ಪುರುಷರೇ, ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಬೇಡ

ಡಾ. ಪಿ. ಸಂದೀಪ್‌ ನಾಯಕ್‌ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಇತ್ತೀಚಿನ ಜೀವನ ಜೈಲಿಯಿಂದಾಗಿ ಹಲವು ರೀತಿಯ ಕ್ಯಾನ್ಸರ್‌ಗಳು ವೈದ್ಯಲೋಕದಲ್ಲಿ ಪತ್ತೆಯಾಗುತ್ತಿವೆ. ಅದರಲ್ಲಿ ಪ್ರಮುಖವಾಗಿ ಪ್ರಾಸ್ಟೇಟ್ ಕ್ಯಾನ್ಸರ್ ಕೂಡ ಒಂದು. ಈ ಕ್ಯಾನ್ಸರ್‌ ಹೆಚ್ಚಾಗಿ ಗಂಡಸರಲ್ಲಿ ಕಾಣಿಸಿಕೊಳ್ಳುತ್ತದೆ. 

ಪ್ರಾಸ್ಟೇಟ್ ಪುರುಷರ ಹೊಟ್ಟೆಯ ಕೆಳಭಾಗದಲ್ಲಿರುವ ಒಂದು ಸಣ್ಣ ಗ್ರಂಥಿಯಾಗಿದ್ದು, ಮೂತ್ರನಾಳದ ಸುತ್ತಲಿನ ಮೂತ್ರಕೋಶದ ಕೆಳಗೆ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಇದನ್ನು ನಿಯಂತ್ರಿಸುತ್ತದೆ. ಈ ಪ್ರಾಸ್ಟೇಟ್‌ ಗ್ರಂಥಿಯು ಪುರುಷರಲ್ಲಿ ವೀರ್ಯ ತಯಾರಿಸಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ದೇಹದಲ್ಲಿ ಜೀವಕೋಶಗಳು ಅಸಹಜವಾಗಿ ಬೆಳೆಯಲು ಪ್ರಾರಂಭಿಸಿದಾಗ ಈ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಹಿಂದೆಲ್ಲಾ ಈ ಕ್ಯಾನ್ಸರ್‌ ಕೇವಲ ವಿದೇಶಿಗಳಲ್ಲಿ ಮಾತ್ರ ಕಂಡು ಬರುತ್ತಿತ್ತು. ಆದರೀಗ, ಈ ಕ್ಯಾನ್ಸರ್‌ ಭಾರತದಲ್ಲಿಯೂ ಹೆಚ್ಚಾಗಿ ಕಾಣಸಿಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಭಾರತದಲ್ಲಿನ ಅಗ್ರ 10 ಕ್ಯಾನ್ಸರ್‌ಗಳ ಪಟ್ಟಿಯಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಕೂಡ ಒಂದಾಗಿದೆ. ಆದರೆ ಈ ಕ್ಯಾನ್ಸರ್‌ ಬಗ್ಗೆ ಪುರುಷರಿಗೆ ಅಷ್ಟಾಗಿ ಅರಿವಿರದ ಕಾರಣ ಇದನ್ನು ನಿರ್ಲಕ್ಷಿಸುತ್ತಾರೆ. ಈ ಕ್ಯಾನ್ಸರ್‌ ಅನ್ನು ನಿರ್ಲಕ್ಷಿಸಿದರೇ ಸಾವು ಸಂಭವಿಸುವ ಸಾಧ್ಯತೆ ಇದೆ.

ಪ್ರಾಸ್ಟೇಟ್‌ ಕ್ಯಾನ್ಸರ್‌ಗೆ ಕಾರಣವೇನು?

