಯ ಇಲಾಖೆ ಕಚೇರಿಯ ಆವರಣದಲ್ಲೂ ಕಳ್ಳರು ಕೈಚಳಕ ತೋರಿರುವುದು ನಾಗರಿಕರ ನೆನಪಿನಲ್ಲಿ ಇನ್ನೂ ಉಳಿದಿದೆ.

ತಾಲ್ಲೂಕಿನ ಶ್ರೀಗಂಧದ ವನಸಿರಿ ಸಂರಕ್ಷಿಸಲು ವ್ಯವಸ್ಥಿತ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕಿದೆ. ಜನಪ್ರತಿನಿಧಿಗಳು ಸಹ ಮರಗಳನ್ನು ರಕ್ಷಿಸಲು ಸರ್ಕಾರದ ಗಮನ ಸೆಳೆಯಬೇಕಿದೆ. ಇತ್ತೀಚೆಗೆ ರೈತರು ಸಹ ಶ್ರೀಗಂಧ ಬೆಳೆಸಲು ಆಸಕ್ತಿ ತೋರುತ್ತಿದ್ದಾರೆ.ಇಲಾಖೆಯಿಂದ ಶ್ರೀಗಂಧ ಮತ್ತು ರಕ್ತ ಚಂದನದ ಸುಮಾರು 30 ಸಾವಿರ ಸಸಿಗಳನ್ನು ವಿತರಿಸಲಾಗಿದೆ. ಕೆಲವರು ಶ್ರೀಗಂಧ ಬೆಳೆಯಲು ಆಸಕ್ತಿ ತೋರಿದರೂ ಅವುಗಳ ರಕ್ಷಣೆ ಬಗ್ಗೆ ಸಮಸ್ಯೆಯಾಗುವುದರಿಂದ ಕೈಬಿಟ್ಟಿದ್ದಾರೆ

ಲೆಕ್ಕ ಪರಿಶೋಧನೆ ಅಗತ್ಯ: ತಾಲ್ಲೂಕಿನ ಕಂಪ್ಲಪುರ ಶ್ರೀಗಂಧ ಮೀಸಲು ಅರಣ್ಯ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಶ್ರೀಗಂಧದ ಮರಗಳು ಬೆಳೆದಿವೆ. ಇಲಾಖೆಯಲ್ಲಿ ಇದುವರೆಗೂ ಎಷ್ಟು ಮರಗಳು ಬೆಳೆದಿವೆ, ಎಷ್ಟು ಕಟಾವು ಮಾಡಲಾಗಿದೆ. ಇನ್ನೂ ಎಷ್ಟು ಮರಗಳು ಯಾವ ಹಂತದಲ್ಲಿ ಬೆಳೆದು ನಿಂತಿವೆ ಎಂಬ ನಿರ್ದಿಷ್ಟ ಮಾಹಿತಿ ಇಲ್ಲ.

ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಶ್ರೀಗಂಧ ಮರಗಳಿಗೆ 30 ವರ್ಷದ ಆಯಸ್ಸು ಇದ್ದು, ಈ ಹಂತದಲ್ಲಿ ಇಂತಹ ಮರಗಳು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಪ್ರಸಕ್ತ ಅಂದಾಜಿನ ಪ್ರಕಾರ ತಾಲ್ಲೂಕಿನಲ್ಲಿ ಎರಡು ಲಕ್ಷ ಶ್ರೀಗಂಧದ ಮರಗಳಿವೆ. 2 ವರ್ಷದಿಂದ ಹಿಡಿದು 20 ವರ್ಷದ ಮರಗಳು ಹೆಚ್ಚಾಗಿವೆ ಎನ್ನುತ್ತಾರೆ.

ದಾಖಲೆಗಳಿರಬೇಕಾದ ಮರಗಳು ವಾಸ್ತವದಲ್ಲಿ ಇಲ್ಲ. ಈ ಭಾಗದಲ್ಲಿ ನಿರಂತರವಾಗಿ ಶ್ರೀಗಂಧದ ಮರಗಳನ್ನು ಕಳ್ಳರು ನಿರಂತರವಾಗಿ ಕಡಿದು ಸಾಗಿಸುತ್ತಿರುವ ಬಗ್ಗೆ ಮಾಹಿತಿಗಳಿದ್ದರೂ ಹಿಡಿಯಲು ಸಾಧ್ಯವಾಗಿಲ್ಲ ಎಂಬುದು ಜನರ ದೂರು.

ಭಯದಲ್ಲಿ ಅರಣ್ಯ ಸಿಬ್ಬಂದಿ: ಶ್ರೀಗಂಧ ಮರಗಳ ಕಳವು ಪ್ರಕರಣ ಹೆಚ್ಚುತ್ತಿದೆ. ಇತ್ತೀಚೆಗೆ ಶ್ರೀಗಂಧ ಕಳ್ಳರನ್ನು ಹಿಡಿಯಲು ಹೋದ ಉಪ ಅರಣ್ಯಾಧಿಕಾರಿ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಅವರು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಕಳ್ಳನನ್ನು ಬಲಿ ತೆಗೆದುಕೊಂಡಿದೆ.

ಕಳೆದ ಎರಡು ವರ್ಷಗಳ ಹಿಂದೆ ಶ್ರೀಗಂಧ ಕಳ್ಳರನ್ನು ಹಿಡಿಯಲು ಹೋದ ಅರಣ್ಯ ಸಿಬ್ಬಂದಿ ಮೇಲೆ ಟ್ರ್ಯಾಕ್ಟರ್ ಹರಿಸಲು ಯತ್ನಿಸಿದ ಘಟನೆಯೂ ನಡೆದಿತ್ತು. ಇದು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಭಯದ ಕೂಪಕ್ಕೆ ದೂಡಿದೆ. ಮತ್ತೊಂದೆಡೆ ಸಿಬ್ಬಂದಿ ಕೊರತೆಯಿಂದ ಅರಣ್ಯ ಇಲಾಖೆ ನಲುಗುತ್ತಿದೆ. ಇರುವ ಸಿಬ್ಬಂದಿಗೆ ರಕ್ಷಣೆ ಸಂಬಂಧ ಸೂಕ್ತ ತರಬೇತಿ ಕೊಡುವ ಅಗತ್ಯವಿದೆ.

ಸಿಬ್ಬಂದಿ ಕೊರತೆ

ಶ್ರೀಗಂಧದ ಮರಗಳ ಕಾವಲಿಗಾಗಿ ಆ್ಯಂಟಿ ಸ್ಮಗ್ಲಿಂಗ್ ಕ್ಯಾಂಪ್ ನಿಗದಿಯಾಗಿದೆ. ಅಗತ್ಯ ಸಿಬ್ಬಂದಿಯ ಕೊರತೆಯಾಗಿದೆ. ಇಡೀ ಶ್ರೀಗಂಧ ಮೀಸಲು ಅರಣ್ಯ ಪ್ರದೇಶಕ್ಕೆ ತಂತಿಬೇಲಿಯ ಜತೆಗೆ ಅಗತ್ಯವಿರುವೆಡೆ ಸಿಸಿ ಕ್ಯಾಮೆರಾ ಅಳವಡಿಕೆಯ ಕಾರ್ಯವಾಗಬೇಕಿದೆ.

ಮಹಮ್ಮದ್ ಮನ್ಸೂರ್,ವಲಯ ಅರಣ್ಯಾಧಿಕಾರಿ

––

ಸಂರಕ್ಷಣೆಗೆ ಕ್ರಮ

ಬ್ರಿಟಿಷರ ಕಾಲದಿಂದಲೂ ಚಾಲ್ತಿಯಲ್ಲಿರುವ ಕಂಪ್ಲಪುರ ಶ್ರೀಗಂಧ ಮೀಸಲು ಅರಣ್ಯ ಪ್ರದೇಶ ತಾಲ್ಲೂಕಿನಲ್ಲಿರುವುದೇ ವಿಶೇಷ. ಸಂರಕ್ಷಣೆಗೆ ಸರ್ಕಾರದ ಗಮನ ಸೆಳೆದು ಅಗತ್ಯ ಸಿಬ್ಬಂದಿ ಮತ್ತು ಬೇಲಿ ನಿರ್ಮಾಣ ಕಾರ್ಯ ಕ್ರಮವಹಿಸಲಾಗುವುದು. ಸಿ.ಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ತೆಗೆದುಕೊಳ್ಳಲಾಗುವುದು.

ಡಾ.ರಂಗನಾಥ್,ಶಾಸಕ

–––

ಕಳವು ಹೆಚ್ಚಳ

ಕಂಪ್ಲಪುರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ನಿರಂತರವಾಗಿ ಕಡಿಯಲಾಗುತ್ತಿದೆ. ಬೇಲಿಯೇ ಇಲ್ಲದಿರುವುದು ಕಳ್ಳರ ಪಾಲಿಗೆ ಅನುಕೂಲವಾಗಿದೆ. ರಾಮನಗರ, ಚನ್ನಪಟ್ಟಣ ಕಡೆಗಳಿಂದ ಬರುವ ಕಳ್ಳರಿಗೆ ಅನುಕೂಲವಾಗುತ್ತಿದೆ. ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಬೇಕಿದೆ. ನಿರಂತರವಾಗಿ ಮರಗಳನ್ನು ಕದಿಯುತ್ತಿರುವುದನ್ನು ಅವಲೋಕಿಸಿದರೆ ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯವೂ ಕಾರಣವಾಗಿದೆ.

ಕಳ್ಳರು ಮೊದಲಿಗೆ ಬಂದು ಸ್ಥಳ ಮತ್ತು ಗಿಡಗಳ ಪರಿಶೀಲನೆ ಮಾಡುತ್ತಾರೆ. ಬಲಿತ ಮರಗಳ ಚಕ್ಕೆಗಳನ್ನು ಸುಲಿದು ಗುಡ್ಡೆ ಹಾಕಿ ಹೋಗುತ್ತಾರೆ. ಕೆಲವು ದಿನಗಳ ನಂತರ ಬಂದು ನೋಡಿ ಕ್ಷಣಾರ್ಧದಲ್ಲಿ ಶ್ರೀಗಂಧದ ಮರವನ್ನು ಕಡಿದು ಸಣ್ಣ ಸಣ್ಣ ದಿಮ್ಮಿಗಳನ್ನು ಚೀಲಗಳಲ್ಲಿ ತುಂಬಿ ದ್ವಿಚಕ್ರವಾಹನ ಮತ್ತು ಕಾರಿನಲ್ಲಿ ಸಾಗಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು.

ಎಚ್‌.ಎನ್. ನಟರಾಜು,ಗ್ರಾಮ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.