ADVERTISEMENT

ಒಳನೋಟ: ಶವಗಳನ್ನು ಕಸದಂತೆ ರಾಶಿ ಹಾಕಿದ್ದರು!

19ರ ಹರೆಯದ ಮಗಳನ್ನು ಕಳೆದುಕೊಂಡ ಆ ತಂದೆಗೆ ಸಮಾಧಾನ ಹೇಳುವವರಾರು?

ಕೆ.ಓಂಕಾರ ಮೂರ್ತಿ
Published 8 ಮೇ 2021, 21:30 IST
Last Updated 8 ಮೇ 2021, 21:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಾಮರಾಜನಗರ: ‘ಅಂದು ರಾತ್ರಿ8.20ಕ್ಕೆ ಅಣ್ಣ ಬಾಬು ಫೋನ್‌ ಮಾಡಿ, ಸುಸ್ತಾಗುತ್ತಿದೆ, ಆಮ್ಲಜನಕ ಕೊಡುತ್ತಿಲ್ಲ ಎಂದು ಗೋಳು ಹೇಳಿಕೊಂಡ. ಅಷ್ಟರಲ್ಲಿ ಕರೆ ಕಡಿತಗೊಂಡಿತು. ಮತ್ತೆ ರಿಂಗಾದರೂ ಎತ್ತಲಿಲ್ಲ. ಪರಿಚಿತ ವೈದ್ಯರಿಗೇ ಕರೆ ಮಾಡಿ ಪಿಪಿಇ ಕಿಟ್‌ ಧರಿಸಿ ತಕ್ಷ ಣವೇ ಆಸ್ಪತ್ರೆಗೆ ಧಾವಿಸಿದೆ. ಅಣ್ಣ ಶವವಾಗಿದ್ದ...’

ಬೆಳಿಗ್ಗೆ ಶವವನ್ನು ಪಡೆಯಲು ಹೋದಾಗ ಕೊಠಡಿಯೊಂದರಲ್ಲಿ ಕಸದಂತೆ ರಾಶಿ ಹಾಕಿದ್ದರು. ಇದೆಂಥಾ ವ್ಯವಸ್ಥೆಯೋ? ಇದಕ್ಕೆ ಜಿಲ್ಲಾಧಿಕಾರಿಯೇ ನೇರ ಹೊಣೆ’ ಎಂದು ಶವಗಳ ರಾಶಿಯ ವಿಡಿಯೊ ತೋರಿಸುತ್ತಾ ಆಕ್ರೋಶಭರಿತರಾಗಿದ್ದವರು ಚಂದ್ರಶೇಖರ್‌.

‘ವೈದ್ಯರಿಗೆ ಕರೆ ಮಾಡಿದಾಗ ಆಮ್ಲಜನಕ ಕೊರತೆ ಉಂಟಾಗಿರುವುದನ್ನು ಒಪ್ಪಿಕೊಂಡರು. ಅಲ್ಲದೇ, ರಾತ್ರಿ ಆಮ್ಲಜನಕ ಪೂರೈಕೆ ಆಗದಿದ್ದರೆ ಮತ್ತಷ್ಟು ಸಾವು ಸಂಭವಿಸಲಿದೆ ಎಂದರು. ಜಿಲ್ಲಾಧಿಕಾರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಆಸ್ಪತ್ರೆಯ ಮೊದಲ ಮಹಡಿಗೆ ಮಾತ್ರ ಅಂದು ಆಮ್ಲಜನಕ ಪೂರೈಕೆ ಆಗಿದೆ. ಸಿ.ಸಿ.ಟಿ.ವಿ ಕ್ಯಾಮೆರಾ ತೆಗೆದು ನೋಡಿದರೆ ಬಂಡವಾಳ ಬಯಲಾಗಲಿದೆ’ ಎಂದು ಹರಿಹಾಯ್ದರು.

