ADVERTISEMENT

ಬರವಣಿಗೆ ನೆಚ್ಚಿದವರಿಗೆ ಜಿಎಸ್‌ಟಿ ಹೊರೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 19:30 IST
Last Updated 6 ಸೆಪ್ಟೆಂಬರ್ 2021, 19:30 IST

ಪುಸ್ತಕೋದ್ಯಮಕ್ಕೆ ತೆರಿಗೆ ಕುರಿತು ಬರೆದಿರುವ ಎಚ್.ಎಸ್.ಮಂಜುನಾಥ ಅವರು (ವಾ.ವಾ., ಸೆ. 6) ಲೇಖಕರ ಗೌರವಧನದ ಮೇಲಿನ ಶೇ 12ರಷ್ಟು ಜಿಎಸ್‌ಟಿಯನ್ನು ಪ್ರಕಾಶಕರೇ ಭರಿಸುತ್ತಾರೆ ಎಂದಿದ್ದಾರೆ. ಇದು ಸತ್ಯವಲ್ಲ. ಎಲ್ಲ ಪ್ರಕಾಶಕರೂ ಪೂರ್ತಿಯಾಗಿ ಭರಿಸುತ್ತಿಲ್ಲ, ಕೆಲವರಿರಬಹುದು. ನನ್ನ ಬಗ್ಗೆಯೇ ಹೇಳುವುದಾರೆ, ನನ್ನ ಪುಸ್ತಕಗಳನ್ನು ಪ್ರಕಟಿಸಿರುವ ಪ್ರಕಾಶನ ಸಂಸ್ಥೆಯೊಂದು ಶೇ 6ರಷ್ಟು ಜಿಎಸ್‌ಟಿ ಕಡಿತ ಮಾಡಿ ಗೌರವಧನ ಪಾವತಿಸಿದೆ. ಶೇ 6ರಷ್ಟನ್ನು ಮಾತ್ರ ಅದು ಭರಿಸಿದೆ. ಇದು ಪ್ರಕಾಶನದ ವಿರುದ್ಧ ದೂರಲ್ಲ. ಲೇಖಕ– ಪ್ರಕಾಶಕರಿಬ್ಬರೂ ಜಿಎಸ್‌ಟಿ ಹೊರೆಯನ್ನು ಸಮಸಮ ಭರಿಸಬೇಕೆಂಬ ಅವರ ಮಾತೂ ನ್ಯಾಯವಾದುದೇ. ಆದರೆ, ಯಾವುದೇ ಸಾಮಾಜಿಕ ಭದ್ರತೆ ಇಲ್ಲದ, ಜೀವನೋಪಾಯಕ್ಕೆ ಬರವಣಿಗೆಯನ್ನೇ ನೆಚ್ಚಿಕೊಂಡಿರುವ ನನ್ನಂಥ ಲೇಖಕರು ಮತ್ತು ಪತ್ರಕರ್ತರಿಗೆ ಶೇ 6ರಷ್ಟು ಜಿಎಸ್‌ಟಿಯೂ ಹೊರೆಯೇ.

ಕೆಲವೊಂದು ಪ್ರಕಾಶನ ಸಂಸ್ಥೆಗಳನ್ನು ಬಿಟ್ಟರೆ ಸಣ್ಣಪುಟ್ಟ ಪ್ರಕಾಶನಗಳೆಲ್ಲ ಭಾರಿ ಲಾಭದಾಯಕವಾದ ವಾಣಿಜ್ಯೋದ್ಯಮ ಅಲ್ಲವೇ ಅಲ್ಲ. ಬಹುತೇಕ ಲಾಭ- ನಷ್ಟ ಇಲ್ಲದ ಹವ್ಯಾಸಿ ಸಂಸ್ಥೆಗಳು. ಕನ್ನಡದ ಮಟ್ಟಿಗಂತೂ ಇದು ನಿಜ. ಗೌರವಧನದಲ್ಲಿ ಕಡಿತವಾದ ಜಿಎಸ್‌ಟಿಯನ್ನು ವರಮಾನ ತೆರಿಗೆಯಂತೆ ರಿಟರ್ನ್ಸ್‌ ಸಲ್ಲಿಸಿ ಹಿಂಪಡೆಯಲೂ ಅವಕಾಶವಿಲ್ಲ. ಪುಸ್ತಕ ಪ್ರಕಾಶಕರನ್ನೂ ಲೇಖಕರನ್ನೂ ಜಿಎಸ್‌ಟಿಯಿಂದ ಪಾರು ಮಾಡಬೇಕೆಂಬ ಸಲಹೆ ಸಮಾಜಕಂಟಕವಾದುದೇನೂ ಅಲ್ಲ. ಭಾಷೆಗೆ, ಪುಸ್ತಕ ಸಂಸ್ಕೃತಿಗೆ ತೋರಬಹುದಾದ ಸಣ್ಣ ರಿಯಾಯಿತಿ ಆದೀತಷ್ಟೆ.

- ಜಿ.ಎನ್.ರಂಗನಾಥ ರಾವ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.