ADVERTISEMENT

ಮಲೆನಾಡಿನೊಂದಿಗೆ ಜಿ.ಕೆ. ಗೋವಿಂದರಾವ್ ಅನ್ಯೋನ್ಯ ನಂಟು

ಎಂ.ರಾಘವೇಂದ್ರ
Published 16 ಅಕ್ಟೋಬರ್ 2021, 4:24 IST
Last Updated 16 ಅಕ್ಟೋಬರ್ 2021, 4:24 IST
ಹೆಗ್ಗೋಡಿನಲ್ಲಿ ನೀನಾಸಂ ಬಳಗ ಕೆ.ವಿ. ಅಕ್ಷರ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದ್ದ ‘ಲಿಯರ್ ಲಹರಿ’ ನಾಟಕದಲ್ಲಿ ಲಿಯರ್ ಪಾತ್ರಧಾರಿಯಾಗಿ ಜಿ.ಕೆ.ಗೋವಿಂದರಾವ್
ಹೆಗ್ಗೋಡಿನಲ್ಲಿ ನೀನಾಸಂ ಬಳಗ ಕೆ.ವಿ. ಅಕ್ಷರ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದ್ದ ‘ಲಿಯರ್ ಲಹರಿ’ ನಾಟಕದಲ್ಲಿ ಲಿಯರ್ ಪಾತ್ರಧಾರಿಯಾಗಿ ಜಿ.ಕೆ.ಗೋವಿಂದರಾವ್   

ಸಾಗರ: ಅಗಲಿದ ನಟ, ಅಧ್ಯಾಪಕ, ಚಿಂತಕ, ಜನಪರ ಹೋರಾಟಗಾರ ಜಿ.ಕೆ. ಗೋವಿಂದರಾವ್ ಅವರು ಮಲೆನಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇಲ್ಲಿನ ಎಲ್‌.ಬಿ. ಮತ್ತು ಎಸ್‌.ಬಿ.ಎಸ್. ಕಾಲೇಜಿನಲ್ಲಿ 1965ರಿಂದ 1971ರ ವರೆಗೆ ಇಂಗ್ಲಿಷ್ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು.

ಎಲ್‌.ಬಿ. ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಕವಿ ಗೋಪಾಲಕೃಷ್ಣ ಅಡಿಗರು ಪ್ರಾಂಶುಪಾಲರಾಗಿದ್ದರು. ಡಾ.ಚಂದ್ರಶೇಖರ ಕಂಬಾರರು ಗೋವಿಂದರಾವ್ ಅವರ ಸಹೋದ್ಯೋಗಿಯಾಗಿದ್ದರು.

ಗೋವಿಂದರಾವ್ ಹೈಸ್ಕೂಲ್ ಹಾಗೂ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಅವರ ಸಹಪಾಠಿಯಾಗಿದ್ದ ಎಚ್.ಎಲ್.ಎಸ್. ರಾವ್ ನಂತರ ಗೋವಿಂದರಾವ್ ಜೊತೆಗೆ ಎಲ್‌.ಬಿ. ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು.

‘ಗೋವಿಂದರಾವ್ ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಮುಚ್ಚುಮರೆ ಇಲ್ಲದೆ ತಮಗೆ ಅನಿಸಿದ ಅಭಿಪ್ರಾಯವನ್ನು ಸ್ಪಷ್ಟವಾಗಿ ನಿರ್ಭಿಡೆಯಿಂದ ವ್ಯಕ್ತಪಡಿಸುತ್ತಿದ್ದರು. ಅಧ್ಯಾಪಕರಾಗಿ ಒಳ್ಳೆಯ ಹೆಸರು ಮಾಡಿದ್ದ ಅವರು ಸಿಟ್ಟಿನ ವ್ಯಕ್ತಿತ್ವದ ಜೊತೆಗೆ ತಮಾಷೆಯ ಸ್ವಭಾವವನ್ನೂ ಮೈಗೂಡಿಸಿಕೊಂಡಿದ್ದರು’ ಎಂದು ಎಚ್. ಎಲ್.ಎಸ್. ರಾವ್ ನೆನಪಿಸಿಕೊಳ್ಳುತ್ತಾರೆ.

