ADVERTISEMENT

ಮನೆ ಬೆಳಗಲು ಹೆಣ್ಣುಮಗುವೇ ಬೇಕು

ಸುಚೇತನಾ ನಾಯ್ಕ
Published 8 ಮಾರ್ಚ್ 2018, 3:22 IST
Last Updated 8 ಮಾರ್ಚ್ 2018, 3:22 IST
ಮನೆ ಬೆಳಗಲು ಹೆಣ್ಣುಮಗುವೇ ಬೇಕು
ಮನೆ ಬೆಳಗಲು ಹೆಣ್ಣುಮಗುವೇ ಬೇಕು   

ಹೆತ್ತಮ್ಮನಿಗೆ ಇದು ಬೇಡದ ಕೂಸು. ಕಾರಣ, ಅದು ಹೆಣ್ಣು. ಭ್ರೂಣದಲ್ಲಿಯೇ ಹೊಸಕುವ ಪ್ರಯತ್ನದಲ್ಲಿ ಸೋತಾಗ ಆ ಹಸುಗೂಸುವಿಗೆ ಕಸದ ತೊಟ್ಟಿಯೇ ತೊಟ್ಟಿಲಾಗಿತ್ತು. ಭ್ರೂಣ ಲಿಂಗಪತ್ತೆ ಸಾಧ್ಯವಾಗದ ಮತ್ತೊಬ್ಬಾಕೆ ತನ್ನ ಮಗು ಹೆಣ್ಣು ತಿಳಿದಾಗ ನರಕದ ಬಾಗಿಲೇ ತೆರೆದ ಅನುಭವವಾಯಿತು. ಇರುವ ಸಾಲುಸಾಲು ಹೆಣ್ಣುಮಕ್ಕಳನ್ನೇ ಸಾಕಲು ಅಸಾಧ್ಯ ಎನಿಸುವ ಸಂದರ್ಭದಲ್ಲಿ, ಮತ್ತೊಂದು ಹೆಣ್ಣುಮಗು ಸಾಕಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ.
‘ವಂಶೋದ್ಧಾರಕ ಬೇಕು, ಇರುವ ಆಸ್ತಿಯನ್ನು ರಕ್ಷಿಸಲು ಗಂಡಿನಿಂದ ಮಾತ್ರ ಸಾಧ್ಯ’ ಎನ್ನುತ್ತಿದ್ದ ಇನ್ನೊಬ್ಬ ಮಹಾತಾಯಿಗೆ ತಾನು ಹೆತ್ತ ಹೆಣ್ಣುಮಗುವೇ ಶಾಪದಂತೆ ಕಂಡಳು. ‘ಹುಟ್ಟುವ ಮಗು ಹೆಣ್ಣಾದರೆ, ಮಗು ಎತ್ತಿಕೊಂಡು ಮನೆಯ ಹೊಸಿಲು ತುಳಿಯಬೇಡ’ ಎಂದಿದ್ದ ಅತ್ತೆ-ಗಂಡನ ಮಾತು ಕಿವಿಯ ಮೇಲೆ ಅಪ್ಪಳಿಸುತ್ತಿದ್ದಂತೆಯೇ ಇನ್ನೊಬ್ಬ ಅಮ್ಮನಿಗೆ ದಿಕ್ಕು ತೋಚದ ಸ್ಥಿತಿ.

ಹೆಣ್ಣು ಎಂಬ ಏಕೈಕ ಕಾರಣಕ್ಕೆ ಹೆತ್ತಮ್ಮನಿಂದ ದೂರ ಸರಿಯುವ ಈ ಕುಸುಮಗಳನ್ನು ತಮ್ಮ ಮನೆಯಲ್ಲಿ ಅರಳುವಂತೆ ಮಾಡಲು ಇನ್ನೊಂದೆಡೆ ಸಾವಿರಾರು ಮಂದಿ ವರ್ಷಗಟ್ಟಲೇ ಕಾಯುತ್ತಿರುತ್ತಾರೆ. ಇತ್ತ ಹೆಣ್ಣು ಎಂಬ ಕಾರಣಕ್ಕೆ ಕೆಲವರು ಕರುಳಬಳ್ಳಿಯನ್ನೇ ಕಿತ್ತೆಸೆದರೆ, ಅತ್ತ ಮದುವೆಯಾಗಿ ವರ್ಷಗಳಾದರೂ ಮಕ್ಕಳಾಗದೇ ಪರಿತಪಿಸುವ ಬಹುತೇಕ ಮಂದಿ ಬಯಸುವುದು ಹೆಣ್ಣು ಕೂಸನ್ನೇ. ಇದೆಂಥ ಸೋಜಿಗ.

