ADVERTISEMENT

ಒಳನೋಟ: ತನಿಖೆಯ ಹಾದಿಯಲ್ಲಿ ಗೊಂದಲದ ನಡೆ

ವಿ.ಎಸ್.ಸುಬ್ರಹ್ಮಣ್ಯ
Published 9 ಮೇ 2021, 3:14 IST
Last Updated 9 ಮೇ 2021, 3:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 24 ಮಂದಿ ಕೋವಿಡ್‌ ರೋಗಿಗಳು ಮೃತಪಟ್ಟಿದ್ದಾರೆ ಎಂಬ ಆರೋಪಗಳ ಕುರಿತ ತನಿಖೆಯ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ಗೊಂದಲವನ್ನು ಸೃಷ್ಟಿಸಿದೆ. ಪರಿಣಾಮವಾಗಿ ಒಂದೇ ಘಟನೆಗೆ ಸಂಬಂಧಿಸಿದಂತೆ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗಳು ನಡೆಯುವಂತಹ ಸನ್ನಿವೇಶ ನಿರ್ಮಾಣವಾಗಿದೆ.

ಮೇ 3ರಂದು ದುರ್ಘಟನೆ ಸಂಭವಿಸಿತ್ತು. ಮೇ 4ರಂದು ಕೋವಿಡ್‌ಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಸ್ವಯಂಪ್ರೇರಿತವಾಗಿ ಈ ಬಗ್ಗೆಯೂ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆ ನಡೆಸುವ ಇಂಗಿತ ವ್ಯಕ್ತಪಡಿಸಿತ್ತು. ಈ ಕುರಿತು ಸರ್ಕಾರದ ನಿಲುವು ಏನು? ಎಂಬ ಪ್ರಶ್ನೆ ಮುಂದಿಟ್ಟಿತ್ತು.

ಅದೇ ದಿನ ಸಂಜೆ ನಡೆದ ಸಂಪುಟ ಸಭೆಯಲ್ಲಿ ತರಾತುರಿಯಲ್ಲಿ ಈ ವಿಷಯವನ್ನು ಚರ್ಚಿಸಿದ ಸರ್ಕಾರ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ್‌ ನೇತೃತ್ವದಲ್ಲಿ ತನಿಖಾ ಆಯೋಗ ನೇಮಿಸುವ ತೀರ್ಮಾನ ಕೈಗೊಂಡಿದೆ. ಈ ಸಂಬಂಧ ಮೇ 5ರಂದು ಆದೇಶವನ್ನೂ ಹೊರಡಿಸಲಾಗಿದೆ. ವಿಷಯ ವಿಚಾರಣಾ ಹಂತದಲ್ಲಿರುವಾಗ ಸರ್ಕಾರ ತರಾತುರಿಯಲ್ಲಿ ನಿರ್ಧಾರ ಕೈಗೊಂಡಿರುವುದಕ್ಕೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ADVERTISEMENT

ಸರ್ಕಾರದ ನಡೆ ಸಂಶಯಾಸ್ಪದವಾಗಿದೆ ಎಂಬ ಕಾರಣದಿಂದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಉಸ್ತುವಾರಿಯಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಎನ್‌. ವೇಣುಗೋಪಾಲ ಗೌಡ ನೇತೃತ್ವದ ಸಮಿತಿಯಿಂದ ಪ್ರತ್ಯೇಕ ತನಿಖೆಗೆ ನ್ಯಾಯಾಲಯ ಆದೇಶಿಸಿದೆ. ನಿವೃತ್ತ ನ್ಯಾಯಮೂರ್ತಿ ಕೆ.ಎನ್‌. ಕೇಶವ ನಾರಾಯಣ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

ಇದೇ ಘಟನೆಯ ಕುರಿತು ಐಎಎಸ್‌ ಅಧಿಕಾರಿ ಶಿವಯೋಗಿ ಸಿ. ಕಳಸದ ನೇತೃತ್ವದಲ್ಲಿ ಪ್ರಾಥಮಿಕ ತನಿಖೆಗೆ ಆದೇಶಿಸಲಾಗಿದೆ. ಆರೋಗ್ಯ ಇಲಾಖೆಯು ತಜ್ಞರ ಸಮಿತಿಯ ಮೂಲಕ ಆಂತರಿಕ ತನಿಖೆಯನ್ನೂ ನಡೆಸುತ್ತಿದೆ. ಆದರೆ, ನ್ಯಾಯಾಂಗ ತನಿಖೆಯ ವಿಚಾರದಲ್ಲಿ ರಾಜ್ಯದಲ್ಲಿ ಹಿಂದೆಂದೂ ಕಂಡಿರದಂತಹ ಸ್ಥಿತಿ ನಿರ್ಮಾಣವಾಗಿದೆ.

‘ಇಂತಹ ಸನ್ನಿವೇಶ ರಾಜ್ಯದಲ್ಲಿ ಯಾವತ್ತೂ ಸೃಷ್ಟಿಯಾಗಿರಲಿಲ್ಲ. ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿ ಇರುವಾಗಲೇ ತರಾತುರಿಯಲ್ಲಿ ಆಯೋಗ ರಚಿಸಿರುವುದು ರಾಜ್ಯ ಸರ್ಕಾರದ ಉದ್ಧಟತನ. ನ್ಯಾಯಾಂಗಕ್ಕೆ ಅಗೌರವ ತೋರುವಂತಹ ನಡೆ. ಹೈಕೋರ್ಟ್‌ ಪ್ರತ್ಯೇಕ ಸಮಿತಿ ನೇಮಿಸಿದ ಬಳಿಕ ಸರ್ಕಾರ ಆಯೋಗ ರಚನೆಯ ಆದೇಶವನ್ನು ಹಿಂಪಡೆಯಬೇಕಿತ್ತು’ ಎನ್ನುತ್ತಾರೆ ಹಿರಿಯ ವಕೀಲಪ್ರೊ. ರವಿವರ್ಮ ಕುಮಾರ್‌.

ಹೈಕೋರ್ಟ್‌ ನೇಮಿಸಿರುವ ತನಿಖಾ ಸಮಿತಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕಾಗುತ್ತದೆ. ಈ ತನಿಖೆಯನ್ನು ತಡೆಯಲು ಸಾಧ್ಯವಿಲ್ಲ. ಅಂತಹ ಪ್ರಯತ್ನ ಮಾಡುವುದು ನ್ಯಾಯಾಂಗ ನಿಂದನೆಯ ಕ್ರಮವಾಗುತ್ತದೆ. ಆಯೋಗ ರಚನೆಯನ್ನು ಹಿಂಪಡೆದು ಹೈಕೋರ್ಟ್‌ ನೇಮಿಸಿರುವ ಸಮಿತಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡುವುದು ಪಾರದರ್ಶಕ ತನಿಖೆಗೆ ಬೆಂಬಲಿಸುವ ನಡೆಯಾಗುತ್ತದೆ ಎನ್ನುತ್ತಾರೆ ಅವರು.

ಬದಲಾಗದ ನಿಲುವು: ಆದರೆ, ಪ್ರತ್ಯೇಕವಾಗಿ ನ್ಯಾಯಾಂಗ ತನಿಖೆ ನಡೆಸುವ ನಿರ್ಧಾರದಿಂದ ಸರ್ಕಾರ ಈವರೆಗೂ ಹಿಂದೆ ಸರಿದಿಲ್ಲ. ಎರಡೂ ತನಿಖೆಗಳು ಏಕಕಾಲದಲ್ಲಿ ಮುಂದುವರಿಯಲಿ ಎಂಬ ನಿಲುವನ್ನೇ ಸರ್ಕಾರ ಹೊಂದಿದೆ.

ಈನ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌, ‘ಸರ್ಕಾರ ವಿಚಾರಣಾ ಆಯೋಗದ ಕಾಯ್ದೆಯಡಿ ಆಯೋಗ ರಚಿಸಿದೆ. ಹೈಕೋರ್ಟ್‌ ಪ್ರತ್ಯೇಕ ಸಮಿತಿ ನೇಮಿಸಿದೆ. ಎರಡೂ ತನಿಖೆಗಳು ಮುಂದುವರಿಯುತ್ತವೆ. ಆಯೋಗ ರಚನೆಯ ಆದೇಶ ಹಿಂಪಡೆಯುವ ಯಾವುದೇ ನಿರ್ಧಾರ ಮಾಡಿಲ್ಲ’ ಎಂದರು.

ಹತ್ತು ವರ್ಷದವರೆಗೆ ಸಜೆಗೆ ಅವಕಾಶ

ಬೆಂಗಳೂರು: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 24 ಮಂದಿ ಕೋವಿಡ್‌ ರೋಗಿಗಳು ಮೃತಪಟ್ಟಿರುವುದು ಸಾಬೀತಾದಲ್ಲಿ ಪರಿಣಾಮದ ಅರವಿದ್ದೂ ನಿರ್ಲಕ್ಷ್ಯವಹಿಸಿ ಈ ಬಗ್ಗೆಯ ದುರ್ಘಟನೆಗೆ ಕಾರಣವಾದ ಆರೋಪವನ್ನು ಆಸ್ಪತ್ರೆಯ ವೈದ್ಯರು, ಸಂಬಂಧಿಸಿದ ಅಧಿಕಾರಿಗಳ ಮೇಲೆ ಹೊರಿಸಬಹುದು ಎನ್ನುತ್ತಾರೆ ಕಾನೂನು ತಜ್ಞರು.

‘ಈ ಪ್ರಕರಣದಲ್ಲಿ ಆಮ್ಲಜನಕದ ಕೊರತೆಯ ವಿಚಾರ ಸಂಬಂಧಿಸಿದ ವೈದ್ಯರು, ಅಧಿಕಾರಿಗಳಿಗೆ ತಿಳಿದಿತ್ತು. ಅದನ್ನು ರೋಗಿಗಳ ಸಂಬಂಧಿಗಳ ಜತೆಗೂ ಹಂಚಿಕೊಂಡಿಲ್ಲ. ಆಮ್ಲಜನಕದ ಕೊರತೆ ಆದರೆ ಸಾವು ಸಂಭವಿಸುತ್ತದೆ ಎಂಬುದು ತಿಳಿದೂ ನಿರ್ಲಕ್ಷ್ಯ ವಹಿಸಿರುವುದು ಕಂಡುಬರುತ್ತದೆ. ಆದ್ದರಿಂದ ಐಪಿಸಿ ಸೆಕ್ಷನ್‌ 304(2)ರ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು. ಆರೋಪ ಸಾಬೀತಾದಲ್ಲಿ ಹತ್ತು ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ’ ಎಂದು ಸುಪ್ರೀಂಕೋರ್ಟ್‌ ವಕೀಲ ಕೆ.ವಿ. ಧನಂಜಯ ತಿಳಿಸಿದರು.

‘ಇದು 304(ಎ) ವ್ಯಾಪ್ತಿಗೆ ಬರುವ ಸಾಮಾನ್ಯ ನಿರ್ಲ್ಯಕ್ಷದ ಪ್ರಕರಣವಲ್ಲ.ಘಟನೆ ನಡೆಯುವ ಒಂದೆರಡು ದಿನಗಳ ಹಿಂದೆ ಚಾಮರಾಜನಗರ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಭೇಟಿ ನೀಡಿದ್ದ ಸಚಿವರು, ಆಮ್ಲಜನಕದ ಕೊರತೆ ಇಲ್ಲ ಎಂಬ ಹೇಳಿಕೆ ನೀಡಿದ್ದರು. ಅದನ್ನೂ ಪರಿಗಣಿಸಿ ತೀರ್ಮಾನಕ್ಕೆ ಬರಬೇಕಾಗುತ್ತದೆ’ ಎಂದರು.

‘ಇದು ಗಂಭೀರವಾದ ಪ್ರಕರಣ. ಅರಿವಿಲ್ಲದೇ ಆದ ನಿರ್ಲಕ್ಷ್ಯ ಎಂದು ಹೇಳಲಾಗದು. ಯಾವ ಹಂತದಲ್ಲಿ ವಿಫಲವಾದರು? ಏಕೆ ಅಂತಹ ಸ್ಥಿತಿ ನಿರ್ಮಾಣವಾಯಿತು ಎಂಬುದಕ್ಕೆ ಸಾಕ್ಷ್ಯಗಳನ್ನು ಪತ್ತೆಮಾಡಬೇಕು. ಆ ಬಳಿಕ ಸಂಬಂಧಿಸಿದವರ ವಿರುದ್ಧ ಆಪಾದನೆ ಹೊರಿಸಬೇಕಾಗುತ್ತದೆ. ಗುರುತರವಾದ ಆಪಾದನೆಗಳ ವ್ಯಾಪ್ತಿಯಲ್ಲೂ ಈ ಪ್ರಕರಣವನ್ನು ವ್ಯಾಖ್ಯಾನಿಸುವುದಕ್ಕೆ ಐಪಿಸಿಯಲ್ಲಿ ಅವಕಾಶವಿದೆ’ ಎನ್ನುತ್ತಾರೆ ಹಿರಿಯ ವಕೀಲ ಪ್ರೊ. ರವಿವರ್ಮಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.