ಪ್ರಾಸ್ಟೇಟ್ ಕ್ಯಾನ್ಸರ್ ಸಂಭವಿಸಲು ನಿಖರವಾದ ಕಾರಣ ಈವರೆಗೂ ತಿಳಿದುಬಂದಿಲ್ಲ. ಆದರೆ, ಪ್ರಾಸ್ಟೇಟ್‌ನಲ್ಲಿನ ಜೀವಕೋಶಗಳು ತಮ್ಮ ಡಿಎನ್ಎಯಲ್ಲಿ ಬದಲಾವಣೆಗಳನ್ನು ಅಭಿವೃದ್ಧಿಪಡಿಸಿದಾಗ ಪ್ರಾಸ್ಟೇಟ್ ಕ್ಯಾನ್ಸರ್ ಪ್ರಾರಂಭವಾಗುತ್ತದೆ ಎಂದು ಕೆಲ ಅಧ್ಯಯನಗಳು ತಿಳಿಸಿವೆ. ಉಲ್ಲಿ ಉತ್ಪಾದನೆಯಾಗುವ ಅಸಹಜ ಕೋಶಗಳು ಕ್ಯಾನ್ಸರ್‌ ಗೆಡ್ಡೆಯನ್ನು ಉತ್ಪಾದನೆ ಮಾಡುತ್ತವೆ. ಅದು ಹತ್ತಿರದ ಅಂಗಾಂಶಕ್ಕೂ ಹರಡುವ ಸಂಭವ ಹೆಚ್ಚು. ಅದರಿಂದ ಹೆಚ್ಚಿನ ಕಾಳಜಿ ವಹಿಸಬೇಕು. ಪ್ರಾಸ್ಟೀಟ್‌ ಕ್ಯಾನ್ಸರ್‌ನಲ್ಲಿ ಕೆಲ ವಿಧಾನಗಳಿವೆ. ಸಣ್ಣ ಜೀವಕೋಶದ ಕಾರ್ಸಿನೋಮಗಳು, ನ್ಯೂರೋಎಂಡೋಕ್ರೈನ್ ಗೆಡ್ಡೆಗಳು ಪರಿವರ್ತನೆಗೊಂಡ ಜೀವಕೋಶಗಳ ಕಾರ್ಸಿನೋಮಗಳು, ಸಾರ್ಕೋಮಾಸ್ ಎಂದು ಗುರುತಿಸಲಾಗಿದೆ. ಇದರಲ್ಲಿ ಎಲ್ಲಾ ರೀತಿಯ ಕ್ಯಾನ್ಸರ್‌ಗಳು ಮಾರಕ ಎನ್ನಲಾಗಿದೆ. 

ಈ ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ

ಸಾಮಾನ್ಯವಾಗಿ, ಮೂಳೆ ನೋವು, ಅತಿಯಾದ ಆಯಾಸ ಮತ್ತು ಹಠಾತ್ ತೂಕ ನಷ್ಟದಂತಹ ಲಕ್ಷಣಗಳು ಪ್ರಾಸ್ಟೇಟ್ ಕ್ಯಾನ್ಸರ್‌ನಲ್ಲಿ ಕಂಡುಬರುತ್ತವೆ. ಇದಲ್ಲದೆ, ಈ ರೋಗಲಕ್ಷಣವನ್ನು ಪಾದಗಳಲ್ಲಾಗುವ ಬದಲಾವಣೆಯಿಂದಲೂ ಕಂಡು ಹಿಡಿಯಬಹುದು. ಪಾದಗಳಲ್ಲಿ ಗಡ್ಡೆಗಳಾಗುವುದು ಸಹ ಈ ಕ್ಯಾನ್ಸರ್‌ನ ಲಕ್ಷಣಗಳಾಗಿವೆ. ಇನ್ನು, ಪ್ರಾಸ್ಟೇಟ್ ಕ್ಯಾನ್ಸರ್ ದುಗ್ಧರಸ ಗ್ರಂಥಿಗಳಿಗೆ ಹರಡುವುದರಿಂದ ಊತ ಸಂಭವಿಸುತ್ತದೆ. ಈ ಊತವನ್ನು ಲಿಂಫೋಡೆಮಾ ಎಂದು ಕರೆಯಲಾಗುತ್ತದೆ. ಇದಷ್ಟೇ ಅಲ್ಲದೆ, ಪ್ರಾಸ್ಟೇಟ್ ಕ್ಯಾನ್ಸರ್‌ನಲ್ಲಿ ಸಾಮಾನ್ಯವಾಗಿ ಮೂತ್ರ ಸಂಬಂಧಿತ ಸಮಸ್ಯೆಗಳನ್ನು ನೀವು ಕಾಣಬಹುದು. ರಾತ್ರಿ ವೇಳೆ ಅತಿಯಾಗಿ ಮೂತ್ರ ವಿಸರ್ಜನೆ, ಪದೇ ಪದೇ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜನೆಗೆ ತೊಂದರೆ, ಮೂತ್ರನಾಳದಲ್ಲಿ ಒತ್ತಡದ ಅನುಭವವಾಗುತ್ತಿರುವುದು, ಮೂತ್ರ ವಿಸರ್ಜಿಸುವಾಗ ಆಯಾಸವಾಗುವುದು ಇದರ ಜೊತೆಗೆ ಸ್ಖಲನದಲ್ಲಿ ತೊಂದರೆ, ಮೂತ್ರದಲ್ಲಿ ಅಥವಾ ವೀರ್ಯದಲ್ಲಿ ರಕ್ತ ಕಂಡು ಬಂದರೂ ಸಹ ಇದು ಈ ಕ್ಯಾನ್ಸರ್‌ನ ರೋಗಲಕ್ಷಣವಾಗಿರಲಿದೆ.

