ADVERTISEMENT

ಸಂಪಾದಕೀಯ: ‘ಮುಕ್ತ ಸಮಾಜ’ದ ಪ್ರತಿಜ್ಞೆ ಆತ್ಮಾವಲೋಕನಕ್ಕೆ ಪ್ರೇರಣೆಯಾಗಲಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 2:09 IST
Last Updated 19 ಜೂನ್ 2021, 2:09 IST
   

ಭಾಷೆ ಮತ್ತು ಪದಗಳ ಅರ್ಥಕ್ಕೆ ದೊಡ್ಡ ಸವಾಲು ಎದುರಾಗಿರುವ ಜಗತ್ತಿನಲ್ಲಿ ನಾವು ಇಂದು ಬದುಕು ತ್ತಿದ್ದೇವೆ. ಪದಗಳು ತದ್ವಿರುದ್ಧ ಅರ್ಥ ಧ್ವನಿಸುತ್ತವೆ. ಬೇರೆ ಬೇರೆ ಜನರಿಗೆ ಬೇರೆ ಬೇರೆ ಅರ್ಥಗಳನ್ನು ಸ್ಫುರಿಸುತ್ತವೆ ಅಥವಾ ಅರ್ಥವೇ ಇಲ್ಲದ ಖಾಲಿ ಸದ್ದಷ್ಟೇ ಆಗಿವೆ. ಭಾಷೆಗಳ ರಾಜಕೀಕರಣವು ಸುಳ್ಳು ಮತ್ತು ತಪ್ಪು ಮಾಹಿತಿಯನ್ನೇ ಒಳಗೊಂಡಿರುವ ಸಂಪೂರ್ಣವಾಗಿ ಹೊಸದೇ ಆದ ಭಾಷೆಗಳನ್ನು ಸೃಷ್ಟಿಸಿದೆಯೇ ಎಂಬುದು ಚರ್ಚಾರ್ಹ. ಆದರೆ, ಹೊಸದಾಗಿ ಸೃಷ್ಟಿಯಾದ ಭಾಷೆಯು ಇತಿಹಾಸ ಮತ್ತು ನಾಗರಿಕತೆಯ ಮೂಲಕ ರೂಪುಗೊಂಡ ಮಾನವ ಕುಲದ ಶ್ರೇಷ್ಠವಾದ ಚಿಂತನೆಗಳನ್ನು ತಪ್ಪಾಗಿ ನಿರೂಪಿಸಲು ಬಳಕೆಯಾಗುತ್ತಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿಯೇ, ಸ್ವಾತಂತ್ರ್ಯ ಎಂದರೆ ಕೆಲವೊಮ್ಮೆ ಪರತಂತ್ರ, ಪ್ರಜಾಪ್ರಭುತ್ವ ಎಂದರೆ ನಿರಂಕುಶಾಧಿಕಾರ ಎಂಬ ಅರ್ಥ ಉಂಟಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜಿ–7 ಶೃಂಗಸಭೆಯಲ್ಲಿ ಮಾಡಿದ ಭಾಷಣವನ್ನು ಈ ಹಿನ್ನೆಲೆಯಲ್ಲಿ ನೋಡಬಹುದು. ಭಿನ್ನ ದೇಶದ, ಭಿನ್ನ ಭಾಷೆಯ ಅಪರಿಚಿತ ನಾಯಕನೊಬ್ಬ ಮಾಡಿದ ಭಾಷಣದಂತೆ ಅದು ಇತ್ತು. ‘ನಿರಂಕುಶಾಧಿಕಾರ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ತೀವ್ರವಾದ, ಸುಳ್ಳು ಮಾಹಿತಿ ಹಾಗೂ ಆರ್ಥಿಕ ನಿರ್ಬಂಧ’ಗಳಿಂದ ಹೊರಹೊಮ್ಮುವ ಹತ್ತಾರು ಬೆದರಿಕೆಗಳ ವಿರುದ್ಧದ ಹೋರಾಟದಲ್ಲಿ ಭಾರತವು ಸಹಜವಾದ ಮಿತ್ರನಾಗಿದೆ ಎಂದು ಜಗತ್ತಿನ ಪ್ರಮುಖ ಪ್ರಜಾಪ್ರಭುತ್ವ ದೇಶಗಳ ನಾಯಕರಿಗೆ ಮೋದಿ ಹೇಳಿದರು. ಪ್ರಜಾಸತ್ತೆ, ಚಿಂತನೆಯ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯಕ್ಕೆ ಭಾರತವು ಹೇಗೆ ಬದ್ಧವಾಗಿದೆ ಎಂಬುದನ್ನು ವಿವರಿಸಿದರು. ‘ನಿರಂಕುಶಾಧಿಕಾರ, ಚುನಾವಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ, ಮಾಹಿತಿಯ ತಿರುಚುವಿಕೆ, ಸುಳ್ಳು ಮಾಹಿತಿ ವಿನಿಮಯ, ಅಂತರ್ಜಾಲದ ದುಷ್ಪರಿಣಾಮಗಳು, ರಾಜಕೀಯ ಉದ್ದೇಶಕ್ಕಾಗಿ ಅಂತರ್ಜಾಲ ಸ್ಥಗಿತದಿಂದ ಎದುರಾಗುವ ಬೆದರಿಕೆಗಳ ಸಂಕೀರ್ಣ ಸನ್ನಿವೇಶದಲ್ಲಿ ನಾವು ಇದ್ದೇವೆ’ ಎಂಬ ‘ಓಪನ್‌ ಸೊಸೈಟೀಸ್‌’ (ಮುಕ್ತ ಸಮಾಜಗಳು) ಘೋಷಣೆಯನ್ನು ಪ್ರಧಾನಿಯವರೂ ಅನುಮೋದಿಸಿದ್ದಾರೆ.

