ADVERTISEMENT

ಸಂಗತ| ಕರಗತವಾಗಿದೆಯೇ ಬದುಕುವ ಕಲೆ?!

ಬದುಕುವ ರೀತಿಗಿಂತ ಬದುಕುವ ಕಲೆ ಮುಖ್ಯವಾಗುತ್ತಿರುವುದು ಸಮಾಜದ ದುರಂತ

ರಾಜಕುಮಾರ ಕುಲಕರ್ಣಿ
Published 23 ಜುಲೈ 2021, 18:57 IST
Last Updated 23 ಜುಲೈ 2021, 18:57 IST
Sangata 24-07-2021.jpg
Sangata 24-07-2021.jpg   

ನನ್ನೂರಿಗೆ ಭೇಟಿ ನೀಡಿದ ಸಂದರ್ಭದಲ್ಲೆಲ್ಲಅಲ್ಲಿನ ಶಾಲೆಯ ಶಿಕ್ಷಕರೊಬ್ಬರನ್ನು ಸಂಧಿಸಿ ಮಾತನಾಡುವುದು ಲಾಗಾಯ್ತಿನಿಂದಲೂ ನಾನು ರೂಢಿಸಿಕೊಂಡು ಬಂದ ಪದ್ಧತಿ. ಆದರೆ ಕಳೆದ ಬಾರಿ ಊರಿಗೆ ಹೋಗಿದ್ದಾಗ ಅವರು ಶಾಲೆಯಲ್ಲಿರಲಿಲ್ಲ. ಜಿಲ್ಲಾ ಕೇಂದ್ರದಲ್ಲಿರುವ ಇಲಾಖೆಯ ಕಚೇರಿಗೆ ಡೆಪ್ಯುಟೇಷನ್ ಮೇಲೆ ನಿಯೋಜಿತರಾಗಿರುವರೆಂದು ಮುಖ್ಯೋಪಾಧ್ಯಾಯರು ಹೇಳಿದರು.

ಕೆಲವು ದಿನಗಳ ನಂತರ ಅವರಿಗೆ ಫೋನ್‌ ಮಾಡಿ ಆರೋಗ್ಯ ವಿಚಾರಿಸಿದಾಗ, ತಾವು ಡೆಪ್ಯುಟೇಷನ್ ಮೇಲೆ ವರ್ಗ ಮಾಡಿಸಿಕೊಂಡಿರುವ ಸ್ಥಳದಲ್ಲಿ ಮೇಲುಸಂಪಾದನೆ ಚೆನ್ನಾಗಿದೆಯೆಂದೂ, ಈ ಕಾರಣದಿಂದ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಸೇರಿಸಲು ಮತ್ತು ಸೈಟು ಖರೀದಿಸಲು ಸಾಧ್ಯವಾಗಿದೆಯೆಂದೂ ಹೇಳಿದರು. ಅವರ ಧ್ವನಿಯಲ್ಲಿ ಸಂತೃಪ್ತಿಯ ಭಾವ ತುಂಬಿ ತುಳುಕುತ್ತಿತ್ತು.

ಈ ಘಟನೆಗೆ ವಿರುದ್ಧವಾದ ಮತ್ತು ನಂಬಲು ಅಸಾಧ್ಯವಾದ ಇನ್ನೊಂದು ಸಂಗತಿ ನನ್ನೂರಿನ ಆ ನೆಲದಲ್ಲೇ ನಡೆದದ್ದು. ನನ್ನ ಕಣ್ಣೆದುರು ಬೆಳೆದು ಓದಿ ವಿದ್ಯಾವಂತನಾದ ಹುಡುಗ ಲೋಕೋಪಯೋಗಿ ಇಲಾಖೆಯಲ್ಲಿ ಅಸಿಸ್ಟೆಂಟ್ ಎಂಜಿನಿಯರ್‌ ಆಗಿ ನೌಕರಿಗೆ ಸೇರಿದ. ಆ ಕ್ಷಣ ‘ಅಂವ ಇನ್ಮುಂದ ಹ್ಯಾಂಗ ಮನುಷ್ಯಾ ಆಗ್ತಾನ ನೋಡ್ರಿ’ ಎಂದು ಇಡೀ ಊರು ಸಂಭ್ರಮಿಸಿತು.

ADVERTISEMENT

‘ಅಂವ ಕೇಳದೆ ಮನ್ಯಾಗ ರೊಕ್ಕ ಬಂದು ಬೀಳ್ತದ. ರೊಕ್ಕ ಎಣಿಸಾಕ ಆಳು ಇಟ್ಗೊಬೇಕಾಗ್ತದ’ ಎಂದು ಜನ ಮಾತನಾಡಿಕೊಂಡರು. ಆದರೆ ಆ ಹುಡುಗ ನೌಕರಿಗೆ ರಾಜೀನಾಮೆ ನೀಡಿ ಊರಿನ ಜನರನ್ನು ನಿರಾಸೆಗೊಳಿಸಿದ. ವಿಚಾರಿಸಿದಾಗ, ಅಲ್ಲಿನ ವಾತಾವರಣಕ್ಕೆ ತನಗೆ ಹೊಂದಿಕೊಳ್ಳಲಾಗಲಿಲ್ಲ, ಇನ್ನಷ್ಟು ದಿನಗಳ ಕಾಲ ನೌಕರಿಯಲ್ಲೇ ಮುಂದುವರಿದಿದ್ದರೆ ತಾನು ಮಾನಸಿಕ ಕ್ಷೋಭೆಗೆ ಒಳಗಾಗುತ್ತಿದ್ದೆ ಎಂದು ಅಳಲು ತೋಡಿಕೊಂಡ.