ದತ್ತುಕೇಂದ್ರಗಳಿಂದ ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳನ್ನೇ ಬಯಸುವವರು ಹೆಚ್ಚಾಗಿದ್ದಾರೆ. ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ (ಕಾರಾ) ಬಿಡುಗಡೆ ಮಾಡಿರುವ ಅಂಕಿಅಂಶಗಳು ಈ ಮಾತನ್ನೇ ಪುಷ್ಟೀಕರಿಸುತ್ತವೆ. ಇದನ್ನು ಗಮನಿಸಿದರೆ, ಹೆಣ್ಣು ಕಂದಮ್ಮಗಳಿಗಾಗಿ ಹಂಬಲಿಸುವ ಪೋಷಕರಿಗೇನೂ ಕಮ್ಮಿ ಇಲ್ಲ ಎಂದು ಗೊತ್ತಾಗುತ್ತದೆ. ಅದೇ ರೀತಿ, ಹೆಣ್ಣನ್ನು ಬೀದಿಪಾಲು ಮಾಡುವ ಪೋಷಕರೂ ಹೆಚ್ಚಿರುವ ಕಾರಣ, ದತ್ತು ಕೇಂದ್ರಗಳಲ್ಲಿ ಇವರ ಸಂಖ್ಯೆಯೂ ಸಹಜವಾಗಿಯೇ ಹೆಚ್ಚಿದೆ.

ADVERTISEMENT

ಕರ್ನಾಟಕದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2017ನೇ ಸಾಲಿನಲ್ಲಿ 1,795 ಮಂದಿ ದತ್ತು ಪಡೆಯುವ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಆ ಪೈಕಿ ಹೆಚ್ಚಿನವರ ಆದ್ಯತೆ ಹೆಣ್ಣುಮಕ್ಕಳೇ ಆಗಿದ್ದರು.

ದತ್ತುಪಡೆಯಲು ಬರುವ ಪೋಷಕರು ಹೆಣ್ಣುಮಕ್ಕಳನ್ನೇ ಏಕೆ ಬಯಸುತ್ತಾರೆ? ಈ ಪ್ರಶ್ನೆಯನ್ನು ಪೋಷಕರ ಮುಂದಿಟ್ಟಾಗ, ಪ್ರತಿಯೊಬ್ಬರೂ ಅವರದ್ದೇ ಆದ ಸುಂದರ ಉತ್ತರಗಳನ್ನು ಕಂಡುಕೊಂಡಿದ್ದು ಅರಿವಿಗೆ ಬಂತು.

‘ಹೆಣ್ಣು ವಾತ್ಸಲ್ಯದ ಸಂಕೇತ. ಬೆಳೆದು ದೊಡ್ಡವಳಾದರೂ ಅಪ್ಪ-ಅಮ್ಮನಿಗೆ ಪ್ರೇಮಧಾರೆಯನ್ನು ಹರಿಸುತ್ತಾಳೆ. ಆದರೆ ಗಂಡು ಮಗುವಿನಿಂದ ಇದನ್ನು ಬಯಸುವುದು ಕಷ್ಟ’ ಎನ್ನುವುದು ಜೆ.ಸಿ. ನಗರದ ಕಮಲಾ ಅವರ ಅಭಿಮತ.

