ADVERTISEMENT

ವಿಧಾನ ಪರಿಷತ್‌ ಸದಸ್ಯರಿಗೆ ಕಳಪೆ ಮಾಸ್ಕ್‌: ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 16:55 IST
Last Updated 17 ಸೆಪ್ಟೆಂಬರ್ 2021, 16:55 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ    

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯರಿಗೆ ವಿತರಿಸಿರುವ ಮಾಸ್ಕ್‌ಗಳು ಕಳಪೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಸಭಾಪತಿ ಬಸವರಾಜ ಹೊರಟ್ಟಿ ಶುಕ್ರವಾರ ಆದೇಶ ಹೊರಡಿಸಿದರು.

‘ಪರಿಷತ್‌ ಸದಸ್ಯರಿಗೆ ವಿತರಿಸಿರುವ ಮಾಸ್ಕ್‌ಗಳು ಕಳಪೆಯಾಗಿವೆ. ಅವಧಿ ಮುಗಿದ ಮಾಸ್ಕ್‌ಗಳ ಮೇಲೆ ಸ್ಟಿಕ್ಕರ್‌ ಅಂಟಿಸಿ ನಮಗೆ ನೀಡಲಾಗಿದೆ’ ಎಂದು ಕಾಂಗ್ರೆಸ್‌ ಸದಸ್ಯ ಪಿ.ಆರ್‌. ರಮೇಶ್‌ ಗುರುವಾರ ಸದನದಲ್ಲೇ ಆರೋಪಿಸಿದ್ದರು. ಈ ಕುರಿತು ತನಿಖೆ ನಡೆಸುವಂತೆ ಪರಿಷತ್‌ ಸಚಿವಾಲಯದ ಅಧಿಕಾರಿಗಳಿಗೆ ಸಭಾಪತಿ ಸೂಚಿಸಿದ್ದರು.

ಶುಕ್ರವಾರ ಸದನದಲ್ಲಿ ಈ ಕುರಿತು ತೀರ್ಮಾನ ಪ್ರಕಟಿಸಿದ ಸಭಾಪತಿ, ‘ಒಂದು ವರ್ಷದ ಅವಧಿ ಮುಗಿದಿರುವ ಮಾಸ್ಕ್‌ಗಳ ಮೇಲೆ ಹೊಸ ಸ್ಟಿಕ್ಕರ್‌ ಅಂಟಿಸಿರುವುದು ಕಂಡುಬಂದಿದೆ. ಮಾಸ್ಕ್‌ಗಳ ಗುಣಮಟ್ಟ ಕೂಡ ಕಳಪೆಯಾಗಿದೆ. ಆರೋಗ್ಯ ಇಲಾಖೆ ಖರೀದಿಸಿ, ಪೂರೈಕೆ ಮಾಡಿದೆ ಎಂಬ ಮಾಹಿತಿ ಲಭಿಸಿದೆ’ ಎಂದರು.

ADVERTISEMENT

ಕಳಪೆ ಮಾಸ್ಕ್‌ಗಳನ್ನು ಖರೀದಿಸಿ, ಪೂರೈಸಿರುವ ಕುರಿತು ತನಿಖೆ ನಡೆಸಬೇಕು. ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.