ಸಹಜವಾಗಿಯೇ ಅವನ ಈ ನಿರ್ಧಾರದಿಂದ ಅಪ್ಪ ಅಮ್ಮನಿಗೆ ಬೇಸರವಾಯಿತು. ‘ಮನುಷ್ಯಾ ಆಗೋ ಅವಕಾಶ ಮನೆ ಬಾಗಿಲಿಗಿ ಹುಡ್ಕೊಂಡು ಬಂದ್ರ ಖೋಡಿ ಹುಡುಗ ಚಾನ್ಸ್ ಕಳ್ಕೊಂಡ್ತು’ ಎಂದು ಊರ ಜನ ಲೊಚಗುಟ್ಟಿದರು. ಮುಂದೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕನಾಗಿ ನೇಮಕಗೊಂಡು, ಈಗ ವಿದ್ಯಾರ್ಥಿಗಳಿಂದ ಉತ್ತಮ ಶಿಕ್ಷಕನೆಂದು ಮೆಚ್ಚುಗೆ ಗಳಿಸಿ ಸಂತೃಪ್ತಿಯ ಜೀವನ ನಡೆಸುತ್ತಿದ್ದಾನೆ.

ಒಂದೇ ಕಾಲದ, ಒಂದೇ ನೆಲದ ಎರಡು ಪರಸ್ಪರ ವಿರುದ್ಧದ ಘಟನೆಗಳಿವು. ಒಬ್ಬರು ಪವಿತ್ರ ವೃತ್ತಿಯನ್ನು ತೊರೆದು ಮೇಲುಸಂಪಾದನೆಯತ್ತ ಮುಖ ಮಾಡಿದರೆ, ಇನ್ನೊಬ್ಬರು ಮೇಲುಸಂಪಾದನೆಗೆ ಬೆನ್ನುಮಾಡಿ ಪಾಠ ಹೇಳುವ ಪವಿತ್ರ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡವರು. ಇಲ್ಲಿ ಯಾವ ಘಟನೆಯನ್ನು ಆದರ್ಶವೆಂದು ನೋಡಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ. ಪ್ರಶ್ನೆಗೆ ಉತ್ತರ ಕೂಡ ಸರಳವಾಗಿದೆ. ಸಮಾಜ ಆಯ್ದುಕೊಳ್ಳುವುದು ಮೊದಲನೆಯ ಘಟನೆಯನ್ನು. ಏಕೆಂದರೆ ಮನುಷ್ಯನಾಗುವ ಪ್ರಕ್ರಿಯೆ
ಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಮಾಜ ‘ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯಸಮ್ಮತ’ ಎನ್ನುವ ಮನೋಭಾವವನ್ನು ರೂಢಿಸಿಕೊಂಡಿದೆ. ಹೀಗಾಗಿ ವೃತ್ತಿಯಲ್ಲಿ ಮೇಲುಸಂಪಾದನೆ ಬೇಡ ಎನ್ನುವವನು ಸಮಾಜದ ಅವಹೇಳನಕ್ಕೆ, ಅವಮಾನಕ್ಕೆ ಒಳಗಾಗುತ್ತಾನೆ. ಬೇಕು ಎನ್ನುವವನು ಸಮಾಜಕ್ಕೆ ಆದರ್ಶಪ್ರಾಯನಾಗುತ್ತಾನೆ.

