ADVERTISEMENT

ರಿಯಲ್ ಎಸ್ಟೇಟ್ 2018ರ ನಿರೀಕ್ಷೆಗಳು

ಅಮೃತ ಕಿರಣ ಬಿ.ಎಂ.
Published 16 ಜೂನ್ 2018, 12:11 IST
Last Updated 16 ಜೂನ್ 2018, 12:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಿಯಲ್ ಎಸ್ಟೇಟ್ ಕ್ಷೇತ್ರದ ಪಾಲಿಗೆ ಒಂದರ ಹಿಂದೊಂದು ಸುನಾಮಿಗಳು ಅಪ್ಪಳಿಸಿದ ವರ್ಷ 2017. ರಿಯಲ್ ಎಸ್ಟೇಟ್ ನಿಯಂತ್ರಣ (ರೇರಾ) ಕಾಯ್ದೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಹಾಗೂ ಬೇನಾಮಿ ವ್ಯವಹಾರ ತಡೆ ಮಸೂದೆಗಳು ಒಂದರ ಹಿಂದೊಂದು ಜಾರಿಯಾದವು. ನೋಟು ರದ್ದತಿ ನಿರ್ಧಾರ 2016ರ ನವೆಂಬರ್‍ನಲ್ಲಿ ಜಾರಿಯಾಗಿದ್ದರೂ, 2017ರ ಇಡಿ ವರ್ಷ ರಿಯಲ್‌ ಎಸ್ಟೇಟ್ ಕ್ಷೇತ್ರವನ್ನು ನಲುಗಿಸಿತು.

ಕಪ್ಪುಹಣ ಹೂಡಿಕೆಗೆ ಪ್ರಶಸ್ತ ತಾಣ ಎನಿಸಿದ್ದ ರಿಯಲ್ ಎಸ್ಟೇಟ್ ಕ್ಷೇತ್ರದ ಸುಧಾರಣೆಗಾಗಿ ಜಾರಿಗೊಳಿಸಿದ ಸರ್ಕಾರದ ವಿವಿಧ ನೀತಿಗಳು ಉದ್ಯಮದಲ್ಲಿ ಆಮೂಲಾಗ್ರ ಬದಲಾವಣೆ ತರಲು ನೆರವಾದವು ಎನ್ನುವ ಸಂಗತಿಯನ್ನೂ ಈ ಸಂದರ್ಭ ನೆನಪಿಸಿಕೊಳ್ಳಬೇಕು.

ನೋಟು ರದ್ದತಿ ಬಳಿಕ 2017ರ ಮೊದಲ ತ್ರೈಮಾಸಿಕದವರೆಗೆ ಹಿನ್ನಡೆ ಮುಂದುವರಿಯಿತು. ನಗದು ನೀಡಿ ನಿವೇಶನಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಿದ್ದರಿಂದ ನಿವೇಶನ ಮಾರಾಟ ಮಂದಗತಿಯಲ್ಲಿ ಸಾಗಿತು. ನಿವೇಶನಗಳ ದರ ಇಳಿಕೆಯಾಗಿ ಗ್ರಾಹಕರಿಗೆ ಕೈಗೆಟುಕುವ ಬೆಲೆಗೆ ಸಿಗುವಂತಾಯಿತು. ಏಪ್ರಿಲ್ ಹೊತ್ತಿಗೆ ರೇರಾ ಹಾಗೂ ಜಿಎಸ್‍ಟಿ ಜಾರಿಯಿಂದ ಬಿಲ್ಡರ್‌ಗಳು ಜೊತೆಜೊತೆಗೆ ಗ್ರಾಹಕರೂ ಮತ್ತೆ ಸಂದಿಗ್ಧಕ್ಕೆ ಸಿಲುಕುವಂತಾಯಿತು. ಆಯಾ ರಾಜ್ಯ ಸರ್ಕಾರಗಳು ಹೊರಡಿಸುವ ಅಂತಿಮ ನಿಯಮಾವಳಿಗಾಗಿ ಉದ್ಯಮಿಗಳು ಮತ್ತು ಗ್ರಾಹಕರು ಕಾತರದಿಂದ ನಿರೀಕ್ಷಿಸುವಂತಾಯಿತು. ಹೊಸ ಯೋಜನೆಗಳಿಗೆ ಚಾಲನೆ ನೀಡುವುದು ಹಾಗೂ ಸಿದ್ಧಗೊಂಡ ಮನೆಗಳ ಮಾರಾಟದಲ್ಲಿ ಇಳಿಕೆ ದಾಖಲಾಯಿತು. ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ ಶೇ50ರಷ್ಟು ಮಾತ್ರ ಹೊಸ ಯೋಜನೆಗಳು ಚಾಲನೆ ಪಡೆದುಕೊಂಡರೆ, ಮನೆಗಳ ಮಾರಾಟದಲ್ಲಿ ಶೇ30ರಷ್ಟು ಕೊರತೆ ಎದುರಿಸಬೇಕಾಯಿತು. ವಸತಿ ಯೋಜನೆಗಳಿಗೆ ಹೋಲಿಸಿದರೆ ವಾಣಿಜ್ಯ (ಕಮರ್ಷಿಯಲ್) ರಿಯಲ್ ಎಸ್ಟೇಟ್ ಕೊಂಚಮಟ್ಟಿಗೆ ಸುಧಾರಿಸಿದಂತೆ ಕಾಣುತ್ತದೆ. ಕೆಲ ದೇಶಗಳು ಅನುಸರಿಸಿದ ಭದ್ರತಾ ನೀತಿಯಿಂದಾಗಿ ಬೆಂಗಳೂರಿನಂತರ ನಗರಗಳಲ್ಲಿ ಕಚೇರಿ ಜಾಗವನ್ನು ಭೋಗ್ಯಕ್ಕೆ ಪಡೆಯುವ ಪ್ರಮಾಣವೂ ಶೇ 7ರಷ್ಟು ಕುಸಿತ ಕಂಡಿತು.

