ADVERTISEMENT

ವರ್ಣರಂಜಿತ ಕರ್ನಾಟಕ ಕ್ಷೇತ್ರ ವೈಭವ

ನಾದನೃತ್ಯ

ವೈ.ಕೆ.ಸಂಧ್ಯಾಶರ್ಮ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
‘ಶಿವಪ್ರಿಯ ನಾಟ್ಯಶಾಲೆ’ ಕಲಾವಿದರು ನೃತ್ಯ ಪ್ರಸ್ತುತಪಡಿಸಿದರು.
‘ಶಿವಪ್ರಿಯ ನಾಟ್ಯಶಾಲೆ’ ಕಲಾವಿದರು ನೃತ್ಯ ಪ್ರಸ್ತುತಪಡಿಸಿದರು.   

ರವೀಂದ್ರ ಕಲಾಕ್ಷೇತ್ರದ ಸುವರ್ಣೋತ್ಸವ ಸಂದರ್ಭ ನೃತ್ಯಗುರು ಡಾ.ಸಂಜಯ್ ಶಾಂತಾರಾಂ ನೇತೃತ್ವದ ‘ಶಿವಪ್ರಿಯ ನಾಟ್ಯಶಾಲೆ’ ಕರ್ನಾಟಕ ಇತಿಹಾಸದ ಹೆಮ್ಮೆಯ ಚಿತ್ರಣವನ್ನು ವೈಭವೋಪೇತವಾಗಿ ಕಣ್ಮುಂದೆ ಕಟ್ಟುವಂತೆ ಪರಿಣಾಮಕಾರಿಯಾಗಿ ಅರ್ಪಿಸಿದರು.

ನಾಡನ್ನು ಆಳಿದ ಪ್ರಖ್ಯಾತ ರಾಜರು, ತ್ರಿಮತ ಸ್ಥಾಪಕರು, ಬಸವ-ಕನಕರ ತಾತ್ವಿಕ ನಿಲುವುಗಳು, ಭಕ್ತಿಯ ಮೇಲ್ಮೆಯನ್ನು ಸಮರ್ಥವಾಗಿ ಬಿಂಬಿಸಿದ ನೃತ್ಯರೂಪಕ ರಸಿಕರ ಮನಸೂರೆಗೊಂಡಿತು.

ಆಕರ್ಷಕ ವೇಷಭೂಷಣಗಳಿಂದ ರಂಗಪ್ರವೇಶಿಸಿದ ಸುಂದರ ನರ್ತಕಿಯರ  ನೃತ್ಯದಲ್ಲಿನ ಹೊಂದಾಣಿಕೆ, ಚೆಲುವು ಮೊದಲ ನೋಟಕ್ಕೆ ಸೆರೆಹಿಡಿಯಿತು. ನೃತ್ತ-ನೃತ್ಯಗಳ ಲಾಸ್ಯದಲ್ಲಿ ನರ್ತಕಿಯರು ಶುಭ ಕೋರಿದರು. ನಂತರ ಸರ್ವಸಾಕ್ಷಿಯ ರೂಪ ಮತ್ತು ಇತಿಹಾಸಜ್ಞೆ ನವ್ಯಳ  ಕುತೂಹಲದ ಪ್ರಶ್ನೋತ್ತರಗಳ ಸುರುಳಿಯೊಂದಿಗೆ ಕರ್ನಾಟಕ ಗತ ಇತಿಹಾಸದ ಪುಟಗಳು ಮೆಲ್ಲನೆ ತೆರೆದುಕೊಳ್ಳುವ ಕಥಾತಂತ್ರದಲ್ಲಿ ನೃತ್ಯ ರೂಪಕ ಅನಾವರಣಗೊಳ್ಳತೊಡಗಿತು.

ರಂಗದ ಹಿಂಭಾಗದ ನೀಲಿ ಪರದೆಯ ಮೇಲೆ ಐಹೊಳೆ-ಪಟ್ಟದಕಲ್ಲು ಮತ್ತು ಬೇಲೂರು-ಹಳೆಬೀಡಿನ ದೇವಾಲಯಗಳ ಅಪೂರ್ವ ಶಿಲ್ಪಕಲಾ ಸಂಪತ್ತು ಅರಳಿದಂತೆ, ನರ್ತಕಿಯರು ಒಬ್ಬೊಬ್ಬರೂ ಶಿಲಾಬಾಲಿಕೆರಾಗಿ ಮನೋಹರ ಭಂಗಿಗಳನ್ನು ಪ್ರದರ್ಶಿಸಿದರು.