ಎಸ್.ಎಲ್.ಭೈರಪ್ಪನವರ ‘ತಂತು’ ಕಾದಂಬರಿಯಲ್ಲಿ ಪಾತ್ರವೊಂದರ ಸಂಭಾಷಣೆ ಹೀಗಿದೆ: ‘ನಾನು ಒಂದು ಕಾಸೂ ಸಂಬಳ ತಗೊಳ್ಳದೆ ಕೆಲಸ ಮಾಡಬೇಕು ಅಂತಿದ್ದೆ. ಆ ಮೇಲೆ ದೊಡ್ಡಪ್ಪ ನನ್ನೇ ಕೇಳಿದೆ. ಅವರು ಏನಂತಾರೆ ಗೊತ್ತಾ? ಸಂಬಳ ತಗೊಂಡರೆ ತಪ್ಪಿಲ್ಲ. ವಿಶ್ವೇಶ್ವರಯ್ಯನೋರು ತಗೋತಿದ್ದರು. ಆದರೆ ಇಪ್ಪತ್ತನಾಲ್ಕು ಗಂಟೆಯೂ ಕೆಲಸದಲ್ಲೇ ಮನಸ್ಸಿಟ್ಟು, ಒಂದು ಕಾಸೂ ಲಂಚ, ರುಷುವತ್ತು ಮುಟ್ಟದೆ ನಮ್ಮ ಸಂಬಳದಲ್ಲಿ ಮಾತ್ರ ಜೀವನ ಮಾಡಬೇಕು. ವಿಶ್ವೇಶ್ವರಯ್ಯನೋರು ಟೂರ್ ಹೋದಾಗ ಸರ್ಕಾರಿ ಕೆಲಸ ಮಾಡುಕ್ಕೆ ಸರ್ಕಾರದ ಮೋಂಬತ್ತಿ ಉರಿಸುತ್ತಿದ್ದರಂತೆ. ಅದು ಮುಗಿದ ಮೇಲೆ ಮಲಗುವ ಮುಂಚೆ ತಮ್ಮ ಜ್ಞಾನಾರ್ಜನೆಗೆ ಬೇರೆ ಪುಸ್ತಕ ಓದುವಾಗ ಸ್ವಂತ ಖರ್ಚಿನಿಂದ ಕೊಂಡು ಹೋಗಿದ್ದ ಬೇರೆ ಮೋಂಬತ್ತಿ ಹತ್ತಿಸಿ ಸರ್ಕಾರದ ಮೋಂಬತ್ತಿಯನ್ನು ಆರಿಸಿಬಿಡ್ತಿದ್ದರಂತೆ’.

ಇಂಥ ಉದಾತ್ತ ನಡೆ ಆದರ್ಶವಾಗಿರಬೇಕಿದ್ದ ಸಮಾಜದಲ್ಲಿ, ಸರ್ಕಾರಿ ನೌಕರಿ ಎಂದಾಕ್ಷಣ ಮೇಲುಸಂಪಾದನೆ ಎಷ್ಟು ಎಂದು ನಾಚಿಕೆ ಬಿಟ್ಟು ಕೇಳುತ್ತಾರೆ. ಅದೆಷ್ಟೋ ಪಾಲಕರು ತಮ್ಮ ಮಕ್ಕಳಿಗೆ ಸಂಬಳದ ಜೊತೆ ಗಿಂಬಳವೂ ಸಿಗುತ್ತಿದೆ ಎಂದು ಹೆಮ್ಮೆ ಮತ್ತು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಒಟ್ಟಾರೆ ಸರ್ಕಾರಿ ಉದ್ಯೋಗ ಎನ್ನುವುದು ಮೇಲುಸಂಪಾದನೆಗೆ ಸರಳವಾದ ಮಾರ್ಗ ಎನ್ನುವ ಮನೋಭಾವ ನಮ್ಮ ವಿದ್ಯಾವಂತ ಯುವಪೀಳಿಗೆಯಲ್ಲಿ ಹೆಚ್ಚುತ್ತಿದೆ.

ಇಲ್ಲಿ ಬದುಕುವ ರೀತಿಗಿಂತ ಬದುಕುವ ಕಲೆ ಮುಖ್ಯ ಎನಿಸಿಕೊಳ್ಳುತ್ತದೆ. ಹೀಗೇ ಬದುಕ ಬೇಕೆನ್ನುವುದಕ್ಕಿಂತ ಹೇಗಾದರೂ ಸರಿ ಬದುಕಬೇಕೆನ್ನುವುದು ನಿಯಮವಾಗುತ್ತದೆ. ಬದುಕುವ ಕಲೆ ಗೊತ್ತಿರುವಾತ ಸಮಾಜದ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಹೀಗೇ ಬದುಕಬೇಕೆಂದು ಹೊರಡುವವನು ಸಮಾಜದ ಅವಕೃಪೆಗೆ ಮತ್ತು ನಿಂದನೆಗೆ ಒಳಗಾಗಿ ಶತಮೂರ್ಖನೆಂದು ಕರೆಸಿ
ಕೊಳ್ಳುತ್ತಾನೆ.

ಅನೀತಿಯ ಮಾರ್ಗದ ಮೂಲಕ ಮೇಲುಸಂಪಾದನೆ ಮಾಡುತ್ತ ಕೆಲವರು ‘ಮನುಷ್ಯ’ ರಾಗುತ್ತ ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ.
ಹಾಗಾದರೆ ಮನುಷ್ಯನಾಗುವುದೆಂದರೇನು? ಇಂಥದ್ದೊಂದು ಜಿಜ್ಞಾಸೆ ಬದುಕುವ ಕಲೆ ಗೊತ್ತಿಲ್ಲ ದವರನ್ನು ಅವರ ಬದುಕಿನುದ್ದಕ್ಕೂ ಕಾಡುತ್ತಲೇ ಇರುವ ಯಕ್ಷಪ್ರಶ್ನೆಯಾಗಿ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.