ಪೀಣ್ಯದ ಕಾವ್ಯಾ, ‘ಹೆಚ್ಚಿನ ಗಂಡು ಮಕ್ಕಳು ಅಶಿಸ್ತಿನಿಂದ ಕೂಡಿರುತ್ತಾರೆ. ನಮ್ಮ ಕುಟುಂಬದಲ್ಲಿ ನಾನಿದನ್ನು ಕಂಡಿದ್ದೇನೆ. ಆದ್ದರಿಂದ ಹೆಣ್ಣು ಪಾಪುಬೇಕೆಂದು ಅರ್ಜಿ ಸಲ್ಲಿಸಿ ಕಾದು ಕುಳಿತಿದ್ದೇನೆ’ ಎಂದರು.

‘ಗಂಡು ಮಗು ದೊಡ್ಡವನಾದ ಮೇಲೆ ತಾನು ದತ್ತುಪುತ್ರ ಎಂದು ತಿಳಿದ ತಕ್ಷಣ ಬೇರೆಯ ರೀತಿಯಲ್ಲಿ ವ್ಯವಹರಿಸುವ ಸಾಧ್ಯತೆ ಇದೆ. ಆದರೆ ಹೆಣ್ಣುಮಕ್ಕಳು ಹಾಗಲ್ಲ. ಕಷ್ಟ ಕಾಲದಲ್ಲಿ ನೆರಳು ನೀಡಿದ ಭಾವನೆ ಅವರಲ್ಲಿ ಬರುತ್ತದೆ. ಆದ್ದರಿಂದ ನನಗೆ ಹೆಣ್ಣೇ ಇಷ್ಟ’ ಎನ್ನುವುದು ಲಲಿತಾ ಎಸ್. ಅವರ ನಿಲುವು.

‘ಗಂಡು ಮಕ್ಕಳು ವೃದ್ಧ ತಂದೆ-ತಾಯಿಯರನ್ನು ನೋಡಿಕೊಳ್ಳುತ್ತಾರೆ ಎಂಬ ಹಿಂದಿನ ಕಾಲದ ಕಲ್ಪನೆಯನ್ನು ಈಗ ಊಹಿಸಲೂ ಸಾಧ್ಯವಿಲ್ಲ. ಹೆಚ್ಚುತ್ತಿರುವ ವೃದ್ಧಾಶ್ರಮಗಳೇ ಇದಕ್ಕೆ ಸಾಕ್ಷಿ. ಆದರೆ ಗಂಡನ ಮನೆಗೆ ಹೋದರೂ ಹೆಣ್ಣುಮಕ್ಕಳು ತವರು ಮನೆಯ ಪ್ರೀತಿಯನ್ನು ಮರೆಯುವುದಿಲ್ಲ. ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಕೊನೇ ಪಕ್ಷ ಗಂಡಿನ ಹಾಗೆ ವೃದ್ಧಾಶ್ರಮಕ್ಕಂತೂ ಖಂಡಿತ ಕಳಿಸುವುದಿಲ್ಲ. ಹೆಣ್ಣು ಇಲ್ಲ ಎಂದು ಕೊರಗುತ್ತಿರುವ ಎರಡು ಗಂಡು ಮಕ್ಕಳ ತಾಯಿಯಾಗಿರುವ ನನ್ನ ಅನುಭವದ ಮಾತು ಇದು’ ಎನ್ನುತ್ತಾರೆ ಸುಶೀಲಾ ಬಾಯಿ.

ಹೆಣ್ಣುಮಗು ಬೇಗ ಹೊಂದಿಕೊಳ್ಳುತ್ತೆ

‘ಕುಟುಂಬಕ್ಕೆ ಹೆಣ್ಣುಮಗು ಬೇಗ ಹೊಂದಿಕೊಳ್ಳುತ್ತದೆ. ಆದ್ದರಿಂದ ಹೆಣ್ಣುಮಕ್ಕಳೇ ಬೇಕು ಎನ್ನುವವರ ಸಂಖ್ಯೆ ಹೆಚ್ಚಿದೆ’ ಎನ್ನುವುದು ‘ಟೇಕ್‌ ಕೇರ್‌’ ದತ್ತುಕೇಂದ್ರ ನಡೆಸುತ್ತಿರುವ ಮೀನಾ ಅವರ ಅಭಿಪ್ರಾಯ.

