ADVERTISEMENT

ಚುರುಮುರಿ: ಜೋಡ್ಸೋದು ಅಂದ್ರೆ...

ಬಿ.ಎನ್.ಮಲ್ಲೇಶ್
Published 30 ಮಾರ್ಚ್ 2023, 19:45 IST
Last Updated 30 ಮಾರ್ಚ್ 2023, 19:45 IST
   

‘ಏನೋ ಗುಡ್ಡೆ, ಪ್ಯಾನ್‌ಗೆ ಆಧಾರ್ ಜೋಡಿಸಿದ್ಯಾ? ಆಮೇಲೆ ಪ್ರಾಬ್ಲಂ ಆಗ್ತತಿ ನೋಡು’ ಹರಟೆಕಟ್ಟೆಯಲ್ಲಿ ಗುಡ್ಡೆಯನ್ನು ದುಬ್ಬೀರ ಎಚ್ಚರಿಸಿದ.

‘ಮಗನ ಸ್ಕೂಲ್ ಫೀಜಿಗೆ ರೊಕ್ಕ ಜೋಡಿಸೋದೇ ಒಜ್ಜಿಯಾಗೇತಿ ನಂಗೆ, ಇವನೊಬ್ಬ... ಆಧಾರಂತೆ, ಪ್ಯಾನಂತೆ...’ ಗುಡ್ಡೆ ತಲೆ ಕೊಡವಿದ.

‘ನಿನ್ನವು ನೂರಿರ್ತಾವು, ಹಂಗಂತ ರೂಲ್ಸು ಬಿಡಾಕಾಗುತ್ತಾ? ಜೋಡ್ಸೋದು ಅಂದ್ರೆ ಏನಂತ ತಿಳಿದಿದಿ?’ ದುಬ್ಬೀರ ರೇಗಿದ.

ADVERTISEMENT

‘ಜೋಡ್ಸೋದು ಅಂದ್ರೆ ನನ್ನಂತ ಮಧ್ಯಮ ವರ್ಗದೋರಿಗೆ ಹಾಲಿಗೆ, ಕರೆಂಟಿಗೆ, ಮನಿ ಬಾಡಿಗೆಗೆ, ಗ್ಯಾಸ್‌ಗೆ ರೊಕ್ಕ ಜೋಡ್ಸೋದು ಅಂತ ಅರ್ಥ. ನೀ ಏನಂತ ತಿಳಿದಿದಿ?’ ಗುಡ್ಡೆಗೂ ಸಿಟ್ಟು ಬಂತು.

‘ಲೇಯ್ ನಿಂದಿರ್ಲಿ, ದೇಶದ ಬಗ್ಗೆ ಸ್ವಲ್ಪ ಚಿಂತಿ ಮಾಡು. ದೊಡ್ಡೋರು ನದಿ ಜೋಡ್ಸೋಕೆ, ಜಾತಿ– ಧರ್ಮ ಜೋಡ್ಸೋಕೆ, ಭಾರತ ಜೋಡ್ಸೋಕೆ ಎಷ್ಟು ಕಷ್ಟಪಡ್ತಿದಾರೆ, ನೀನು ಜುಜುಬಿ ಆಧಾರ್- ಪ್ಯಾನ್ ಜೋಡ್ಸೋಕೆ ಎಷ್ಟು ಮಾತಾಡ್ತಿಯಲ್ಲಲೆ...’ ತೆಪರೇಸಿ ಆಕ್ಷೇಪಿಸಿದ.

‘ಮತ್ತೇನ್ ಮಾಡ್ಲಿ? ಜೋಡ್ಸೋಕೆ ರೊಕ್ಕ ಬೇಕಲ್ಲ, ಈಗ ಎರಡು ಸಾವಿರ ಬೇಕು, ನೀವು ಕೊಡ್ತೀರಾ?’ ಗುಡ್ಡೆ ಪ್ರಶ್ನೆಗೆ ಯಾರೂ
ಪಿಟಿಕ್ಕನ್ನಲಿಲ್ಲ.

‘ಈ ರಾಜಕಾರಣಿಗಳು ಕುಕ್ಕರ್‍ರು, ಸೀರೆ ಜೊತೆಗೆ ಇದನ್ನೂ ಒಂದು ಜೋಡ್ಸಿ ಕೊಟ್ಟಿದ್ರೆ ಏನ್ ಗಂಟು ಹೋಗ್ತಿತ್ತಾ?’ ಪರ್ಮೇಶಿಗೂ ಕೋಪ.

ಅದುವರೆಗೆ ಏನೂ ಮಾತಾಡದೆ ಸುಮ್ಮನೆ ಕೂತಿದ್ದ ಕೊಟ್ರೇಶಿಯನ್ನು ಕಂಡು ತೆಪರೇಸಿ ‘ಯಾಕಲೆ ಕೊಟ್ರ ಏನೂ ಮಾತಾಡ್ತಿಲ್ಲ, ಕೈಯಾಗೆ ಏನದು ಪ್ಯಾಕೆಟ್ಟು?’ ಎಂದ.

‘ಇದಾ? ಸೈಡ್ಸು... ಮಸಾಲ ಶೇಂಗಾ, ಚಿಪ್ಸು’.

‘ಅವನ್ಯಾಕೆ ಇಟ್ಕಂಡು ಕುಂತಿದಿ?’

‘ಈ ಸೈಡ್ಸ್‌ಗೆ ‘ಮೇನ್ಸ್’ ಜೋಡಿಸ್ಬೇಕಿತ್ತು... ಏನ್ಮಾಡ್ಲಿ ರೊಕ್ಕಿಲ್ಲ’ ಅಂದ.

ಕೊಟ್ರೇಶಿ ಮಾತಿಗೆ, ಕಾವೇರಿದ್ದ ಹರಟೆಕಟ್ಟೆಯಲ್ಲಿ ಒಮ್ಮೆಗೇ ನಗುವಿನ ಅಲೆ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.