1970ರ ದಶಕದಲ್ಲಿ ಸಾಗರದಲ್ಲಿ ಹೆಸರುವಾಸಿಯಾಗಿದ್ದ ಹೋಟೆಲ್‌ಗಳ ಪೈಕಿ ರಾಮಚಂದ್ರ ಭವನ ಕೂಡ ಒಂದು. ಪ್ರತಿದಿನ ಬೆಳಿಗ್ಗೆ ವಾಕಿಂಗ್ ಮುಗಿಸಿದ ನಂತರ ಗೋವಿಂದರಾವ್→ಅವರೊಂದಿಗೆ ಆ ಹೋಟೆಲ್‌ನ ಜಿಲೇಬಿ ಸವಿಯುತ್ತಿದ್ದ ದಿನಗಳನ್ನು ಮರೆಯುವಂತಿಲ್ಲ ಎನ್ನುತ್ತಾರೆ ಎಚ್.ಎಲ್.ಎಸ್ ರಾವ್.

ಅಧ್ಯಾಪಕರಾಗಿ ಸಾಗರವನ್ನು ತೊರೆದ ನಂತರವೂ ಗೋವಿಂದರಾವ್ ಈ ಭಾಗದ ನಂಟನ್ನು ಕಳೆದುಕೊಳ್ಳಲಿಲ್ಲ. ಹೆಗ್ಗೋಡಿನ ನೀನಾಸಂ ಸಂಸ್ಥೆಯ ಜೊತೆಗೆ ಆಪ್ತ ಒಡನಾಟ ಹೊಂದಿದ್ದ ಅವರು ಹಲವು ವರ್ಷಗಳ ಕಾಲ ನೀನಾಸಂ ಸಂಸ್ಕೃತಿ ಶಿಬಿರಕ್ಕೆ ತಪ್ಪದೇ ಹಾಜರಾಗುತ್ತಿದ್ದರು. ನೀನಾಸಂ ಬಳಗ ಈ ಹಿಂದೆ ಕೆ.ವಿ.ಅಕ್ಷರ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದ ‘ಲಿಯರ್ ಲಹರಿ’ ನಾಟಕದಲ್ಲಿ ಗೋವಿಂದರಾವ್ ಲಿಯರ್ ಪಾತ್ರದಲ್ಲಿ ಅಭಿನಯಿಸಿದ್ದರು.

ಉದ್ಯಮಿ ಟಿ. ಮೋಹನ್ ದಾಸ್ ಪೈ ಅವರು ಗೋವಿಂದರಾವ್ ಅವರ ಶಿಷ್ಯರಾಗಿದ್ದರು. ಶೇಕ್ಸ್‌ಪಿಯರ್ ಕೃತಿಗಳನ್ನು ತರಗತಿಗಳಲ್ಲಿ ಗೋವಿಂದರಾವ್ ವಿವರಿಸುತ್ತಿದ್ದ ರೀತಿಯನ್ನು ಕಂಡು ಬೆರಗಾಗಿದ್ದ ಮೋಹನ್ ದಾಸ್ ಪೈ ಗುರುದಕ್ಷಿಣೆಯಾಗಿ ಗೋವಿಂದರಾವ್ ಅವರನ್ನು ಇಂಗ್ಲೆಂಡ್‌ಗೆ ಕರೆದುಕೊಂಡು ಹೋಗಿ ಶೇಕ್ಸ್‌ಪಿಯರ್ ಓಡಾಡಿದ ಸ್ಥಳವನ್ನು ತೋರಿಸಬೇಕು ಅಂದುಕೊಂಡಿದ್ದರಂತೆ.