ADVERTISEMENT

ನಿನ್ನೆ ಇದ್ದಳು; ಇವತ್ತು ಇಲ್ಲ: ಕೊಳ್ಳೇಗಾಲದ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡು, ಲವಲವಿಕೆಯಿಂದ ಓಡಾಡಿಕೊಂಡಿದ್ದ ಯುವತಿ ಕೀರ್ತನಾ, ಈಗ ತಮ್ಮ ಕಣ್ಣಮುಂದೆ ಇಲ್ಲ ಎಂಬ ನೋವು ತಿಮ್ಮರಾಜಿಪುರ ಗ್ರಾಮದ ಜನರದ್ದು. ಕೀರ್ತನಾಳಿಗೆ ಇನ್ನೂ 19ರ ಹರೆಯ. ದುಡಿದು ಪೋಷಕರನ್ನು ಸಾಕಲು ಪಣತೊಟ್ಟಿದ್ದಳು.ಆಕೆಯ ಸಾವು ಇಡೀ ಗ್ರಾಮದ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಉಸಿರಾಟ ತೊಂದರೆ ಎದುರಿಸುತ್ತಿದ್ದ ಕೀರ್ತನಾಳನ್ನು ಕೊಳ್ಳೇಗಾಲ ಆಸ್ಪತ್ರೆಯಿಂದ ಭಾನುವಾರ (ಮೇ 2) ಮಧ್ಯಾಹ್ನ 12 ಗಂಟೆಗೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ಜಿಲ್ಲಾ‌ ಕೋವಿಡ್‌ ಆಸ್ಪತ್ರೆಯಲ್ಲಿ ಬೆಡ್‌ ಇಲ್ಲವೆಂದು ಸ್ಟ್ರೆಚರ್‌ನಲ್ಲೇ ಮಲಗಿಸಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಮ್ಲಜನಕ ಕೊರತೆಯಿಂದ ಮಗಳು ಮೃತಪಟ್ಟಳು. ಜಿಲ್ಲಾಡಳಿತ ಹಾಗೂ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ’ ಎಂದು ತಂದೆ ಚಿಕ್ಕಕುನ್ನಯ್ಯ ಕಣ್ಣೀರಿಟ್ಟಿರು.

ಮೃತ ಜಯಶಂಕರ್‌ ಅವರ ಇಬ್ಬರು ಪುಟ್ಟ ಮಕ್ಕಳಿಗೆ ಏನೆಂದು ಹೇಳುವುದು? ವೃದ್ಧ ತಂದೆ ತಾಯಿಯನ್ನು ಸಂತೈಸುವವರು ಯಾರು? 19ರ ಹರೆಯದ ಮಗಳನ್ನು ಕಳೆದುಕೊಂಡ ಪೋಷಕರ ಎದೆಯಲ್ಲಿ ಅಡಗಿರುವ ನೋವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅರ್ಥವಾಗುತ್ತದೆಯೇ? ಪತಿಯನ್ನು ಕಳೆದುಕೊಂಡ ಪೂರ್ಣಿಮಾ ಅವರಿಗೆ ಆಸರೆ ಯಾರು? ಬರೀ ಪ್ರಶ್ನೆಗಳು..!

ನೋವಿನಲ್ಲೂ ಮೃತರ ಕುಟುಂಬದವರ ಪ್ರಾರ್ಥನೆಯೊಂದೇ; ಇಂಥ ಪರಿಸ್ಥಿತಿ ಮತ್ತೊಬ್ಬರಿಗೆ ಬಾರದಿರಲಿ...

ಇಂದಿಗೂ ಸುಧಾರಿಸದ ವ್ಯವಸ್ಥೆ

ಗಡಿ ಜಿಲ್ಲೆಯೂ ಆಗಿರುವ ಚಾಮರಾಜನಗರದಲ್ಲಿ ಆರೋಗ್ಯ ಸೌಲಭ್ಯಗಳಿಲ್ಲ ಎಂಬುದು ಹಲವಾರು ವರ್ಷಗಳ ದೂರು. ಸದ್ಯ ಜಿಲ್ಲಾಸ್ಪತ್ರೆಯಲ್ಲೇ ಕೋವಿಡ್‌ ಆಸ್ಪತ್ರೆ ತೆರೆದಿದ್ದು, ಪ್ರವೇಶದ್ವಾರ ರಸ್ತೆಗೆ ಅಂಟಿಕೊಂಡಿದೆ. ಪಕ್ಕದಲ್ಲೇ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಅನತಿ ದೂರದಲ್ಲಿ ಎಮರ್ಜೆನ್ಸಿ ವಾರ್ಡ್‌. ಅದರ ಪಕ್ಕದಲ್ಲೇ ಶವ ಸಾಗಿಸಲಾಗುತ್ತದೆ.

