ADVERTISEMENT

ವಾಚಕರ ವಾಣಿ: ಟಿಕೆಟ್‌ ನೀಡಿಕೆ: ಇರಲಿ ಎಚ್ಚರ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 21:15 IST
Last Updated 24 ಆಗಸ್ಟ್ 2021, 21:15 IST

ಸಂಸದರು, ಶಾಸಕರು ಸೇರಿದಂತೆ 363 ಜನಪ್ರತಿನಿಧಿಗಳ ವಿರುದ್ಧ ಅಪರಾಧ ಪ್ರಕರಣಗಳಿವೆ, ಅಪರಾಧ ಸಾಬೀತಾದರೆ ಇವರೆಲ್ಲರೂ ಪ್ರಜಾಪ್ರಾತಿನಿಧ್ಯ ಕಾಯ್ದೆ ಪ್ರಕಾರ ಅನರ್ಹಗೊಳ್ಳಲಿದ್ದಾರೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್) ಅಧ್ಯಯನ ಹೇಳಿರುವುದಾಗಿ ವರದಿಯಾಗಿದೆ (ಪ್ರ.ವಾ., ಆ. 24).

ಅದರಲ್ಲೂ ತಾನು ಜನಪರ ಎಂದು ಹೇಳುವ ಬಿಜೆಪಿ ಪಕ್ಷದಲ್ಲೇ ಹೆಚ್ಚು ಆರೋಪಿಗಳಿರುವುದು ವಿಷಾದದ ಸಂಗತಿ. ಕ್ರಿಮಿನಲ್‌ ಹಿನ್ನೆಲೆಯ ಜನಪ್ರತಿನಿಧಿಗಳು ತಮ್ಮ ವಿರುದ್ಧದ ಸಾಕ್ಷ್ಯಗಳನ್ನೇ ನಾಶ ಮಾಡಿ ನ್ಯಾಯಾಲಯದಿಂದಲೇ ನಿರ್ದೋಷಿಗಳಾಗಿ ಹೊರಬರುವಷ್ಟು ಪ್ರಬಲರು. ಇದು ಆತಂಕಕಾರಿ ವಿಚಾರ. ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳಿಗೆ ಟಿಕೆಟ್ ನೀಡುವಾಗ ಇಂತಹ ಎಲ್ಲ ಆರೋಪ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದರೆ ಜನಪ್ರತಿನಿಧಿ ಸ್ಥಾನಕ್ಕೆ ಗೌರವ ಬರುವುದು. ಗೆಲುವನ್ನಷ್ಟೇ ಮಾನದಂಡ ಮಾಡಿಕೊಂಡಿರುವ ಎಲ್ಲ ಪಕ್ಷಗಳೂ ಹಿಂದೆಮುಂದೆ ನೋಡದೆ ಹಣಬಲ, ತೋಳ್ಬಲ ಇರುವಂತಹವರಿಗೆ ಟಿಕೆಟ್ ನೀಡುತ್ತಿರುವುದೇ ಈ ಸ್ಥಿತಿಗೆ ಕಾರಣ. ಇಂತಹವರು ಆರಿಸಿ ಬಂದರೆ ಯಾವ ರೀತಿ ದೇಶಸೇವೆ ಮಾಡಬಹುದು ಎಂದು ಊಹಿಸಿಕೊಳ್ಳಬಹುದು. ಸದನದಲ್ಲೇ ಬಟ್ಟೆ ಹರಿದುಕೊಂಡು ಕೂಗಾಡುವ, ತೋಳೇರಿಸಿ ಕೊಂಡು ಅನ್ಯ ಸದಸ್ಯರ ಮೇಲೆ ಎರಗುವ, ತುಚ್ಛ ಶಬ್ದಗಳಿಂದ ಪರಸ್ಪರ ಬೈದಾಡುವ, ನೀಲಿಚಿತ್ರಗಳನ್ನು ವೀಕ್ಷಿಸುವ ಸದಸ್ಯರು ಬೇಡವೆಂದು ಬಯಸುವ ಪಕ್ಷಗಳು ಎಚ್ಚರಿಕೆಯಿಂದ ಟಿಕೆಟ್ ನೀಡುವ ಪರಿಪಾಟ ಬೆಳೆಸಿಕೊಳ್ಳಲಿ.

ಪತ್ತಂಗಿ ಎಸ್. ಮುರಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.