‘ಹೆಣ್ಣುಮಕ್ಕಳ ಮಾರಾಟ ಜಾಲದಲ್ಲಿ ಸಕ್ರಿಯರಾಗಿರುವವರ ಬಗ್ಗೆ ನಾವು ಎಚ್ಚರ ವಹಿಸಬೇಕಿದೆ. ಹೀಗಾಗಿ ಹೆಣ್ಣು ಮಕ್ಕಳನ್ನು ದತ್ತು ನೀಡುವುದಕ್ಕೆ ಇರುವ ಕಾನೂನು ಬಿಗಿಗೊಳಿಸಲಾಗಿದೆ. ಇದರ ಹೊರತಾಗಿಯೂ ಬಾಲೆಯರನ್ನೇ ಬಯಸಿ ಬರುವ ಪೋಷಕರ ಸಂಖ್ಯೆ ಹೆಚ್ಚುತ್ತಿದೆ’ ಎನ್ನುತ್ತಾರೆ ಅವರು.

ಬಾಲಿವುಡ್ ನಟಿ ಸುಶ್ಮಿತಾ ಸೇನ್‌ ಅವರಂತೆ, ‘ಸಿಂಗಲ್‌ ಪೇರೆಂಟ್‌’ಗಳ ಸಂಖ್ಯೆಯೂ ನಗರದಲ್ಲಿ ಈಚೆಗೆ ಹೆಚ್ಚುತ್ತಿದೆ. ಇಂಥವರೂ ಹೆಣ್ಣುಮಕ್ಕಳನ್ನು ಹೆಚ್ಚು ಇಷ್ಟಪಡುತ್ತಾರೆ ಎನ್ನುತ್ತಾರೆ ಅವರು.

***
ಹೆಣ್ಣುಮಗುವನ್ನು ದತ್ತು ಪಡೆದರೆ ಬದುಕು ಎಷ್ಟು ಸುಂದರ ಎನ್ನುವುದಕ್ಕೆ ನನಗಿಂತ ಬೇರೆ ಉದಾಹರಣೆ ಬೇಕಿಲ್ಲ. ಮೂರು ಗಂಡುಮಕ್ಕಳಿದ್ದರೂ ಮೂರು ಹೆಣ್ಣುಮಕ್ಕಳನ್ನು ದತ್ತು ಪಡೆದಿದ್ದೇನೆ.

ಡಾ. ಅಲೋಮಾ ಲೋಬೊ
ದತ್ತು ಸಹಕಾರ ಸಂಸ್ಥೆ- ಕರ್ನಾಟಕದ ಅಧ್ಯಕ್ಷೆ

***
ನನಗೆ ಗಂಡುಮಗುವಿಗಿಂತ ಹೆಣ್ಣುಮಗುವಿನ ಮೇಲೆಯೇ ಹೆಚ್ಚು ಪ್ರೀತಿ. ಪುಟ್ಟಿ ತೋರಿಸುವಷ್ಟು ಪ್ರೀತಿ ಪುಟ್ಟ ತೋರಿಸಲಾರ ಎನ್ನುವುದು ನನ್ನ ಭಾವನೆ.

ಸುಶ್ಮಿತಾ ಸೇನ್ ( ವಿಶ್ವಸುಂದರಿ ಮತ್ತು ಬಾಲಿವುಡ್ ನಟಿ), 2009ರಲ್ಲಿ ಹೆಣ್ಣುಮಗುವನ್ನು ದತ್ತಕಕ್ಕೆ ಪಡೆದು ಭಾರಿ ಸುದ್ದಿಯಾಗಿದ್ದರು


ದತ್ತು ಪಡೆದ ಮಕ್ಕಳ ವಿವರ

ವರ್ಷ ಗಂಡುಮಕ್ಕಳು ಹೆಣ್ಣುಮಕ್ಕಳು
2014–15 1631 2293
2015–16 1688 2300
2016–17 1156 1855

  2017ರಲ್ಲಿ ಒಟ್ಟು 1795 ಮಂದಿ ದತ್ತುಮಕ್ಕಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಬಹುತೇಕರಿಗೆ ಹೆಣ್ಣುಮಗುವನ್ನೇ ಮನೆಗೆ ಕರೆದೊಯ್ಯುವ ಆಸೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.