ಈ ಕೋವಿಡ್‌ ಆಸ್ಪತ್ರೆಯಲ್ಲಿ ಇರುವುದೇ 152 ಬೆಡ್‌ ವ್ಯವಸ್ಥೆ. ಆದರೆ, 160ಕ್ಕೂ ಹೆಚ್ಚು ಸೋಂಕಿತರನ್ನು ದಾಖಲಿಸಲಾಗಿದೆ. ಕೆಲವೇ ಗಂಟೆಗಳಲ್ಲಿ 24 ಮಂದಿ ಮೃತಪಟ್ಟಿದ್ದರೂ ಚಿಕಿತ್ಸೆ ವ್ಯವಸ್ಥೆ ಇನ್ನೂ ಸರಿ ಹೋಗಿಲ್ಲ. ಕೆಲವರಿಗೆ ಕುರ್ಚಿಗಳಲ್ಲೇ ಕೂರಿಸಿ ಚಿಕಿತ್ಸೆ ಕೊಡುತ್ತಿರುವ ಆರೋಪಗಳಿವೆ. ಜೊತೆಗೆ ವೈದ್ಯರು ಹಾಗೂ ನರ್ಸ್‌ಗಳ ಕೊರತೆಯೂ ಇದೆ.

ಚಾಮರಾಜನಗರ ಪಟ್ಟಣದಲ್ಲಿ ಇರುವುದೇ ಒಂದು ಜಿಲ್ಲಾಸ್ಪತ್ರೆ. ಅದು ಬಿಟ್ಟರೆ ಕ್ಷೇಮ, ಜೆಎಸ್‌ಎಸ್‌, ಪಿಕಾರ್ಡೊ ಹಾಗೂ ಬಸವರಾಜೇಂದ್ರ ಖಾಸಗಿ ಆಸ್ಪತ್ರೆಗಳು ಮಾತ್ರ. 450 ಬೆಡ್‌ಗಳ ಆಸ್ಪತ್ರೆ ಕಟ್ಟಡ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈಗಲೂ ಜಿಲ್ಲೆಯ ಹೆಚ್ಚಿನ ಜನರು ಮೈಸೂರಿನ ಆಸ್ಪತ್ರೆ ಅವಲಂಬಿಸಿದ್ದಾರೆ.

6 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕ ಇದೆ. ಬಳ್ಳಾರಿಯಿಂದ ಪೂರೈಕೆ ಆಗುತ್ತಿದೆ. ನಿತ್ಯ 320 ಸಿಲಿಂಡರ್‌ಗಳ ವ್ಯವಸ್ಥೆ ಬೇಕಿದೆ. ಇದರಲ್ಲಿ ವ್ಯತ್ಯಯ ಉಂಟಾದರೆ ಸಮಸ್ಯೆ ಆಗಲಿದೆ.

ಎಮರ್ಜೆನ್ಸಿ ವಾರ್ಡ್‌ನಲ್ಲೂ ಸಾವು

ಮೇ 2ರ ರಾತ್ರಿ ಕೋವಿಡ್‌ ವಾರ್ಡ್‌ ಮಾತ್ರವಲ್ಲ, ಎಮರ್ಜೆನ್ಸಿ ವಾರ್ಡ್‌ನಲ್ಲಿ ದಾಖಲಾಗಿದ್ದ ಕೆಲವರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅದನ್ನು ಮುಚ್ಚಿಡಲಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಕೊಳ್ಳೇಗಾಲ ತಾಲ್ಲೂಕು ಮುಡಿಗುಂಡ ಗ್ರಾಮದ ಜಯಶಂಕರ್‌ (37) ಅವರಲ್ಲಿ ಒಬ್ಬರು. ಉಸಿರಾಟ ತೊಂದರೆಯಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ಗೆ ಮೇ 27ರಂದು ದಾಖಲಾಗಿದ್ದಾರೆ. ಇವರಿಗೆ ಕೋವಿಡ್‌ ಇರಲಿಲ್ಲ. ಆದರೆ, ಭಾನುವಾರ ರಾತ್ರಿ 11ರ ಸುಮಾರಿಗೆ ನಿಧನರಾಗಿದ್ದಾರೆ. ಇವರಿಗೆ ಪತ್ನಿ, ಐದು ಮತ್ತು ಏಳು ವರ್ಷದ ಹೆಣ್ಣು ಮಕ್ಕಳಿದ್ದಾರೆ.

