ADVERTISEMENT

ಆಳ–ಅಗಲ: ಎನ್‌ಡಿಎ- ಸೇನೆಯಲ್ಲಿ ಅವಕಾಶಗಳ ಹೆಬ್ಬಾಗಿಲು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 3:52 IST
Last Updated 9 ಸೆಪ್ಟೆಂಬರ್ 2021, 3:52 IST
 ಎನ್‌ಡಿಎ- ಸೇನೆಯಲ್ಲಿ ಅವಕಾಶಗಳ ಹೆಬ್ಬಾಗಿಲು
ಎನ್‌ಡಿಎ- ಸೇನೆಯಲ್ಲಿ ಅವಕಾಶಗಳ ಹೆಬ್ಬಾಗಿಲು   

ಸೇನಾ ಪಡೆಗಳಲ್ಲಿ ಲಿಂಗ ಸಮಾನತೆಯ ದಿಸೆಯಲ್ಲಿ ಬಹುದೊಡ್ಡ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ. ಸೇನೆಯಲ್ಲಿ ಕಾಯಂ ಹುದ್ದೆಗಳಿಗೆ ಏರುವುದಕ್ಕಾಗಿ ಮಹಿಳೆಯರಿಗೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ (ಎನ್‌ಡಿಎ) ಪ್ರವೇಶ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಎನ್‌ಡಿಎಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆಗಸ್ಟ್‌ 18ರಂದೇ ಹೇಳಿತ್ತು. ಅದಕ್ಕೆ ಈಗ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಈ ನಿರ್ಧಾರವು ಭಾರತದ ರಕ್ಷಣಾ ಪಡೆಗಳ ಸ್ವರೂಪವನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಹಿಳೆಯರು ಅಲ್ಪಾವಧಿ ಕರ್ತವ್ಯಕ್ಕೆ ಮಾತ್ರ ನೇಮಕಗೊಳ್ಳಲು ಮೊದಲು ಅವಕಾಶ ಇತ್ತು. ಅಲ್ಪಾವಧಿಗೆ ನೇಮಕಗೊಂಡ ಮಹಿಳಾ ಅಧಿಕಾರಿಗಳನ್ನು ಕಾಯಂ ನೇಮಕಾತಿಗೆ ಪರಿಗಣಿಸಬೇಕು ಎಂದು 2020ರ ಮಾರ್ಚ್‌ 17ರಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಪುರುಷ ಅಧಿಕಾರಿಗಳಿಗೆ ಇರುವಂತಹ ಅವಕಾಶಗಳು ಮಹಿಳಾ ಅಧಿಕಾರಿಗಳಿಗೂ ಲಭ್ಯ ಇರಬೇಕು ಎಂದು ಸೂಚಿಸಿತ್ತು.

ADVERTISEMENT

ಶಾಲಾ ಶಿಕ್ಷಣ ಪೂರ್ಣಗೊಂಡ ತಕ್ಷಣವೇ ಎನ್‌ಡಿಎಗೆ ಸೇರುವುದಕ್ಕೆ ಅವಕಾಶ ಇದೆ. ಪದವೀಧರರಿಗೂ ಕಾಯಂ ಕರ್ತವ್ಯದ ನೇಮಕಾತಿಯ ಅವಕಾಶ ಇದೆ. ಅದಕ್ಕೆ ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ ಬರೆಯಬೇಕು.

ಮಹಿಳಾ ಅಧಿಕಾರಿಗಳ ಮೊದಲ ತಂಡವು ನೌಕಾಪಡೆಗೆ 1992ರಲ್ಲಿ ನಿಯೋಜನೆಗೊಂಡಿತ್ತು. ಅದಾಗಿ, ಮಹಿಳೆಯರು ನೇರವಾಗಿ ಕಾಯಂ ಕರ್ತವ್ಯಕ್ಕೆ ನೇಮಕಗೊಳ್ಳುವ ಅವಕಾಶ ಲಭ್ಯವಾಗಲು 30 ವರ್ಷ ಬೇಕಾಯಿತು. ಎನ್‌ಡಿಎ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೈಹಿಕ ಪರೀಕ್ಷೆ ಮತ್ತು ಹೊರಾಂಗಣ ತರಬೇತಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ಅಂಥವರನ್ನು ಪುರುಷ ಅಭ್ಯರ್ಥಿಗಳಿಗೆ ಸಮಾನವಾಗಿ ಪರಿಗಣಿಸಬೇಕು ಎಂಬುದು ಎನ್‌ಡಿಎಯಲ್ಲಿ ಮಹಿಳೆಯರಿಗೆ ಪ್ರವೇಶ ಕೊಡಬೇಕು ಎಂಬುದರ ಪ್ರಧಾನ ಪ್ರತಿಪಾದನೆ ಆಗಿತ್ತು.

