ADVERTISEMENT

ಸಂಪಾದಕೀಯ: ಸ್ವಚ್ಛತಾ ಕಾರ್ಮಿಕರ ಹಿತರಕ್ಷಣೆಗೆ ಸಿಗಲಿ ತ್ವರಿತ ಸ್ಪಂದನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 19:30 IST
Last Updated 8 ಸೆಪ್ಟೆಂಬರ್ 2021, 19:30 IST
ಸಂಪಾದಕೀಯ
ಸಂಪಾದಕೀಯ   

ರಾಜ್ಯದ ನಗರಗಳು ತಕ್ಕಮಟ್ಟಿಗಾದರೂ ಸ್ವಚ್ಛವಾಗಿವೆ ಎಂದಾದರೆ ಅದಕ್ಕೆ ಕಾರಣ ಸ್ವಚ್ಛತಾ ಕಾರ್ಮಿಕರು. ಬಿಸಿಲು, ಮಳೆ, ಚಳಿ ಲೆಕ್ಕಿಸದೆ, ಕೋವಿಡ್‌ನಂತಹ ಸಾಂಕ್ರಾಮಿಕ ಕಾಯಿಲೆ ಕಾಣಿಸಿಕೊಂಡರೂ ಕಂಗೆಡದೆ ಅವರು ತಮ್ಮ ಕೆಲಸ ಮಾಡುತ್ತಿರುವುದರಿಂದಲೇ ನಗರದ ನಿವಾಸಿಗಳು ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ. ಹಬ್ಬ ಹರಿದಿನಗಳಂದೂ ರಜೆ ಪಡೆಯದೆ ನಗರದ ಸ್ವಚ್ಛತೆಗಾಗಿ ದುಡಿಯುವ ಅವರ ಬದುಕಿನ ಚಿತ್ರಣ ಹೇಗಿದೆ, ಗೌರವಯುತವಾಗಿ ಬದುಕುವ ವಾತಾವರಣ ಇದೆಯೇ ಎಂದು ನೋಡಿದರೆ ನಿರಾಸೆಯಾಗುತ್ತದೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ಸ್ವಚ್ಛತಾ ಕಾರ್ಮಿಕರ ಪರಿಸ್ಥಿತಿಯಂತೂ ಚಿಂತಾಜನಕವಾಗಿದೆ. ಕಸ ಗುಡಿಸುವ ಕಾರ್ಯದಲ್ಲಿ ತೊಡಗಿರುವ 16 ಸಾವಿರ ಪೌರಕಾರ್ಮಿಕರಿಗೆ 2018ರಿಂದಬಿಬಿಎಂಪಿಯಿಂದಲೇ ನೇರವಾಗಿ ಪ್ರತೀ ತಿಂಗಳು ಸಂಬಳ ಪಾವತಿಯಾಗುತ್ತಿದೆ. ಆದರೆ, ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೊ ಟಿಪ್ಪರ್‌ಗಳ ಚಾಲಕರು ಹಾಗೂ ಸಹಾಯಕರು ಈಗಲೂ ಗುತ್ತಿಗೆ ಪದ್ಧತಿಯಲ್ಲೇ ಮುಂದುವರಿದಿದ್ದಾರೆ. ತಮ್ಮನ್ನೂ ‘ವೇತನ ನೇರ ಪಾವತಿ ವ್ಯವಸ್ಥೆ’ಗೆ ತಂದು ಸೇವೆಯನ್ನು ಕಾಯಂಗೊಳಿಸಬೇಕು ಎಂಬ ಅವರ ಬೇಡಿಕೆ ಇನ್ನೂ ಈಡೇರಿಲ್ಲ. ಅವರಿಗೆ ತಿಂಗಳ ಸಂಬಳವೂ ನಿಗದಿತ ಸಮಯಕ್ಕೆ ಸರಿಯಾಗಿ ಕೈಸೇರುತ್ತಿಲ್ಲ. ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಕೆಲಸ ಮಾಡುವ ಅವರಿಗೆ ಸಿಗುವುದು ತಿಂಗಳಿಗೆ ₹ 12,500 ಮಾತ್ರ. ಬಿಬಿಎಂಪಿಯ ಕೆಲವು ವಲಯಗಳ ಸ್ವಚ್ಛತಾ ಕಾರ್ಮಿಕರು ಐದು ತಿಂಗಳು ಗಳಿಂದ ಸಂಬಳದ ಮುಖವನ್ನೇ ನೋಡಿಲ್ಲ. ಬೆಲೆ ಏರಿಕೆಯಿಂದಾಗಿ ಪ್ರತಿಯೊಂದು ಸಾಮಗ್ರಿಯೂ ತುಟ್ಟಿಯಾಗುತ್ತಿರುವ ಈ ಸಂದರ್ಭದಲ್ಲಿ ಅವರು ಬದುಕು ಸಾಗಿಸುವುದೇ ದುಸ್ತರವಾಗಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲೂ ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಅನೇಕರದು. ವೆಚ್ಚ ಭರಿಸಲಾಗದೇ ಮಕ್ಕಳ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಕೆಲಸಕ್ಕೆ ಹಚ್ಚಿರುವ ನಿದರ್ಶನಗಳೂ ಇವೆ.

ಕೋವಿಡ್‌ ಮೊದಲನೇ ಅಲೆ ಹಾಗೂ ಎರಡನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲೂ ನಿತ್ಯ ಎಲ್ಲ ಮನೆ ಗಳ ಕಸ ಸಂಗ್ರಹಿಸಿದ್ದ ಸ್ವಚ್ಛತಾ ಕಾರ್ಮಿಕರ ಸುರಕ್ಷತೆ ಯನ್ನು ಕಡೆಗಣಿಸಲಾಗಿತ್ತು. ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿಕೊಂಡು ಕೆಲಸ ಮಾಡುವ ಅವರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆಯ ವ್ಯವಸ್ಥೆಯೂ ಇಲ್ಲ. ಈ ಬಗ್ಗೆ ಟೀಕೆ ವ್ಯಕ್ತವಾದಾಗ ವರ್ಷದಲ್ಲಿ ಒಂದೋ ಎರಡೋ ಸಲ ಆರೋಗ್ಯ ತಪಾಸಣೆ ನಡೆಸಿ ಬಿಬಿಎಂಪಿ ಕೈತೊಳೆದುಕೊಳ್ಳುತ್ತಿದೆ. ಒಂದೆರಡು ಬಾರಿ ಮಾಸ್ಕ್‌, ಸ್ಯಾನಿಟೈಸರ್, ಮುಖಕವಚಗಳನ್ನು ವಿತರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆ ಬಳಿಕ ಅವರ ಸುರಕ್ಷತೆಯನ್ನು ಪಾಲಿಕೆ ಮರೆತೇಬಿಟ್ಟಿದೆ. ಈಗಲೂ, ಬರಿಗೈಯಲ್ಲಿ ಕಸವನ್ನು ಸಂಗ್ರಹಿಸುವ ಅವರ ಪಾಡು ಕರುಣಾಜನಕ. ಆರೋಗ್ಯ ಕ್ಷೇತ್ರದವರ ಬಗ್ಗೆ ವಹಿಸಿದ ಕಾಳಜಿಯನ್ನು ಸರ್ಕಾರವು ಪೌರಕಾರ್ಮಿಕರ ಬಗ್ಗೆ ತೋರಿಸಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ. ಕೋವಿಡ್‌ನಿಂದ ಮೃತಪಟ್ಟ ಪೌರಕಾರ್ಮಿಕರ ಕುಟುಂಬಕ್ಕೆ ತಕ್ಷಣವೇ ಪರಿಹಾರ ನೀಡುವ ವಾಗ್ದಾನವನ್ನು ಸರ್ಕಾರ ಮಾಡಿತ್ತು. ಆದರೆ, ವರ್ಷ ಕಳೆದ ಬಳಿಕವೂ ಸಂತ್ರಸ್ತ ಕುಟುಂಬಗಳಿಗೆ ₹ 30 ಲಕ್ಷ ಪರಿಹಾರಧನ ಪಾವತಿ ಆಗದಿರುವುದು ಸರ್ಕಾರದ ಉದಾಸೀನ ಧೋರಣೆಗೆ ಸಾಕ್ಷಿ. ‘ಆರೋಗ್ಯ ಕಾರ್ಯಕರ್ತರಂತೆ ಪೌರಕಾರ್ಮಿಕರನ್ನೂ ಆಗಾಗ ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು. ಕೋವಿಡ್‌ ಕರ್ತವ್ಯ ನಿರ್ವಹಿಸುವ ಇತರ ಸರ್ಕಾರಿ ನೌಕರರಿಗೆ ನೀಡುವಂತೆ ಪೌರಕಾರ್ಮಿಕರಿಗೂ ತಿಂಗಳಿಗೆ ₹ 10 ಸಾವಿರ ಅಪಾಯ ಭತ್ಯೆ ನೀಡಬೇಕು’ ಎಂಬ ಬೇಡಿಕೆಗಳನ್ನು ಅವರು ಸರ್ಕಾರದ ಮುಂದಿಟ್ಟಿದ್ದಾರೆ. ಈ ಕುರಿತು ಪರಿಶೀಲಿಸಿ, ನ್ಯಾಯೋಚಿತವೆನಿಸಿದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು.ಪೌರಕಾರ್ಮಿಕರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಕೆಲಸದ ವೇಳೆ ತುಸು ವಿರಾಮ ಪಡೆಯಲು ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕು. ಶೌಚಾಲಯಗಳ ವ್ಯವಸ್ಥೆ ಕಲ್ಪಿಸಬೇಕು. ಕುಡಿಯಲು ಬಿಸಿನೀರು ಒದಗಿಸಬೇಕು ಎಂಬ ಬೇಡಿಕೆಗಳೂ ಇವೆ. ಬೆಂಗಳೂರಿನಲ್ಲಿ ಎರಡು ವಾರ್ಡ್‌ಗಳಲ್ಲಿ ಬಿಬಿಎಂಪಿ ಇಂತಹ ಸೌಕರ್ಯಗಳನ್ನು ಕಲ್ಪಿಸಿತ್ತು. ಈ ಸೌಕರ್ಯಗಳನ್ನು ಎಲ್ಲ ವಾರ್ಡ್‌ಗಳಿಗೆ ವಿಸ್ತರಿಸುವ ಭರವಸೆ ಇನ್ನೂ ಈಡೇರಿಲ್ಲ.

