ADVERTISEMENT

ಚುರುಮುರಿ | ಗುಂಪಿನಲ್ಲಿ ಗೋವಿಂದ

ಕೆ.ವಿ.ರಾಜಲಕ್ಷ್ಮಿ
Published 24 ಜೂನ್ 2021, 19:45 IST
Last Updated 24 ಜೂನ್ 2021, 19:45 IST
ಚುರುಮುರಿ
ಚುರುಮುರಿ   

ಮನೆಯಲ್ಲಿ ಬಿಗುವಿನ ವಾತಾವರಣ. ಪರೀಕ್ಷೆ ರಹಿತ, ಸಹಿತ ಉತ್ತೀರ್ಣ, ಗ್ರೇಡ್ ಕುರಿತು ಚರ್ಚೆ.

‘ನಮಗೂ ಪರೀಕ್ಷೆ ಬರೆಸದೆಯೇ ಪ್ರಮೋಟ್ ಮಾಡಬೇಕಿತ್ತು. ಪಿ.ಯು ಇನ್‌ಕಂಪ್ಲೀಟ್‌ ಬದಲಿಗೆ ಡಿಗ್ರಿಗೆ ಸೇರಿ ಬ್ರ್ಯಾಕೆಟ್‌ನಲ್ಲಿ
ಹಾಕ್ಕೋಬಹುದಿತ್ತು, ಸ್ಟೇಟಸ್ ಚೇಂಜ್ ಆಗ್ತಿತ್ತು’ ನನ್ನವಳ ಸಂಕಟ.

‘ಆಗ ನನಗಿಂತ ಬೆಟರ್ ಬಕರಾ ಸಿಕ್ತಿದ್ನಾ?’ ಛೇಡಿಸಿದೆ.

ADVERTISEMENT

‘ನೀವೇ ಬೆಸ್ಟ್ ಅನ್ನಿಸಿತ್ತು ನಮಗೆ, ಆ ಕಾಲಕ್ಕೆ’ ಅತ್ತೆ ನಕ್ಕರು. ನಾನು ತೆಪ್ಪಗಾದೆ.

‘ಈ ಬಾರಿ ಎಸ್ಎಸ್ಎಲ್‌ಸಿಗೆ ಎರಡೇ ಪೇಪರ್, ಅದೂ ಬಹು ಆಯ್ಕೆ ಪ್ರಶ್ನೆಗಳು...’

‘ಗೊತ್ತಿರೋದಕ್ಕೆ ಸರಿಯಾದ ಉತ್ತರ, ಉಳಿದವಕ್ಕೆ ಇಂಕಿ-ಪಿಂಕಿ-ಪಾಂಕಿ ಲೆಕ್ಕದಲ್ಲಿ ಆಯ್ಕೆ ಮಾಡಿದರೆ ಆಯ್ತು!’ ಪುಟ್ಟಿ ಕಣ್ಣರಳಿಸಿದಳು.

‘ಯಾರನ್ನೂ ಫೇಲ್ ಮಾಡೋಲ್ಲ, ಪರೀಕ್ಷೆಗೆ ಕುಳಿತರೆ ಸಾಕು, ಗುಂಪಿನಲ್ಲಿ ಗೋವಿಂದ’ ನಾನೆಂದೆ.

‘ಹೋಗ್ಲಿ ಬಿಡಿ ಪರಿಸ್ಥಿತಿ ಹಾಗಿದೆ. ಈ ಕೊರೊನಾ ಮನುಷ್ಯನಿಗೆ ಏನೆಲ್ಲಾ ರೀತಿ ಪರೀಕ್ಷೆಗಳನ್ನು ಇಡ್ತಿದೆ ನೋಡಿ. ಅದನ್ನು ಮೀರಿ ಮುಂದುವರಿಯಬೇಕು’ ಅತ್ತೆಯ ಶಾಂತನುಡಿ.

‘ಅಪ್ಪಾ, ಪರೀಕ್ಷೆ ಬರೆಯೋವರಿಗೆಲ್ಲ ಲಸಿಕೆ ಕಡ್ಡಾಯ ಅಂದ್ರೆ ಒಳ್ಳೇದು... 18ರ ಮೇಲಿರೋ ನಮ್ಮ ವರ್ಗಕ್ಕೆ ಲಸಿಕೆ ಮರೀಚಿಕೆ ಆಗಿದೆ’.

‘ಇನ್ನೇನ್ ಮತ್ತೆ ಬೆಳಕು ಹರಿಯೋಕ್ಕೆ ಮೊದಲೇ ಕ್ಯೂ ನಿಂತರೂ ಸರದಿ ಬರುವ ಮೊದಲೇ ಲಸಿಕೆ ಖಾಲಿ. ತಲೆಸುತ್ತು, ಜ್ವರ ಬಂತು, ಲಸಿಕೆ ಪರಿಣಾಮವಲ್ಲ... ಬಿಸಿಲಲ್ಲಿ ಗಂಟೆಗಟ್ಟಲೆ ನಿಂತಿದ್ದಕ್ಕೆ’ ನನ್ನವಳ ಸಪೋರ್ಟು. ‘ನಿಮ್ ಫ್ರೆಂಡ್‌ಗೆ ಹೇಳಿ ಏನಾದ್ರೂ ಮಾಡಬಾರದಾ?’ ಅವಳ ಮಾತು ಮುಗಿಯುವಲ್ಲಿಗೆ ಕಂಠಿ ಪ್ರತ್ಯಕ್ಷ.

ಸಮಸ್ಯೆ ತಿಳಿಯುತ್ತಲೇ, ‘ಅದಕ್ಕೇನಂತೆ, ನಮ್ಮ ಬಾಸ್ ಅಪಾರ್ಟ್‌ಮೆಂಟಲ್ಲಿ ನಾಳೆ ಲಸಿಕೆ ಹಾಕ್ತಾರೆ. ಇವತ್ತು ಎಷ್ಟು ಮಂದಿಗೆ ಅನ್ನೋ ಲಿಸ್ಟ್ ಕೊಡಬೇಕು. ನಾನೇ ಸಹಾಯಕ, ಶ್ರೀಮತಿನೂ ಅಲ್ಲೇ ಹಾಕಿಸ್ಕೊಳ್ತಿದ್ದಾಳೆ, ನಿಮ್ಮದೂ ಕೊಡಿ. ಗುಂಪಿನಲ್ಲಿ ಗೋವಿಂದ ಅನ್ನಿಸಿಬಿಟ್ಟರಾಯ್ತು...’ ಕಂಠಿ ಆಕಳಿಸಿದ ಮೈಮುರಿಯುತ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.