ಎನ್‌ಡಿಎಗೆ ಮಹಿಳೆಯರ ಸೇರ್ಪಡೆ ಹೇಗೆ ಎಂಬುದರ ವಿವರಗಳನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಆದರೆ, ಮಹಿಳೆಯರು ಎನ್‌ಡಿಎ ಸೇರುವುದರೊಂದಿಗೆ ‘ಆರ್ಮ್ಸ್‌’ ಎಂದು ಕರೆಯಲಾಗುವ ಸೇನೆಯ ಯುದ್ಧ ಘಟಕದ ಭಾಗವಾಗುವ ಅವಕಾಶ ತೆರೆದುಕೊಳ್ಳಲಿದೆ. ಇದು ರಕ್ಷಣಾ ಪಡೆಗಳಲ್ಲಿ ಮಹಿಳೆಯರಿಗೆ ಹೊಸ ಜಗತ್ತನ್ನೇ ತೆರೆದುಕೊಡಲಿದೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) ಮೂಲಕ ಸೇನಾ ಸೇವೆಗಳಿಗೆ ನೇಮಕವಾಗುವುದರಲ್ಲಿ ಹಲವು ಲಾಭಗಳಿವೆ. ಇದು ದೇಶದ ಅತ್ಯುನ್ನತ ರಕ್ಷಣಾ ತರಬೇತಿ ಸಂಸ್ಥೆಯಾಗಿದೆ. ಇಲ್ಲಿ ತರಬೇತಿ ಪಡೆದವರು ಸೇನೆಯ ಮೂರೂ ಪಡೆಗಳಿಗೆ ನೇರವಾಗಿ ಆಯ್ಕೆಯಾಗಬಹುದು. ಹೀಗಾಗಿ ಎನ್‌ಡಿಎಗೆ ನೇಮಕವಾದರೆ, ಸೇನಾಪಡೆಗಳಿಗೆ ನೇಮಕವಾದಂತೆಯೇ ಎಂದು ಪರಿಗಣಿಸಲಾಗುತ್ತದೆ.

ಎನ್‌ಡಿಎಗೆ ನೇಮಕವಾಗುವುದರ ಲಾಭಗಳು

l ಎನ್‌ಡಿಎಯ ತರಬೇತಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಸೇನೆಯ ಮೂರೂ ಪಡೆಗಳಲ್ಲಿ ನೇಮಕಾತಿ ವೇಳೆಯಲ್ಲಿಯೇ ಉನ್ನತ ಹುದ್ದೆಗಳನ್ನು ನೀಡಲಾಗುತ್ತದೆ. ಹೀಗಾಗಿ ಎನ್‌ಡಿಎ ಮೂಲಕ ಆಯ್ಕೆಯಾದವರು ತಮ್ಮ ಸೇವಾವಧಿಯಲ್ಲಿ ತ್ವರಿತವಾಗಿ ಬಡ್ತಿ ಪಡೆಯುತ್ತಾರೆ. ಎನ್‌ಡಿಎ ಅಭ್ಯರ್ಥಿಗಳಿಗೆ ಮಾತ್ರವೇ ಸೇನೆಯ ಮೂರೂ ಪಡೆಗಳಲ್ಲಿ ಅತ್ಯುನ್ನತ ಹುದ್ದೆಗೆ ಏರುವ ಅವಕಾಶ ದೊರೆಯುತ್ತದೆ

l ಎನ್‌ಡಿಎ ಮೂಲಕ ನೇಮಕವಾದ ಅಭ್ಯರ್ಥಿಗಳಿಗೆ ಆರಂಭದಲ್ಲಿಯೇ ಹೆಚ್ಚಿನ ವೇತನ ನಿಗದಿ ಮಾಡಲಾಗುತ್ತದೆ. ಹೆಚ್ಚು ಬಾರಿ ವೇತನ ಏರಿಕೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ. ಬೇರೆ ವಿಧಾನದ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗಿಂತ ಎನ್‌ಡಿಎ ಅಭ್ಯರ್ಥಿಗಳಿಗೆ ಒಂದೂವರೆಯಿಂದ ಎರಡು ಪಟ್ಟು ಹೆಚ್ಚು ವೇತನ ದೊರೆಯುತ್ತದೆ

