ADVERTISEMENT

ಸ್ವಾಮೀಜಿ ಬಾಯಿ ಮುಚ್ಚಿಸಿದ ಸಿ.ಎಂ!

ಮಲ್ಲೇಶ್ ನಾಯಕನಹಟ್ಟಿ
Published 25 ಫೆಬ್ರುವರಿ 2017, 19:30 IST
Last Updated 25 ಫೆಬ್ರುವರಿ 2017, 19:30 IST

ಯಾದಗಿರಿ: ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿರುವ ಕುರುಬರಿಗೆ ‘ಗೊಂಡ’ ಜಾತಿ ಪ್ರಮಾಣಪತ್ರ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಮಾಡಿದ್ದಾರೆ ಎಂದು ಆರೋಪಿಸಿ, ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಸಂಘಟನೆಗಳು ಇತ್ತೀಚೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದವು. ಬೀದರ್, ಕಲಬುರ್ಗಿ, ಕೊಪ್ಪಳ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲೂ ಸರಣಿ ರೂಪದಲ್ಲಿ ಪ್ರತಿಭಟನೆಗಳು ನಡೆದವು.

ಪರಿಶಿಷ್ಟ ಪಂಗಡವನ್ನು ಪ್ರತಿನಿಧಿಸುವ ರಾಜ್ಯದ ಪ್ರತಿಷ್ಠಿತ ಮಠದ ಶ್ರೀಗಳೂ ಈ ಹೋರಾಟಕ್ಕೆ ಧುಮುಕಿದರು. ಇದರಿಂದ ಪ್ರತಿಭಟನಾಕಾರರಿಗೆ ಮತ್ತಷ್ಟು ಹುರುಪು ಬಂದಿತು. ಜಿಲ್ಲೆಗಳಲ್ಲಿ ಜನಜಾಗೃತಿ ಸಭೆಗಳು ಜೋರಾಗಿ ನಡೆದವು. ಶ್ರೀಗಳು ಎಲ್ಲಾ ಸಭೆಗಳಲ್ಲಿ ಪಾಲ್ಗೊಂಡು ಬೆವರು ಸುರಿಸಿದರು. ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆಯೂ ನಡೆಯಿತು. ಜಿಲ್ಲಾಡಳಿತ ಭವನದ ಉದ್ಘಾಟನೆಗಾಗಿ ಮುಖ್ಯಮಂತ್ರಿ ಯಾದಗಿರಿಗೆ ಬಂದಾಗ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಯಿತು. ‘ನಾನು ಯಾರಿಗೂ ಹೆದರುವುದಿಲ್ಲ’ ಎಂದು ಮುಖ್ಯಮಂತ್ರಿ ಮೀಸೆ ತಿರುವಿದರು. ಪ್ರತಿಭಟನಕಾರರ ಬಂಧನವೂ ಆಯಿತು. ಇದಾಗಿ ಮೂರೇ ದಿನಗಳಲ್ಲಿ ಮುಖ್ಯಮಂತ್ರಿ ಪ್ರತಿಷ್ಠಿತ ಮಠಕ್ಕೆ ₹ 6 ಕೋಟಿ ಅನುದಾನ ನೀಡಿದರು. ‘ಸ್ವಾಮೀಜಿ... ಇದನ್ನು ಸಾಮಾಜಿಕ ಮತ್ತು ಮಠದ ಅಭಿವೃದ್ಧಿಗೆ ಬಳಸಿಕೊಳ್ಳಿ’ ಎನ್ನುವ ಮೂಲಕ ಮುಖ್ಯಮಂತ್ರಿ, ಶ್ರೀಗಳ ಬಾಯಿ ಮುಚ್ಚಿಸಿದ್ದಾರೆ ಎಂದು ಪ್ರತಿಭಟನಾಕಾರರು, ಮುಖಂಡರು ಈಗ ಅಳಲು ತೋಡಿಕೊಳ್ಳುತ್ತಿದ್ದಾರೆ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT