ADVERTISEMENT

ಸಕ್ಕರೆ ಮುಕ್ತ ಸಂಕ್ರಾಂತಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 3:56 IST
Last Updated 15 ಜನವರಿ 2020, 3:56 IST
ಡಾ. ಅಪೇಕ್ಷಾ
ಡಾ. ಅಪೇಕ್ಷಾ   

ಎಳ್ಳು ಬೆಲ್ಲದ ಹಬ್ಬ ಸಂಕ್ರಾಂತಿ. ಈ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಸಂಕ್ರಾಂತಿ ಕಾಳು ಹಾಗೂ ಸಕ್ಕರೆ ಅಚ್ಚುಗಳು ಹೆಚ್ಚು ಮಾರಾಟವಾಗುತ್ತವೆ. ಆದರೆ ಅಂಗಡಿಯಲ್ಲಿ ಸಿಗುವ ವಿಭಿನ್ನ ಆಕೃತಿಯ ಸಕ್ಕರೆ ಅಚ್ಚುಗಳಿಗೆ ಮಾರುಹೋಗದೇ ಮನೆಯಲ್ಲಿಯೇ ತಯಾರಿಸಿದ ಸಂಕ್ರಾಂತಿ ಕಾಳು, ಅಚ್ಚು ಬಳಸಿದರೆ ಉತ್ತಮ ಎನ್ನುತ್ತಾರೆ ನಗರದ ವೈದ್ಯರು.

ಈ ಹಬ್ಬಕ್ಕಾಗಿ ಎಲ್ಲರ ಮನೆಯಲ್ಲಿ ಸಾಂಪ್ರದಾಯಿಕ ಖಾದ್ಯಗಳಾದ ಲಡ್ಡು, ಚಿಕ್ಕಿ, ಪೊಂಗಲ್ ವಿಶೇಷವಾಗಿ ತಯಾರಿಸುತ್ತಾರೆ. ಈ ಹಬ್ಬದಲ್ಲಿ ಎಳ್ಳನ್ನು ಬಳಸುವುದು ಹೆಚ್ಚು. ಕೆಲವರು ಎಳ್ಳಿನಿಂದ ಉಂಡೆ ಮಾಡುತ್ತಾರೆ. ಸಂಕ್ರಾಂತಿ ಕಾಳಿನ ಜೊತೆಗೂ ಬೆರೆಸುತ್ತಾರೆ. ಚಳಿಗಾಲದಲ್ಲಿ ಎಳ್ಳನ್ನು ಹೆಚ್ಚು ತಿಂದರೆ ಚರ್ಮದ ಮೃದುತ್ವ ಹೆಚ್ಚುತ್ತದೆ. ಮೂಳೆಗಳು ಗಟ್ಟಿಯಾಗುತ್ತವೆ ಎಂದು ಸಂಕ್ರಾಂತಿ ಕಾಳಿನ ಮಹತ್ವವನ್ನು ವಿವರಿಸುತ್ತಾರೆ ನಗರದ ಪ್ರಕ್ರಿಯಾ ಆಸ್ಪತ್ರೆಯ ಡಯಟೀಷಿಯನ್ ಹಾಗೂ ನ್ಯೂಟ್ರೀಷನ್ ವೈದ್ಯೆ ಅಪೇಕ್ಷಾ.

ಎಳ್ಳಿನಲ್ಲಿ ಫೈಬರ್ ಅಂಶ ಹೆಚ್ಚಿದೆ. ಕೊಬ್ಬು ಕಡಿಮೆ ಇದೆ. ಸಂಕ್ರಾಂತಿ ಕಾಳು ಜೊತೆಗೆ ಬೆಲ್ಲ ಬೆರೆಸುತ್ತಾರೆ. ಇದರಲ್ಲಿ ಕಬ್ಬಿಣದ ಅಂಶ ಹೆಚ್ಚಿದೆ. ಬೆಲ್ಲ, ಎಳ್ಳು ಹಾಗೂ ಒಣ ಕೊಬ್ಬರಿ ಮಿಶ್ರಣ ದೇಹಕ್ಕೆ ಬೇಕಾಗುವ ಪೌಷ್ಠಿಕಾಂಶವನ್ನು ನೀಡುತ್ತದೆ. ಸಕ್ಕರೆ ಬದಲಾಗಿ ಬೆಲ್ಲ ಹಾಗೂ ಎಳ್ಳು ಬಳಸಿ ಉಂಡೆ ಮಾಡಬಹುದು. ಸಕ್ಕರೆಯ ಲಾಡುಗಿಂತ ಇದು ರುಚಿಯಾಗಿಯೂ ಇರುತ್ತದೆ.

ADVERTISEMENT

ಸಿಹಿತಿಂಡಿ ತಯಾರು ಮಾಡುವಾಗ ಸಕ್ಕರೆ ಬಳಸುವುದು ಕಡಿಮೆ ಮಾಡಿದರೆ ಉತ್ತಮ. ಬೆಲ್ಲವನ್ನು ಬಳಸಿ ಹಣ್ಣು ಹಾಗೂ ತರಕಾರಿಯ ಹಲ್ವಾ ಮಾಡಬಹುದು. ಸಪೋಟಾ ಹಣ್ಣು, ಕ್ಯಾರೆಟ್ ಹಲ್ವಾ ಮಾಡಬಹುದು. ಹಾಲು ಹಾಗೂ ಡ್ರೈ ಫ್ರೂಟ್ಸ್ ಬಳಸಿ ಫ್ರೂಟ್ ಸಲಾಡ್ ಕೂಡ ಮಾಡಿ ತಿನ್ನಬಹುದು.

ಬೆಲ್ಲದ ಪೊಂಗಲ್ ಜೊತೆ ಖಾರ ಪೊಂಗಲ್ ಕೂಡ ಈ ದಿನದ ವಿಶೇಷಗಳಲ್ಲಿ ಒಂದು. ಖಾರ ಪೊಂಗಲ್‍ಗೆ ತರಕಾರಿಯನ್ನು ಹಾಕಿ ಮಾಡುವ ವಿಧಾನ ಕೂಡ ಇದೆ. ಇದರ ಜೊತೆ ಮೊಸರು ಬಜ್ಜಿಯನ್ನೂ ಮಾಡಿಕೊಳ್ಳಬಹುದು. ಚಕ್ಕಲಿ, ನಿಪ್ಪಟ್ಟು, ಪುಳಿಯೋಗರೆಯನ್ನೂ ಮಾಡಬಹುದು.

ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸುವಾಗ ಬೆಲ್ಲ, ಎಳ್ಳು, ತುಪ್ಪವನ್ನು ಬಳಕೆ ಮಾಡಿ. ಆದರೆ ರಾಸಾಯನಿಕ ಬಣ್ಣಗಳನ್ನು ಬಳಸಿ ಅಂಗಡಿಯಲ್ಲಿ ತಯಾರಿಸುವ ಸಕ್ಕರೆ ಅಚ್ಚು ಮುಂತಾದ ಪದಾರ್ಥಗಳಿಂದ ದೂರ ಉಳಿಯುವುದು ಒಳ್ಳೆಯದು ಎನ್ನುತ್ತಾರೆ ಡಾ. ಅಪೇಕ್ಷಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.