ADVERTISEMENT

2018ರಲ್ಲಿ ಕೈಗೆಟುಕುವ ದರದ ವಸತಿ ಯೋಜನೆಗಳು (ಅಫೋರ್ಡಬಲ್) ಮಹತ್ವದ ಪಾತ್ರ ನಿರ್ವಹಿಸಲಿವೆ. ಈ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಮೂಲಸೌಕರ್ಯಗಳನ್ನೂ ಒದಗಿಸಿದೆ. ಮಧ್ಯಮ ವರ್ಗದವರಿಗೆ ಮಾತ್ರ ಎಂಬಂತಿದ್ದ ‘ಕೈಗೆಟುಕುವ ವಸತಿ’ಯ ವ್ಯಾಖ್ಯಾನವನ್ನೇ ಸರ್ಕಾರ ಬದಲಾಯಿಸಿದೆ. ಹೀಗಾಗಿ ಹೊಸ ವರ್ಷವು ಗ್ರಾಹಕರಿಗೆ ಹೊರೆಯಾಗದು. ನಿವೇಶನ ಹಾಗೂ ಮನೆಗಳ ದರ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇಲ್ಲ. ಸುಧಾರಣಾ ಕಾಯ್ದೆಗಳು ಗ್ರಾಹಕರಿಗೆ ಹೊಸ ಭರವಸೆ ನೀಡಿವೆ. ಬಿಲ್ಡರ್‌ಗಳು ಬಾಕಿ ಉಳಿದಿರುವ ತಮ್ಮ ವಸತಿ ಯೋಜನೆಗಳನ್ನು ಪೂರ್ಣಗೊಳಿಸಿ ಗ್ರಾಹಕರ ಕೈಗಿಡುವ ವರ್ಷ ಇದಾಗಲಿದೆ ಎನ್ನುವುದು ಉದ್ಯಮದ ಮಾತು.

‘ಕೈಗೆಟುಕುವ ಮನೆ’ಗಳನ್ನು ನಿರ್ಮಿಸಲು ಪ್ರಮುಖ ಬಿಲ್ಡರ್‌ಗಳನ್ನು ಆಕರ್ಷಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ವಿವಿಧ ತೆರಿಗೆ ವಿನಾಯಿತಿಗಳನ್ನು ಘೋಷಿಸಿದೆ. ಈ ಮೂಲಕ ಬಿಲ್ಡರ್‌ಗಳ ಮಧ್ಯೆಯೇ ಪೈಪೋಟಿ ಸೃಷ್ಟಿಸಿದೆ.

