ADVERTISEMENT

ಚುರುಮುರಿ: ನೆಟ್ಟಗಿಲ್ಲದ ನೆಟ್

ಮಣ್ಣೆ ರಾಜು
Published 6 ಜುಲೈ 2021, 19:31 IST
Last Updated 6 ಜುಲೈ 2021, 19:31 IST
   

ಚಟ್ನಿಹಳ್ಳಿಯ ಸೆಂಚುರಿಗೌಡ ತಿಮ್ಮಜ್ಜ, ಐನೋರ ಹೋಟೆಲ್‍ನಲ್ಲಿ ಟೀ ಕುಡಿಯುತ್ತಿದ್ದ. ಪಡ್ಡೆ ಹುಡುಗರ ತಂಡ ಬಂದು, ‘ಅಜ್ಜಾ, ಕಟಿಂಗು, ಶೇವಿಂಗು ಮಾಡಿಸಿಕೊಂಡು ರೆಡಿಯಾಗು, ಎಮ್ಮೆಲ್ಯೆ ಮನೆಗೆ ಹೋಗಿ ಬರೋಣ...’ ಅಂತು.

‘ಯಾಕ್ರಲೇ? ಲಾಕ್‍ಡೌನ್‍ನಲ್ಲಿ ಹಂಚಿದ್ದ ರೇಷನ್ ಕಿಟ್ ಖಾಲಿ ಆಯ್ತಾ?’ ತಿಮ್ಮಜ್ಜ ರೇಗಿದ.

‘ಅಲ್ಲಜ್ಜಾ, ನಮ್ಮೂರಿಗೆ ನೆಟ್ ಕೊಡಿ ಅಂತ ಕೇಳಬೇಕು’ ಅಂದ ಸೀನ.

ADVERTISEMENT

‘ಮೆಟ್ಟು ಕೊಡಿಸಿ ಅಂತ ಎಮ್ಮೆಲ್ಯೆನ ಕೇಳಲಾಗುತ್ತೇನ್ರಲಾ? ಒಂದು ಜೊತೆ ಮೆಟ್ಟು ಕೊಳ್ಳೋ ಯೋಗ್ಯತೆ ಇಲ್ವಾ ನಿಮಗೆ?’

‘ಕಿವುಡಜ್ಜಾ, ಮೆಟ್ಟು ಅಲ್ಲ, ನೆಟ್ಟು... ಇಂಟರ್‌ನೆಟ್ ಬೇಕು ಅಂತ ಕೇಳಬೇಕು’ ಅಂದ ಚಂದ್ರ.

‘ನೆಟ್ಟಾ?... ಅದು ಹೆಂಗಿರ್ತದೆ?’

‘ಯಾವೋನಿಗೆ ಗೊತ್ತು, ಕೊರೊನಾ ವೈರಸ್ ಥರಾ ನೆಟ್ಟು ಕಣ್ಣಿಗೆ ಕಾಣಲ್ಲ. ಅದು ಇಲ್ಲದಿದ್ರೆ ಮಕ್ಕಳು ಆನ್‍ಲೈನ್ ಪಾಠ ಕಲಿಯಕ್ಕಾಗಲ್ಲ’ ಅಂದ ಗಿರಿ.

‘ರೇಷನ್‍ಕಿಟ್ ಇದ್ರೆ ಬದುಕು, ಇಂಟರ್‌ನೆಟ್‌ ಇದ್ರೆ ಭವಿಷ್ಯ ಅನ್ನೋ ಕಾಲ ಇದು. ಪರೀಕ್ಷೆ ಪಾಸ್‍ಗೆ, ಟೈಂ ಪಾಸ್‍ಗೆ ನೆಟ್ ಬೇಕೇಬೇಕು’ ಪರಮೇಶಿ ಹೇಳಿದ.

‘ನಮ್ಮೂರ ಮಕ್ಕಳು ಮರ, ಮಾಳಿಗೆ ಹತ್ತಿ ಹುಡುಕಿದ್ರೂ ನೆಟ್ ಸಿಗ್ತಿಲ್ಲ. ಇಲಿ ಹಿಡಿಯಬಹುದು ನೆಟ್ ಹಿಡಿಯೋದು ಕಷ್ಟ ಆಗಿದೆ. ನಮ್ಮ ಮಕ್ಕಳು ಎಜುಕೇಟೆಡ್ಸ್‌ ಆಗಿ ಭವಿಷ್ಯ ನೆಟ್ಟಗಾಗಲು ನೆಟ್ ಬೇಕು’.

‘ಅಕ್ಕಪಕ್ಕದ ಊರುಗಳಲ್ಲಿ ಹಗಲು-ರಾತ್ರಿ ನೆಟ್ ಸಿಕ್ತದೆ. ನಮ್ಮೂರಿನ ನೆಟ್ ಬರ ನಿವಾರಣೆ ಮಾಡಿ ಮಕ್ಕಳು ಪರೀಕ್ಷೆ ಪಾಸ್ ಆಗಲು ಅನುಕೂಲ ಮಾಡಿಕೊಡಿ ಅಂತ ಎಮ್ಮೆಲ್ಯೆಗೆ ಅರ್ಜಿ ಕೊಟ್ಟು ಬರೋಣ ಬಾ...’ ಸೀನ ಹೇಳಿದ.

‘ನಡೀರಿ ಹೋಗಣ, ಬೋರ್‌ವೆಲ್ಲು ಫೇಲಾದ್ರೂ, ಸ್ಕೂಲ್ ಮಕ್ಕಳು ಫೇಲಾಗಬಾರದು. ಫೇಲಾದ್ರೆ ಊರಿನ ಮಾನ ಹೋಯ್ತದೆ...’ ಅನ್ನುತ್ತಾ ತಿಮ್ಮಜ್ಜ ಮೇಲೆದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.