l ಎನ್‌ಡಿಎ ಮೂಲಕ ಬರುವ ಅಭ್ಯರ್ಥಿಗಳ ನೇಮಕಾತಿಯು ಕಾಯಂ ಆಗಿರುತ್ತದೆ. ಬೇರೆ ವಿಧಾನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗಿಂತ ಈ ಅಭ್ಯರ್ಥಿಗಳ ಸೇವಾವಧಿ ಹೆಚ್ಚು. ಹೀಗಾಗಿ ವೇತನ, ಭತ್ಯೆಗಳು ಮತ್ತು ಪಿಂಚಣಿಯಲ್ಲಿ ಎನ್‌ಡಿಎ ಅಭ್ಯರ್ಥಿಗಳಿಗೆ ಹೆಚ್ಚು ಲಾಭವಾಗುತ್ತದೆ. ಉದ್ಯೋಗ ಭದ್ರತೆಯೂ ಇರುತ್ತದೆ

l ಎನ್‌ಡಿಎ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಹೆಚ್ಚಿನ ಸವಾಲಿನ ಹುದ್ದೆಗಳು ಮತ್ತು ಕಾರ್ಯಾಚರಣೆಯ ಅವಕಾಶ ದೊರೆಯುತ್ತದೆ. ವಿಶೇಷ ಹುದ್ದೆಗಳು, ವಿಶೇಷ ಕಾರ್ಯಾಚರಣೆಗಳಲ್ಲಿ ಸೇನೆಯ ತುಕಡಿಯನ್ನು ಮುನ್ನಡೆಸುವ ಅವಕಾಶ ಎನ್‌ಡಿಎ ಮೂಲಕ ನೇಮಕವಾದ ಅಭ್ಯರ್ಥಿಗಳಿಗೆ ಮಾತ್ರವೇ ದೊರೆಯುತ್ತದೆ

l ಎನ್‌ಡಿಎ ಮೂಲಕ ನೇಮಕವಾದ ಅಭ್ಯರ್ಥಿಗಳಿಗೆ ಸೇವಾವಧಿಯ ಉದ್ದಕ್ಕೂ ಹಲವು ಬಾರಿ ತರಬೇತಿ ನೀಡಲಾಗುತ್ತದೆ. ದೇಶದ ಬಹುತೇಕ ಎಲ್ಲಾ ಉನ್ನತ ತರಬೇತಿ ಕೇಂದ್ರಗಳಲ್ಲಿ ಅವರಿಗೆ ಒಂದಿಲ್ಲೊಂದು ಬಾರಿ ತರಬೇತಿಯ ಅವಕಾಶ ದೊರೆಯುತ್ತದೆ. ರಕ್ಷಣಾ ಸಹಕಾರದ ಭಾಗವಾಗಿ ಬೇರೆ ದೇಶಗಳ ರಕ್ಷಣಾ ಅಕಾಡೆಮಿಗಳಲ್ಲಿ ತರಬೇತಿ ಪಡೆಯುವ ಅವಕಾಶವು ಎನ್‌ಡಿಎ ಮೂಲಕ ನೇಮಕವಾದ ಅಭ್ಯರ್ಥಿಗಳಿಗೆ ಮಾತ್ರವೇ ದೊರೆಯುತ್ತದೆ

ಪರೀಕ್ಷೆ ಮತ್ತು ಆಯ್ಕೆ ವಿಧಾನ

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯು (ಎನ್‌ಡಿಎ) ಪ್ರತಿ ವರ್ಷ ಒಟ್ಟು 600 ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತದೆ. ಎನ್‌ಡಿಎಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕವೇ ಆಯ್ಕೆಯಾಗಬೇಕಾಗುತ್ತದೆ. ಇದು ಸೇನಾ ನೇಮಕಾತಿಗಳಲ್ಲೇ ಅತ್ಯಂತ ಕಠಿಣವಾದ ಪರೀಕ್ಷೆ ಎನ್ನಲಾಗಿದೆ. ಕೇಂದ್ರೀಯ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ನಡೆಸುತ್ತದೆ. ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಮಾನಸಿಕ ಸ್ವಾಸ್ಥ್ಯ ಪರೀಕ್ಷೆ ಸೇರಿ ಹಲವು ಸುತ್ತಿನ ಪರೀಕ್ಷೆಗಳ ನಂತರ ಎನ್‌ಡಿಎಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರತಿ ಸುತ್ತಿನಲ್ಲಿ 300 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಲಭ್ಯವಿರುವ 300 ಸೀಟುಗಳಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ 2.5 ಲಕ್ಷದಿಂದ 3 ಲಕ್ಷವನ್ನು ದಾಟುತ್ತದೆ. ಇದರಲ್ಲಿ 6,000 ಅಭ್ಯರ್ಥಿಗಳನ್ನು ಮಾತ್ರವೇ ಅಂತಿಮ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಅವರಿಂದ 300 ಜನರನ್ನು ಆಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರಿಗೆ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗೆ ಸಂಬಂಧಿಸಿದ ತರಬೇತಿ ನೀಡಲಾಗುತ್ತದೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿ

ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ), ಮಹಾರಾಷ್ಟ್ರದ ಪುಣೆಯ ಹೊರವಲಯದ ಖಾಡಕವಾಸ್ಲಾದಲ್ಲಿ ಇದೆ.

