ADVERTISEMENT

ವಂಚಕರ ಸುರಕ್ಷಿತ ನೆಲೆ ತಪ್ಪಿಸಿ: ಸಿವಿಸಿ, ಸಿಬಿಐಗೆ ಪ್ರಧಾನಿ ಮೋದಿ ನಿರ್ದೇಶನ

ಪಿಟಿಐ
Published 20 ಅಕ್ಟೋಬರ್ 2021, 20:16 IST
Last Updated 20 ಅಕ್ಟೋಬರ್ 2021, 20:16 IST
ಧಾನಿ ನರೇಂದ್ರ ಮೋದಿ (ಪಿಟಿಐ ಸಂಗ್ರಹ ಚಿತ್ರ)
ಧಾನಿ ನರೇಂದ್ರ ಮೋದಿ (ಪಿಟಿಐ ಸಂಗ್ರಹ ಚಿತ್ರ)   

ಕೇವಡಿಯಾ (ಗುಜರಾತ್):ದೇಶಕ್ಕೆ ದ್ರೋಹ ಎಸಗಿ ಪರಾರಿಯಾಗುವವರಿಗೆ ಜಗತ್ತಿನ ಎಲ್ಲಿಯೂ ನೆಲೆ ಸಿಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಜಾಗೃತ ಆಯೋಗ (ಸಿವಿಸಿ) ಮತ್ತು ಸಿಬಿಐ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ನಿರ್ದೇಶನ ನೀಡಿದರು.

ಗುಜರಾತ್‌ನ ಕೆವಡಿಯಾದಲ್ಲಿ ಸಿವಿಸಿ ಮತ್ತು ಸಿಬಿಐನ ಜಂಟಿ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು. ಎಷ್ಟೇ ಶಕ್ತಿಯುತ ವ್ಯಕ್ತಿಯಾಗಿದ್ದರೂ, ರಾಷ್ಟ್ರದ ಅಥವಾ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿದೇಶಗಳಲ್ಲಿ ಆಶ್ರಯ ಪಡೆದಿರುವ ಉದ್ಯಮಿಗಳಾದ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಯಂತಹ ವ್ಯಕ್ತಿಗಳನ್ನು ಮರಳಿ ಕರೆತರಲು ಕೇಂದ್ರ ಸರ್ಕಾರ ಕಾನೂನು ಪ್ರಕ್ರಿಯೆ ನಡೆಸಿರುವ ಸಮಯದಲ್ಲಿ ಪ್ರಧಾನಿ ಈ ನಿರ್ದೇಶನ ನೀಡಿದ್ದಾರೆ.

ADVERTISEMENT

‘ಕಳೆದ ಆರೇಳು ವರ್ಷಗಳಲ್ಲಿ ನಮ್ಮ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳಿಂದಾಗಿ, ಭ್ರಷ್ಟಾಚಾರವನ್ನು ತಡೆಯಬಹುದು ಎಂಬ ನಂಬಿಕೆ ಜನರ ಮನಸ್ಸಿನಲ್ಲಿ ಮೂಡಿದೆ. ಮಧ್ಯವರ್ತಿಗಳ ಸಹಾಯವಿಲ್ಲದೆ ಸರ್ಕಾರದ ಯೋಜನೆಗಳ ಲಾಭವನ್ನು ಜನರು ಪಡೆಯುತ್ತಿದ್ದಾರೆ’ ಎಂದು ಅವರು ಹೇಳಿದರು.

ಭ್ರಷ್ಟಾಚಾರ ನಿಯಂತ್ರಿಸುವ ಇಚ್ಛಾಶಕ್ತಿ ಹಿಂದಿನ ಸರ್ಕಾರಕ್ಕೆ ಇರಲಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾಶಕ್ತಿಯ ಕೊರತೆಯಿತ್ತು. ಇಂದು ರಾಜಕೀಯ ಇಚ್ಛಾಶಕ್ತಿಯಿಂದ ಆಡಳಿತಾತ್ಮಕ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.