‘ಕೈಗೆಟುಕುವ ಮನೆ’ ವರ್ಗದಲ್ಲಿ ಎಂಐಜಿ-1 ಶ್ರೇಣಿಯ (ಆದಾಯ ₹6-12 ಲಕ್ಷ) ಕಾರ್ಪೆಟ್ ಏರಿಯಾವನ್ನು 120 ಚದರ ಮೀಟರ್ ಹಾಗೂ ಎಂಐಜಿ-2 ಶ್ರೇಣಿಯ (ಆದಾಯ ₹12-18 ಲಕ್ಷ) ಕಾರ್ಪೆಟ್ ಏರಿಯಾವನ್ನು 150 ಚದರ ಮೀಟರ್‌ಗೆ ಏರಿಸಲಾಗಿದೆ. ಜೊತೆಗೆ ಶೇ4ರವರೆಗೆ ಬಡ್ಡಿ ಸಬ್ಸಿಡಿಯನ್ನೂ ಕೇಂದ್ರ ನೀಡುತ್ತಿದೆ. ಗ್ರಾಹಕರಂತೆ ಬಿಲ್ಡರ್‌ಗಳಿಗೂ ಇದರ ಲಾಭ ಸಿಗಲಿದೆ. ಹೀಗಾಗಿ 2018ರಲ್ಲಿ ಪ್ರತಿ ಬಿಲ್ಡರ್‌ಗಳಿಗೂ ಈ ವರ್ಗದ ಮನೆಗಳ ನಿರ್ಮಾಣ ಹಾಗೂ ಮಾರಾಟ ಪ್ರಮುಖ ಆದ್ಯತೆಯಾಗಲಿದೆ.

ಬೆಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರ ಈ ಬಾರಿ ಮತ್ತಷ್ಟು ಬೇಡಿಕೆ ಪಡೆಯಲಿದೆ. ಮೆಟ್ರೊ ಎರಡು ಹಾಗೂ ಮೂರನೇ ಹಂತ, ಎಲಿವೇಟೆಡ್ ಕಾರಿಡಾರ್‍ಗಳು ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮೆಟ್ರೊ ಮಾರ್ಗ ವಿಸ್ತರಣೆಯಂತಹ ಮೂಲಸೌಕರ್ಯ ಕ್ರಮಗಳಿಂದ ಇದು ಸಾಧ್ಯವಾಗಲಿದೆ. ಉದ್ಯಮಕ್ಕೆ ದೀರ್ಘಕಾಲದಲ್ಲಿ ಈ ಅಂಶಗಳು ನೆರವಾಗಲಿವೆ. ಒಳ್ಳೆಯ ಹವಾಗುಣ, ಮೂಲಸೌಕರ್ಯ ಹಾಗೂ ಕೈಗೆಟುಕುವ ದರ ಕಾಯ್ದುಕೊಂಡಲ್ಲಿ ಭಾರತದಲ್ಲೇ ಬೆಂಗಳೂರು ರಿಯಲ್ ಎಸ್ಟೇಟ್ ಕ್ಷೇತ್ರ ಅತ್ಯುತ್ತಮ ಎನಿಸಲಿದೆ ಎಂಬುದು ಉದ್ಯಮ ತಜ್ಞರ ಮಾತು.
***
ಹೊಣೆಗಾರಿಕೆ ತಂದ ವರ್ಷ

ಸರ್ಕಾರದ ಸುಧಾರಣಾ ಕಾಯ್ದೆಗಳಿಂದ ಕಳೆದ ವರ್ಷ ಮನೆಗಳು ಮಾರಾಟವಾಗದೆ ಉಳಿಯುವಂತಾಯಿತು. ಒಂದಿಷ್ಟು ವಿನಾಯಿತಿ ನೀಡಿ ಬಾಕಿ ಉಳಿದ ಮನೆಗಳನ್ನು ಮಾರಾಟ ಮಾಡಲು ಕೆಲ ಡೆವಲಪರ್‌ಗಳು ಯತ್ನಿಸಿದರು.