ಭಾರತೀಯ ಭೂಸೇನೆ, ವಾಯುಪಡೆ ಹಾಗೂ ನೌಕಾ ಪಡೆಯ ಕೆಡೆಟ್‌ಗಳಿಗೆ ಜಂಟಿ ತರಬೇತಿ ನೀಡುವ ಸಂಸ್ಥೆ ಇದಾಗಿದೆ. ಇಲ್ಲಿಂದ ತರಬೇತಿ ಪಡೆದ ಬಳಿಕವೇ, ಆಯಾ ಪಡೆಯ ಕೆಡೆಟ್‌ಗಳು ತಮ್ಮ ತಮ್ಮ ಕ್ಷೇತ್ರಕ್ಕೆ ನೇಮಕಾತಿಪೂರ್ವ ತರಬೇತಿಗಾಗಿ ತೆರಳುತ್ತಾರೆ.

ಯಾರು ಎನ್‌ಡಿಎ ತರಬೇತಿಗೆ ಸೇರಬಹುದು?

l ಅವಿವಾಹಿತ ಪುರುಷ ಅಭ್ಯರ್ಥಿ (ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ, ಸೆ.5ರಂದು ನಡೆದ ಎನ್‌ಡಿಎ ಪ್ರವೇಶ ಪರೀಕ್ಷೆಗೆ ಮಹಿಳೆಯರಿಗೂ ಹಾಜರಾಗಲು ಅನುಮತಿ ನೀಡಲಾಗಿತ್ತು)

l 16.5 ವರ್ಷದಿಂದ 19.5 ವರ್ಷದ ಒಳಗಿನವರು

l 10+2 ಶಿಕ್ಷಣ ಪೂರ್ತಿಗೊಳಿಸಿರಬೇಕು

l ಪ್ರತಿವರ್ಷ ಯುಪಿಎಸ್‌ಸಿ ನಡೆಸುವ ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ಎನ್‌ಡಿಎ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ

l ಆಯ್ಕೆಯಾದ ಅಭ್ಯರ್ಥಿಗಳು, ದೈಹಿಕ ತರಬೇತಿ ಹಾಗೂ ಹೊರಾಂಗಣ ಚಟುವಟಿಕೆಗಳ ಜೊತೆಗೆ, ಆರು ಸೆಮಿಸ್ಟರ್‌ಗಳನ್ನು ಒಳಗೊಂಡ ಪದವಿ ಶಿಕ್ಷಣವನ್ನೂ ಪಡೆಯಬೇಕು

l ಪದವಿ ಪಡೆದ ಬಳಿಕ, ಅವರನ್ನು ಒಂದು ವರ್ಷದ ಅವಧಿಯವರೆಗೆ ಆಯಾ ತರಬೇತಿ ಅಕಾಡೆಮಿಗಳಿಗೆ ಕಳುಹಿಸಲಾಗುತ್ತದೆ. ಇದು ನೇಮಕಾತಿಪೂರ್ವದ ಅವಧಿ. ಭೂಸೇನೆಯ ಕೆಡೆಟ್‌ಗಳನ್ನು ಡೆಹರಾಡೂನ್‌ನಲ್ಲಿರುವ ಭಾರತೀಯ ಸೇನಾ ಅಕಾಡೆಮಿಗೆ (ಐಎಂಎ), ವಾಯುಸೇನೆಯ ಕೆಡೆಟ್‌ಗಳನ್ನು ಹೈದರಾಬಾದ್‌ನಲ್ಲಿರುವ ವಾಯುಸೇನಾ ಅಕಾಡೆಮಿಗೆ (ಎಎಫ್‌ಎ) ಹಾಗೂ ನೌಕಾ ಕೆಡೆಟ್‌ಗಳನ್ನು ಕೇರಳದ ಈಜಿಮಾಲಾದಲ್ಲಿರುವ ಭಾರತೀಯ ನೌಕಾ ಅಕಾಡೆಮಿಗೆ (ಐಎನ್ಎ) ಕಳುಹಿಸಿಕೊಡಲಾಗುತ್ತದೆ.

