ADVERTISEMENT

ಕಾಶ್ಮೀರ ಯುವತಿಗೆ ದೇಶದ ಅತಿ ಕಿರಿಯ ಮಹಿಳಾ ಪೈಲಟ್‌ ಕಿರೀಟ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 12:19 IST
Last Updated 5 ಫೆಬ್ರುವರಿ 2021, 12:19 IST
ಆಯೇಷಾ ಅಜೀಜ್‌ (ಟ್ವಿಟರ್‌ ಚಿತ್ರಗಳು)
ಆಯೇಷಾ ಅಜೀಜ್‌ (ಟ್ವಿಟರ್‌ ಚಿತ್ರಗಳು)   

ಶ್ರೀನಗರ: 25ರ ಹರೆಯದ ಕಾಶ್ಮೀರಿ ಯುವತಿ ಆಯೇಷಾ ಅಜೀಜ್‌ ದೇಶದ ಅತ್ಯಂತ ಕಿರಿಯ ಮಹಿಳಾ ಪೈಲಟ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಆ ಮೂಲಕ ಹಿಂಸಾಚಾರ ಪೀಡಿತ ಕಣಿವೆ ಪ್ರದೇಶದ ಹಲವು ಮಹಿಳೆಯರಿಗೆ ಅವರು ಸ್ಫೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿದ್ದಾರೆ.

ಮುಂಬೈನಲ್ಲಿ ಬೆಳೆದ ಈ ಯುವತಿ ಬಾಲ್ಯದಿಂದಲೂ ಪೈಲಟ್‌ ಆಗಬೇಕೆಂದು ಕಟ್ಟಿಕೊಂಡಿದ್ದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ‘ನಾನು ದೇಶದ ಅತ್ಯಂತ ಕಿರಿಯ ಪೈಲೆಟ್‌ ಎನ್ನುವುದು ಮುಖ್ಯವಲ್ಲ. ಆದರೆ, ನಾನು ನನ್ನ ಕನಸು ಮತ್ತು ಗುರಿಯನ್ನು ಸಾಧಿಸಿರುವುದು ನನಗೆ ತುಂಬಾ ಖುಷಿ ನೀಡಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಆಯೇಷಾ ಅವರ ತಾಯಿ ಕಾಶ್ಮೀರಿಯಾಗಿದ್ದು, ಇವರ ತಂದೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ‘ನಾನು ಬಾಲ್ಯದಿಂದಲೂ ತಾಯಿಯೊಂದಿಗೆ ಕಾಶ್ಮೀರ–ಮುಂಬೈ ನಡುವೆ ಆಗಾಗ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ಪ್ರತಿ ಬಾರಿ ಪ್ರಯಾಣಿಸುವಾಗಲು ಪೈಲಟ್ ಆಗಬೇಕೆಂಬ ಕನಸು ಗರಿಗೆದರುತ್ತಿತ್ತು. ಇದರಿಂದ ಸಹಜವಾಗಿಯೇ ನನ್ನಲ್ಲಿ ವಿಮಾನಯಾನದ ಆಸಕ್ತಿಯೂ ಬೆಳೆಯಿತು’ ಎಂದು ಆಯೇಷಾ ತಿಳಿಸಿದ್ದಾರೆ.

‘ಸಮಾಜ ನಮ್ಮ ಬಗ್ಗೆ ಏನು ಮಾತನಾಡುತ್ತದೆಯೋ ಎಂದು ಚಿಂತಿಸಬಾರದು. ನಮ್ಮ ವಿರುದ್ಧವಾಗಿ ಮಾತನಾಡುವ ಜನರು ಯಾವಾಗಲೂ ಇದ್ದೇ ಇರುತ್ತಾರೆ. ಆದರೆ, ನಾವು ಸದಾ ನಮ್ಮ ಗುರಿಯತ್ತ ಗಮನ ಕೇಂದ್ರೀಕರಿಸಬೇಕು’ ಎಂದು ಆಯೇಷಾ ಕಾಶ್ಮೀರದ ಯುವಜನತೆಗೆ ಸಲಹೆ ನೀಡಿದ್ದಾರೆ.

ಮಾನವೀಯ ಸೇವೆಯಲ್ಲಿ ಆಸಕ್ತಿ ಹೊಂದಿರುವ ಆಯೇಷಾ ‘ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಹಸ್ತ ಚಾಚುವ ಗುರಿ ಇದೆ. ಇದಕ್ಕಾಗಿ ಯುನಿಸೆಫ್‌ ಜತೆಗೆ ಕೈಜೋಡಿಸಲು ನಿರ್ಧರಿಸಿರುವೆ’ ಎಂದು ತಿಳಿಸಿದ್ದಾರೆ.

ಆಯೇಷಾ ಬಾಂಬೆ ಫ್ಲೈಯಿಂಗ್‌ ಕ್ಲಬ್‌ನ (ಬಿಎಫ್‌ಸಿ) ವಾಯುಯಾನ ಪದವೀಧರೆ. 2017ರಲ್ಲಿ ವಾಣಿಜ್ಯ ಪೈಲಟ್‌ ಪರವಾನಗಿಯನ್ನೂ ಪಡೆದಿದ್ದಾರೆ. 2011ರಲ್ಲೇ ಆಯೇಷಾ ತನ್ನ 15 ವಯಸ್ಸಿನಲ್ಲಿರುವಾಗ ವಿದ್ಯಾರ್ಥಿ ಪೈಲಟ್‌ ಪರವಾನಗಿ ಹೊಂದಿದ್ದರು. ಅದೇ ವರ್ಷ ರಷ್ಯಾದ ಸೊಕೊಲ್‌ ವಾಯು ನೆಲೆಯಲ್ಲಿ ಮಿಗ್‌ 29 ಜೆಟ್‌ ಚಾಲನೆಯ ತರಬೇತಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.