‘ಅಂತರ್ಜಾಲ ಮತ್ತು ಅದರಾಚೆಗಿನ ಅಭಿವ್ಯಕ್ತಿ ಸ್ವಾತಂತ್ರ್ಯ’ಕ್ಕೂ ಬದ್ಧತೆ ತೋರಿದ್ದಾರೆ. ಈ ಪ್ರತಿಜ್ಞೆಗೆ ಸಹಿ ಹಾಕುವ ಮೂಲಕ ಪ್ರಧಾನಿಯವರು ತಮ್ಮನ್ನು ತಾವೇ ವಂಚಿಸಿಕೊಳ್ಳಲು ಯತ್ನಿಸಿದ್ದಾರೆ ಅಥವಾ ಇತರರನ್ನು ಹಾದಿ ತಪ‍್ಪಿಸಲು ಯತ್ನಿಸಿದ್ದಾರೆ ಎಂಬ ಭಾವನೆ ಮೂಡುತ್ತದೆ. ಏಕೆಂದರೆ, ಘೋಷಣೆಯಲ್ಲಿ ಪಟ್ಟಿ ಮಾಡಲಾದ, ಮುಕ್ತ ಸಮಾಜ ಎದುರಿಸುತ್ತಿರುವ ಹೆಚ್ಚಿನ ಬೆದರಿಕೆಗಳು ಸರ್ಕಾರ, ಸರ್ಕಾರ ನಡೆಸುವವರು ಮತ್ತು ಆಡಳಿತ ಪಕ್ಷದ ನಾಯಕರ ಬೆಂಬಲ ಮತ್ತು ಒತ್ತಾಸೆಯ ಮೂಲಕ ಭಾರತದಲ್ಲಿಯೂ ಕಾಣಸಿಗುತ್ತವೆ.

