ADVERTISEMENT

ಕಾಡಾನೆ ದಾಳಿಗೆ ಸಿಗದ ಪರಿಹಾರ

ರಾಜ್ಯ ಕೃಷಿ ಉತ್ಪಾದಕ ರೈತ ಸಂಘದ ಪದಾಧಿಕಾರಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 10:36 IST
Last Updated 15 ಮಾರ್ಚ್ 2018, 10:36 IST

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಆನೆ ದಾಳಿಯಲ್ಲಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲ ಹಾಗೂ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ರಾಜ್ಯ ಕೃಷಿ ಉತ್ಪಾದಕ ರೈತರ ಸಂಘದ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನಾದ್ಯಂತ ಕಾಡು ಪ್ರಾಣಿಗಳಿಂದ ರೈತರು ನಷ್ಟ ಅನುಭವಿಸಿದ್ದರೂ ಅರಣ್ಯ ಇಲಾಖೆ ಏಳೆಂಟು ವರ್ಷಗಳಿಂದ ಪರಿಹಾರ ನೀಡುತ್ತಿಲ್ಲ. ಬೆಸ್ಕಾಂ ನಿಗದಿತ ಸಮಯಕ್ಕೆ ವಿದ್ಯುತ್ ನೀಡದೆ ಮನಬಂದಂತೆ ಸರಬರಾಜು ಮಾಡುತ್ತಿದೆ. ಗುಣಮಟ್ಟದ ವಿದ್ಯುತ್ ನೀಡದಿರುವುದರಿಂದ ಪಂಪ್ ಸೆಟ್‌ಗಳಿಗೆ ಹಾನಿಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಎಂ.ಡಿ.ಶಿವಕುಮಾರ್ ಮಾತನಾಡಿ, ಕಾಡು ಪ್ರಾಣಿಗಳನ್ನು ನಿಯಂತ್ರಣ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ. ಪ್ರತಿನಿತ್ಯ ರೈತರು ಕಷ್ಟಪಟ್ಟು ಬೆಳೆದ ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿವೆ. ಇತ್ತ ಬೆಳೆ ಕಳೆದುಕೊಂಡು ಅತ್ತ ಪರಿಹಾರವೂ ಇಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ರೈತರನ್ನು ಸರ್ಕಾರಿ ಕಚೇರಿಗಳಲ್ಲಿ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಅವರ ಯಾವುದೇ ಕೆಲಸಗಳು ಆಗುತ್ತಿಲ್ಲ. ಪಹಣಿ, ಜಮೀನಿನ ದಾಖಲೆ ಪಡೆಯಲು ‌ತೊಂದರೆ ಅನುಭವಿಸುತ್ತಿದ್ದಾರೆ. ಜಮೀನಿನ ಖಾತೆ, ಸಾಗುವಳಿ ಚೀಟಿ ನೀಡುತ್ತಿಲ್ಲ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಇದನ್ನು ಸರಿಪಡಿಸದಿದ್ದರೆ ತಾಲ್ಲೂಕು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾ
ಗುವುದು ಎಂದು ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಶ್ಯಾನುಬೋಗನಹಳ್ಳಿ ರವಿ ಮಾತನಾಡಿ, ಆನೆಗಳ ದಾಳಿ ಪ್ರತಿದಿನ ಸಾಮಾನ್ಯವಾಗಿದೆ. ರೈತರು ಪ್ರಾಣ ಭಯದಿಂದ ಜಮೀನುಗಳ ಕಡೆಗೆ ಹೋಗದಂತಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳಬೇಕಾದ ಸ್ಥಿತಿ ಇದೆ. ಇಷ್ಟಾದರೂ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಶಾಶ್ವತವಾಗಿ ಓಡಿಸುವ ಕೆಲಸ ಮಾಡುತ್ತಿಲ್ಲ. ಇದರಿಂದ ರೈತರ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಅಳಲು ತೋಡಿಕೊಂಡರು.

ಸಂಘದ ಅಧ್ಯಕ್ಷ ಸುಜೀವನ್‌ ಕುಮಾರ್ ಮಾತನಾಡಿ, ರೈತರ ಸಮಸ್ಯೆಗಳನ್ನು ಸರಿಪಡಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ರೈತರ ಮೇಲೆ ಅಧಿಕಾರಿಗಳಿಂದ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕಾಡು ಪ್ರಾಣಿಗಳ ಹಾನಿಯಿಂದಾಗಿರುವ ಪರಿಹಾರ ನೀಡುವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ. ಬೆಸ್ಕಾಂ ಅಧಿಕಾರಿಗಳು ಹಾಜರಾಗ
ದಿರುವುದರಿಂದ ರಾತ್ರಿಯಿಡೀ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಮುಖಂಡರಾದ ಅನ್ನದಾನಪ್ಪ, ಗಿರೀಶ್ ಬಾಬು, ರಾಜು, ಕಲಾವತಿ, ಎಂ.ಪಿ.ಚೇತನ್, ಶಿವಲಿಂಗಯ್ಯ, ವಾಸು, ಮಾರೇಗೌಡ, ಬಸವರಾಜೇ ಅರಸು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.