ADVERTISEMENT

ವರ್ಮೊಂಟ್‌ನಲ್ಲಿ ನಿಸರ್ಗದ ಹೋಳಿಯಾಟ

ಲಕ್ಷ್ಮಿಕಾಂತ ಇಟ್ನಾಳ
Published 30 ಅಕ್ಟೋಬರ್ 2019, 19:30 IST
Last Updated 30 ಅಕ್ಟೋಬರ್ 2019, 19:30 IST
ಚಿತ್ರಗಳು: ಲೇಖಕರವು
ಚಿತ್ರಗಳು: ಲೇಖಕರವು   

ಪ್ರಕೃತಿಯೇ ಹೋಳಿಯಾಡುವುದನ್ನು ಎಲ್ಲಾದರೂ ನೋಡಿದ್ದೀರಾ? ಇಲ್ಲದಿದ್ದರೆ, ಶರತ್ಕಾಲದಲ್ಲಿ ಒಮ್ಮೆ ಅಮೆರಿಕದ ಪೂರ್ವೋತ್ತರ ರಾಜ್ಯಗಳಾದ ವರ್ಮೊಂಟ್‌, ನ್ಯೂ ಹ್ಯಾಂಪ್‌ಶೈರ್‌ಗಳಿಗೆ ಒಮ್ಮೆ ಭೇಟಿ ನೀಡಿ. ಅಲ್ಲಿ ನಿಸರ್ಗವೇ ರಂಗು ರಂಗಿನ ಬಣ್ಣಗಳೊಂದಿಗೆ ಹೋಳಿಯಾಡುವಂತಹ ಸೊಬಗನ್ನು ಕಣ್ಣಾರೆ ಕಾಣಬಹುದು…!

ಇಂಥ ನಿಸರ್ಗದ ಬಣ್ಣದಾಟ ನೋಡಲೆಂದೇ, ಅಮೆರಿಕದ ವರ್ಮೊಂಟ್‌ ರಾಜ್ಯಕ್ಕೆ ಹೊರಟೆವು. ಅದು ಅತಿ ಸಣ್ಣ ರಾಜ್ಯ. ಬಲು ಸುಂದರ ತಂಪಿನ, ಶೀತ ನಾಡು. ಉತ್ತರದಲ್ಲಿ ಕೆನಡಾದ ಕ್ಯುಬೆಕ್‌ನೊಂದಿಗೆ ಗಡಿ ಹೊಂದಿದೆ. ಪೂರ್ವಕ್ಕೆ ನ್ಯೂ ಹ್ಯಾಂಪ್‌ಶೈರ್‌, ದಕ್ಷಿಣಕ್ಕೆ ಮೆಸೆಚುಸೆಟ್ಸ್, ಪಶ್ಚಿಮಕ್ಕೆ ನ್ಯೂಯಾರ್ಕ್ ರಾಜ್ಯಗಳಿಂದ ಸುತ್ತುವರೆದಿದೆ. ಮೋಂಟಪೆಲಿಯರ್ ಇದರ ರಾಜಧಾನಿ.

ವರ್ಮೊಂಟ್‌ನ ಅತಿ ಹೆಚ್ಚು ಅಂದರೆ ಸುಮಾರು ನಲವತ್ತೆರಡು ಸಾವಿರ ಜನಸಂಖ್ಯೆಯನ್ನು ಹೊಂದಿದ ನಗರ ಬರ್ಲಿಂಗ್ಟನ್. ಇದೇ ಬರ್ಲಿಂಗ್ಟನ್‌ ಸಮೀಪವಿರುವ ‘ಸ್ಟೋವ’ ನಾವು ತಲುಪಬೇಕಾಗಿದ್ದ ಗಮ್ಯ. ಆ ಪ್ರಯಾಣದ ಭಾಗವಾಗಿ ಹೈಡ್‌ಪಾರ್ಕಿನಲ್ಲಿ ಎಂಟು ಜನಕ್ಕೆ ಎರಡು ದಿನಗಳಿಗೆ ನಾಲ್ಕು ಬೆಡ್‌ರೂಮ್‌ನ ಮನೆಯನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದೆ. ಈ ದರಗಳು ದಿನಕ್ಕೆ ಸುಮಾರು ನೂರೈವತ್ತರಿಂದ ಇನ್ನೂರು ಡಾಲರ್‌ಗಳಷ್ಟು ಇರುತ್ತವೆ. ಕನೆಕ್ಟಿಕಟ್‌ ನಗರದ ಹಾರ್ಟ್‌ಫೋರ್ಡ್‌ನಿಂದ 220 ಮೈಲುಗಳು ಅಂದರೆ ಮೂರೂವರೆ ಗಂಟೆಗಳ ಆಹ್ಲಾದಕರ ಪಯಣ.

ADVERTISEMENT

ವೆರ್ಮೊಂಟ್‌ನಲ್ಲಿ ‘ಫಾಲ್’ ಅಂದರೆ ಶರತ್ಕಾಲ. ಇದು ಸೆಪ್ಟೆಂಬರ್ ಮಧ್ಯದಿಂದ ಪ್ರಾರಂಭವಾಗಿ ಅಕ್ಟೋಬರ್ ಮೊದಲನೇ ವಾರದವರೆಗೆ ಇರುತ್ತದೆ. ಮಳೆ ಬೀಳದ ಸಮಯವದು. ಹೀಗಾಗಿ ಕಾಡುಗಳು ಇನ್ನಷ್ಟು ಬಣ್ಣದ ಛತ್ರಿಯನ್ನು ಹರಡಿಕೊಂಡಿರುತ್ತವೆ. ಈ ಬಣ್ಣ ಮತ್ತು ಪಚ್ಚೆ ಹಸಿರು ಬೆಟ್ಟ ಕಣಿವೆಗಳಲ್ಲಿ ತಿರುಗುತ್ತಿದ್ದರೆ ಅಣ್ಣಾವ್ರ `ನ್ಯಾಯವೇ ದೇವರು’ ಸಿನಿಮಾದ, ‘ಹಸೆಮಣೆಯು ನಮಗೆ ಇಂದು ನಾವು ನಿಂತ ತಾಣವು, ತೂಗಾಡುವ ಹಸಿರೆಲೆಯೇ ಶುಭಕೋರುವ ತೋರಣವು...’ ಎಂಬ ಹಾಡಿನ ಸಾಲು ನೆನಪಾಗುತ್ತದೆ.

ಶರತ್ಕಾಲದ ಈ ಶೀತ ಹವಾಮಾನದಲ್ಲಿ ಗಿಡ ಮರಗಳ ಎಲೆಗಳು ಬಣ್ಣ ಬದಲಿಸುತ್ತ ಕೊನೆಗೊಮ್ಮೆ ಉದುರಿಸಿ ಬಿಡುವ ನಿಸರ್ಗ ಪ್ರಕ್ರಿಯೆಯೇ ‘ಫಾಲ್’. ಮೊದಲು ತಿಳಿಹಳದಿ ಬಣ್ಣಕ್ಕೆ ತಿರುಗುವ ಮರಗಳ ಎಲೆಗಳು ನಂತರ ನಿಧಾನವಾಗಿ ಒಂದು ವಾರದಲ್ಲಿ ಕಡುಹಳದಿಯಾಗಿ ನಂತರ ಕಿತ್ತಳೆ ಬಣ್ಣ, ನಂತರ ತಿಳಿಗುಲಾಬಿ, ನಸುಗೆಂಪಿನಿಂದ ಕಡುಕೆಂಪು, ನಂತರ ಕಂದು ಬಣ್ಣಕ್ಕೆ ತಿರುಗುತ್ತಾ ಎಲೆಗಳನ್ನು ಉದುರಿಸುತ್ತವೆ. ಇಡೀ ಬಣ್ಣ ಬದಲಿಸುವ ಪ್ರಕ್ರಿಯೆಯು ಕಣ್ಣಿಗೆ ಹಬ್ಬದೂಟ. ನಂತರ ಶೀತದೊಂದಿಗೆ ನಲುಗಿ ಕೆಲ ದಿನಗಳ ನಂತರ ಹಿಮವರ್ಷದ ವೃಷ್ಟಿ ಪ್ರಾರಂಭವಾಗುತ್ತದೆ.

ಸೂರ್ಯ ರಶ್ಮಿಗಳೂ ಬೆಳಿಗ್ಗೆ ಮರ-ಗಿಡಗಳಿಗೆ ಹೊಂಬಣ್ಣ ಬಣ್ಣ ಬಳಿದರೆ ಸಂಜೆಗಂತೂ ಬೇಂದ್ರೆಯವರ ಹಾಡಿನ ಸಾಲಿನಂತೆ ‘ಮುಗಿಲ ಮಾರಿಗೆ ರಾಗ ರತಿಯ ನಂಜು ಏರಿತ್ತ, ಆಗ ಸಂಜಿಯಾಗಿತ್ತಾ.. ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ...ಆಗ ಸಂಜಿಯಾಗಿತ್ತ’ ಎಂಬ ಗೀತೆ ನೆನಪಿಸುವಂತಹ ವಾತಾವರಣ ನಿರ್ಮಾಣವಾಗುತ್ತದೆ. ಕಾಮನಬಿಲ್ಲು ಭುವಿಗಿಳಿದು ಇಡೀ ಕಾಡನ್ನೇ ತಬ್ಬಿಕೊಂಡಂತಿರುತ್ತದೆ. ಕಾಮನಬಿಲ್ಲಿನಲ್ಲಿ ಕೇವಲ ಏಳು ಬಣ್ಣಗಳು, ನಿಸರ್ಗದ ಕುಂಚದಲ್ಲಿ ಅಂಕೆಗೆ ಸಿಗದಷ್ಟು. ಪ್ರೇಮಿಗಳಿಗಂತೂ ಹೇಳಿ ಮಾಡಿಸಿದ ತಾಣವಿದು.

ಇವೆಲ್ಲ ನೋಡಿ ಬರುವಾಗ ದಾರಿಯಲ್ಲಿ ಕಂಡ ಸಣ್ಣ ಜಲಪಾತವೊಂದರ ಎದುರು ಬೀಸುವ ಶೀತಗಾಳಿಯಲ್ಲೇ ನಿಂತು ಫೋಟೊ ತೆಗೆಸಿಕೊಂಡೆವು. ಮುಂದೆ ಸಾಗಿದ ದಾರಿಯ ಇಕ್ಕೆಲಗಳಲ್ಲಿ ಆಗಲೇ ಮರಗಳು ರಸ್ತೆಗೆ ಬಣ್ಣದ ಕೆನೊಪಿ ಹರಡಿದ್ದವು. ದಾರಿಯ ಇಕ್ಕೆಲಗಳಲ್ಲಿ ಬೆಟ್ಟ ಸಾಲುಗಳಲ್ಲಿ ಮೇಪಲ್ ಮರಗಳು ಕಡು ಕೆಂಪು ಬಣ್ಣ ಹೊದ್ದುಕೊಂಡಿದ್ದರೆ, ಪೈನ್ ಮತ್ತಿತರ ಕೋನಿಫೆರಸ್ ಮರಗಳು ಮಾತ್ರ ಇನ್ನೂ ಹಸಿರುಟ್ಟು ನಿಂತಿದ್ದವು. ರಸ್ತೆ ಅಕ್ಕಪಕ್ಕದಲ್ಲಿದ್ದ ಕೆರೆಗಳಲ್ಲಿ ಬೆಟ್ಟದ ನೆರಳು ನಯನ ಮನೋಹರ. ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆಯೂ ಇತ್ತು. ಅವೆಲ್ಲವನ್ನೂ ಸವಿಯುವುದೇ ನಮ್ಮ ಭಾಗ್ಯ.

ಸುಮಾರು ಮೂರು ಗಂಟೆಗಳ ಪಯಣದ ನಂತರ ‘ಸ್ಟೋವ’ ತಲುಪಿ ಸಂಜೆವರೆಗೂ ತಿರುಗಾಡಿ ಅಲ್ಲಿಂದ ನಮ್ಮ ಡೆಸ್ಟಿನೇಶನ್ ತಲುಪಿ ರಾತ್ರಿ ತಂಗಿದೆವು. ಆ ಮನೆಯಲ್ಲಿ ಎಲ್ಲ ಅನುಕೂಲತೆಗಳು ಇರುತ್ತವೆ. ಅಡುಗೆಮನೆಯಲ್ಲಿ ನಾವು ಒಯ್ದ ಆಹಾರ ಸಾಮಗ್ರಿಯಿಂದ ಭೋಜನ ತಯಾರಿಸಿಕೊಂಡು ಹಸಿವು ಪೂರೈಸಿಕೊಂಡೆವು. ಕೆಳಗಿನ ಸೆಲ್ಲರ್‌ನಲ್ಲಿ ಸ್ನೂಕರ್ ಆಟವಾಡಿದೆವು.

ಮರುದಿನ ಬೆಳಗಿನಲ್ಲಿ ಹುಲ್ಲಿನ ಅಂಗಳದ ಮೇಲೆ ವಿಹರಿಸುತ್ತಿದ್ದೆ. ನಿಬ್ಬೆರಗಿನಲ್ಲಿ ಸುಂದರ ಪರಿಸರವನ್ನು ಸವಿಯುತ್ತಿದ್ದೆ. ಹೀಗೆ ಲಹರಿಯಲ್ಲಿದ್ದವನಿಗೆ, ಶೂಗಳ ಮೇಲೆಲ್ಲ ಇಬ್ಬನಿ ಸುರಿಯುತ್ತಿತ್ತು. ಶ್ವೇತ ಹಿಮ ತುಣುಕುಗಳಾಗಿ ಕಾಲ ಹೆಬ್ಬೆರಳನ್ನು ಶೀತಗೊಳಿಸುತ್ತಿದ್ದವು. ಆಗ ಶೂಗಳನ್ನು ಜಾಡಿಸುತ್ತ ಬೇಗ ಹುಲ್ಲಿನಂಗಳದಿಂದ ಮನೆ ಸೇರಿಕೊಂಡಿದ್ದೆ. ಅಲ್ಲಿ ಬೆಳಿಗ್ಗೆ ತಾಪಮಾನ 1 ಡಿಗ್ರಿ ಸೆ.ಯಿಂದ 3 ಡಿಗ್ರಿ ಸೆ. ನಂತರ ಸುಮಾರು 7ಡಿಗ್ರಿಯಿಂದ 10 ಡಿಗ್ರಿವರೆಗೂ ಇರುತ್ತದೆ. ಹೀಗಾಗಿ ಏನು ಮರೆತರೂ ಬೆಚ್ಚನೆ ಪೋಷಾಕು ಮೈತುಂಬ ಹೊದ್ದುವುದನ್ನು ಮರೆಯುವ ಹಾಗೆಯೇ ಇಲ್ಲ.

ಈ ಗುಡ್ಡಗಳ ಇಳಿಜಾರಿನಲ್ಲಿ ಹಿಮಗಾಲದಲ್ಲಿ ಅಂದರೆ ಡಿಸೆಂಬರ್‌ನಿಂದ ಮಾರ್ಚ್‌ವರೆಗೂ ಅನೇಕ ಕಡೆಗಳಲ್ಲಿ ಸ್ಕೀಯಿಂಗ್, ಸ್ನೋ ಬೋಟಿಂಗ್ ಕ್ರೀಡೆಗಳು ನಡೆಯುತ್ತವೆ. ಅಂತಹುದೇ ಜಾಗವೊಂದರಲ್ಲಿ ‘ಸ್ಮಗ್ಲರ್ಸ ನಾಚ್’ ಎನ್ನುವ ಜಾಗಕ್ಕೂ ನಾವು ಹೋಗಿದ್ದೆವು. ಸ್ಕೀಯಿಂಗ್‌ಗಾಗಿ ಬೆಟ್ಟದ ಮೇಲೆ ಹೋಗಲು ಗೊಂಡೋಲಾಗಳ ರೋಪ್‌ವೇ ನಿರ್ಮಿಸಿರುತ್ತಾರೆ. ಅಲ್ಲಿಗೆ ರೋಪ್‌ವೇನಲ್ಲಿ ಹೋಗಿ ನಂತರ ಅಲ್ಲಿಂದ ಇಳಿಜಾರಿನಲ್ಲಿ ಸ್ಕೀಯಿಂಗ್ ಮಾಡುತ್ತ ಇಳಿಯುತ್ತಾರೆ. ಬಲು ಆಹ್ಲಾದಕರ ಅನುಭವ ನೀಡುವ ಇಂತಹ ಬಹಳಷ್ಟು ತಾಣಗಳು ಇಲ್ಲಿವೆ.

ನೀವು ಅಮೆರಿಕದ ಪ್ರವಾಸದಲ್ಲಿದ್ದರೆ ಅಥವಾ ಅಲ್ಲಿಗೆ ಹೋದಾಗ ಈ ಸುಂದರ ತಾಣಕ್ಕೊಮ್ಮೆ ಒಮ್ಮೆ ಖಂಡಿತವಾಗಿ ಭೇಟಿ ನೀಡಿ ಆನಂದಿಸಿ.

ತಲುಪುವುದು ಹೀಗೆ

*ಅಮೆರಿಕದ ಬೋಸ್ಟನ್‌ನಿಂದ ರಸ್ತೆ ಮಾರ್ಗದಲ್ಲಿ 320 ಕಿಮೀ ದೂರ. ಅಂದರೆ ಮೂರೂವರೆ ಗಂಟೆಗಳ ಪ್ರಯಾಣ. ನ್ಯೂಯಾರ್ಕ್‌ನಿಂದ 550 ಕಿಮೀ ದೂರ. ಸುಮಾರು ಐದೂವರೆ ತಾಸು.

*ಸಮೀಪದ ಡೊಮೆಸ್ಟಿಕ್ ಏರ್‌ಪೋರ್ಟ್‌ ಬರ್ಲಿಂಗ್ಟನ್‌ನಲ್ಲಿದೆ.

*ಕೆನಡಾದಿಂದ ರಸ್ತೆಯ ಮೂಲಕವೇ ಕಾರಿನಲ್ಲೂ ಹೋಗಬಹುದು. ದೂರ 170 ಕಿಮೀ. ಎರಡು ತಾಸಿನಲ್ಲಿ ತಲುಪಬಹುದು. ಕನೆಕ್ಟಿಕಟ್‌ನಿಂದ ಮೂರು ತಾಸು ಪ್ರಯಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.