ರೇರಾ ಕಾಯ್ದೆಯು ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ತಂದಿತು. ದೀರ್ಘಾವಧಿಯ, ನಂಬಿಕಸ್ಥ ಹಾಗೂ ಬದ್ಧತೆಯಿರುವ ಬಿಲ್ಡರ್‌ಗಳಿಗೆ ಮಾತ್ರ ಉದ್ಯಮದಲ್ಲಿ ಉಳಿಯಲು ಇದು ಅವಕಾಶ ನೀಡಿದೆ. 2017ರ ಕೊನೆಯ ತ್ರೈಮಾಸಿಕದಲ್ಲಿ ಹೊಸ ಯೋಜನೆಗಳ ಚಾಲನೆಗೆ ಶಿಫಾರಸು ದೊರೆಯಿತು. ಕಳೆದ ವರ್ಷದ ಗ್ರಾಹಕರು ಹೊಸಬರೇ ಆಗಿದ್ದರು. ಎರಡನೇ ಬಾರಿ ಖರೀದಿಸುವವರು ಹಾಗೂ ಹೂಡಿಕೆದಾರರ ಸಂಖ್ಯೆ ಕಡಿಮೆಯಿತ್ತು.

ಈ ಅವಧಿಯಲ್ಲಿ ನಾವು 600 ಅಪಾರ್ಟ್‍ಮೆಂಟ್‍ಗಳು ಹಾಗೂ 4 ಲಕ್ಷ ಚದರ ಅಡಿ ಕಮರ್ಷಿಯಲ್ ಜಾಗ ಮಾರಾಟ ಹಾಗೂ ಅಭಿವೃದ್ಧಿ ಮಾಡಿದ್ದೇವೆ. ಕಮರ್ಷಿಯಲ್ ಸ್ಪೇಸ್‍ಗೆ ಬೆಂಗಳೂರಿನಲ್ಲಿ ಹೆಚ್ಚು ಬೇಡಿಕೆಯಿದೆ. ಹೊಸ ವರ್ಷದಲ್ಲಿ ವಸತಿ ಸಮುಚ್ಚಯಗಳಿಗೂ ಇದೇ ಬೇಡಿಕೆ ಸಿಗಲಿ ಎಂಬುದು ನಮ್ಮ ಆಶಯ.

ಸಿ.ಎನ್. ಗೋವಿಂದರಾಜು, ವೈಷ್ಣವಿ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ
***


ಏರು–ಪೇರಿನ ವರ್ಷ

2017 ಸಾಕಷ್ಟು ಏರು-ಪೇರಿನ ವರ್ಷವಾಗಿತ್ತು. ರೇರಾದಿಂದ ಈ ಕ್ಷೇತ್ರ ಪಾರದರ್ಶಕ ಹಾಗೂ ಗ್ರಾಹಕ ಕೇಂದ್ರಿತವಾಯಿತು. ಉದ್ಯಮದ ಗುಣಮಟ್ಟವೂ ಸುಧಾರಣೆ ಕಂಡಿತು. ಕಚೇರಿ ಸ್ಥಳಾವಕಾಶಕ್ಕೆ ದೇಶದಾದ್ಯಂತ ಬೇಡಿಕೆ ಹೆಚ್ಚಿತ್ತು. ಸಿಪಿಪಿಐಬಿ, ಜಿಐಸಿ, ಬ್ಲಾಕ್ ಸ್ಟೋನ್ ಮೊದಲಾದ ಬೃಹತ್ ವಿದೇಶಿ ಷೇರು ಕಂಪನಿಗಳ ಹೂಡಿಕೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ದೀರ್ಘಕಾಲದಲ್ಲಿ ನೆರವಾಗಲಿದೆ.

ಆದರೆ ನೋಟು ರದ್ದತಿಯಿಂದ ಹೊಸ ಮನೆ ಖರೀದಿಸುವ ಗ್ರಾಹಕರು ಹಿಂದೆ ಸರಿಯುವಂತಾಯಿತು. ಯೋಜನೆಗಳಿಗೆ ಅನುಮೋದನೆ ನೀಡಲು ವಿವಿಧ ರಾಜ್ಯಗಳು ಅನುಸರಿಸದ ನೀತಿಯಿಂದ ನಿಗದಿತ ಕಾಲಕ್ಕೆ ಯೋಜನೆಗಳು ಕಾರ್ಯಾರಂಭ ಮಾಡಲು ವಿಳಂಬವಾಯಿತು. ಹೊಸ ವರ್ಷದಲ್ಲಿ ಬೇಡಿಕೆ ಹೆಚ್ಚಾಗಿ ದರಗಳಲ್ಲಿಯೂ ಸುಧಾರಣೆ ಕಾಣುವ ನಿರೀಕ್ಷೆಯಿದೆ.

