ADVERTISEMENT

25 ವರ್ಷಗಳ ಹಿಂದೆ: ಬುಧವಾರ 21–8–1996

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 20:15 IST
Last Updated 20 ಆಗಸ್ಟ್ 2021, 20:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೀರೂರು ಸೇತುವೆ ಬಳಿ ಡೈನಾಮೈಟ್‌;ಅರಸುಗೆ ಕುತ್ತಾಗಲಿದ್ದ ಪಟೇಲ್‌ ಕುಕೃತ್ಯ

ಬೆಂಗಳೂರು, ಆ. 20– ತುರ್ತು ಪರಿಸ್ಥಿತಿಯ ಕಾಲದಲ್ಲಿ ರೈಲೈ ಸೇತುವೆಯೊಂದನ್ನು ಸ್ಫೋಟಿಸುವ ಮೂಲಕ ದಾಂಧಲೆ ಎಬ್ಬಿಸಿದ್ದ ತಾವು ಕ್ಷಣಕಾಲ ಎಚ್ಚರ ತಪ್ಪಿದ್ದರೂ ದೇವರಾಜ ಅರಸು ಮತ್ತಿತರ ಗಣ್ಯರನ್ನು ಹತ್ಯೆ ಮಾಡುತ್ತಿದ್ದುದಾಗಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ಪ್ರಕಟಿಸಿ ದಿಗ್ಬ್ರಾಂತಿಗೊಳಿಸಿದರು.

ರಾಜ್ಯದ ಅಂದಿನ ಮುಖ್ಯಮಂತ್ರಿ ಅರಸು, ರಾಜ್ಯಪಾಲ ಮೋಹನ್‌ಲಾಲ್‌ ಸುಖಾಡಿಯಾ, ಗೋವಾದ ಮುಖ್ಯಮಂತ್ರಿ ಶಶಿಕಲಾ ಕಾಕೋಡ್ಕರ್‌ ಮುಂತಾದವರಿದ್ದ ರೈಲು ಬೀರೂರಿನ ಸೇತುವೆಯನ್ನು ದಾಟುತ್ತಿದ್ದಂತೆ ತಾವು ಇಟ್ಟಿದ್ದ ಡೈನಾಮೈಟ್‌ ಸ್ಫೋಟಿಸಿತು; ’ಆದರೆ ಯಾರಿಗೂ ಪ್ರಾಣಾಪಾಯ ಆಗಲಿಲ್ಲ‘ ಎಂದು ಪಟೇಲ್ ವಿವರಿಸಿದರು.

ADVERTISEMENT

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಹಾಗೂ ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ ಜಂಟಿಯಾಗಿ ಏರ್ಪಡಿಸಿದ್ದ ಅರಸು ಅವರ 81ನೇ ಜನ್ಮ ದಿನಾಚರಣೆಯನ್ನು ವಿಧಾನಸೌಧದ ಬಾಂಕ್ವೆಟ್‌ ಸಭಾಂಗಣದಲ್ಲಿ ಉದ್ಘಾಟಿಸಿದ ಮುಖ್ಯಮಂತ್ರಿ ಈ ರೋಚಕ ವಿದ್ಯಮಾನವನ್ನು ಬಹಿರಂಗಗೊಳಿಸಿದರು.

ಅಣ್ವಸ್ತ್ರ ಪರೀಕ್ಷೆ ನಿಷೇಧ ಒಪ್ಪಂದಕ್ಕೆ ಭಾರತ ತಡೆ

ಜಿನೀವಾ, ಆ. 20 (ಪಿಟಿಐ)– ಸಮಗ್ರ ಅಣ್ವಸ್ತ್ರ ಪರೀಕ್ಷಾ ನಿಷೇಧ ಒಪ್ಪಂದ (ಸಿಟಿಬಿಟಿ) ಜಾರಿಗೆ ಭಾರತ ಇಂದು ತನ್ನ ವಿಟೋ ಪರಮಾಧಿಕಾರ ಚಲಾಯಿಸುವ ಮೂಲಕ ತಡೆಯೊಡ್ಡಿತು.

ಭಾರತ ತನ್ನ ವಿಟೋ ಅಧಿಕಾರವನ್ನು ಔಪಚಾರಿಕವಾಗಿ ಚಲಾಯಿಸಿದ್ದರಿಂದ ಒಪ್ಪಂದದ ಕರಡನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಕಳಿಸಿಕೊಡುವ ಯತ್ನಕ್ಕೆ ತಡೆಯೊಡ್ಡಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.