‘ಪತಿ ಆಮ್ಲಜನಕ ಕೊರತೆಯಿಂದಲೇ ಸತ್ತು ಹೋಗಿದ್ದಾರೆ. ಆಮ್ಲಜನಕ ಕೊಡಿ ಎಂದು ಬೇಡಿಕೊಂಡರೂ ಯಾರೂ ಕೇಳಿಸಿಕೊಂಡಿಲ್ಲ. ಪೇಪರ್‌ನಲ್ಲಿ ಗಾಳಿ ಬೀಸಿದೆವು, ವೈದ್ಯರೂ ಬರಲಿಲ್ಲ. ನರಳಾಡುತ್ತಲೇ ಜೀವ ಬಿಟ್ಟರು’ ಎಂದು ಸಿದ್ದರಾಜಮ್ಮ ಕಣ್ಣೀರಿಟ್ಟರು.

ಅಂದು ಆಸ್ಪತ್ರೆ ಆವರಣದಲ್ಲೇ ಇದ್ದೆ...

ಜ್ವರದಿಂದ ಬಳಲುತ್ತಿದ್ದ ಪತ್ನಿಯನ್ನು ಜಿಲ್ಲಾಸ್ಪತ್ರೆಯ ಜನರಲ್‌ ವಾರ್ಡ್‌ನಲ್ಲಿ ಸೇರಿಸಿದ್ದೆ. ಹೀಗಾಗಿ, ಘಟನೆಯ ದಿನ ಆಸ್ಪತ್ರೆ ಆವರಣದಲ್ಲಿ ಓಡಾಡುತ್ತಿದ್ದೆ. 9 ಗಂಟೆ ಸುಮಾರಿಗೆ ಸ್ನೇಹಿತ ವೈದ್ಯರೊಬ್ಬರು ಆಮ್ಲಜನಕ ಕೊರತೆ ಬಗ್ಗೆ ಮಾಹಿತಿ ನೀಡಿದರು. ಹೀಗಾಗಿ, ಜಿಲ್ಲಾಧಿಕಾರಿಗೆ ಕರೆ ಮಾಡಿದೆ. ಕನೆಕ್ಟ್‌ ಆಗಲಿಲ್ಲ. 10.30ಕ್ಕೆ ಮತ್ತೆ ಕರೆ ಮಾಡಿ ಸಮಸ್ಯೆ ಹೇಳಿದೆ. ‘ಮೈಸೂರಿನಲ್ಲಿ ಆಮ್ಲಜನಕ ಭರ್ತಿ ಮಾಡುತ್ತಿದ್ದು, ಬರಲು ಸಮಯ ಬೇಕು, ಕೊಳ್ಳೇಗಾಲದಿಂದಲೂ ತರಲಾಗುತ್ತಿದೆ’ ಎಂದರು. ಆದರೆ, ಹನ್ನೊಂದೂವರೆಗೂ ಬರದೇ ಇದ್ದಾಗ ಮಾಧ್ಯಮದವರೂ ಸೇರಿದಂತೆ ನನಗೆ ಗೊತ್ತಿದ್ದವರಿಗೆ ಫೋನ್‌ ಮಾಡಿದೆ. ರಾತ್ರಿ 11 ಗಂಟೆಗೆ ಆಮ್ಲಜನಕದ ವ್ಯವಸ್ಥೆ ಮಾಡಿದ್ದರೂ ಕನಿಷ್ಠ ಏಳೆಂಟು ಜೀವ ಉಳಿಸಬಹುದಿತ್ತು.

ರಾಜೇಂದ್ರ ಬಾಬು,ಪ್ರತ್ಯಕ್ಷದರ್ಶಿ, ಮಾದಾಪುರ, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.