ಕಾರ್ಪೊರೇಟ್ ಕಂಪನಿಗಳು ಈ ದೇಶದಲ್ಲಿ ಹೆಚ್ಚು ಹಣ ತೊಡಗಿಸಲು ಮುಂದಾಗಬೇಕು ಎಂಬುದು ನನ್ನ ಬಯಕೆ. ಸೀನಿಯರ್ ಹೌಸಿಂಗ್, ಸ್ಟೂಡೆಂಟ್ ಹೌಸಿಂಗ್ ಮತ್ತು ಕೋ-ಲಿವಿಂಗ್‍ನಂಥ ವಿಭಿನ್ನ ಯೋಜನೆಗಳು ಜಾರಿಯಾಗಲಿ ಎಂಬುದು ನನ್ನ ಆಶಯ.

ಆದರ್ಶ ನರಹರಿ, ಕ್ರೆಡಾಯ್ ಬೆಂಗಳೂರು ಕಾರ್ಯದರ್ಶಿ

***

ಮಂದಗತಿ ಬೆಳವಣಿಗೆ

ಕೊನೆಯ ಗ್ರಾಹಕನಿಗೂ ಪಾರದರ್ಶಕ ವ್ಯವಸ್ಥೆ ತಲುಪಿಸುವ ಉದ್ದೇಶದಿಂದ ಜಾರಿಗೊಂಡ ರೇರಾ ಕಾಯ್ದೆ ಉದ್ಯಮದ ಮಂದಗತಿ ಬೆಳವಣಿಗೆಗೆ ಕಾರಣವಾಯಿತು. ಈ ವರ್ಷ ಗ್ರಾಹಕರು ಮರಳಿಬರುವ ವಿಶ್ವಾಸವಿದೆ. ಜಿಎಸ್‍ಟಿ ಬಳಿಕ ಹೊಸ ಗ್ರಾಹಕರಿಗೆ ಬ್ರಿಗೇಡ್ ಗ್ರೂಪ್ ವಿಶೇಷ ದರ ಘೋಷಣೆ ಮಾಡುವ ಮೂಲಕ ಹೊಸ ಮನೆ ಖರೀದಿಸಲು ಹಿಂದೇಟು ಹಾಕುತ್ತಿದ್ದವರಲ್ಲಿ ವಿಶ್ವಾಸ ತುಂಬಲು ಯತ್ನಿಸಿತು.

ಈ ವರ್ಷಾರಂಭದಲ್ಲಿ ರಿಯಲ್ ಎಸ್ಟೇಟ್ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ರೇರಾ, ಜಿಎಸ್‍ಟಿ ಹಾಗೂ ಕೆಲ ಸಾಮಗ್ರಿಗಳ ದರ ಏರಿಕೆಯ ಪರಿಣಾಮದಿಂದ ವಸತಿ ಸಮುಚ್ಚಯಗಳ ದರಗಳೂ ಹೆಚ್ಚಲಿವೆ. ಗ್ರಾಹಕರ ಈಗಿನ ಟ್ರೆಂಡ್ ‘ರೆಡಿ ಟು ಮೂವ್’ ಈ ವರ್ಷವೂ ಮುಂದುವರಿಯುವ ಸಾಧ್ಯತೆಯಿದೆ. ‘ಪ್ರಧಾನ ಮಂತ್ರಿ ಆವಾಜ್’ ಸಬ್ಸಿಡಿ ಯೋಜನೆಯ ಬಗ್ಗೆ ಇನ್ನಷ್ಟು ಪ್ರಚಾರ ಸಿಗಬೇಕಿದೆ. ಇನ್ನಷ್ಟು ಪ್ರಚಾರಗೊಂಡರೆ, ಹೊಸ ಗ್ರಾಹಕರು ತಮ್ಮ ಸ್ವಂತ ಮನೆ ಕಟ್ಟಿಕೊಳ್ಳುವ ಕನಸಿಗೆ ನೆರವಾಗಲಿದೆ. ಈ ಯೋಜನೆಯಿಂದ ಒಂದಿಷ್ಟು ಹೊರೆಯೂ ತಗ್ಗಲಿದೆ.

ವಿಶ್ವ ಪ್ರತಾಪ್ ದೆಸು, ಹಿರಿಯ ಉಪಾಧ್ಯಕ್ಷರು, ಸೇಲ್ಸ್ ಮತ್ತು ಮಾರ್ಕೆಟಿಂಗ್, ಬ್ರಿಗೇಡ್ ಗ್ರೂಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.