ಕೃಷ್ಣದೇವರಾಯನ ಆಸ್ಥಾನದ ಅದ್ದೂರಿ ದೃಶ್ಯಗಳಲ್ಲಿ  ಸಂಗೀತ- ನೃತ್ಯಗಳ  ಝೇಂಕಾರ ಮೇಳೈಸಿತು. ರಾಯನಾಗಿ ಸಂಜಯ್ ತಮ್ಮ ಪೌರುಶಾಂಗಿಕ ವಿಶಿಷ್ಟ ಶೈಲಿಯ ನೃತ್ಯ ನಿರೂಪಣೆ, ಹೊಸ ವಿನ್ಯಾಸದ ಅಡವುಗಳಿಂದ ಗಮನ ಸೆಳೆದರು. ಅವನ ಎಡಬಲದ ರಾಣಿಯರೂ ಸರಿಸಾಟಿಯಾಗಿ ತಮ್ಮ ನರ್ತನ ಪ್ರತಿಭೆ ಮೆರೆದರು.

ಶಂಕರಾಚಾರ್ಯರು, ಮಧ್ವಾಚಾರ್ಯರು ಮತ್ತು ರಾಮಾನುಜಾಚಾರ್ಯರ ಲೋಕೋತ್ತರ ಸಂದೇಶವನ್ನು ಸಂಕ್ಷಿಪ್ತವಾಗಿ ತಿಳಿಸುತ್ತ, ‘ಚೆಲುವಯ್ಯ ಚೆಲುವೋ, ತಾನಿತಂದಾನ...’ ಎಂದು ಜಾನಪದ ಧಾಟಿಯ ಕುಣಿತಕ್ಕೆ ಹೆಜ್ಜೆ ಹಾಕುತ್ತ ಕಲಾವಿದರು ಕೋಲಾಟದ ಸವಿಯನ್ನು ಉಣಬಡಿಸಿದರು.

ಕನಕದಾಸರ ಉಡುಪಿಯ  ಕೃಷ್ಣದರ್ಶನದ ಸನ್ನಿವೇಶವನ್ನು ಸಮರ್ಥವಾಗಿ ಕಟ್ಟಿಕೊಟ್ಟರು. ಕನಕನಾಗಿ ಸಂಜಯ್ ಶಾಂತಾರಾಂ ಅವರ ಅಭಿನಯ ಉತ್ತಮವಾಗಿತ್ತು. ಸಂಚಾರಿಯಲ್ಲಿ ಮೂಡಿ ಬಂದ ಗಜೇಂದ್ರ ಮೋಕ್ಷ ಪ್ರಕರಣ ಮತ್ತು ದ್ರೌಪದಿಗೆ ಕೃಷ್ಣ ಅಕ್ಷಯವಸ್ತ್ರ ಕರುಣಿಸಿದ ಕಥೆಗಳು ಸುಂದರವಾಗಿ ನಿರೂಪಿತವಾದವು.

ನಡುನಡುವೆ ಹಾಸುಹೊಕ್ಕಾಗಿ ಬಂದ, ಮಾನವೀಯತೆಯ ಪ್ರತಿಮೂರ್ತಿ ಬಸವಣ್ಣನವರ ಜೀವನ ತತ್ವಗಳು, ಭರತ-ಬಾಹುಬಲಿಯರ ಕಥೆಗಳು ಮುಂತಾದ ಕಥಾ ನಿರೂಪಣೆಯ ಅನುಕ್ರಮಣಿಕೆಗಳು ಸುಸಂಗತವಾಗಿದ್ದಿದ್ದರೆ ಚೆನ್ನಿತ್ತು.

ಈ ನೃತ್ಯರೂಪಕದ ರಸಘಟ್ಟವೆಂದರೆ, ವರ್ಣರಂಜಿತವಾಗಿ ಕಂಗೊಳಿಸಿದ ಮಹಿಷಾಸುರಮರ್ದಿನಿಯ ಪ್ರಸಂಗ.  ಶಕ್ತಿದೇವತೆಗಳು ತಮ್ಮ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಅಭಿವ್ಯಕ್ತವಾದ ನೃತ್ತ-ನೃತ್ಯಗಳು ವಿಶಿಷ್ಟ ಬೆಡಗಿನಿಂದ ಕೂಡಿದ್ದವು.

ವೀರ ವನಿತೆಯರ ರಭಸದ ತಾಂಡವ ಅಡವುಗಳು, ಹಸ್ತಚಲನೆಯ ವಿನ್ಯಾಸಗಳು, ಆಕರ್ಷಕ ಆಂಗಿಕಾಭಿನಯ ಮನೋಜ್ಞವಾಗಿತ್ತು. ಸಿಂಹವಾಗಿ ಅನಿರುದ್ಧ ಗೋಪಿನಾಥ್ ಚೆನ್ನಾಗಿ ಅಭಿನಯಿಸಿದರು. ಮಹಿಷಾಸುರನಾಗಿ ಶೇಖರ್ ರಾಜೇಂದ್ರನ್ ಮಾಡಿದ ರಣನರ್ತನ ಪರಿಣಾಮಕಾರಿಯಾಗಿತ್ತು.

ಶಕ್ತಿ ಸ್ವರೂಪಿಣಿಯರೆಲ್ಲ  ಗುಂಪಾಗಿ ರಚಿಸಿದ ನೃತ್ಯವಿನ್ಯಾಸ ಅನನ್ಯವಾಗಿ,  ಸುತ್ತ ವರ್ಷಿಸಿದ ಕೆಂಪು-ಹಳದಿ ಬೆಳಕಿನ ಕಿರಣಗಳ ಹರಹಿನಲ್ಲಿ ಚಾಮುಂಡೆಶ್ವರಿಯ ರೌದ್ರ ರೂಪ ಬೆರಗುಂಟು ಮಾಡಿತು.

ನೃತ್ಯರೂಪಕದ ಅಂತಿಮ ಕ್ಷಣಗಳು ನೆರೆದ ಪ್ರೇಕ್ಷಕರನ್ನು ಸಂವೇದನಾಶೀಲರನ್ನಾಗಿ ಪುಳಕಿಸಿತ್ತು. ಎಲ್ಲ ನೃತ್ಯ ಕಲಾವಿದರೂ ರಂಗದ ಮೇಲೆ ‘ಜೈ ಭಾರತ ಜನನಿಯೇ ತನುಜಾತೆ ..’ ಎಂದು ನಾಡಗೀತೆ ಹಾಡುತ್ತ, ಸಂಭ್ರಮದಿಂದ ಮೈಮರೆತು ಕುಣಿದ ಪರಿಗೆ, ಹಾರಾಡಿದ ಕನ್ನಡದ ಬಾವುಟದ ನಲಿವಿನ ಭಾವಕ್ಕೆ ಜನ ಮೇಲೆದ್ದು ಗೌರವ ಸೂಚಿಸಿ ಜೋರು ಕರತಾಡನ ಮಾಡಿದ್ದು ಉಲ್ಲೇಖನೀಯ.

ಕನ್ನಡಿಗರ ಮೈಮನಗಳಲ್ಲಿ ನಾಡಿನ ಬಗ್ಗೆ  ಅಭಿಮಾನ ತುಂಬುವಂಥ ಈ ಸುಂದರ ನೃತ್ಯರೂಪಕದ ಪರಿಕಲ್ಪನೆ ಡಾ.ಸಂಜಯ್ ಶಾಂತಾರಾಂ ಅವರದು. ಮುಖ್ಯ ಭೂಮಿಕೆಯಲ್ಲಿ ಪಾಲ್ಗೊಂಡು ಮನೋಹರವಾಗಿ ನೃತ್ಯ ಸಂಯೋಜಿಸಿದ್ದೂ ಅವರೇ.

ಸಾಹಿತ್ಯ- ಗೋಟೂರಿ ಮತ್ತು ಸಂಗೀತ ಸಂಯೋಜನೆ ಪ್ರವೀಣ್ ಡಿ.ರಾವ್ ಅವರದು. ನೃತ್ಯರೂಪಕದಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ ಉಳಿದ ಕಲಾವಿದರು ಸ್ಟೆಲ್ಲಾ, ಶ್ವೇತಾ, ಅಂಜಲಿ, ಆರುಷಿ, ಕೃತಿ, ಶಿವಾನಿ, ನಿಖಿಲಾ, ನೀತು,ಮಹೇಕ್, ರವೀಶ್ ರೈ, ವಂದನ, ಕಾವ್ಯ, ದೀಪ್ತಿ, ಸಂಜನಾ, ಯುಕ್ತಿ, ಅಕ್ಷತಾ ಮತ್ತು ಸಿಂಧು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT