ADVERTISEMENT

ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ಜಕ್ಕಪ್ಪನವರ ಕರೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 9:26 IST
Last Updated 16 ಏಪ್ರಿಲ್ 2021, 9:26 IST
   

ಹುಬ್ಬಳ್ಳಿ: ‘ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ. ಎಸ್‌ಸಿ ಮತ್ತು ಎಸ್‌ಟಿ ನೌಕರರೇ ಇದರ ಮೊದಲ ಬಲಿಪಶುವಾಗಲಿದ್ದಾರೆ. ಹಾಗಾಗಿ, ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಸಂಸ್ಥೆಗಳನ್ನು ಉಳಿಸಬೇಕು’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ಅಧ್ಯಕ್ಷ ಎಫ್.ಎಚ್. ಜಕ್ಕಪ್ಪನವರ ಕರೆ ನೀಡಿದರು.

‘ಸರ್ಕಾರ ಮುಷ್ಕರನಿರತರನ್ನು ನಡೆಸಿಕೊಳ್ಳುತ್ತಿರುವ ರೀತಿ ಹಾಗೂ ಬಿಎಂಟಿಸಿಯನ್ನು ಖಾಸಗೀಕರಣಗೊಳಿಸಬೇಕೆಂಬ ಸಂಸದ ತೇಜಸ್ವಿ ಸೂರ್ಯ ಅವರ ಇತ್ತೀಚಿನ ಹೇಳಿಕೆ ಇದಕ್ಕೆ ಪುಷ್ಟಿ ನೀಡುತ್ತದೆ. ನಿಗಮಗಳಲ್ಲಿರುವ ಮೀಸಲಾತಿಯನ್ನು ಇಲ್ಲವಾಗಿಸುವ ಉದ್ದೇಶ ಇದರ ಹಿಂದೆ ಅಡಗಿದೆ. ಅದಕ್ಕಾಗಿ ಸರ್ಕಾರ ಮುಷ್ಕರವನ್ನು ಬಳಸಿಕೊಳ್ಳುತ್ತಿದೆ. ಈ ಬೆಳವಣಿಗೆಗಳ ಹಿಂದೆ ಆರೆಸ್ಸೆಸ್ ಇದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ರಾಜ್ಯದಲ್ಲಿ 1.11 ಲಕ್ಷ ಸಾರಿಗೆ ನೌಕರರಿದ್ದಾರೆ. ಈ ಪೈಕಿ ಚಾಲಕ, ನಿರ್ವಾಹಕರು ಹಾಗೂ ಕಾರ್ಯಾಗಾರಗಳಲ್ಲಿರುವವರ ಸಂಖ್ಯೆ 98,159. ಇದರಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳು ಸುಮಾರು 40 ಸಾವಿರ ಇದ್ದಾರೆ. ಸರ್ಕಾರದ ಶಿಸ್ತುಕ್ರಮಕ್ಕೆ ಗುರಿಯಾಗಿರುವ ಮುಷ್ಕರನಿರತರಲ್ಲಿ ಶೇ 40ರಷ್ಟು ಮಂದಿ ಈ ಸಮುದಾಯದವರೇ ಇದ್ದಾರೆ. ಮುಷ್ಕರ ಬೆಂಬಲಿಸಿದರೆ ಈ ಸಮುದಾಯಗಳ ಉದ್ಯೋಗಕ್ಕೆ ಕುತ್ತು ಬರುತ್ತದೆ. ಹಾಗಾಗಿ, ಮುಷ್ಕರದಿಂದ ಎಲ್ಲರೂ ಹಿಂದೆ ಸರಿಯಬೇಕು’ ಎಂದು ಹೇಳಿದರು.

ADVERTISEMENT

‘ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಕರೆ ಕೊಟ್ಟಿರುವ ಮುಷ್ಕರದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ಉದ್ಯೋಗಿಗಳಾಗಿ ಪರಿಗಣಿಸಬೇಕೆಂಬ ಮುಖ್ಯ ಬೇಡಿಕೆ ಹಿನ್ನೆಲೆಗೆ ಸರಿದಿದೆ. ಆರನೇ ವೇತನ ಆಯೋಗದ ವರದಿ ಜಾರಿಯ ಬೇಡಿಕೆಗಷ್ಟೇ ಮುಷ್ಕರ ಸೀಮಿತವಾಗಿದ್ದು, ಉಳಿದ ಬೇಡಿಕೆಗಳು ಗೌಣವಾಗಿವೆ. ಚಂದ್ರಶೇಖರ್ ಅವರು ನೌಕರರನ್ನು ದಿಕ್ಕ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಈ ಹೋರಾಟ ಸರ್ಕಾರದ ಖಾಸಗೀಕರಣ ಹುನ್ನಾರಕ್ಕೆ ಅನುಕೂಲ ಮಾಡಿಕೊಡುವಂತಿದೆ’ ಎಂದು ಆರೋಪಿಸಿದರು.

‘ಬೆಂಗಳೂರಿನಲ್ಲಿ ಬಿಎಂಟಿಸಿ ಆಸ್ತಿ ಮೌಲ್ಯ ಅಂದಾಜು ₹2 ಲಕ್ಷ ಕೋಟಿ ಇದೆ. ಇತರ ನಿಗಮಗಳ ಆಸ್ತಿ ಮೌಲ್ಯವೂ ಅಧಿಕವಿದೆ. ಇವೆಲ್ಲವನ್ನು ಅಂಬಾನಿ ಅಥವಾ ಅದಾನಿ ತೆಕ್ಕೆಗೆ ಹಾಕುವ ಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಇದಕ್ಕೆ ತಡೆಯೊಡ್ಡಲು ಇರುವ ಏಕೈಕ ದಾರಿ ಮುಷ್ಕರ ಕೈಬಿಡುವುದು. ಸದ್ಯ ಸಾರಿಗೆ ಸಂಸ್ಥೆಗಳನ್ನು ಉಳಿಸಬೇಕಿದ್ದು, ನೌಕರರ ಬೇಡಿಕೆಗಳನ್ನು ಮುಂದೆ ಈಡೇರಿಸಿಕೊಳ್ಳಬಹುದು’ ಎಂದರು.

ಸಂಘದ ಮುಖಂಡರಾದ ಜಿ.ಸಿ‌. ಕಮಲದಿನ್ನೆ, ಎ.ಪಿ. ಮಾನೆ ಹಾಗೂ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಮೋಹನ ಹಿರೇಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.