ಈಗ ಸೇನೆಯಲ್ಲಿರುವ ಯಾವ ಮಹಿಳಾ ಸಿಬ್ಬಂದಿಯೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ (ಎನ್‌ಡಿಎ) ಬಂದವರಲ್ಲ. ಅವರಿಗೆ ಇದುವರೆಗೆ ಎನ್‌ಡಿಎ ಪ್ರವೇಶ ಪರೀಕ್ಷೆ ಬರೆಯುವುದಕ್ಕೇ ಅವಕಾಶ ಇರಲಿಲ್ಲ.

ದೇಶದ ಸಶಸ್ತ್ರ ಪಡೆಯ ಮೂರೂ ವಿಭಾಗಗಳಲ್ಲಿ (ಭೂ ಸೇನೆ, ವಾಯು ಪಡೆ ಹಾಗೂ ನೌಕಾಪಡೆ) 1992ರಿಂದ ಮಹಿಳೆಯರು ಪ್ರವೇಶ ಪಡೆದಿದ್ದಾರೆ. ಆದರೆ, ಅವರೆಲ್ಲ ಅಲ್ಪಾವಧಿ ನೇಮಕಾತಿ ಮೂಲಕ ನೇಮಕಗೊಂಡ ಅಧಿಕಾರಿಗಳು.

ಮಹಿಳೆಯರು ಅಲ್ಪಾವಧಿ ನೇಮಕಾತಿ ಮೂಲಕ ಮಾತ್ರ ಸೇನೆಗೆ ಸೇರಬಹುದಾಗಿತ್ತು. ಅವರು ಕಡ್ಡಾಯವಾಗಿ ಪದವೀಧರರಾಗಿ ಇರಬೇಕಿತ್ತು. ಪ್ರವೇಶ ಪರೀಕ್ಷೆ, ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ತರಬೇತಿ ನಂತರ, 10 ತಿಂಗಳಿನಿಂದ ಒಂದು ವರ್ಷದವರೆಗೆ ಚೆನ್ನೈನಲ್ಲಿನ ಅಧಿಕಾರಿಗಳ ತರಬೇತಿ ಅಕಾಡೆಮಿಯ ತರಬೇತಿಗೆ ಅವರು ಅರ್ಹತೆ ಪಡೆಯುತ್ತಾರೆ.

ಎನ್‌ಡಿಎ ಮುಖಾಂತರ ಸೇನೆಗೆ ಬಂದ ಪುರುಷರಿಗೆ ಕಾಯಂ ನೇಮಕಾತಿ ಅವಕಾಶ ದೊರೆಯುತ್ತದೆ. ಅವರು, ಹುದ್ದೆಗನುಗುಣವಾಗಿ ನಿವೃತ್ತಿ ವಯಸ್ಸಿನವರೆಗೂ ಕರ್ತವ್ಯದಲ್ಲಿರುತ್ತಾರೆ. ಅಲ್ಪಾವಧಿ ನೇಮಕಾತಿ ಮೂಲಕ ಮಾತ್ರವೇ ಸೇನೆಗೆ ಸೇರುವ ಅವಕಾಶ ಇರುವ ಮಹಿಳೆಯರಿಗೆ ಪೂರ್ಣಾವಧಿಯ ಸೇವಾ ಸ್ಥಾನಮಾನ ಮೊದಲು ಇರಲಿಲ್ಲ. ಅವರು 14 ವರ್ಷಗಳ ಕಾಲ ಮಾತ್ರ ಕರ್ತವ್ಯ ನಿರ್ವಹಿಸಬಹುದಾಗಿದ್ದು, ಆನಂತರ ನಿವೃತ್ತಿಯಾಗುತ್ತಿದ್ದರು. ಸೇನೆಯಲ್ಲಿ 20 ವರ್ಷಗಳವರೆಗೆ ಕರ್ತವ್ಯದಲ್ಲಿ ಇರದ ಕಾರಣಕ್ಕಾಗಿ ಅವರಿಗೆ ಪಿಂಚಣಿ ಸೌಲಭ್ಯವೂ ಸಿಗುತ್ತಿರಲಿಲ್ಲ.

ಆದರೆ, ಎನ್‌ಡಿಎ ಸೇರಲು ಮಹಿಳೆಯರಿಗೆ ಅವಕಾಶ ಲಭ್ಯವಾದ ಕಾರಣ ಈಗಿನ ಸ್ಥಿತಿಯು ಬದಲಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.