ರಾಜ್ಯದಲ್ಲಿ ಸುಮಾರು 42 ಸಾವಿರ ಪೌರಕಾರ್ಮಿಕರು ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ 22 ಸಾವಿರ ಮಂದಿಗೆ ಸ್ವಂತ ಸೂರು ಇಲ್ಲ. ಬಹುತೇಕರು ಈಗಲೂ ಕೊಳೆಗೇರಿಗಳಲ್ಲಿ ನೆಲೆಸಿದ್ದಾರೆ.‘ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ’ ಅಡಿ ವಸತಿ ಹಂಚಿಕೆ ಮಾಡುವ ಬಿಬಿಎಂಪಿಯ ಕಾರ್ಯಕ್ರಮವೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಎರಡು ಕಂತುಗಳಲ್ಲಿ 272 ಫಲಾನುಭವಿಗಳಿಗೆ ವಸತಿ ಹಂಚಲಾಗಿತ್ತು. ಬಳಿಕ ಈ ಕಾರ್ಯಕ್ರಮವೂ ಮೂಲೆಗುಂಪಾಗಿದೆ. ಪೌರಕಾರ್ಮಿಕರ ಬದುಕು ಮತ್ತು ಕೆಲಸದ ಸ್ಥಿತಿಗತಿ ಸುಧಾರಣೆಗೆ ಸಂಬಂಧಿಸಿದಂತೆ ಐಪಿಡಿ ಸಾಲಪ್ಪ ನೇತೃತ್ವದ ಸಮಿತಿಯುಸರ್ಕಾರಕ್ಕೆ ವರದಿ ನೀಡಿತ್ತು. ಅದರ ಶಿಫಾರಸಿನಂತೆ ಪ್ರತೀ 500 ಮಂದಿಗೆ ಒಬ್ಬ ಪೌರಕಾರ್ಮಿಕ ನಿಯೋಜನೆ ಆಗಬೇಕಿದೆ. ಆದರೆ, ಈಗ ಪ್ರತೀ 700 ಮಂದಿಗೆ ಒಬ್ಬರು ನಿಯೋಜನೆ ಆಗಿದ್ದಾರೆ. ಇದು, ಪೌರಕಾರ್ಮಿಕರ ಕೆಲಸದ ಹೊರೆಯನ್ನು ಹೆಚ್ಚಿಸಿದೆ. ಪೌರಕಾರ್ಮಿಕರು ಪ್ರತಿಬಾರಿ ಪ್ರತಿಭಟನೆ ನಡೆಸಿದಾಗಲೂ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುತ್ತದೆಯಾದರೂ ಆ ಬಳಿಕ ಬೇಡಿಕೆಗಳ ಅನುಷ್ಠಾನಕ್ಕೆ ಇಚ್ಛಾಶಕ್ತಿ ತೋರಿಸುತ್ತಿಲ್ಲ. ಸ್ವಚ್ಛತಾ ಕಾರ್ಯದ ಮಹತ್ವ ವನ್ನು ಅರಿತು ಸರ್ಕಾರವು ಪೌರಕಾರ್ಮಿಕರ ಹಿತ ಕಾಯಬೇಕು. ಗೌರವಯುತ ಬದುಕು ಕಟ್ಟಿಕೊಳ್ಳಲು ಅವರಿಗೆ ನೆರವಾಗಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.