ADVERTISEMENT

ಟೀಕೆಯನ್ನು ದೇಶದ್ರೋಹ ಎಂದು ಪರಿಗಣಿಸಲಾಗುತ್ತಿದೆ, ಸರ್ಕಾರದ ವಿರುದ್ಧ ಮಾತನಾಡಿದ ಜನರನ್ನು ಜೈಲಿಗೆ ಅಟ್ಟಲಾಗುತ್ತಿದೆ, ವಿರೋಧ ಪಕ್ಷದವರು ಎಂಬ ಒಂದೇ ಕಾರಣಕ್ಕೆ ವಿರೋಧ ಪಕ್ಷದ ನಾಯಕರ ನಿವಾಸಗಳು ಶೋಧಕ್ಕೆ ಒಳಗಾಗುತ್ತಿವೆ, ಜನಾದೇಶವನ್ನು ಬುಡಮೇಲು ಮಾಡಲಾಗಿದೆ ಮತ್ತು ಪ್ರಜಾತಂತ್ರವನ್ನು ದುರ್ಬಲಗೊಳಿಸಲಾಗಿದೆ. ಕಳೆದ ವರ್ಷ, ಜಗತ್ತಿನಲ್ಲಿಯೇ ಅಂತರ್ಜಾಲ ಅತಿ ಹೆಚ್ಚು ಸ್ಥಗಿತ ಆಗಿರುವುದು ಭಾರತದಲ್ಲಿಯೇ. ಎಲ್ಲ ಸ್ವಾತಂತ್ರ್ಯವನ್ನು ಕಡೆಗಣಿಸಲಾಗಿದೆ. ಸತ್ಯವನ್ನು ಮರೆಮಾಚಲು ಸುಳ್ಳು ಮಾಹಿತಿಯ ಬಳಕೆಯಾಗುತ್ತಿದೆ.

ಪ್ರಧಾನಿಯವರು ಸಹಿ ಮಾಡಿದ ಪ್ರತಿಜ್ಞೆಗೆ ತದ್ವಿರುದ್ಧವಾದ ಪರಿಸ್ಥಿತಿಯು ಭಾರತದಲ್ಲಿ ಇದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಕೆಲವು ವರ್ಷಗಳಿಂದ ಮಾಡುತ್ತಿವೆ. ತಾವು ಸಹಿ ಮಾಡಿದ ಪ್ರತಿಜ್ಞೆಯನ್ನು ಗೌರವಿಸಬೇಕು ಎಂದಿದ್ದರೆ ಪ್ರಧಾನಿಯವರು ಕಳೆದ ಏಳು ವರ್ಷಗಳ ಆಳ್ವಿಕೆಯನ್ನು ಮರು ಪರಿಶೀಲನೆಗೆ ಒಡ್ಡಬೇಕಾಗುತ್ತದೆ. ಹಲವು ವರ್ಷಗಳ ಹಿಂದೆ ಈ ದೇಶದ ಜನರು ತಮಗೆ ತಾವೇ ಕೊಟ್ಟುಕೊಂಡ ಸಂವಿಧಾನದ ಆಶಯವನ್ನು ಪ್ರಧಾನಿ ಅರಿಯಬೇಕಾಗುತ್ತದೆ. ಜಿ–7 ರಾಷ್ಟ್ರಗಳ ಮುಕ್ತ ಸಮಾಜ ಪ್ರತಿಜ್ಞೆಗಿಂತ ಉತ್ತಮವಾದ ಮಾರ್ಗದರ್ಶನ ಸಂವಿಧಾನದಲ್ಲಿ ದೊರೆಯುತ್ತದೆ. ಹೀಗೆ ಮಾಡಿದರೆ ಮಾತ್ರ ಜಿ–7 ಪ್ರತಿಜ್ಞೆಗೆ ಮಾಡಿದ ಸಹಿಯಲ್ಲಿ ಇರುವ ವ್ಯಂಗ್ಯ ಮತ್ತು ವಿರೋಧಾಭಾಸದಿಂದ ಹೊರಬರಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.