ADVERTISEMENT

Fact Check: ಕೇಂದ್ರ ಸರ್ಕಾರ ಲಸಿಕೆ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಿದೆಯೇ?

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 19:30 IST
Last Updated 15 ಏಪ್ರಿಲ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋವಿಡ್‌-19 ಲಸಿಕೆ ತಯಾರಿಕೆಯಲ್ಲಿ ಭಾರತವು ಏಕಸ್ವಾಮ್ಯ ಸಾಧಿಸಿದೆ. ಆದರೆ ಈಗ ದೇಶದಲ್ಲಿ ಕೋವಿಡ್‌-19ನ ಹೊಸ ಪ್ರಕರಣಗಳು ವಿಪರೀತ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕಾರಣ, ಲಸಿಕೆ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಲಸಿಕೆ ಪೂರೈಕೆಯಲ್ಲಿ ದೇಶದ ಅಗತ್ಯಕ್ಕೆ ಆದ್ಯತೆ ನೀಡಲಾಗಿದೆ. ಹೀಗಾಗಿ ದೇಶದ ಎಲ್ಲಾ ರಾಜ್ಯಗಳಿಗೂ ಲಸಿಕೆ ಸರಿಯಾಗಿ ಪೂರೈಕೆಯಾಗುತ್ತದೆ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ಬಿಜೆಪಿಯ ಕೆಲವು ಬೆಂಬಲಿಗರು, 'ಕೋವಿಡ್‌ ಲಸಿಕೆ ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಎಂದು ತಯಾರಿಕಾ ಕಂಪನಿಗಳಿಗೆ ಸರ್ಕಾರವು ಸೂಚನೆ ನೀಡಿದೆ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವು ರಾಜಕೀಯ ನಾಯಕರೂ ಬಹಿರಂಗವಾಗಿ ಇದನ್ನು ಘೋಷಿಸಿದ್ದಾರೆ.

ಆದರೆ, ಕೋವಿಡ್‌ ಲಸಿಕೆ ರಫ್ತು ಮಾಡುವುದನ್ನು ನಿಷೇಧಿಸುವ ಯಾವ ಆದೇಶವನ್ನೂ ಹೊರಡಿಸಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಏಪ್ರಿಲ್ ಎರಡನೇ ವಾರದಲ್ಲಿಯೇ ಸ್ಪಷ್ಟನೆ ನೀಡಿದೆ. 'ಲಸಿಕೆ ರಫ್ತು ಮಾಡುವುದನ್ನು ನಿಲ್ಲಿಸಿ ಎಂದು ಯಾವ ಕಂಪನಿಗೂ ಸೂಚನೆ ನೀಡಿಲ್ಲ. ಈಗ ದೇಶದಲ್ಲಿ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ವಿದೇಶಗಳಿಗೆ ಲಸಿಕೆ ಪೂರೈಕೆ ಮತ್ತು ದೇಶಕ್ಕೆ ಲಸಿಕೆ ಪೂರೈಕೆ ಅನುಪಾತವನ್ನು ಬದಲಿಸುವ ಬಗ್ಗೆ ಚಿಂತನೆ ನಡೆದಿದೆ' ಎಂದು ವಿದೇಶಾಂಗ ಸಚಿವಾಲಯವು ಮಾರ್ಚ್‌ 26ರಂದೂ ಸ್ಪಷ್ಟನೆ ನೀಡಿತ್ತು. 'ಭಾರತದ ಸರ್ಕಾರದ 'ಲಸಿಕೆ ಮೈತ್ರಿ' ಕಾರ್ಯಕ್ರಮವನ್ನು ಮುಂದುವರಿಸುತ್ತೇವೆ. ಅದರಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಏಪ್ರಿಲ್ 2ರಂದೂ ಸಚಿವಾಲಯವು ಸ್ಪಷ್ಟನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT