ADVERTISEMENT

ಕೈ, ಕೈ ಕೂಡಿದರೆ ಕಲ್ಯಾಣಿಗೆ ಕಾಯಕಲ್ಪ

ದೊಡ್ಡಕೊಂಡಗೊಳ ಗ್ರಾಮದಲ್ಲಿ ಎರಡು ಕಲ್ಯಾಣಿಗಳ ಹೂಳು ತೆಗೆಯಲು ಚಾಲನೆ, ಅಂತರ್ಜಲ ವೃದ್ಧಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 1 ಮೇ 2017, 19:30 IST
Last Updated 1 ಮೇ 2017, 19:30 IST
ಕೈ, ಕೈ ಕೂಡಿದರೆ ಕಲ್ಯಾಣಿಗೆ ಕಾಯಕಲ್ಪ
ಕೈ, ಕೈ ಕೂಡಿದರೆ ಕಲ್ಯಾಣಿಗೆ ಕಾಯಕಲ್ಪ   
ಹಾಸನ: ಸೂರ್ಯೋದಯಕ್ಕೂ ಮುನ್ನವೇ ಅಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಬುಟ್ಟಿ, ಗುದ್ದಲಿ, ಹಾರೆ, ಬಾಂಡಲಿ ಸೇರಿ ವಿವಿಧ ಸಲಕರಣೆಗಳನ್ನು ಹಿಡಿದು ಬಂದು ಎರಡು ಕಲ್ಯಾಣಿಗಳಲ್ಲಿ ಹೂಳು ತೆಗೆಯಲು ಆರಂಭಿಸಿದರು.
 
ಇದು, ತಾಲ್ಲೂಕಿನ ದೊಡ್ಡಕೊಂಡಗೊಳ ಗ್ರಾಮದಲ್ಲಿ ಸೋಮವಾರ ಕಂಡು ಬಂದ ಚಿತ್ರಣ. ನಗರದ ‘ಭೂಮಿ ಪ್ರತಿಷ್ಠಾನ’ ಸಂಸ್ಥೆಯ ಸದಸ್ಯರೊಂದಿಗೆ ಎನ್‌ಎಸ್‌ಎಸ್‌, ಸ್ತ್ರೀ ಶಕ್ತಿ, ಸೇವಾದಳ ಕಾರ್ಯಕರ್ತರು, ಸಾಹಿತಿಗಳು, ಪರಿಸರ ಪ್ರೇಮಿಗಳು, ಸ್ವಯಂಸೇವಕರು, ಗ್ರಾಮಸ್ಥರೂ ಇದಕ್ಕೆ ಕೈಜೋಡಿಸಿದರು. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿರುವುದನ್ನು ಮನಗಂಡು ಹೂಳು ತೆಗೆಯಲು ‘ಭೂಮಿ ಪ್ರತಿಷ್ಠಾನ’ದ ಸದಸ್ಯರು ಮೊದಲಿಗೆ ದೊಡ್ಡ
ಕೊಂಡಗೊಳ ಗ್ರಾಮ ಆಯ್ಕೆ ಮಾಡಿ ಗ್ರಾಮಸ್ಥರ ಜತೆ ಚರ್ಚಿಸಿದರು.
 
ಕೆರೆ, ಕಲ್ಯಾಣಿ ಹೂಳು ತೆಗೆಯುವ ಆಶಯ ವ್ಯಕ್ತಪಡಿಸುತ್ತಿದ್ದಂತೆಯೇ, ದಿನ ನಿಗದಿಗೊಳಿಸಲಾಯಿತು. ಅದರಂತೆ ಎಲ್ಲೆಡೆ ಮಾಹಿತಿ ರವಾನೆಯಾಯಿತು. ಸ್ವಯಂ ಸೇವಾ ಸಂಸ್ಥೆಯ ಸದಸ್ಯರು, ಸ್ತ್ರೀ ಶಕ್ತಿ ಸಂಘದವರು, ಸ್ಕೌಟ್ಸ್‌ ಮತ್ತು ಗೈಡ್‌್ಸ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಮತ್ತು ನಾಗರಿಕರು, ಚಲನಚಿತ್ರ ನಟ ಚೇತನ್‌ ಬಂದರು. ಎಲ್ಲರೂ ಸ್ವಂತ ಖರ್ಚಿನಲ್ಲಿ ಗ್ರಾಮಕ್ಕೆ ಬಂದಿಳಿದರು.
 
ಬತ್ತಿಹೋಗಿದ್ದ ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ್ದ ‘ಅರಿಶಿಣ ಕಲ್ಯಾಣಿ’ ಮತ್ತು ‘ತೀರ್ಥ ಕಲ್ಯಾಣಿ’ಗೆ ಕಾಯಕಲ್ಪ ನೀಡಿದರು. ತೀರ್ಥ ಕಲ್ಯಾಣಿಯಲ್ಲಿ ಮೂರು ಅಡಿ ಹೂಳು ತೆಗೆಯುತ್ತಿದ್ದಂತೆ ಪುರಾತನ ಕಾಲದ ಚನ್ನಕೇಶವ ಮತ್ತು ಕೃಷ್ಣ ವಿಗ್ರಹ ಪತ್ತೆಯಾದವು. ಅವುಗಳನ್ನು ಮೇಲೆತ್ತಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು.
 
ಅರಿಶಿಣ ಕಲ್ಯಾಣಿಯಲ್ಲಿ ಏಳು ಅಡಿ ಹೂಳು ಹೊರಗೆ ತೆಗೆದ ಬಳಿಕ ನೀರಿನ ಸೆಲೆ ಪತ್ತೆಯಾಯಿತು. ತೀರ್ಥ ಕಲ್ಯಾಣಿಯಲ್ಲೂ ನೀರು ಪತ್ತೆಯಾಗಿದೆ
ಕೆರೆಯ ಹೂಳನ್ನು ಜಮೀನುಗಳಿಗೆ ಸಾಗಿಸಲು ನಿರ್ಧರಿಸಲಾಗಿದೆ. ಪ್ರತಿಷ್ಠಾನದ ಕಾರ್ಯಕ್ಕಾಗಿ ಒಂದು ತಿಂಗಳ ವೇತನ ನೀಡುವುದಾಗಿ ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಘೋಷಿಸಿದರು.
 
‘30 ವರ್ಷಗಳಿಂದ ಕಲ್ಯಾಣಿಯಲ್ಲಿ ನೀರು ಬತ್ತಿರಲಿಲ್ಲ. ಐದು ವರ್ಷದಿಂದ ಮಳೆ ಇಲ್ಲ, ಹೂಳು ತುಂಬಿದೆ. ಇದರಿಂದ ಗ್ರಾಮದ ಕೊಳವೆ ಬಾವಿಗಳಲ್ಲೂ ಅಂತರ್ಜಲ ಸಿಗುತ್ತಿಲ್ಲ’ ಎಂದು ಗ್ರಾಮದ ನಿವಾಸಿ ಶೇಖರ್‌ ಹೇಳಿದರು.
 
‘ಪ್ರಜಾವಾಣಿ’ ಜತೆ ಮಾತನಾಡಿದ ಪ್ರತಿಷ್ಠಾನದ ಸದಸ್ಯ, ಉಪ ವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌, ‘ಜಲಸಂರಕ್ಷಣೆಗೆ ಹಾಸನ ತಾಲ್ಲೂಕಿನ ಗ್ರಾಮಗಳನ್ನು ಪೈಲಟ್‌ ಯೋಜನೆಯಡಿ ಆಯ್ಕೆಮಾಡಿದ್ದೇವೆ. ಪ್ರತಿ ವಾರ 2–3 ಕೆರೆ, ಕಲ್ಯಾಣಿಗಳ ಹೂಳು ತೆಗೆಯುತ್ತೇವೆ’ ಎಂದರು.
 
ಈ ಕಾರ್ಯಕ್ಕಾಗಿ ಎರಡು ಸಾವಿರ ಸ್ವಯಂ ಸೇವಕರ ಪಡೆಯನ್ನು ತಯಾರು ಮಾಡಲಾಗುತ್ತಿದೆ. ಪರಿಸರ ಪ್ರೇಮಿಗಳು, ಬುದ್ಧಿಜೀವಿಗಳು, ಜಲತಜ್ಞರನ್ನು ಕರೆಯಿಸಿ ತರಬೇತಿ ನೀಡಲಾಗುವುದು. ಕೆರೆಯ ಹೂಳು ತೆಗೆಸಿದ ಮೇಲೆ ನೀರು ಸಂಗ್ರಹವಾದರೆ ಸುತ್ತಮುತ್ತ ಬತ್ತಿದ ಕೊಳವೆಬಾವಿಗಳ ಅಂತರ್ಜಲ ಸಮೃದ್ಧವಾಗುತ್ತದೆ’ ಎಂದರು.
****
ನೀರು, ಕಾಡು, ಪರಿಸರ ಚಟುವಟಿಕೆಗಳಲ್ಲಿ ತೊಡಗಲು ಪರಿಸರವಾದಿಗಳು, ಬುದ್ಧಿಜೀವಿಗಳು, ಜಲತಜ್ಞರಿರುವ ‘ಭೂಮಿ ಪ್ರತಿಷ್ಠಾನ’ ಸ್ಥಾಪನೆಯಾಗಿದೆ.
ಈ ಪ್ರತಿಷ್ಠಾನದ ಮೂಲಕ ಪ್ರತಿ ಭಾನುವಾರ ಕೆರೆ, ಕಟ್ಟೆ, ಕಲ್ಯಾಣಿಗಳ ಹೂಳು ತೆಗೆಯಲು ನಿರ್ಧರಿಸಲಾಗಿದೆ.

ದಾನಿಗಳು ಹಾಗೂ ಸರ್ಕಾರದ ಅನುದಾನ ಬಳಸಿಕೊಂಡು ತಾಲ್ಲೂಕಿನ ಕೆರೆ ಮತ್ತು ಕಲ್ಯಾಣಿಗಳ ಹೂಳು ತೆಗೆದು ಪುನಶ್ಚೇತನ ಮಾಡುವುದು ಇದರ ಉದ್ದೇಶ.
****
ಕಲ್ಯಾಣಿ ಮತ್ತು ಕೆರೆಗಳ ಹೂಳು ತೆಗೆಯುವ ಕಾರ್ಯ ಮುಗಿಯುತ್ತಿದ್ದಂತೆಯೇ ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ಬದಿ ಹಣ್ಣಿನ ಸಸಿಗಳನ್ನು ನೆಡುವ ಕಾರ್ಯಕ್ರಮ ನಡೆಯಲಿದೆ
ರೂಪ  ಹಾಸನ, ಭೂಮಿ ಪ್ರತಿಷ್ಠಾನದ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.