ADVERTISEMENT

ಮನೆಯೊಳಗಿನ ಗಾಳಿಯೂ ಶುದ್ಧವಲ್ಲ!

ಶರತ್‌ ಹೆಗ್ಡೆ
Published 14 ಡಿಸೆಂಬರ್ 2020, 19:30 IST
Last Updated 14 ಡಿಸೆಂಬರ್ 2020, 19:30 IST
   

ಕೋವಿಡ್‌–19 ಶುರುವಾದಾಗಿನಿಂದ ಸೋಂಕು ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ; ವಾಯು ಮಾಲಿನ್ಯದಿಂದಲೂ ಜಾಸ್ತಿ ತೊಂದರೆಯಾಗುತ್ತದೆ ಎಂಬುದನ್ನು ತಜ್ಞರು ಹೇಳುತ್ತಲೇ ಬಂದಿದ್ದಾರೆ. ಈಗಾಗಲೇ ಚಳಿಗಾಲ ಆರಂಭವಾಗಿದ್ದು, ಜೊತೆಗೆ ವಾಯು ಮಾಲಿನ್ಯವೂ ಒಂದೇ ಸಮನೆ ಹೆಚ್ಚಾಗುತ್ತಿದೆ. ಆದರೆ ಹೊರಗಿನ ಮಾಲಿನ್ಯದ ಜೊತೆಗೆ ಮನೆಯೊಳಗಿನ ಮಾಲಿನ್ಯದ ಬಗ್ಗೆಯೂ ಗಮನ ಹರಿಸುವುದು ಅಗತ್ಯ.

ಮನೆಯ ಸುತ್ತ ಕಿಟಕಿ, ಬಾಗಿಲು ಬಂದ್‌ ಮಾಡಿ ಹೊರಗಿನ ಗಾಳಿ ಬಾರದಂತೆ ಮಾಡಿದರೆ ಅಥವಾ ಕಿಟಕಿಗಳಿಗೆ ಸೊಳ್ಳೆ ಪರದೆಯಂಥ ತಡೆ ನಿರ್ಮಿಸಿದರೆ ಗಾಳಿ ಶುದ್ಧವಾಗಿ ಒಳಬರುತ್ತದೆ ಎಂದು ಭಾವಿಸಿದರೆ ಅದೂ ತಪ್ಪು.

ತಜ್ಞರು ಹೇಳುವ ಪ್ರಕಾರ,ಜಾಗತಿಕವಾಗಿ ಪ್ರತಿ ವರ್ಷ 38 ಲಕ್ಷ ಜನ ಒಳಾಂಗಣ ವಾಯುಮಾಲಿನ್ಯದಿಂದ ಸಾಯುತ್ತಿದ್ದಾರೆ.

ADVERTISEMENT

ಮನೆ ಸ್ವಚ್ಛಗೊಳಿಸಲು ಬಳಸುವ ರಾಸಾಯನಿಕಗಳು, ಹೊಗೆ, ಅಗರಬತ್ತಿ, ಹೀಟರ್‌, ಗೋಡೆ, ಛಾವಣಿ, ಪೀಠೋಪಕರಣಗಳಿಗೆ ಬಳಿದ ಬಣ್ಣ, ಮೌಲ್ಡೆಡ್‌ ಪೀಠೋಪಕರಣಗಳಿಂದ ಹೊರ ಸೂಸುವ ಪುಡಿ ಇತ್ಯಾದಿ ಕಾರಣಗಳಿಂದ ಒಳಾಂಗಣ ಮಾಲಿನ್ಯ ಉಂಟಾಗುತ್ತದೆ. ಹೊಸ ನಿರ್ಮಾಣಗಳಲ್ಲಿ ಗಾಳಿ ಸಂಚಾರದ ಕೊರತೆ ಇರುವುದರಿಂದಲೂ ಸಮಸ್ಯೆ ಕಾಣಿಸುತ್ತಿದೆ.

ಆರೋಗ್ಯ ಸಮಸ್ಯೆ
ಕೇವಲ ಹೊರಗಿನ ದೂಳು, ಹೊಗೆಯನ್ನಷ್ಟೇ ಮಾಲಿನ್ಯ ಎಂದು ಕರೆಯಲಾಗದು. ಈ ಒಳಾಂಗಣ ಮಾಲಿನ್ಯದಿಂದಾಗುವ ಸಮಸ್ಯೆಗಳೂ ಗಂಭೀರವೇ. ಮೂಲೆಯಲ್ಲಿ ಸೇರಿಕೊಂಡ ದೂಳಿನಿಂದ ಕೆಮ್ಮು, ಕಪಾಟಿನಲ್ಲಿ ಕಟ್ಟಿಕೊಳ್ಳುವ ಫಂಗಸ್‌ನಿಂದ ಅಲರ್ಜಿ, ಚರ್ಮದ ಉರಿ, ಕಣ್ಣಿನ ಕ್ಯಾನ್ಸರ್‌, ಶ್ವಾಸಕೋಶದ ಸಮಸ್ಯೆಗಳಿಗೂ ಕಾರಣವಾದೀತು.

ಮನೆ ಕಟ್ಟಲು ನೆಲ ಅಗೆದ ಜಾಗದಲ್ಲಿ ಕಲ್ಲಿನ ನಿಕ್ಷೇಪ ಇದ್ದಲ್ಲಿ (ಸಾಮಾನ್ಯವಾಗಿ ಕಲ್ಲು ಗಣಿ, ಬಂಡೆ ಸುತ್ತಮುತ್ತ ಇದ್ದಲ್ಲಿ ಈ ಸಾಧ್ಯತೆ ಇದೆ) ಅಲ್ಲಿ ರೇಡಾನ್‌ ಎಂಬ ಅನಿಲ ಸಣ್ಣಗೆ ಬಿಡುಗಡೆ ಆಗುವ ಅಪಾಯವೂ ಇದೆ. ಇದು ಬಣ್ಣ, ವಾಸನೆ ಇಲ್ಲದ ಅನಿಲ ಮಾತ್ರವಲ್ಲ, ವಿಕಿರಣಶೀಲ ಕಣಗಳನ್ನು ಒಳಗೊಂಡಿರುತ್ತದೆ. ಅಮೆರಿಕದಲ್ಲಿ ಶ್ವಾಸಕೋಶ ಕ್ಯಾನ್ಸರ್‌ ಪ್ರಕರಣಗಳನ್ನು ಆಳವಾಗಿಅಧ್ಯಯನ ಮಾಡಿದಾಗಈ ವಿಕಿರಣ ತುಂಬಿದ ವಿಷಾನಿಲ ದೇಹಕ್ಕೆ ಹರಡಿರುವುದು ಗೊತ್ತಾಗಿದೆ.

ಮನೆ ಕಟ್ಟುವ ಅವಧಿಯಲ್ಲಿ ಈ ಅನಿಲ/ ವಿಕಿರಣ ಸಾಧ್ಯತೆಯನ್ನು ತಜ್ಞರ ಮೂಲಕ ಕನಿಷ್ಠ90 ದಿನಗಳವರೆಗೆ ಪರಿಶೀಲಿಸಿ ನೀವು ಸುರಕ್ಷಿತ ವಲಯದಲ್ಲಿದ್ದೀರಿ ಎಂಬುದು ಖಚಿತವಾದ ಬಳಿಕ ಮನೆ ನಿರ್ಮಿಸಲು ಮುಂದಾಗುವುದು ಸೂಕ್ತ.

ಕಸದಿಂದ ಮಾಲಿನ್ಯ
ಇದು ನಿಸರ್ಗದ ಕಾರಣವಾಯಿತು. ಇನ್ನು ನಾವೇ ಸೃಷ್ಟಿಸಿಕೊಳ್ಳುವ ಒಳಾಂಗಣ ಮಾಲಿನ್ಯ ನೋಡಿ. ತರಕಾರಿ ತ್ಯಾಜ್ಯ, ಹಸಿ ಕಸವನ್ನು ಒಂದೆರಡು ದಿನ ಹಾಗೇ ಸಂಗ್ರಹಿಸಿಟ್ಟರೂ ಮಿಥೇನ್‌ ಸೃಷ್ಟಿಯಾಗುವುದುಂಟು, ಕರಿದ ಎಣ್ಣೆಯ ಆವಿ, ಕೀಟನಾಶಕಗಳು, ಚಿತ್ರ ಕಲಾವಿದರು ವಾತಾನುಕೂಲ ಇಲ್ಲದ ಜಾಗದಲ್ಲಿ ಕೆಲಸ ಮಾಡಿದರೆ ಪೇಂಟ್‌ನಿಂದ ಆಗುವ ಸಮಸ್ಯೆ ಇತ್ಯಾದಿ ಮಾಧ್ಯಮಗಳು ಒಳಾಂಗಣ ಮಾಲಿನ್ಯಕ್ಕೆ ಕಾರಣವಾಗುತ್ತವೆ.

‘ಒಳಾಂಗಣದ ವಾಯುಮಾಲಿನ್ಯವೇ ಹೊರಗಿನ ಮಾಲಿನ್ಯಕ್ಕಿಂತ ಸುಮಾರು 5 ಪಟ್ಟು ಹೆಚ್ಚು ಅಪಾಯಕಾರಿ’ ಎಂದು ಹನಿವೆಲ್‌ ಎಲೆಕ್ಟ್ರಿಕಲ್‌ ಡಿವೈಸಸ್‌ ಆ್ಯಂಡ್‌ ಸಿಸ್ಟಮ್ಸ್‌ ಕಂಪನಿ ನಿರ್ದೇಶಕ ಸುಧೀರ್‌ ಪಿಳ್ಳೈ ಹೇಳುತ್ತಾರೆ.

‘ಬೆಂಗಳೂರು ನಗರದಲ್ಲಿ ಪ್ರತಿ ಘನ ಮೀಟರ್‌ ಗಾಳಿಯಲ್ಲಿ 78 ಮೈಕ್ರೋಗ್ರಾಂನಷ್ಟು ದೂಳು, ಮಾಲಿನ್ಯದ ಕಣಗಳು ಇವೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಪ್ರಕಾರ ಈ ಪ್ರಮಾಣ 60 ಮೈಕ್ರೋ ಗ್ರಾಂ ಮೀರುವಂತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಈ ಪ್ರಮಾಣವನ್ನು 25 ಮೈಕ್ರೋಗ್ರಾಂಗೆ ಮಿತಿಗೊಳಿಸಿದೆ. ಆದರೆ ‍ಪ್ರತಿನಿತ್ಯ ಹೆಚ್ಚುತ್ತಿರುವ ವಾಯುಮಾಲಿನ್ಯಪ್ರಮಾಣ ತೀವ್ರ ಆತಂಕಕಾರಿಯಾಗಿ ಪರಿಣಮಿಸಿದೆ’ ಎನ್ನುತ್ತಾರೆ ಅವರು.

ಏನು ಪರಿಹಾರ?
ಮನೆಯ ಸುತ್ತ ಮುತ್ತ ಗಿಡ ಬೆಳೆಸಬೇಕು. ತಾಜಾ ಗಾಳಿ ಹೊರಗಿನಿಂದ ಒಳ ಬರುವಂತಿರಬೇಕು. ಮನೆಯೊಳಗೆ ದೂಳು, ಫಂಗಸ್‌ ಕಟ್ಟಿಕೊಳ್ಳದಂತೆ ನಿಗಾ ವಹಿಸಬೇಕು. ಆಗ ಒಳಾಂಗಣದ ಮಾಲಿನ್ಯದ ತೀವ್ರತೆಯನ್ನು ಕಡಿಮೆ ಮಾಡಬಹುದು. ಇನ್ನು ನಗರ ಪ್ರದೇಶದಲ್ಲಿ ಇದೆಲ್ಲಾ ತೀರಾ ಅಸಾಧ್ಯ ಎನಿಸಿದರೆಆಯಾ ಕೊಠಡಿ ಅಥವಾ ಕಟ್ಟಡದ ಅಗತ್ಯಕ್ಕೆ ಅನುಗುಣವಾಗಿಗಾಳಿ ಶುದ್ಧೀಕರಣ ಯಂತ್ರ ಅಳವಡಿಸಬೇಕು ಎಂದು ಸಲಹೆ ನೀಡುತ್ತಾರೆ ಸುಧೀರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.