ಯಾರಿಗೆ ಹೆಚ್ಚು ಅಪಾಯ?

ಎಲ್ಲಾ ವಯಸ್ಸಿನ ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯಕ್ಕೆ ಸಿಲುಕಬಹುದು, ಆದರೆ, 50 ವರ್ಷ ಮೇಲ್ಪಟ್ಟವರಲ್ಲಿ ಈ ಅಪಾಯ ಹೆಚ್ಚು ಎನ್ನಲಾಗಿದೆ. ಮನುಷ್ಯ ವಯಸ್ಸಾದಷ್ಟೂ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದಲ್ಲದೆ, ಅನಾರೋಗ್ಯಕರ ತೂಕ, ಅನಾರೋಗ್ಯಕರ ಜೀವನಶೈಲಿ ಅಭ್ಯಾಸಗಳಾದ ಮದ್ಯಪಾನ ಮತ್ತು ಧೂಮಪಾನದ ಜೊತೆಗೆ ಕಳಪೆ ಆಹಾರದ ಆಯ್ಕೆಗಳು ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಬಹುದು.

ಇನ್ನು, ಆಫ್ರಿಕನ್ ಮತ್ತು ಅಮೇರಿಕನ್ ಪುರುಷರಲ್ಲಿ ಈ ಕ್ಯಾನ್ಸರ್‌ ಹೆಚ್ಚಾಗಿ ಕಾಣಿಸುವುದರಿಂದ, ಇವರ ಕುಟುಂಬಸ್ಥರಿಗೂ ಈ ಕ್ಯಾನ್ಸರ್‌ ಹರಡುವ ಸಾಧ್ಯತೆ ಇದೆ..

ಇದಕ್ಕೆ ಪರಿಹಾರವೇನು? 

ಈ ಕ್ಯಾನ್ಸರ್‌ನ ರೋಗ ಲಕ್ಷಣಗಳು ಕಂಡು ಬಂದರೆ, ನಿರ್ಲಕ್ಷಿಸದೇ ಮೊದಲು ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಇದಕ್ಕೆ ವೈದ್ಯಲೋಕದಲ್ಲಿ ಚಿಕಿತ್ಸೆ ಲಭ್ಯವಿರುವುದರಿಂದ ಸಾವಿನ ದವಡೆಯಿಂದ ಪಾರಾಗಬಹುದು.  ಪ್ರಾಸ್ಟೇಟ್ ಕ್ಯಾನ್ಸರ್ ಕೇವಲ ದುಗ್ಧರಸ ಗ್ರಂಥಿಗಳಿಗೆ ಸೀಮಿತವಾಗಿಲ್ಲ. ಇದು ಮೂಳೆಗಳು, ಕರುಳುಗಳು, ಯಕೃತ್ತು ಮತ್ತು ಶ್ವಾಸಕೋಶಗಳಿಗೂ ಹರಡಬಹುದು. ಇದು ದೇಹದ ಇತರ ಭಾಗಗಳಿಗೆ ಹರಡುವ ಮೊದಲು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಕಾಲಿನ ಊತವೂ ಈ ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಒಂದಾಗಿದ್ದರೂ, ಕಾಲು ಊತ ಬಂದ ಎಲ್ಲರಿಗೂ ಈ ಕ್ಯಾನ್ಸರ್‌ ಇದೆ ಎಂಬರ್ಥವಲ್ಲ. ಈ ಬಗ್ಗೆ ವೈದ್ಯರಿಂದಲೇ ಉತ್ತರ ಪಡೆದುಕೊಳ್ಳಿ. ಇದರ ಜೊತೆಗೆ, ಹಣ್ಣು, ತರಕಾರಿ, ಸೊಪ್ಪು, ಹಾಗೂ ಪೋಷಕಾಂಶಯುಕ್ತ ಆಹಾರ ಸೇವನೆಯಿಂದಲೂ ಈ ಕ್ಯಾನ್ಸರ್‌ ಬರುವಿಕೆಯನ್ನು ತಡೆಗಟ್ಟಬಹುದು.

-ಲೇಖಕರು: ರೋಬೋಟಿಕ್‌ ಮತ್ತು ಲ್ಯಾಪರೊಸ್ಕೋಪಿಕ್‌ ಆಂಕೋಲಾಜಿ ನಿರ್ದೇಶಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ..