ADVERTISEMENT

ವಸ್ತ್ರಸಂಹಿತೆ ಸಭ್ಯತೆಯ ಎಲ್ಲೆ ಮೀರದಿರಲಿ: ಚರ್ಚೆಯಲ್ಲಿ ತಜ್ಞರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 17:35 IST
Last Updated 22 ಜುಲೈ 2021, 17:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಶಿಕ್ಷಕಿಯರು ಗೌರವಾರ್ಹವಾದ ಉಡುಗೆ ಧರಿಸಿ ಪಾಠ ಮಾಡಿದರೆ ಸಾಕು. ಯಾವುದೇ ಮತ, ಧರ್ಮ, ಪಂಥ ಆಚಾರ ವಿಚಾರಕ್ಕೆ ಇದನ್ನು ತಾಳೆ ಹಾಕಬಾರದು ಎಂಬುದು ‘ಪ್ರಜಾವಾಣಿ ಫೇಸ್‌ಬುಕ್‌ ಲೈವ್‌’ ಸಂವಾದದಲ್ಲಿ ಚರ್ಚೆಯಾಯಿತು.

ಮಕ್ಕಳಿಗೆ ಬೋಧಿಸುವ ಶಿಕ್ಷಕಿಯರು ಅವರಿಗೆ ಮಾರ್ಗದರ್ಶಕಿಯರೂ ಆಗಿರುತ್ತಾರೆ. ಹಾಗಾಗಿ, ಮಕ್ಕಳು ಶಿಕ್ಷಕಿಯರನ್ನು ನೋಡಿ ಕಲಿಯುವುದು ಇದೆ. ಈ ಹಿನ್ನೆಲೆಯಲ್ಲಿ ಶಿಕ್ಷಕಿಯರು ಸಭ್ಯತೆಯ ಎಲ್ಲೆ ಮೀರಿ ಉಡುಗೆ ಧರಿಸದಿರುವುದು ಸೂಕ್ತ ಅನ್ನುವ ಅಭಿಪ್ರಾಯ ಅತಿಥಿಗಳಿಂದ ಕೇಳಿಬಂತು.

‘ಶಿಕ್ಷಕಿಯರಿಗೆ ವಸ್ತ್ರಸಂಹಿತೆ ಬೇಕೆ? ಎಂಬುದರ ಕುರಿತು ‘ಪ್ರಜಾವಾಣಿ’ ಗುರುವಾರ ಆಯೋಜಿಸಿದ್ದ ಈ ಸಂವಾದದಲ್ಲಿ ಅತಿಥಿಗಳು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ.

ADVERTISEMENT

ವಸ್ತ್ರಸಂಹಿತೆಗೆ ಪುರುಷ–ಮಹಿಳೆ ತಾರತಮ್ಯ ಬೇಡ

ಹಿಂದಿನಿಂದಲೂ ಒಪ್ಪಿತವಾದದ್ದು ನಡೆದುಕೊಂಡು ಬಂದಿರಬೇಕಾದರೆ ಅದನ್ನು ಮತ್ತೆ ಚರ್ಚಿಸುವ ಅಗತ್ಯವಿದೆಯೇ? ನೇರವಾಗಿ ಸ್ಪಷ್ಟವಾಗಿ ಹೇಳುವುದಾದರೆ ಶಿಕ್ಷಕರು ಹೇಗೆ ಪಾಠ ಮಾಡುತ್ತಾರೆ. ಅವರ ಪಾಠ ಎಷ್ಟರಮಟ್ಟಿಗೆ ತಲುಪುತ್ತದೆ ಅನ್ನೋದಷ್ಟೇ ಮುಖ್ಯ ಹೊರತು ಅವರು ಧರಿಸುವ ಉಡುಪು ಅಲ್ಲ.

ಆದರೆ, ಪುಟ್ಟ ಮಕ್ಕಳು, ಹದಿಹರೆಯದವರು ಇದ್ದಾಗ ಶಿಸ್ತಿನ ಕಾರಣಕ್ಕಾಗಿ ಸಮವಸ್ತ್ರ ರೂಪಿಸುವುದು ಉಚಿತ. ವಸ್ತ್ರಸಂಹಿತೆ ರೂಪಿಸುವಾಗ ಪುರುಷ–ಮಹಿಳೆ ಅನ್ನುವ ತಾರತಮ್ಯ ಬೇಡ. ಸಭ್ಯತೆ ಎಂದು ಏನನ್ನು ಪರಿಗಣಿಸಲಾಗಿದೆಯೋ ಅಂಥ ಉಡುಪು ಧರಿಸಿದರೆ ಸಾಕು. ಯಾವುದೇ ಮತ, ಧರ್ಮ, ಪಂಥ ಆಚಾರ ವಿಚಾರಕ್ಕೆ ಇದನ್ನು ತಾಳೆ ಹಾಕಬಾರದು. ಯಾವುದೇ ಶಿಕ್ಷಣ ಸಂಸ್ಥೆಗೆ ಒಂದು ಧೋರಣೆ ಇರುತ್ತದೆ. ಅದನ್ನು ಅನುಸರಿಸಲು ತನ್ನ ಸಿಬ್ಬಂದಿಗೆ ವಸ್ತ್ರಸಂಹಿತೆ ರೂಪಿಸಿದರೆ ಅದನ್ನು ಒಪ್ಪೋಣ. ಹಾಗಂತ ಅದು ಆದೇಶವಾಗಬಾರದು. ಮುಖ್ಯವಾಗಿ ಶಿಕ್ಷಣದ ಕಡೆಗೆ ಮಕ್ಕಳನ್ನು ಸೆಳೆಯುವ ಕೆಲಸ ಮಾಡಬೇಕು.

–ಅಪರ್ಣಾ ವಸ್ತಾರೆ, ನಟಿ, ನಿರೂಪಕಿ


ಮಕ್ಕಳಿಗೆ ಪರಿಚಿತ ಉಡುಪು ವಸ್ತ್ರಸಂಹಿತೆಯಾದರೆ ತಪ್ಪಿಲ್ಲ

‘ಮಗು ಮನೆಯಲ್ಲಿ ಬೆಳೆದಿರುವ ಸಹಜ ವಾತಾವರಣವನ್ನೇ ಶಾಲೆಗಳಲ್ಲೂ ಕೊಡಿ’ ಎಂದು ಎನ್‌ಇಪಿ 2020 ಒತ್ತಿ ಹೇಳಿದೆ. ‘ಆಟಿಕೆಗಳು, ಶಿಕ್ಷಣಕ್ಕೆ ಬಳಸುವ ಸಾಧನಗಳು (ಟೀಚಿಂಗ್ ಟೂಲ್ಸ್‌) ಸ್ಥಳೀಯ ಸಂಸ್ಕೃತಿಯನ್ನು ಪ್ರತಿನಿಧಿಸುವಂತಿರಬೇಕು’ ಎಂದೂ ತಿಳಿಸಿದೆ. 2017ರ ಸರ್ವೆ ಪ್ರಕಾರ ಗ್ರಾಮೀಣ ಮಹಿಳೆಯರು ಶೇ 85ರಷ್ಟು, ನಗರಗಳಲ್ಲಿ ಶೇ 75ರಷ್ಟು ಮಹಿಳೆಯರು ಸೀರೆ ಉಡುತ್ತಾರೆ. ಯಾವುದೇ ಹವಾಮಾನ, ವಾತಾವರಣಕ್ಕೆ ಒಗ್ಗುವ ಉಡುಪು ಸೀರೆ. ಹಾಗಾಗಿ, ಮಕ್ಕಳಿಗೆ ಪರಿಚಿತವಾಗಿರುವ ಉಡುಪು ಸೀರೆ ಆಗಿರುವುದರಿಂದ ಶಿಕ್ಷಕರಿಗೆ ಸೀರೆಯ ವಸ್ತ್ರಸಂಹಿತೆ ನೀಡಲಾಗಿದೆ.

ಐದು ಸಾವಿರ ವರ್ಷಗಳಿಂದ ಸೀರೆ ಬದುಕಿದೆ ಎಂದರೆ ಅದು ಬಲವಂತವಾಗಿ ಹೇರಿರುವ ಸಂಪ್ರದಾಯವಲ್ಲ. ಅದು ಆರಾಮದಾಯಕ ಆಗಿದ್ದರಿಂದಲೇ ಜನಪ್ರಿಯತೆ ಗಳಿಸಿರಬಹುದು. ವಸ್ತ್ರಸಂಹಿತೆಯನ್ನು ಡಿಕ್ಟೇಟ್ ಮಾಡುವುದು ಸಮಾಜ. ಹಾಗಂತ ಸೀರೆ ಉಟ್ಟುಕೊಳ್ಳಲು ಶಾಸನ ಬರೆಯಬೇಕು ಅಂತಲ್ಲ. ಕಲಿಕೆ ತಾಯಿಂದ ಮಾತ್ರ ಸಾಧ್ಯವಾಗುವಂಥದ್ದು. ಹಾಗಾಗಿ, ತಾಯಿ ಧರಿಸುವ ಉಡುಪನ್ನು ಶಿಕ್ಷಕಿಯರೂ ಧರಿಸಿದಾಗ ಮಕ್ಕಳಿಗೆ ಮನೆಯ ವಾತಾವರಣ ದೊರೆತು ಬೇಗ ಕಲಿಯುತ್ತಾರೆ. ಮೈಕಾಣದಂತೆ ಸೀರೆ ಉಡುವುದನ್ನೂ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕಿಯರಿಗೆ ತರಬೇತಿ ಅವಧಿಯಲ್ಲಿ ಕಲಿಸಲಾಗಿರುತ್ತದೆ.

ಧರಿಸುವ ವಸ್ತ್ರ ಗಾಂಭೀರ್ಯತೆ ಮತ್ತು ಶಿಸ್ತನ್ನು ಸೂಚಿಸುತ್ತದೆ. ನಮ್ಮ ಸಂಸ್ಕೃತಿ, ದೇಶದ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಶಿಕ್ಷಕರ ಮೇಲಿದೆ.

– ಕರುಣಾ ಕೆ. ಸಿಂಹ, ಪ್ರಾಧ್ಯಾಪಕಿ, ಶಿಕ್ಷಣ ಸಂಶೋಧಕಿ

ಶಿಕ್ಷಕರ ವ್ಯಕ್ತಿತ್ವ ಮುಖ್ಯ, ವಸ್ತ್ರವಲ್ಲ...

ಶಿಕ್ಷಕರು ಧರಿಸುವ ಉಡುಪಿಗಿಂತ ಅವರ ವ್ಯಕ್ತಿತ್ವವೇ ಪರಿಣಾಮ ಬೀರುತ್ತದೆ ಎಂಬುದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. 2017ರಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಕಳಿಸಿದ್ದ ಅಧಿಸೂಚನೆಯಲ್ಲಿ ಪ್ರತಿ ಪ್ರಾಧ್ಯಾಪಕರಿಗೆ ಡ್ರೆಸ್ ಕೋಡ್ ಮತ್ತು ನೇಮ್ ಪ್ಲೇಟ್ ಹಾಕಬೇಕು. ವಿದ್ಯಾರ್ಥಿಗಳ ಅಭಿಪ್ರಾಯ ಕೇಳಿ ಪ್ರಾಂಶುಪಾಲರು ವರದಿ ಕಳಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಕೈಬಿಡಲಾಯಿತು.

ಸೀರೆ ಉಟ್ಟರೆ ಮೈ ಕಾಣುತ್ತೆ ಅನ್ನುವ ಕಾರಣಕ್ಕಾಗಿಯೇ ನನಗೆ ಗೊತ್ತಿರುವ ಎಷ್ಟೋ ಹೆಣ್ಣುಮಕ್ಕಳು ಬಿ.ಇಡಿ ಮಾಡಲೇ ಇಲ್ಲ. ಥ್ರೋಬಾಲ್, ವಾಲಿಬಾಲ್ ಆಟ ಸೀರೆಯಲ್ಲಿ ಆಡಲು ಸಾಧ್ಯವೇ? ಕೊನೆಯದಾಗಿ ಇದು ದೇಶದ ಸಂಸ್ಕೃತಿ ಕಡೆಗೆ ವಿಷಯಾಂತರವಾಗುತ್ತೆ. ಸಂಸ್ಕೃತಿಯನ್ನು ಸೀರೆಯಲ್ಲಿ ಮಾತ್ರ ಗುರುತಿಸಲು ಸಾಧ್ಯವೇ?

ಶಿಕ್ಷಕರಲ್ಲಿ ಗುಂಪುಗಾರಿಕೆ ಬರಬಾರದು ಅನ್ನುವ ಕಾರಣಕ್ಕಾಗಿ ವಸ್ತ್ರಸಂಹಿತೆ ರೂಪಿಸುವುದು ಅಗತ್ಯ. ಯಾವುದೇ ಡ್ರೆಸ್ ಕೋಡ್ ಆದರೆ, ಅದು ಸಭ್ಯತೆಯ ಎಲ್ಲೆ ಮೀರದಿರಲಿ ಅನ್ನುವ ಎಚ್ಚರಿಕೆ ಇರಬೇಕು. ಒಬ್ಬರಿಗೆ ಸಭ್ಯತೆ ಅಂತ ಕಾಣಿಸಿದ್ದು ಮತ್ತೊಬ್ಬರಿಗೆ ಸಭ್ಯತೆ ಅನ್ನಿಸದಿರಬಹುದು.

ಝೊಹರಾ ಅಬ್ಬಾಸ್‌, ಪ್ರಿನ್ಸಿಪಾಲ್‌, ಶಿಕ್ಷಣ ತಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.