ಮೋಹನ್ ದಾಸ್ ಪೈ ಅವರು ಗೋವಿಂದರಾವ್ ಬಳಿ ಇದರ ಪ್ರಸ್ತಾಪ ಮಾಡಿದಾಗ ಗುರುದಕ್ಷಿಣೆ ಕೊಡುವುದೇ ಆದರೆ ಹೆಗ್ಗೋಡಿನಲ್ಲಿ ನವೀಕರಣಗೊಳ್ಳುತ್ತಿರುವ ಶಿವರಾಮಕಾರಂತ ರಂಗಮಂದಿರಕ್ಕೆ ಯಾವುದಾದರೂ ರೂಪದಲ್ಲಿ ನೆರವು ನೀಡುವಂತೆ ತಿಳಿಸಿದರಂತೆ. ಗುರುಗಳ ಮಾತನ್ನು ಅಕ್ಷರಶಃ ಪಾಲಿಸಿದ ಮೋಹನ್ ದಾಸ್ ಪೈ ಹೆಗ್ಗೋಡಿಗೆ ಬಂದು ರಂಗಮಂದಿರದ ನವೀಕರಣಕ್ಕೆ ಆರ್ಥಿಕ ನೆರವು ನೀಡಿ ಸಹಕರಿಸಿದ್ದನ್ನು ವಿಮರ್ಶಕ ಟಿ.ಪಿ. ಅಶೋಕ್ ನೆನಪಿಸಿಕೊಳ್ಳುತ್ತಾರೆ.

ನೀನಾಸಂ ಸಂಸ್ಕೃತಿ ಶಿಬಿರಗಳಲ್ಲಿ ನಾಟಕಗಳ ಕುರಿತು ನಡೆಯುತ್ತಿದ್ದ ಚರ್ಚೆಯಲ್ಲಿ ಗಂಭೀರವಾದ ವಿಷಯಗಳನ್ನು ಮಂಡಿಸುತ್ತಿದ್ದರು.ಶೇಕ್ಸ್‌ಪಿಯರ್ ಕುರಿತು ಅವರು ನೀನಾಸಂ ವಿದ್ಯಾರ್ಥಿಗಳಿಗೆ ನೀಡಿದ ಉಪನ್ಯಾಸ ಮಾಲಿಕೆ ಪುಸ್ತಕ ರೂಪದಲ್ಲಿಪ್ರಕಟವಾಗಿದೆ.

***

ಜಿ.ಕೆ.ಗೋವಿಂದರಾವ್ ಅಪ್ಪಟ ಪ್ರಜಾಸತ್ತಾತ್ಮಕ ವ್ಯಕ್ತಿಯಾಗಿದ್ದರು. ತಮ್ಮ ವಿಚಾರಧಾರೆಯನ್ನು ಪ್ರಬಲವಾಗಿ ಮಂಡಿಸುತ್ತಿದ್ದರು. ತಮ್ಮ ವಿರುದ್ಧ ವ್ಯಕ್ತವಾಗುವ ಅಭಿಪ್ರಾಯಗಳನ್ನೂ ಅಷ್ಟೇ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಿದ್ದರು.

ಕೆ.ವಿ.ಅಕ್ಷರ, ರಂಗಕರ್ಮಿ

ನೀನಾಸಂ ಬಗ್ಗೆ ಗೌರವ, ಪ್ರೀತಿ ಹೊಂದಿದ್ದ ಗೋವಿಂದರಾಯರು ಮೌಲ್ಯಗಳಿಗೆ ಬದ್ಧರಾಗಿ ಬದುಕಿದ ವ್ಯಕ್ತಿ. ಅವರ ಆಸಕ್ತಿಯ ಫಲವಾಗಿಯೇ ನೀನಾಸಂ ಬಳಗ ‘ಲಿಯರ್ ಲಹರಿ’ ನಾಟಕ ಪ್ರದರ್ಶಿಸಿದ್ದನ್ನು ಮರೆಯುವಂತಿಲ್ಲ.

ಟಿ.ಪಿ. ಅಶೋಕ್, ವಿಮರ್ಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.